
Rohit Vemula Act | ಅಹಿಂದ ವಿದ್ಯಾರ್ಥಿಗಳ ಶಿಕ್ಷಣ, ಘನತೆ, ಸಮಾನ ಪ್ರವೇಶ ಹಕ್ಕಿಗಾಗಿ ರೋಹಿತ್ ವೆಮುಲಾ ಕಾಯಿದೆ!
ಹೈದರಾಬಾದ್ ಕೇಂದ್ರೀಯ ವಿ.ವಿ.ಯಲ್ಲಿ ಜಾತಿ ಕಾರಣಕ್ಕೆ ಅವಮಾನಿತನಾಗಿ ಅತ್ಮಹತ್ಯೆಗೆ ಶರಣಾಗಿದ್ದ ರೋಹಿತ್ ವೆಮುಲಾ ನೆನಪಿನಲ್ಲಿ ದುರ್ಘಟನೆಗಳ ತಡೆಗೆ ರೋಹಿತ್ ವೆಮುಲಾ ವಿಧೇಯಕದ ಕರಡುಪ್ರತಿ ತಯಾರಿಸಲಾಗಿದೆ.
ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ಜಾತಿ ಕಾರಣಕ್ಕೆ ಅವಮಾನಿತನಾಗಿ ಅತ್ಮಹತ್ಯೆಗೆ ಶರಣಾಗಿದ್ದ ರೋಹಿತ್ ವೆಮುಲಾ ನೆನಪಿನಲ್ಲಿ ಅಂತಹ ದುರ್ಘಟನೆಗಳು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯಬಾರದೆನ್ನುವ ಕಾರಣಕ್ಕೆ ರೋಹಿತ್ ವೆಮುಲಾ ವಿಧೇಯಕದ ಕರಡುಪ್ರತಿ ತಯಾರಿಸಿದೆ. ಇದೇ ತಿಂಗಳ ಎರಡನೇ ವಾರ ಆರಂಭವಾಗಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಈ ವಿಧೇಯಕವನ್ನು ಮಂಡಿಸಲು ಸರ್ಕಾರ ನಿರ್ಧರಿಸಿದೆ.
ಶಿಕ್ಷಣ ಮತ್ತು ಘನತೆಯ ಹಕ್ಕನ್ನು ರಕ್ಷಿಸಲು ಮತ್ತು ಸಮಾನ ಪ್ರವೇಶ ಹಕ್ಕನ್ನು ಒದಗಿಸಲು ಕಾಯ್ದೆ ಜಾರಿ ಮಾಡುವುದಾಗಿ ಹೇಳಿಕೊಂಡಿರುವ ಸಿದ್ದರಾಮಯ್ಯ ಸರ್ಕಾರ, ರೋಹಿತ್ ವೇಮುಲ ಕಾಯ್ದೆ 2025 (ಶಿಕ್ಷಣದ ಹಕ್ಕು ಹಾಗೂ ಘನತೆ ರಕ್ಷಣೆ ) ವಿಧೇಯಕ ಕರಡನ್ನು ಸಿದ್ಧಪಡಿಸಿದೆ. ಕಾನೂನು ಇಲಾಖೆ ಬಹುತೇಕ ಈ ಕರಡನ್ನು ಪೂರ್ಣಗೊಳಿಸಿದ್ದು, ಸೋಮವಾರವೂ ಸಭೆ ನಡೆಸಿ ವಿಧೇಯಕ ಮಂಡನೆ ಬಗ್ಗೆ ಸುದೀರ್ಘವಾಗಿ ಚರ್ಚಿಸಿದೆ.
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ (ಎಲ್ಲಾ ಸರ್ಕಾರಿ, ಖಾಸಗಿ ಹಾಗೂ ಡೀಮ್ಸ್ ವಿವಿಗಳು, ಕಾಲೇಜುಗಳು) ಪ್ರವೇಶದ ವೇಳೆ ಯಾವುದೇ ತಾರತಮ್ಯ ಇರಬಾರದು, ಜಾತಿ, ವರ್ಗ, ಮತ, ಲಿಂಗ ಲೆಕ್ಕಿಸದೆ ಶೈಕ್ಷಣಿಕವಾಗಿ ಅರ್ಹ ವಿದ್ಯಾರ್ಥಿಗಳಿಗೆ ಅವಕಾಶ ನೀಡಬೇಕು ಎಂಬ ಧ್ಯೇಯವನ್ನುಈ ವಿಧೇಯಕ ಹೊಂದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದರ ಶಿಫಾರಸುಗಳ ಪ್ರಕಾರ, ತಾರತಮ್ಯ ಮಾಡಿ ಪರಿಶಿಷ್ಟ ಜಾತಿ ವರ್ಗಗಳ, ಹಿಂದುಳಿದ ವಿದ್ಯಾರ್ಥಿಗಳಿಗೆ ಅವಕಾಶ ನಿರಾಕರಿಸಿದ ಯಾವುದೇ ಉನ್ನತ ಶಿಕ್ಷಣ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ.
ಅಂತಹ ಘಟನೆಗಳಿಂದ ನೊಂದವರ ಅಥವಾ ಬಲಿಪಶುವಾಗಿರುವ ವಿದ್ಯಾರ್ಥಿಯ ಪೋಷಕರು, ಸಂಬಂಧಿಕರು, ಅಥವಾ ಸ್ನೇಹಿತರೂ ಕೂಡಾ ದೂರು ನೀಡಲು ಅವಕಾಶವಿದೆ. ಅಂತಹ ದೌರ್ಜನ್ಯಕ್ಕೆ 1 ವರ್ಷ ಜೈಲು ಹಾಗೂ 10 ಸಾವಿರ ರೂ. ದಂಡ ವಿಧಿಸಲು ಕರಡು ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.
ಈ ಕಾಯಿದೆ ಜಾರಿಗೊಳಿಸಬೇಕೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಒತ್ತಡ ಹೇರಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಾಯಿದೆ ರಚನೆಗೆ ಮುಂದಾಗಿದೆ. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲೇ ರಾಹುಲ್ ಗಾಂಧಿ ಈ ಬಗ್ಗೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ಸೂಚನೆ ನೀಡಿದ್ದರು. ಅದರೆ, ಸರ್ಕಾರ ರಚನೆಯಾಗಿ ಎಡರು ವರ್ಷವಾದರೂ ಯಾವುದೇ ನಿಲುವು ಪ್ರಕಟಿಸಿದೇ ಇದ್ದರಿಂದ, ರಾಹುಲ್ ಗಾಂಧಿಯವರು ನೇರವಾಗಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ರೋಹಿತ್ ವೆಮುಲ ಕಾಯಿದೆ ಜಾರಿಗೆ ಒತ್ತಡ ಹೇರಿದ್ದರು.
ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ
ಕರ್ನಾಟಕ ರಾಜ್ಯದಲ್ಲಿ ಸ್ಥಾಪಿಸಲಾದ ಎಲ್ಲಾ ಸಾರ್ವಜನಿಕ ಅಥವಾ ಖಾಸಗಿ ಅಥವಾ ಡೀಮ್ ವಿಶ್ವವಿದ್ಯಾಲಯಗಳಲ್ಲಿ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಇತರ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರಿಗೆ ಶಿಕ್ಷಣ ಮತ್ತು ಘನತೆಯ ಹಕ್ಕನ್ನು ರಕ್ಷಿಸಲು ಮತ್ತು ಸಮಾನ ಪ್ರವೇಶ ಮತ್ತು ಶಿಕ್ಷಣದ ಹಕ್ಕನ್ನು ಒದಗಿಸಲು ಮತ್ತು ಅನ್ಯಾಯವನ್ನು ತಡೆಗಟ್ಟುವ ಅವಕಾಶ ಈ ಮಸೂದೆಗಿದೆ.
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಅನ್ಯಾಯವನ್ನು ತಡೆಗಟ್ಟುವುದು ಮತ್ತು ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು, ಇತರ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರಿಗೆ ಶಿಕ್ಷಣ ಮತ್ತು ಘನತೆಯ ಹಕ್ಕನ್ನು ಕಾಪಾಡುವುದು ಮತ್ತು ಸಮಾನ ಪ್ರವೇಶ ಮತ್ತು ಶಿಕ್ಷಣದ ಹಕ್ಕನ್ನು ಒದಗಿಸುವ ಹಾಗೂ ನಿಯಮಗಳನ್ನು ರಚಿಸುವ ಅಧಿಕಾರ ವನ್ನು ಈ ಕಾಯಿದೆ ರಾಜ್ಯ ಸರ್ಕಾರಕ್ಕೆ ನೀಡಿದೆ.
ಈ ಕರಡು ವಿಧೇಯಕದ ಪ್ರಕಾರ, ನಿಯಮ ಉಲ್ಲಂಘನೆಗಾಗಿ ಒಂದು ವರ್ಷದ ಅವಧಿಗೆ ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ ಮತ್ತು ಹತ್ತು ಸಾವಿರ ರೂಪಾಯಿಗಳ ದಂಡಕ್ಕೂ ಗುರಿಯಾಗುತ್ತಾರೆ. ನ್ಯಾಯಾಲಯವು ಸಂತ್ರಸ್ತನಿಗೆ ಪಾವತಿಸಬೇಕಾದ ಸೂಕ್ತ ಪರಿಹಾರವನ್ನು ಗರಿಷ್ಠ ಒಂದು ಲಕ್ಷ ರೂಪಾಯಿಗಳವರೆಗೆ ವಿಸ್ತರಿಸಬಹುದು ಮತ್ತು ದಂಡದ ಜೊತೆಗೆ ನೀಡಬೇಕು. ಈ ಕಾಯಿದೆಯಡಿಯಲ್ಲಿ ಅಪರಾಧ ಎಸಗಿದ ನಂತರವೂ ಈ ಕಾಯಿದೆಯಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಸಗಿದ ಅಪರಾಧಕ್ಕೆ ಮತ್ತೆ ಶಿಕ್ಷೆಗೊಳಗಾದರೆ, ಅವನಿಗೆ ಕನಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಮತ್ತು ಒಂದು ಲಕ್ಷ ರೂಪಾಯಿಗಳ ದಂಡಕ್ಕೂ ಗುರಿಯಾಗಬೇಕಾಗುತ್ತದೆ ಎಂದು ಕರಡು ವಿಧೇಯಕ ವಿವರಿಸಿದೆ.
ಇದೊಂದು ಜಾಮೀನು ರಹಿತ ಅಪರಾಧವಾಗಿದೆ.) ಯಾವುದೇ ಉನ್ನತ ಶಿಕ್ಷಣ ಸಂಸ್ಥೆಯು ಈ ಕಾಯಿದೆಯ ನಿಬಂಧನೆಗಳನ್ನು ಉಲ್ಲಂಘಿಸಿದರೆ ಸಂಸ್ಥೆಯ ವ್ಯವಹಾರಗಳ ಉಸ್ತುವಾರಿ ಹೊಂದಿರುವ ವ್ಯಕ್ತಿ ಅಥವಾ ವ್ಯಕ್ತಿಗಳು ಶಿಕ್ಷೆಗೆ ಗುರಿಯಾಗುತ್ತಾರೆ. ಈ ಕಾಯಿದೆಯ ನಿಬಂಧನೆಗಳನ್ನು ಉಲ್ಲಂಘಿಸುವ ಅಂತಹ ಸಂಸ್ಥೆಗೆ ರಾಜ್ಯ ಸರ್ಕಾರವು ಯಾವುದೇ ಹಣಕಾಸಿನ ನೆರವು ಅಥವಾ ಅನುದಾನವನ್ನು ನೀಡಬಾರದು ಎಂದೂ ಸೂಚಿಸಲಾಗಿದೆ.
ದೂರು ದಾಖಲಿಸಲು ಸಂತ್ರಸ್ತರು, ಆತನ/ಅವಳ ಪೋಷಕರು, ಸಹೋದರ, ಸಹೋದರಿ ಅಥವಾ ರಕ್ತಸಂಬಂಧಿ, ವಿವಾಹ ಅಥವಾ ದತ್ತು ಸ್ವೀಕಾರ ಅಥವಾ ಯಾವುದೇ ರೀತಿಯ ಸಂಬಂಧಿ ಅಥವಾ ಸಹೋದ್ಯೋಗಿಗಳೂ ಅಂತಹ ದೂರು ದಾಖಲಿಸಬಹುದು ಎಂದು ಕರಡು ವಿಧೇಯಕ ವಿವರಿಸಿದೆ.
ಈ ಮಸೂದೆಗೆ ಅವರ ವೆಮುಲ ಹೆಸರು ಏಕೆ ಇಡಲಾಗಿದೆ?
ರೋಹಿತ್ ವೇಮುಲ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಪದವಿ ವಿದ್ಯಾರ್ಥಿಯಾಗಿದ್ದು, ಅಂಬೇಡ್ಕರ್ ವಿದ್ಯಾರ್ಥಿ ಸಂಘ (ASA) ದೊಂದಿಗೆ ಸಂಬಂಧ ಹೊಂದಿದ್ದ ದಲಿತ ವಿದ್ಯಾರ್ಥಿ ಕಾರ್ಯಕರ್ತರಾಗಿದ್ದರು. 2016 ರಲ್ಲಿ, ರಾಜಕೀಯ ಒತ್ತಡದ ಹಿನ್ನೆಲೆಯಲ್ಲಿ ಅವರನ್ನು ಇತರ ದಲಿತ ವಿದ್ಯಾರ್ಥಿಗಳೊಂದಿಗೆ ವಿಶ್ವವಿದ್ಯಾಲಯದ ಹಾಸ್ಟೆಲ್‌ನಿಂದ ಅಮಾನತುಗೊಳಿಸಲಾಯಿತು. ಅವರು ಜನವರಿ 17, 2016 ರಂದು ಆತ್ಮಹತ್ಯೆ ಮಾಡಿಕೊಂಡರು, ಅವರ ಜಾತಿ ಗುರುತಿನ ಕಾರಣದಿಂದಾಗಿ ಅವರು ಅನುಭವಿಸಿದ ಪರಕೀಯತೆ, ತಾರತಮ್ಯ ಮತ್ತು ಮಾನಸಿಕ ಹಿಂಸೆಯನ್ನು ಎತ್ತಿ ತೋರಿಸುವ ಹೃದಯಸ್ಪರ್ಶಿ ಪತ್ರವನ್ನು ಸಾವಿನ ಮುನ್ನ ಬರೆದಿದ್ದರು.
"ನನ್ನ ಜನ್ಮ ನನ್ನ ಮಾರಕ ಅಪಘಾತ" ಎಂಬ ಅವರ ಮಾತುಗಳು ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಕಾರಣವಾಯಿತು. ರೋಹಿತ್ ಅವರ ಸಾವು ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ಸಾಂಸ್ಥಿಕ ಜಾತೀಯತೆಯ ಸಂಕೇತವಾಯಿತು ಮತ್ತು ವಿದ್ಯಾರ್ಥಿ ಚಳುವಳಿಗಳು ಮತ್ತು ತಾರತಮ್ಯ ವಿರೋಧಿ ಅಭಿಯಾನಗಳಿಗೂ ಕಾರಣವಾಯಿತು.
ಉನ್ನತ ಶಿಕ್ಷಣದಲ್ಲಿ ಸಾಮಾಜಿಕ ತಾರತಮ್ಯವನ್ನು ತಡೆಗಟ್ಟುವುದು ಮತ್ತು ವಿದ್ಯಾರ್ಥಿಗಳ ಘನತೆಯ ಹಕ್ಕನ್ನು ರಕ್ಷಿಸುವ ಗುರಿಯನ್ನು ಹೊಂದಿರುವ ದೇಶದಲ್ಲಿ ಇದು ಮೊದಲ ರಾಜ್ಯ ಮಟ್ಟದ ಶಾಸಕಾಂಗ ಉಪಕ್ರಮಗಳಲ್ಲಿ ಒಂದಾಗಿದೆ. ಈ ಕಾನೂನು ಜಾರಿಗೆ ಬಂದರೆ, ಭಾರತದ ಇತರ ರಾಜ್ಯಗಳಿಗೆ ಇದೊಂದು ಮಾದರಿಯಾಗಬಹುದು ಎಂದು ಸಿದ್ದರಾಮಯ್ಯ ಅವರ ಸಂಪುಟದ ಮಂತ್ರಿಯೊಬ್ಬರು ತಿಳಿಸಿದ್ದಾರ. "ಈ ಮಸೂದೆಯನ್ನು ಜುಲೈ ಎರಡನೇ ವಾರದಲ್ಲಿ ವಿಧಾನಸಭೆಯಲ್ಲಿ ಮಂಡಿಸಲಾಗುವುದು" ಎಂದೂ ಅವರು ಹೇಳಿದ್ದಾರೆ.