ಮಲಯಾಳಂ ಕಡ್ಡಾಯ; ಕಾಸರಗೋಡಿನ ಕನ್ನಡ ಶಾಲೆಗಳ ಉಳಿವಿಗಾಗಿ ಸುಪ್ರೀಂ ಮೆಟ್ಟಿಲೇರಲು ಸಜ್ಜಾದ ಕರ್ನಾಟಕ
x

ಮಲಯಾಳಂ ಕಡ್ಡಾಯ; ಕಾಸರಗೋಡಿನ ಕನ್ನಡ ಶಾಲೆಗಳ ಉಳಿವಿಗಾಗಿ ಸುಪ್ರೀಂ ಮೆಟ್ಟಿಲೇರಲು ಸಜ್ಜಾದ ಕರ್ನಾಟಕ

ಕೇರಳದ ಹೊಸ ನೀತಿಯಿಂದಾಗಿ ಗಡಿಭಾಗದ ಸಾವಿರಾರು ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹಿಂದುಳಿಯುವ ಆತಂಕ ಎದುರಾಗಿದೆ ಎಂದು ಬಿಳಿಮಲೆ ಅವರು ಅಭಿಪ್ರಾಯಪಟ್ಟಿದ್ದಾರೆ.


ಕೇರಳ ಸರ್ಕಾರದ ಮಲಯಾಳಂ ಭಾಷಾ ನೀತಿಯಿಂದಾಗಿ ಗಡಿಭಾಗದ ಕಾಸರಗೋಡಿನ ಕನ್ನಡ ಶಾಲೆಗಳಿಗೆ ಎದುರಾಗಿರುವ ಅಸ್ತಿತ್ವದ ಭೀತಿಯ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಈಗ ಸುಪ್ರೀಂಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದೆ.

ಕಾಸರಗೋಡಿನ ಕನ್ನಡ ಶಾಲೆಗಳಲ್ಲಿ ಮಲಯಾಳಂ ಭಾಷೆಯನ್ನು ಪ್ರಥಮ ಭಾಷೆಯನ್ನಾಗಿ ಕಡ್ಡಾಯಗೊಳಿಸಿರುವ ಕೇರಳ ಸರ್ಕಾರದ ಕ್ರಮವನ್ನು ಪ್ರಶ್ನಿಸಿ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಜಂಟಿಯಾಗಿ ಮುಂದಿನ ವಾರ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಿವೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ 'ದ ಫೆಡರಲ್ ಕರ್ನಾಟಕ'ಕ್ಕೆ ಮಾಹಿತಿ ನೀಡಿದ್ದಾರೆ.

ಕೇರಳ ಸರ್ಕಾರವು ಜಾರಿಗೆ ತಂದಿರುವ ಮಲಯಾಳಂ ಭಾಷಾ ಕಾಯ್ದೆಯು ಕಾಸರಗೋಡು ಭಾಗದ ಕನ್ನಡ ಭಾಷಿಕ ವಿದ್ಯಾರ್ಥಿಗಳ ಮೇಲೆ ಗಂಭೀರ ಪರಿಣಾಮ ಬೀರಿದೆ. ಈ ಕಾಯ್ದೆಯನ್ವಯ ಕನ್ನಡ ಮಾಧ್ಯಮ ಶಾಲೆಗಳಲ್ಲೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಕಲಿಯುವುದನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದಾಗಿ ದಶಕಗಳಿಂದ ಕನ್ನಡವನ್ನೇ ಪ್ರಧಾನವಾಗಿ ಕಲಿಸುತ್ತಿದ್ದ ಶಾಲೆಗಳಲ್ಲಿ ಕನ್ನಡದ ಪ್ರಾಮುಖ್ಯತೆ ಕುಗ್ಗುತ್ತಿದೆ. ಭಾಷಾ ಅಲ್ಪಸಂಖ್ಯಾತರಿಗೆ ಅವರ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವ ಸಾಂವಿಧಾನಿಕ ಹಕ್ಕನ್ನು ಈ ಕಾಯ್ದೆಯು ಉಲ್ಲಂಘಿಸುತ್ತಿದೆ ಎಂಬುದು ಕರ್ನಾಟಕದ ಪ್ರಮುಖ ಆಕ್ಷೇಪ. ಈ ನೀತಿಯಿಂದಾಗಿ ಗಡಿಭಾಗದ ಸಾವಿರಾರು ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹಿಂದುಳಿಯುವ ಆತಂಕ ಎದುರಾಗಿದೆ ಎಂದು ಬಿಳಿಮಲೆ ಅವರು ಅಭಿಪ್ರಾಯಪಟ್ಟಿದ್ದಾರೆ.

ಹೋರಾಟಕ್ಕೆ ಸಜ್ಜು

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಗಡಿ ಅಭಿವೃದ್ಧಿ ಪ್ರಾಧಿಕಾರಗಳು ಈಗಾಗಲೇ ಈ ವಿಷಯದ ಕುರಿತು ಸುದೀರ್ಘ ಚರ್ಚೆ ನಡೆಸಿವೆ. ಭಾಷಾ ತಾರತಮ್ಯದ ವಿರುದ್ಧ ಬಲವಾದ ಕಾನೂನು ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಲಾಗುತ್ತಿದ್ದು, ಹಿರಿಯ ವಕೀಲರ ತಂಡದ ಮೂಲಕ ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸಲು ನಿರ್ಧರಿಸಲಾಗಿದೆ. ಕೇರಳ ಸರ್ಕಾರದ ಏಕಪಕ್ಷೀಯ ನಿರ್ಧಾರವು ಕಾಸರಗೋಡಿನ ಕನ್ನಡಿಗರ ಸಾಂಸ್ಕೃತಿಕ ಮತ್ತು ಭಾಷಾ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ ಎಂದು ಕರ್ನಾಟಕ ವಾದಿಸಲಿದೆ.

ಕಾಸರಗೋಡಿನ ಕನ್ನಡ ಮಕ್ಕಳ ಹಿತರಕ್ಷಣೆಗಾಗಿ ಯಾವುದೇ ಹಂತದ ಹೋರಾಟಕ್ಕೂ ತಾವು ಸಿದ್ಧ ಎಂದು ತಿಳಿಸಿದ್ದಾರೆ. ಮಲಯಾಳಂ ಭಾಷಾ ನೀತಿಯಿಂದ ಕನ್ನಡ ಶಾಲಾ ಮಕ್ಕಳಿಗೆ ಆಗುತ್ತಿರುವ ಅನ್ಯಾಯವನ್ನು ಸಹಿಸಲು ಸಾಧ್ಯವಿಲ್ಲ. ಕೇರಳ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿ ಅಲ್ಲಿನ ಕನ್ನಡಿಗರಿಗೆ ನ್ಯಾಯ ಒದಗಿಸಿಕೊಡಲಾಗುವುದು ಎಂದು ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.

Read More
Next Story