ಕರ್ನಾಟಕ ದೇವಾಲಯ ತೆರಿಗೆ ವಿವಾದ: ನಿಮಗೆ ಗೊತ್ತಿರಬೇಕಾದ ವಿವರಗಳೇನು?
ಕರ್ನಾಟಕ ಕ್ಯಾಬಿನೆಟ್ ಬುಧವಾರ (ಫೆ.21) ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧಾರ್ಮಿಕ ದತ್ತಿ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಿದೆ. ವಾರ್ಷಿಕ ₹1 ಕೋಟಿಗಿಂತ ಹೆಚ್ಚಿನ ಆದಾಯವನ್ನು ಗಳಿಸುವ ಹಿಂದೂ ದೇವಾಲಯಗಳಿಂದ ಅವುಗಳ ಆದಾಯದ ಶೇ.10ರಷ್ಟನ್ನು ತೆರಿಗೆ ರೂಪದಲ್ಲಿ ಸಂಗ್ರಹಿಸಲು ಈ ಮಸೂದೆ ಸರ್ಕಾರಕ್ಕೆ ಅವಕಾಶ ನೀಡುತ್ತದೆ.
ಸಿದ್ದರಾಮಯ್ಯ ಸರ್ಕಾರದ ಈ ಕ್ರಮವು ಪ್ರತಿಪಕ್ಷ ಬಿಜೆಪಿಯನ್ನು ಕೆರಳಿಸಿದ್ದು, ಈ ಸರ್ಕಾರ "ಹಿಂದೂ ವಿರೋಧಿ" ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ದೇವಾಲಯದ ಆದಾಯದಿಂದ ತನ್ನ ʼಖಾಲಿ ಬೊಕ್ಕಸʼವನ್ನು ತುಂಬಲು ಕಾಂಗ್ರೆಸ್ ಸರ್ಕಾರ ಈ ಮಸೂದೆಯನ್ನು ಮಂಡಿಸಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.
ಈ ಮಸೂದೆಯ ಏನು? ಯಾಕೆ ಇದು ರಾಜ್ಯದಲ್ಲಿ ಬಿರುಗಾಳಿ ಎಬ್ಬಿಸಿದೆ ಎಂಬ ಬಗ್ಗೆ ನೀವು ತಿಳಿಯಲೇಬೇಕಾದ ವಿವರ ಇಲ್ಲಿದೆ.ʼ
ಹಿಂದಿನ ನಿಯಮ ಏನಾಗಿತ್ತು?
ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಇಲಾಖೆಯು ರಾಜ್ಯದಲ್ಲಿ 35,000 ಕ್ಕೂ ಹೆಚ್ಚು ದೇವಾಲಯಗಳನ್ನು ನಿರ್ವಹಿಸುತ್ತದೆ. ಅವುಗಳಲ್ಲಿ ವಾರ್ಷಿಕ ₹ 25 ಲಕ್ಷ ಆದಾಯ ಗಳಿಸುವ 205 ದೇವಾಲಯಗಳನ್ನು ಗ್ರೂಪ್ ಎ ಎಂದು ವರ್ಗೀಕರಿಸಲಾಗಿದೆ. ವಾರ್ಷಿಕ ₹5 ಲಕ್ಷದಿಂದ ₹ 25 ಲಕ್ಷದವರೆಗಿನ ವಾರ್ಷಿಕ ಆದಾಯ ಹೊಂದಿರುವ 193 ದೇವಾಲಯಗಳು ಗ್ರೂಪ್ ಬಿ ಯಲ್ಲಿದೆ. ಹಾಗೆಯೇ ₹ 5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಸುಮಾರು 34,000 ದೇವಸ್ಥಾನಗಳು ಗ್ರೂಪ್ ಸಿ ಅಡಿಯಲ್ಲಿ ವರ್ಗೀಕರಿಸಲಾಗಿದೆ.
ಗ್ರೂಪ್ ಎ ದೇವಾಲಯಗಳು, ತಮ್ಮ ಕಾಣಿಕೆ ಆದಾಯದ ಶೇ.10ರಷ್ಟನ್ನು ಧಾರ್ಮಿಕ ಪರಿಷತ್ತಿಗೆ (ದೇವಾಲಯದ ನಿರ್ವಹಣೆ ಮಾಡುವ ಸಮಿತಿ) ಕೊಡುಗೆಯಾಗಿ ನೀಡುತ್ತಿದ್ದರೆ, ಗುಂಪು ಬಿ ದೇವಾಲಯಗಳು ಶೇ.5ರಷ್ಟನ್ನು ನೀಡುತ್ತವೆ. ಸಿ ಗುಂಪಿನ ದೇವಾಲಯಗಳು ಯಾವುದೇ ಕೊಡುಗೆ ನೀಡುವುದಿಲ್ಲ.
ಹೊಸ ತಿದ್ದುಪಡಿಯಿಂದ ಆಗುವ ಬದಲಾವಣೆಗಳು ಯಾವುವು?
ತಿದ್ದುಪಡಿ ಮಾಡಲಾದ ಕಾನೂನಿನ ಪ್ರಕಾರ, ವಾರ್ಷಿಕ ₹1 ಕೋಟಿಗಿಂತ ಹೆಚ್ಚಿನ ಆದಾಯ ಹೊಂದಿರುವ ದೇವಾಲಯಗಳು ತಮ್ಮ ಆದಾಯದ ಶೇ.10 ರಷ್ಟು 'ಕಾಮನ್ ಪೂಲ್ ಫಂಡ್'ಗೆ (ಸಿಪಿಎಫ್) ನೀಡಬೇಕಾಗುತ್ತದೆ.
ಹೊಸ ನಿಯಮಗಳ ಪ್ರಕಾರ ₹10 ಲಕ್ಷದಿಂದ ₹1 ಕೋಟಿಯೊಳಗೆ ಆದಾಯವಿರುವ ದೇವಸ್ಥಾನಗಳು ತಮ್ಮ ಆದಾಯದ ಶೇ.5ರಷ್ಟನ್ನು ಸಿಪಿಎಫ್ಗೆ ದೇಣಿಗೆ ನೀಡಬೇಕು.
ವಾರ್ಷಿಕ ₹10 ಲಕ್ಷಕ್ಕಿಂತ ಕಡಿಮೆ ಆದಾಯವಿರುವ ದೇವಾಲಯಗಳು ಯಾವುದೇ ಕೊಡುಗೆಗಳನ್ನು ನೀಡಬೇಕಾಗಿಲ್ಲ.
ಸಿಪಿಎಫ್ ಅನ್ನು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಇಲಾಖೆಯು ನಿಯಂತ್ರಿಸುತ್ತದೆ ಮತ್ತು ರಾಜ್ಯದಲ್ಲಿ ಧಾರ್ಮಿಕ ಚಟುವಟಿಕೆಗಳಿಗೆ ಬಳಸಲಾಗುತ್ತದೆ.
ವಿಧಾನಸಭೆಯಲ್ಲಿ ವಿಧೇಯಕವನ್ನು ಮಂಡಿಸಿದ ರಾಜ್ಯ ಸಾರಿಗೆ ಮತ್ತು ಹಿಂದೂ ಧಾರ್ಮಿಕ ದತ್ತಿ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ಈ ಹಣವನ್ನು ದೇವಸ್ಥಾನಗಳ ನಿರ್ವಹಣೆಗೆ ಮಾತ್ರವಲ್ಲದೆ ವಿಮಾ ರಕ್ಷಣೆ, ದೇವಾಲಯದ ಅರ್ಚಕರಿಗೆ ಮರಣ ಪರಿಹಾರ ನಿಧಿ ಮತ್ತು ಮಕ್ಕಳ ವಿದ್ಯಾರ್ಥಿವೇತನವನ್ನು ಪ್ರಾಯೋಜಿಸಲು ಬಳಸಲಾಗುವುದು. ಸುಮಾರು 40,000 ಪುರೋಹಿತರ ಕುಟುಂಬಗಳು ಇದರ ಪ್ರಯೋಜನ ಪಡೆಯಲಿವೆ ಎಂದಿದ್ದಾರೆ.
ಬಿಜೆಪಿ ಅಸಮಾಧಾನಕ್ಕೆ ಕಾರಣವೇನು?
ಮಸೂದೆಯನ್ನು ಹಿಂದೂ ವಿರೋಧಿ ಎಂದು ಬಣ್ಣಿಸಿರುವ ಬಿಜೆಪಿ, ರಾಜ್ಯ ಸರ್ಕಾರವು ತನ್ನ ಸ್ವಂತ ಲಾಭಕ್ಕಾಗಿ ಇದನ್ನು ಮಂಡಿಸಿದೆ ಎಂದು ಹೇಳಿದೆ. ಬಿಜೆಪಿಯ ರಾಜ್ಯ ಅಧ್ಯಕ್ಷ ಬಿ ವೈ ವಿಜಯೇಂದ್ರ ಈ ಬಗ್ಗೆ ತಮ್ಮ X ಖಾತೆಯಲ್ಲಿ ಪ್ರತಿಕ್ರಿಯಿಸಿ, ಸರ್ಕಾರವು ಇತರ ಧಾರ್ಮಿಕ ಸಂಸ್ಥೆಗಳು, ಮಂದಿರಗಳ ಮೇಲೆ ಯಾಕೆ ಇದೇ ರೀತಿಯ ತೆರಿಗೆ ವಿಧಿಸುತ್ತಿಲ್ಲ ಎಂದು ಕೇಳಿದ್ದಾರೆ.
“ಭ್ರಷ್ಟ, ಅಸಮರ್ಥ, ಲೂಟಿಕೋರ ಸರ್ಕಾರ ಜಾತ್ಯತೀತತೆಯ ಸೋಗಿನಲ್ಲಿ ಹಿಂದೂ ವಿರೋಧಿ ಸಿದ್ಧಾಂತ ಅನುಸರಿಸುತ್ತಿದ್ದು, ದೇವಾಲಯದ ಆದಾಯದ ಮೇಲೆ ತನ್ನ ಕೆಂಗಣ್ಣು ಬೀರಿದೆ. ಹಿಂದೂ ಧಾರ್ಮಿಕ ದತ್ತಿ ತಿದ್ದುಪಡಿ ಕಾಯಿದೆಯ ಮೂಲಕ, ತನ್ನ ಖಾಲಿ ಬೊಕ್ಕಸವನ್ನು ತುಂಬಿಸಿಕೊಳ್ಳಲು ಹಿಂದೂ ದೇವಾಲಯಗಳು ಮತ್ತು ಧಾರ್ಮಿಕ ಸಂಸ್ಥೆಗಳಿಂದ ಕಾಣಿಕೆ ಹುಂಡಿಗೆ ಕೈಹಾಕಿದೆ. ಇದಕ್ಕಿಂತ ವಿಧಾನಸೌಧದ ಎದುರು ಕಾಣಿಕೆ ಡಬ್ಬಿ ಇಟ್ಟುಬಿಡಿ" ಎಂದು ಕಿಡಿಕಾರಿದ್ದಾರೆ.
ಹಿಂದೂ ದೇವಸ್ಥಾನದ ನಿಧಿಯನ್ನು ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಮಾತ್ರ ಬಳಸಬೇಕು ಮತ್ತು ಭಕ್ತರಿಗೆ ಅನುಕೂಲವಾಗುವ ಕೆಲಸಗಳನ್ನು ಮಾತ್ರ ಮಾಡಬೇಕು. ಆ ನಿಧಿಯನ್ನು ಇತರ ಉದ್ದೇಶಗಳಿಗೆ ಬಳಸುವುದು ಹಿಂದೂಗಳ ಧಾರ್ಮಿಕ ನಂಬಿಕೆಗೆ ಬಗೆದ ಅನ್ಯಾಯ ಮತ್ತು ದ್ರೋಹ ಎಂದು ಅವರು ಹೇಳಿದ್ದಾರೆ.
ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್ ಅವರು ಸಿದ್ದರಾಮಯ್ಯ ಸರ್ಕಾರವು ಮಸೂದೆಯ ಮೂಲಕ ದೇವಾಲಯಗಳನ್ನು ʼಲೂಟಿʼ ಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
''ಇದೇ ಸರ್ಕಾರ ಕೆಲವೇ ತಿಂಗಳಲ್ಲಿ ಕೋಟ್ಯಂತರ ರೂ.ಗಳನ್ನು ಕಬಳಿಸಿ ಗುತ್ತಿಗೆದಾರರಿಗೆ ನೀಡಿದೆ. ಮತ್ತು ಈಗ ಅವರು ತಮ್ಮ ಭ್ರಷ್ಟ ರಾಜಕಾರಣಕ್ಕೆ ಹಣ ಹೂಡಲು ಹಿಂದೂ ಭಕ್ತರು ಕರ್ನಾಟಕ ಕಾಂಗ್ರೆಸ್ ಎಟಿಎಂ ಯಂತ್ರಕ್ಕೆ ಹಣ ನೀಡಬೇಕು ಎಂದು ಮಸೂದೆ ತಂದಿದ್ದಾರೆ. ಹಿಂದೂ ಭಕ್ತರ ಹಣವನ್ನು ಕರ್ನಾಟಕ ಸರ್ಕಾರ ಲೂಟಿ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರದ ಪ್ರತಿಕ್ರಿಯೆ ಏನು?
ರಾಜ್ಯ ಸರ್ಕಾರ ಬಿಜೆಪಿಯ ವಿರೋಧಕ್ಕೆ ಸ್ಪಷ್ಟನೆ ನೀಡುತ್ತಾ, ಅಧಿಸೂಚಿತ ಸಂಸ್ಥೆಗಳ ನಿರ್ವಹಣಾ ಸಮಿತಿಯಲ್ಲಿ ವಿಶ್ವ ಹಿಂದೂ ದೇವಾಲಯದ ವಾಸ್ತುಶಿಲ್ಪ ಮತ್ತು ಶಿಲ್ಪಕಲೆಯಲ್ಲಿ ನುರಿತ ವ್ಯಕ್ತಿಯೂ ಸೇರಿದಂತೆ ಹಲವು ಹಿಂದೂ ಪ್ರಮುಖರು ಇದ್ದಾರೆ. ಕಾಮನ್ ಪೂಲ್ ಫಂಡ್(ಸಿಪಿಎಫ್) ಹೆಚ್ಚಿಸಲು ಆ ಸಮಿತಿಯೇ ಹೊಸ ತಿದ್ದುಪಡಿಗಳನ್ನು ಸೂಚಿಸಿದೆ. ಈ ನಿಧಿಯನ್ನು ಯಾತ್ರಾರ್ಥಿಗಳ ಸುರಕ್ಷತೆ, ದೇವಾಲಯಗಳ ಮೂಲಸೌಕರ್ಯಗಳನ್ನು ಸುಧಾರಿಸಲು ಬಳಸಲಾಗುವುದು. ಅಲ್ಲದೆ, ಈ ಬಗ್ಗೆ ನಿರ್ವಹಣೆಗೆ ಜಿಲ್ಲಾ ಮತ್ತು ರಾಜ್ಯ ಮಟ್ಟದ ಸಮಿತಿಗಳನ್ನು ರಚಿಸಲಾಗುವುದು ಎಂದಿದೆ. ಈ ಬಗ್ಗೆ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡ ಸಚಿವ ರಾಮಲಿಂಗಾ ರೆಡ್ಡಿ, ಈ ಕಾನೂನು ಹೊಸದೇನಲ್ಲ. 2003 ರಿಂದ ಅಸ್ತಿತ್ವದಲ್ಲಿದೆ ಎಂದಿದ್ದಾರೆ.
ಬಿಜೆಪಿಯ ಆರೋಪಕ್ಕೆ ವ್ಯತಿರಿಕ್ತವಾಗಿ, ಹೊಸ ನಿಯಮದ ಪ್ರಕಾರ ವಾರ್ಷಿಕ ₹10 ಲಕ್ಷಕ್ಕಿಂತ ಕಡಿಮೆ ಆದಾಯವಿರುವ ದೇವಾಲಯಗಳಿಗೆ ಧಾರ್ಮಿಕ ಪರಿಷತ್ತಿಗೆ ಕೊಡುಗೆ ನೀಡುವುದರಿಂದ ವಿನಾಯ್ತಿ ನೀಡಲಾಗಿದೆ. ಇದು ಸಣ್ಣ ದೇವಾಲಯಗಳ ಹಿತದೃಷ್ಟಿಯಿಂದ ಒಳ್ಳೆಯ ಕ್ರಮ ಎಂದೂ ಸಚಿವರು ಸರ್ಕಾರದ ಹೊಸ ಮಸೂದೆಯನ್ನು ಸಮರ್ಥಿಸಿಕೊಂಡಿದ್ದಾರೆ.
ತೆರಿಗೆ ಹಣವನ್ನು ಎಲ್ಲಿ ಬಳಸಲಾಗುವುದು?
ಧಾರ್ಮಿಕ ಪರಿಷತ್ತು ಸಂಗ್ರಹಿಸುವ ನಿಧಿಯನ್ನು ರಾಜ್ಯದ 40-50 ಸಾವಿರ ಅರ್ಚಕರ ಅನುಕೂಲಕ್ಕಾಗಿ ಬಳಸಬಹುದು ಎಂದು ಸಚಿವರು ಹೇಳಿದರು.
“...ನಾವು ಅವರಿಗೆ ವಿಮಾ ರಕ್ಷಣೆಯನ್ನು ಒದಗಿಸಬಹುದು. ಅವರ ಜೀವಕ್ಕೆ ಏನಾದರೂ ಆಗಿದ್ದರೆ ಅವರ ಕುಟುಂಬಕ್ಕೆ ಕನಿಷ್ಠ ₹ 5 ಲಕ್ಷ ಸಿಗಬೇಕೆಂದು ನಾವು ಬಯಸುತ್ತೇವೆ. ವಿಮಾ ಪ್ರೀಮಿಯಂ ಕಟ್ಟಲು ₹7 ಕೋಟಿಯಿಂದ ₹8 ಕೋಟಿ ಬೇಕು. ದೇವಸ್ಥಾನದ ಅರ್ಚಕರ ಮಕ್ಕಳಿಗೆ ಶಿಷ್ಯವೇತನ ನೀಡಲು ಸರ್ಕಾರಕ್ಕೆ ವಾರ್ಷಿಕ ₹5-6 ಕೋಟಿ ಬೇಕಾಗುತ್ತದೆ ಎಂದರು.
ಗ್ರೂಪ್ 'ಎ' ದೇವಾಲಯಗಳ ವ್ಯಾಪ್ತಿಯಲ್ಲಿ ಯಾತ್ರಾರ್ಥಿಗಳಿಗೆ ಸೌಲಭ್ಯಗಳು ಮತ್ತು ಸುರಕ್ಷತೆಯನ್ನು ಒದಗಿಸುವುದು ಮಸೂದೆಯ ಹಿಂದಿನ ಉದ್ದೇಶವಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಕಟ್ಟಡಗಳು, ರಸ್ತೆಗಳು ಮತ್ತು ಚರಂಡಿ ನಿರ್ಮಾಣ ಮತ್ತು ನಿರ್ವಹಣೆ, ವಿದ್ಯುತ್ ಸರಬರಾಜು ಮತ್ತು ನಿರ್ವಹಣೆ, ನೀರು ಸರಬರಾಜು ಮತ್ತು ನೈರ್ಮಲ್ಯ, ಮನರಂಜನಾ ಕೇಂದ್ರಗಳು ಮತ್ತು ಗ್ರಂಥಾಲಯಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪರಿಶೀಲಿಸಿ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾ ಮಟ್ಟದ ಮತ್ತು ರಾಜ್ಯ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗುವುದು. ಯಾತ್ರಾರ್ಥಿಗಳಿಗೆ ಅಗತ್ಯ ಸೌಲಭ್ಯಗಳು ಒದಗಿಸಲು ಈ ನಿಧಿ ಬಳಕೆಯಾಗಲಿದೆ ಎಂದರು ಸಚಿವರು ಸ್ಪಷ್ಟಪಡಿಸಿದ್ದಾರೆ.
ವಿವಾದಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯೆ ಏನು?
ಬಿಜೆಪಿ ಸುಳ್ಳುಗಳನ್ನು ಹರಡುತ್ತಿದೆ ಎಂದು ಆರೋಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಸರಿ ಪಕ್ಷವು ಜನರನ್ನು ಕೋಮು ಆಧಾರಿತವಾಗಿ ಧ್ರುವೀಕರಣ ಮಾಡಲು ಇಡೀ ವಿಷಯವನ್ನು ತಿರುಚುತ್ತಿದೆ ಎಂದು ಹೇಳಿದ್ದಾರೆ.
ತಮ್ಮ X ಖಾತೆಯಲ್ಲಿ ಅವರು ಈ ಬಗ್ಗೆ ಹಾಕಿರುವ ಪೋಸ್ಟ್ನಲ್ಲಿ, ಕಾಮಲ್ ಪೂಲ್ ಫಂಡ್ ರಚನೆಯ ಆದೇಶವನ್ನು 1997 ರಲ್ಲಿ ಮಾಡಲಾಗಿತ್ತು ಮತ್ತು ಇತ್ತೀಚಿನ ತಿದ್ದುಪಡಿಯನ್ನು "ಕೇವಲ ಸಾಮಾನ್ಯ ಪೂಲ್ನ ಪ್ರಮಾಣವನ್ನು ಹೆಚ್ಚಿಸಲು" ಮಾಡಲಾಗಿದೆ ಎಂದು ಹೇಳಿದ್ದಾರೆ.
ಈ ನಿಧಿಯು ಸಂಪೂರ್ಣವಾಗಿ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಧಾರ್ಮಿಕ ಉದ್ದೇಶಗಳಿಗೆ ಮೀಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
"2003 ರಲ್ಲಿ ಕಾಯಿದೆ ಜಾರಿಗೆ ಬಂದ ನಂತರ ಕಾಮನ್ ಪೂಲ್ ಫಂಡ್ ಅನ್ನು ಹಿಂದೂ ಸಂಸ್ಥೆಗಳ ಧಾರ್ಮಿಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗಿದೆ ಮತ್ತು ಭವಿಷ್ಯದಲ್ಲಿ ಅದೇ ಉದ್ದೇಶಗಳಿಗಾಗಿ ಇದನ್ನು ಬಳಸಲಾಗುವುದು. ಇದನ್ನು ಬೇರೆ ಯಾವುದೇ ಉದ್ದೇಶಗಳಿಗಾಗಿ ಅಥವಾ ಇತರ ಧರ್ಮಗಳ ಅನುಯಾಯಿಗಳ ಪ್ರಯೋಜನಕ್ಕಾಗಿ ಬಳಸಲಾಗದು. ಈ ನಿಬಂಧನೆಗಳು ದೇವಸ್ಥಾನದ ಹಣವನ್ನು ಹಿಂದೂ ಸಮುದಾಯದ ಕಲ್ಯಾಣ ಮತ್ತು ಉನ್ನತಿಗಾಗಿ ಬಳಸುವ ನಿಬಂಧನೆಗಳನ್ನು ಒಳಗೊಂಡಿವೆ. ಹಿಂದೂಯೇತರ ಉದ್ದೇಶಗಳಿಗಾಗಿ ಹಣವನ್ನು ಹಂಚಿಕೆ ಮಾಡುವ ಅಥವಾ ಅನ್ಯಾಯವಾಗಿ ತೆರಿಗೆ ವಿಧಿಸುವ ಅವಕಾಶ ಈ ಮಸೂದೆಯಲ್ಲಿ ಇಲ್ಲ ”ಎಂದು ಅವರು ಹೇಳಿದ್ದಾರೆ.
ನಿಧಿಯ ಹಣವನ್ನು ಖರ್ಚು ಮಾಡುವ ಉದ್ದೇಶಿತ ಚಟುವಟಿಕೆಗಳ ಪಟ್ಟಿಯನ್ನು ಕೂಡ ಸಿಎಂ ಸಿದ್ದರಾಮಯ್ಯ ಹಂಚಿಕೊಂಡಿದ್ದಾರೆ.