
ಪಶ್ಚಿಮ ಘಟ್ಟದ 1,351 ಗ್ರಾಮಗಳಲ್ಲಿ ಭೂಕುಸಿತ ಸಾಧ್ಯತೆ: ಸಿಎಂ ಸಿದ್ದರಾಮಯ್ಯ
ಈ ನಿಟ್ಟಿನಲ್ಲಿಈ ಪ್ರದೇಶಗಳಲ್ಲಿ ಭೂಕುಸಿತವನ್ನು ತಡೆಗಟ್ಟಲು, ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ ಮತ್ತು ರಾಷ್ಟ್ರೀಯ ರಾಕ್ ಮೆಕ್ಯಾನಿಕ್ಸ್ (ಎನ್‌ಐಆರ್‌ಎಂ) ಸಹಯೋಗದಲ್ಲಿ ರೂ 100 ಕೋಟಿ ವೆಚ್ಚದಲ್ಲಿ ಪರಿಹಾರೋಪಾಯಗಳನ್ನು ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.
ಪಶ್ಚಿಮಘಟ್ಟ ವ್ಯಾಪ್ತಿಯ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ, ಹಾಸನದ 250 ಗ್ರಾಮ ಪಂಚಾಯಿತಿಗಳ 1,351 ಗ್ರಾಮಗಳು ಭೂಕುಸಿತಕ್ಕೆ ಒಳಗಾಗುವ ಸಾಧ್ಯತೆಯಿದೆ ಎಂದು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದಿಂದ ಗುರುತಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಇಲ್ಲಿನ ಮಾಕ್ ಷಾ ಪರೇಡ್ ಮೈದಾನದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಬಳಿಕ ಮಾತನಾಡುತ್ತಾ ಈ ವಿಷಯ ತಿಳಿಸಿದರು. ಈ ನಿಟ್ಟಿನಲ್ಲಿಈ ಪ್ರದೇಶಗಳಲ್ಲಿ ಭೂಕುಸಿತವನ್ನು ತಡೆಗಟ್ಟಲು, ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ ಮತ್ತು ರಾಷ್ಟ್ರೀಯ ರಾಕ್ ಮೆಕ್ಯಾನಿಕ್ಸ್ (ಎನ್‌ಐಆರ್‌ಎಂ) ಸಹಯೋಗದಲ್ಲಿ ರೂ 100 ಕೋಟಿ ವೆಚ್ಚದಲ್ಲಿ ಪರಿಹಾರೋಪಾಯಗಳನ್ನು ಕೈಗೊಳ್ಳಲಾಗುವುದು ಎಂದರು.
ರಾಜ್ಯದ ಹಲವೆಡೆ ಮುಂಗಾರು ಮಳೆಯಿಂದ ಉಂಟಾಗಿರುವ ಪ್ರವಾಹಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿದ್ದರಾಮಯ್ಯ ಅವರು, ಪ್ರವಾಹ ಪೀಡಿತ ಜಿಲ್ಲೆಗಳಿಗೆ ಖುದ್ದಾಗಿ ಭೇಟಿ ನೀಡಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಜಿಲ್ಲಾ ಕೇಂದ್ರಗಳಲ್ಲಿ ಮೊಕ್ಕಾಂ ಹೂಡಿ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ಮಾನವ ಪ್ರಾಣ ಹಾನಿ, ಜಾನುವಾರು ಮತ್ತು ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡುವಂತೆ ನಾನು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ಮನೆ ಕಳೆದುಕೊಂಡವರಿಗೆ 1.2 ಲಕ್ಷ ರೂಪಾಯಿ ಪರಿಹಾರದೊಂದಿಗೆ ಮನೆಗಳನ್ನು ಮಂಜೂರು ಮಾಡಲು ನಿರ್ಧರಿಸಲಾಗಿದೆ. ಅಭಿವೃದ್ಧಿ ಮತ್ತು ಪರಿಸರದ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಅತ್ಯಗತ್ಯ ಎಂದು ಒತ್ತಿ ಹೇಳಿದರು.
ಮಾನವ-ವನ್ಯಜೀವಿ ಸಂಘರ್ಷದ ಕುರಿತು ಮಾತನಾಡಿದ ಸಿಎಂ, ಇದನ್ನು ಪರಿಣಾಮಕಾರಿಯಾಗಿ ಪರಿಹರಿಸಲು ಸರ್ಕಾರ ಅಧಿಕಾರಕ್ಕೆ ಬಂದ ನಂತರ 120 ಕಿಮೀ ರೈಲ್ವೆ ಬ್ಯಾರಿಕೇಡ್‌ಗಳ ನಿರ್ಮಾಣಕ್ಕೆ ಚಾಲನೆ ನೀಡಿದೆ. ಹೆಚ್ಚುವರಿಯಾಗಿ 7 ಆನೆ ಕಾರ್ಯಪಡೆ ಮತ್ತು 2 ಚಿರತೆ ಕಾರ್ಯಪಡೆಗಳನ್ನು ಸ್ಥಾಪಿಸಲಾಗಿದೆ. ಇತ್ತೀಚೆಗೆ, ಬೆಂಗಳೂರಿನಲ್ಲಿ ಮಾನವ-ಆನೆ ಸಂಘರ್ಷ ತಡೆಗಟ್ಟುವ ಕುರಿತು ಅಂತರರಾಷ್ಟ್ರೀಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಲಾಯಿತು ಎಂದು ತಿಳಿಸಿದ್ದಾರೆ.
ವಿದೇಶೀ ಬಂಡವಾಳ
2023-24ರ ಅವಧಿಯಲ್ಲಿ 54,427 ಕೋಟಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಮೂಲಕ ಕರ್ನಾಟಕ ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ರಾಜ್ಯ ಸರ್ಕಾರವು ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನದ ಜೊತೆಗೆ ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸಲು ಕೈಗಾರಿಕೆ, ಕೃಷಿ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಬಹು ಆಯಾಮದ ಕಾರ್ಯಕ್ರಮಗಳನ್ನು ಕೈಗೊಂಡಿದೆ. 13 ಕೈಗಾರಿಕೆಗಳೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇದು 42,915 ಕೋಟಿ ರೂಪಾಯಿಗಳ ಹೂಡಿಕೆಯನ್ನು ತರುತ್ತದೆ ಮತ್ತು ಸುಮಾರು 22,600 ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.
2023-24ರ ಅವಧಿಯಲ್ಲಿ ಏಕ ಗವಾಕ್ಷಿ ಸಮಿತಿಗಳ ಮೂಲಕ 591 ಹೂಡಿಕೆ ಯೋಜನೆಗಳನ್ನು ಸರ್ಕಾರ ಅನುಮೋದಿಸಿದೆ. ಇದು ರೂ 84,232 ಕೋಟಿ ಹೂಡಿಕೆ ಮತ್ತು 1,56,986 ಜನರಿಗೆ ಉದ್ಯೋಗ ಸೃಷ್ಟಿಸಲಿದೆ. 2023-24ರಲ್ಲಿ ನಮ್ಮ ರಾಜ್ಯವು USD 1,66,545 ಮಿಲಿಯನ್ ಮೌಲ್ಯದೊಂದಿಗೆ ರಫ್ತಿನಲ್ಲಿ ಮೊದಲ ಸ್ಥಾನದಲ್ಲಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಬೆಳವಣಿಗೆಯು ಶೇಕಡಾ 5.20 ಆಗಿದೆ ಎಂದು ಅವರು ತಿಳಿಸಿದರು.
ಐಟಿ ಮತ್ತು ಬಿಟಿ ವಲಯಗಳಲ್ಲಿನ ಬೇಡಿಕೆಗೆ ಅನುಗುಣವಾಗಿ ಕೌಶಲ್ಯ ತರಬೇತಿ ನೀಡಲು 'ಕೌಶಲ್ಯ ಸಲಹಾ ಸಮಿತಿ'ಯನ್ನು ಸ್ಥಾಪಿಸಲಾಗಿದೆ. ಸಮಿತಿಯು ಉದ್ಯಮದ ಅಗತ್ಯಗಳಿಗೆ ಅನುಗುಣವಾಗಿ ಕೋರ್ಸ್‌ಗಳಿಗೆ ವಿವರವಾದ ಯೋಜನೆಯನ್ನು ಸಲ್ಲಿಸಿದೆ ಮತ್ತು ಈ ಕೌಶಲ್ಯಗಳನ್ನು ನೀಡಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಉತ್ತಮ ಮೂಲಸೌಕರ್ಯ ಮತ್ತು ಸಾರಿಗೆ ಸಂಪರ್ಕವು ಆರ್ಥಿಕ ಬೆಳವಣಿಗೆಗೆ ವೇಗವರ್ಧಕವಾಗಿದೆ. ಈ ನಿಟ್ಟಿನಲ್ಲಿ ಪ್ರಸಕ್ತ ವರ್ಷದಲ್ಲಿ 1,917 ಕಿಮೀ ರಾಜ್ಯ ಹೆದ್ದಾರಿಗಳು, 2,502 ಕಿಮೀ ಜಿಲ್ಲಾ ಮುಖ್ಯ ರಸ್ತೆಗಳು ಮತ್ತು 150 ಸೇತುವೆಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದರು.
ಸರ್ಕಾರದ "ಬ್ರಾಂಡ್ ಬೆಂಗಳೂರು" ಉಪಕ್ರಮವನ್ನು ಸೂಚಿಸಿದ ಸಿಎಂ, ರಾಜ್ಯದ ರಾಜಧಾನಿಯನ್ನು ವಿಶ್ವದರ್ಜೆಯ ನಗರವನ್ನಾಗಿ ಪರಿವರ್ತಿಸಲು ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಕನಿಷ್ಠ 48,686 ಕೋಟಿ ರೂ.ಗಳೊಂದಿಗೆ ನವೀನ ಸಮಗ್ರ ಹಣಕಾಸು ಮಾದರಿಯ ಮೂಲಕ ನಗರಕ್ಕೆ ದೀರ್ಘಾವಧಿಯ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ. ನಮ್ಮ ಸರ್ಕಾರವು (ಬೆಂಗಳೂರಿನಲ್ಲಿ) ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ ಪೆರಿಫೆರಲ್ ರಿಂಗ್ ರೋಡ್ ಯೋಜನೆಯನ್ನು ಕಾರ್ಯಗತಗೊಳಿಸಲು ಬಲವಾದ ಸಂಕಲ್ಪ ಮಾಡಿದೆ. ರಾಜ್ಯದ ನೀರಾವರಿ ಯೋಜನೆಗಳ ಅನುಷ್ಠಾನವನ್ನು ತ್ವರಿತಗೊಳಿಸಲು ಈ ಬಾರಿ ಬಜೆಟ್‌ನಲ್ಲಿ ಎತ್ತಿನಹೊಳೆ ಯೋಜನೆಯಡಿ ಈ ವರ್ಷ 855.02 ಕೋಟಿ ರೂ. ಹೆಚ್ಚಿನ ಅನುದಾನ ನೀಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.