
ಸ್ಮಾರ್ಟ್ ಮೀಟರ್ ಅಕ್ರಮ ಪ್ರಕರಣ: ಸಚಿವ ಕೆ.ಜೆ. ಜಾರ್ಜ್ ವಿರುದ್ಧದ ಖಾಸಗಿ ದೂರು ವಜಾ
ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಏಕಸದಸ್ಯ ಪೀಠವು ಸಚಿವ ಕೆ.ಜೆ. ಜಾರ್ಜ್, ಬೆಸ್ಕಾಂನ ಮಾಜಿ ವ್ಯವಸ್ಥಾಪಕ ನಿರ್ದೇಶಕ ದಿವಂಗತ ಮಹಾಂತೇಶ್ ಬೀಳಗಿ ಮತ್ತಿತರರು ಸಲ್ಲಿಸಿದ್ದ ಅರ್ಜಿಗಳನ್ನು ಪುರಸ್ಕರಿಸಿ ತೀರ್ಪು ನೀಡಿದೆ.
ರಾಜ್ಯದಲ್ಲಿ ಕಳೆದ ಕೆಲವು ತಿಂಗಳುಗಳಿಂದ ತೀವ್ರ ವಿವಾದ ಮತ್ತು ಸಂಚಲನ ಮೂಡಿಸಿದ್ದ ಸ್ಮಾರ್ಟ್ ಮೀಟರ್ ಅಳವಡಿಕೆ ಟೆಂಡರ್ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಂಗಳವಾರ (ಡಿಸೆಂಬರ್ 2) ಪ್ರಮುಖ ತೀರ್ಪು ನೀಡಿದ್ದು, ಇಂಧನ ಸಚಿವ ಕೆ.ಜೆ. ಜಾರ್ಜ್ ಮತ್ತು ಬೆಸ್ಕಾಂನ ಹಿರಿಯ ಅಧಿಕಾರಿಗಳ ವಿರುದ್ಧ ಬಿಜೆಪಿ ನಾಯಕರು ದಾಖಲಿಸಿದ್ದ ಖಾಸಗಿ ದೂರನ್ನು ಹೈಕೋರ್ಟ್ ಏಕಸದಸ್ಯ ಪೀಠ ಸಂಪೂರ್ಣವಾಗಿ ವಜಾಗೊಳಿಸಿ ಆದೇಶ ಹೊರಡಿಸಿದೆ.
ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಏಕಸದಸ್ಯ ಪೀಠವು ಸಚಿವ ಕೆ.ಜೆ. ಜಾರ್ಜ್, ಬೆಸ್ಕಾಂನ ಮಾಜಿ ವ್ಯವಸ್ಥಾಪಕ ನಿರ್ದೇಶಕ ದಿವಂಗತ ಮಹಾಂತೇಶ್ ಬೀಳಗಿ ಮತ್ತು ತಾಂತ್ರಿಕ ವಿಭಾಗದ ನಿರ್ದೇಶಕ ಎಚ್.ಜೆ. ರಮೇಶ್ ಅವರು ಸಲ್ಲಿಸಿದ್ದ ಅರ್ಜಿಗಳನ್ನು ಪುರಸ್ಕರಿಸಿ ತೀರ್ಪು ನೀಡಿದೆ. ವಿಚಾರಣಾಧೀನ ವಿಶೇಷ ನ್ಯಾಯಾಲಯದಲ್ಲಿ ಬಾಕಿ ಇದ್ದ ಎಲ್ಲಾ ಪ್ರಕ್ರಿಯೆಗಳನ್ನು ರದ್ದುಪಡಿಸಲಾಗಿದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ. ವಿಶೇಷವೆಂದರೆ, ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾಗಿದ್ದ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರು ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ, ಅವರ ವಿರುದ್ಧದ ಎಲ್ಲಾ ಆರೋಪಗಳನ್ನು ಕೈಬಿಡಲಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ವಾದಗಳೇನು?
ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ. ನಾಗೇಶ್ ಅವರು ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯ ಸೆಕ್ಷನ್ 17A ಅಡಿಯಲ್ಲಿ ಸಾರ್ವಜನಿಕ ಸೇವಕರಿಗೆ ಎರಡು ಹಂತದಲ್ಲಿ ಕಾನೂನು ರಕ್ಷಣೆ ದೊರೆಯುತ್ತದೆ ಎಂಬ ಅಂಶವನ್ನು ಒತ್ತಿ ಹೇಳಿದರು. ಮಂತ್ರಿ ಮತ್ತು ಇತರ ಅಧಿಕಾರಿಗಳು ಸಾರ್ವಜನಿಕ ಸೇವಕರಾಗಿದ್ದು, ಅವರ ವಿರುದ್ಧ ತನಿಖೆ ನಡೆಸುವ ಮೊದಲು ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ಆದರೆ, ಈ ಪ್ರಕರಣದಲ್ಲಿ ಅಂತಹ ಯಾವುದೇ ಪೂರ್ವಾನುಮತಿ ಇಲ್ಲದೆಯೇ ವಿಚಾರಣಾ ನ್ಯಾಯಾಲಯವು ಲೋಕಾಯುಕ್ತ ಪೊಲೀಸರಿಗೆ ವರದಿ ನೀಡುವಂತೆ ನಿರ್ದೇಶಿಸಿದ್ದು ಸರಿಯಲ್ಲ ಎಂದು ವಾದಿಸಿದ್ದರು.
"ನಾವು ನಿರ್ಧಾರ ಕೈಗೊಂಡಿದ್ದರಿಂದ ಅಪರಾಧ ನಡೆದಿದೆ ಎಂದು ಆರೋಪಿಸಲಾಗಿದೆ. ಆದರೆ, ಪಿಸಿ ಕಾಯಿದೆ ಸೆಕ್ಷನ್ 17A ಅಡಿ ಪೂರ್ವಾನುಮತಿ ಇಲ್ಲದೇ ಸಾರ್ವಜನಿಕ ಸೇವಕರ ವಿರುದ್ಧ ಯಾವುದೇ ಪೊಲೀಸ್ ಅಧಿಕಾರಿ ತನಿಖೆ ನಡೆಸಲು ಅಧಿಕಾರವಿಲ್ಲ ಎಂಬುದು ಕಾಯ್ದೆಯ ಸ್ಪಷ್ಟ ನಿಯಮವಾಗಿದೆ. ವಿಚಾರಣಾಧೀನ ನ್ಯಾಯಾಲಯವು ಅಂತಹ ಅಧಿಕಾರವಿಲ್ಲದಿದ್ದರೂ ವರದಿ ಕೇಳಿದ್ದು ಕಾನೂನು ಬಾಹಿರ" ಎಂದು ವಾದಿಸಿದ್ದರು.
ಇದಕ್ಕೆ ಪ್ರತಿಯಾಗಿ ದೂರುದಾರರಾದ ಬಿಜೆಪಿ ನಾಯಕರ ಪರ ವಾದಿಸಿದ ಹಿರಿಯ ವಕೀಲೆ ಲಕ್ಷ್ಮಿ ಐಯ್ಯಂಗಾರ್ ಅವರು, ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ವರದಿ ನೀಡಿದ ನಂತರ ಮ್ಯಾಜಿಸ್ಟ್ರೇಟ್ ಅವರು ಮೇಲಿನ ಶ್ರೇಣಿಯ ಅಧಿಕಾರಿಗಳಿಂದ ಮತ್ತಷ್ಟು ವರದಿ ಕೇಳುತ್ತಾರೆ ಎಂಬುದು ಸಾಮಾನ್ಯ ಪ್ರಕ್ರಿಯೆ ಎಂದು ವಾದಿಸಿದರು. "ಇಲ್ಲಿ ವಿಚಾರಣಾಧೀನ ನ್ಯಾಯಾಲಯವು ಕೇವಲ ವರದಿ ನೀಡುವಂತೆ ಆದೇಶಿಸಿದೆಯಷ್ಟೇ. ಇದು ಇನ್ನೂ ಪ್ರಾಥಮಿಕ ಹಂತದ ತನಿಖಾ ಪ್ರಕ್ರಿಯೆಯಾಗಿದೆ. ಯಾವುದೇ ಅಂತಿಮ ತೀರ್ಪು ನೀಡಲಾಗಿಲ್ಲ. ಹೀಗಾಗಿ, ಈ ಹಂತದಲ್ಲಿ ತಡೆ ನೀಡಬಾರದು" ಎಂದು ವಾದಿಸಿದರು.
ಲೋಕಾಯುಕ್ತ ಪರ ವಾದ
ಲೋಕಾಯುಕ್ತದ ಪರ ವಾದಿಸಿದ ವಕೀಲ ವೆಂಕಟೇಶ್ ಅರಬಟ್ಟಿ ಅವರು ಟೆಂಡರ್ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮವಾಗಿಲ್ಲ ಎಂಬ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಅವರು ಹೇಳಿದ್ದೇನೆಂದರೆ, ದೇಶದಲ್ಲಿ 97 ಮತ್ತು ಅದಕ್ಕೂ ಹೆಚ್ಚು ಅರ್ಹ ಟೆಂಡರ್‌ದಾರರು ಸ್ಮಾರ್ಟ್ ಮೀಟರ್ ಅಳವಡಿಕೆ ಕೆಲಸ ಮಾಡುತ್ತಾರೆ. ಈ ಎಲ್ಲಾ ಕಂಪನಿಗಳು ಬೇರೆಬೇರೆ ರಾಜ್ಯಗಳಲ್ಲಿ ಕೆಲಸ ನಿರ್ವಹಿಸುತ್ತವೆ ಮತ್ತು ಅವರೆಲ್ಲರೂ ಈ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಹರಾಗಿದ್ದರು. ಸಂಪೂರ್ಣ ಟೆಂಡರ್ ಪ್ರಕ್ರಿಯೆಯ ಮಾಹಿತಿಯು ಬೆಸ್ಕಾಂ ವೆಬ್‌ಸೈಟ್‌ನಲ್ಲಿ ಸಾರ್ವಜನಿಕವಾಗಿ ಲಭ್ಯವಾಗಿದೆ ಮತ್ತು ಯಾವುದೇ ಮುಚ್ಚುಮರೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಕರಣದ ಹಿನ್ನೆಲೆ ಏನು?
ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ ನಡೆದಿದೆ ಮತ್ತು ಈ ಟೆಂಡರ್ ನೀಡಿಕೆಯಿಂದ ಅಂದಾಜು 16 ಸಾವಿರ ಕೋಟಿ ರೂಪಾಯಿ ಮೊತ್ತದ ದುರ್ಲಾಭ ಪಡೆಯಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿಯ ಶಾಸಕರಾದ ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಎಸ್.ಆರ್. ವಿಶ್ವನಾಥ್ ಮತ್ತು ಧೀರಜ್ ಮುನಿರಾಜು ಅವರು ವಿಚಾರಣಾ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.
ಬಿಜೆಪಿ ನಾಯಕರ ಆರೋಪಗಳ ಪ್ರಕಾರ, ಸ್ಮಾರ್ಟ್ ಮೀಟರ್ ಸೇವೆ ಒದಗಿಸುವ ನಿಟ್ಟಿನಲ್ಲಿ ಸೆಪ್ಟೆಂಬರ್ 26 ರಂದು ಟೆಂಡರ್ ಕರೆಯಲಾಗಿತ್ತು. ಈ ಟೆಂಡರ್ ಅನ್ನು ದಾವಣಗೆರೆಯ ರಾಜಶ್ರೀ ಎಲೆಕ್ಟ್ರಿಕಲ್ಸ್ ಎಂಬ ಶೆಲ್ ಕಂಪನಿಗೆ ನೀಡಲಾಗಿದೆ ಎಂದು ಆರೋಪಿಸಿದ್ದರು. ಈ ಟೆಂಡರ್ ಅನ್ನು ರಾಜ್ಯದಲ್ಲಿ ವಿವಿಧ ಭಾಗಗಳ ವಿದ್ಯುತ್ ಸರಬರಾಜು ಕಂಪನಿಗಳಿಗೆ ಪ್ರತ್ಯೇಕವಾಗಿ ಟೆಂಡರ್ ಕರೆಯದೆ ಬೆಸ್ಕಾಂ ಕಂಪನಿ ಮೂಲಕವೇ ನೇರವಾಗಿ ನೀಡಲಾಗಿದೆ ಎಂದು ಆರೋಪಿಸಲಾಗಿತ್ತು. ಇದರಿಂದ ಸುಮಾರು 16 ಸಾವಿರ ಕೋಟಿ ರೂಪಾಯಿ ಮೊತ್ತವನ್ನು ಪಡೆಯುವ ಅಕ್ರಮ ನಡೆದಿದೆ ಎಂಬುದು ಆರೋಪವಾಗಿತ್ತು.
ಬಿಜೆಪಿ ನಾಯಕರು ಮತ್ತಷ್ಟು ಆರೋಪಿಸಿದ್ದೇನೆಂದರೆ, ಈ ಕಾನೂನುಬಾಹಿರ ಪ್ರಕ್ರಿಯೆಯು ಕರ್ನಾಟಕ ಸಾರ್ವಜನಿಕ ಖರೀದಿಯಲ್ಲಿ ಪಾರದರ್ಶಕತೆ ಅಧಿನಿಯಮ-2000 (ಕೆಟಿಪಿಪಿ) ಹಾಗೂ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (ಕೆಇಆರ್‌ಸಿ) ನಿಯಮಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದು ಹೇಳಲಾಗಿತ್ತು. ಸಚಿವ ಕೆ.ಜೆ. ಜಾರ್ಜ್, ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತ, ಬೆಸ್ಕಾಂ ಮಾಜಿ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಹಾಗೂ ಬೆಸ್ಕಾಂನ ತಾಂತ್ರಿಕ ನಿರ್ದೇಶಕ ಎಚ್.ಜೆ. ರಮೇಶ್ ಅವರನ್ನು ಪ್ರಕರಣದಲ್ಲಿ ಆರೋಪಿಗಳನ್ನಾಗಿ ಹೆಸರಿಸಲಾಗಿತ್ತು.
ಈ ಖಾಸಗಿ ದೂರನ್ನು ಪರಿಗಣಿಸಿದ್ದ ವಿಚಾರಣಾಧೀನ ನ್ಯಾಯಾಲಯವು ಖಾಸಗಿ ದೂರು ದಾಖಲಿಸಿಕೊಂಡು, ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿಗೆ ವರದಿ ನೀಡಲು ಆದೇಶಿಸಿತ್ತು. ಇದನ್ನೇ ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು ಮತ್ತು ಇಂದು ಅವರ ಪರವಾಗಿ ತೀರ್ಪು ಬಂದಿದೆ.
ಬಿಜೆಪಿಗೆ ದೊಡ್ಡ ಹಿನ್ನಡೆ
ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಪ್ರಮುಖ ಅಸ್ತ್ರವನ್ನಾಗಿ ಈ ಪ್ರಕರಣವನ್ನು ಬಳಸಿಕೊಳ್ಳಲು ಮುಂದಾಗಿದ್ದ ಬಿಜೆಪಿ ನಾಯಕರಿಗೆ ಹೈಕೋರ್ಟ್ ಈ ತೀರ್ಪಿನಿಂದ ಭಾರಿ ಹಿನ್ನಡೆಯಾಗಿದೆ. ಸಾವಿರಾರು ಕೋಟಿ ರೂಪಾಯಿ ಅಕ್ರಮದ ಆರೋಪ ಹೊತ್ತಿದ್ದ ಸಚಿವ ಕೆ.ಜೆ. ಜಾರ್ಜ್ ಮತ್ತು ಬೆಸ್ಕಾಂನ ಹಿರಿಯ ಅಧಿಕಾರಿಗಳು ಈಗ ಸಂಪೂರ್ಣವಾಗಿ ನಿರಾಳರಾಗಿದ್ದಾರೆ.

