Law and Order | ಬಂದೂಕುಧಾರಿಗಳ ದರೋಡೆಗೆ ಬೆಚ್ಚಿಬಿದ್ದ ಕರ್ನಾಟಕ: ಹಳಿತಪ್ಪಿತೇ ಕಾನೂನು ಸುವ್ಯವಸ್ಥೆ?
ಮಂಗಳೂರಿನ ಬ್ಯಾಂಕ್‌ನಲ್ಲಿ ನಡೆದ ದರೋಡೆ ಪ್ರಕರಣ ಬೆಚ್ಚಿ ಬೀಳಿಸುವಂತಿದೆ. ಸರಣಿ ಕಳ್ಳತನ, ದರೋಡೆ ಪ್ರಕರಣಗಳಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ನಲವತ್ತೆಂಟು ಗಂಟೆಗಳ ಅವಧಿಯಲ್ಲಿ ಬೀದರ್ ಹಾಗೂ ಮಂಗಳೂರಿನಲ್ಲಿ ಸಿನಿಮೀಯ ಶೈಲಿಯಲ್ಲಿ ನಡೆದ ದರೋಡೆ ಪ್ರಕರಣಗಳು ರಾಜ್ಯವನ್ನೇ ಬೆಚ್ಚಿ ಬೀಳಿಸಿವೆ. ಈ ಸರಣಿ ದರೋಡೆ ಮತ್ತು ಕಳವು ಪ್ರಕರಣಗಳು ರಾಜ್ಯದ ಕಾನೂನು- ಸುವ್ಯವಸ್ಥೆಯನ್ನು ಅನುಮಾನದಿಂದ ನೋಡುವಂತೆ ಮಾಡಿದೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದುಬಿದ್ದಿರುವುದಕ್ಕೆ ಹೆಚ್ಚುತಿರುವ ಕಳ್ಳತನ, ದರೋಡೆ ಪ್ರಕರಣಗಳೇ ನಿದರ್ಶನ ಎಂಬ ಆರೋಪಗಳು ಕೇಳಿ ಬರುತ್ತಿವೆ. ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ಮಂಗಳೂರು ಪ್ರವಾಸದಲ್ಲಿದ್ದಾಗಲೇ ಉಲ್ಲಾಳದ ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಬ್ಯಾಂಕ್‌ನಲ್ಲಿ ದರೋಡೆ ನಡೆದಿರುವುದು ವಿಪಕ್ಷಗಳ ಟೀಕೆಗೂ ಗುರಿಯಾಗಿದೆ.
2024 ಡಿಸೆಂಬರ್ ತಿಂಗಳಲ್ಲಿ ಮಂಗಳೂರಿನ ವಿಟ್ಲದ ಬೋಳಂತೂರಿನ ನಾರ್ಶದಲ್ಲಿ ದುಷ್ಕರ್ಮಿಗಳು ಮನೆಯೊಂದಕ್ಕೆ ನುಗ್ಗಿ 30 ಲಕ್ಷ ರೂ.ದರೋಡೆ ಮಾಡಿದ್ದರು. ಈ ಪ್ರಕರಣದ ಆರೋಪಿಗಳಿಗಾಗಿ ಶೋಧ ನಡೆಯುತ್ತಲೇ ಇದೆ. ಹೀಗಿರುವಾಗಲೇ ಉಲ್ಲಾಳದಲ್ಲಿ ಬ್ಯಾಂಕ್ ದರೋಡೆ ನಡೆದಿರುವುದು ಪೊಲೀಸರ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ.
2024 ಜೂನ್ 21 ರಂದು ಮಂಗಳೂರಿನ ಉಳಾಯಿಬೆಟ್ಟು ಗ್ರಾಮದ ಪೆರ್ಮಂಕಿಯಲ್ಲಿ ಉದ್ಯಮಿ, ಕಾಂಗ್ರೆಸ್ ಮುಖಂಡ ಪದ್ಮನಾಭ ಕೋಟ್ಯಾನ್ ಮನೆಗೆ ನುಗ್ಗಿದ್ದ 5 ಮಂದಿಯ ದರೋಡೆಕೋರರು ಲಕ್ಷಾಂತರ ರೂ.ದೋಚಿದ್ದರು. ಈ ಪ್ರಕರಣದಲ್ಲಿ ಪದ್ಮನಾಭ ಕೋಟ್ಯಾನ್ ಕಾರು ಚಾಲಕ ಸೇರಿ 10 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಬಂಧಿತರಲ್ಲಿ ಕೇರಳದವರು ಇದ್ದರು.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪದೇಪದೆ ದರೋಡೆ ಪ್ರಕರಣಗಳು ನಡೆಯುತ್ತಿರುವುದು ಅಲ್ಲಿನ ನಿವಾಸಿಗಳಲ್ಲಿ ಭೀತಿ ಮೂಡಿಸಿದೆ. ಇನ್ನು ರಾಜ್ಯದ ಹಲವು ಜಿಲ್ಲೆಗಳಲ್ಲಿ ದರೋಡೆ, ಸುಲಿಗೆ, ಕಳ್ಳತನ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ.
ಹೆದ್ದಾರಿಯಲ್ಲಿ ನಿಲ್ಲದ ದರೋಡೆ
ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ವೇನಲ್ಲಿ ಕಳೆದ ಒಂದು ವರ್ಷದಲ್ಲಿ 26 ದರೋಡೆ ಪ್ರಕರಣಗಳು ನಡೆದಿವೆ. ಈಚೆಗೆ ಬೆಳಗಾವಿ ಅಧಿವೇಶನದಲ್ಲಿ ಗೃಹ ಸಚಿವ ಡಾ.ಪರಮೇಶ್ವರ್ ಅವರೇ ಇದನ್ನು ಬಹಿರಂಗಪಡಿಸಿದ್ದರು. ಒಟ್ಟು 26 ಪ್ರಕರಣಗಳಲ್ಲಿ ಮಂಡ್ಯ ಜಿಲ್ಲೆಯಲ್ಲಿ 14, ರಾಮನಗರ ಜಿಲ್ಲೆಯಲ್ಲಿ 12 ದರೋಡೆ ಪ್ರಕರಣಗಳು ದಾಖಲಾಗಿದ್ದವು.
ಬೀದರ್ ಕೃತ್ಯದಲ್ಲಿ ಆರೋಪಿಗಳ ಗುರುತು ಪತ್ತೆ
ಜ.16 ರಂದು ಬೆಳಿಗ್ಗೆ ಬೀದರ್ ಜಿಲ್ಲಾಧಿಕಾರಿ ಕಚೇರಿ ಸಮೀಪದಲ್ಲೇ ಎಟಿಎಂಗೆ ಹಣ ತುಂಬುವ ವಾಹನದ ಸಿಬ್ಬಂದಿ ಮೇಲೆ ಗುಂಡು ಹಾರಿಸಿ 93 ಲಕ್ಷ ರೂ. ಹಣದೊಂದಿಗೆ ದುಷ್ಕರ್ಮಿಗಳು ಪರಾರಿಯಾಗಿದ್ದರು. ಘಟನೆಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದರು. ಅದೇ ದಿನ ಸಂಜೆ ಹೈದರಾಬಾದ್‌ನ ಅಪ್ಜಲ್ ಗಂಜ್ ಪ್ರದೇಶದಲ್ಲಿ ಟ್ರಾವೆಲ್ಸ್ ವ್ಯವಸ್ಥಾಪಕರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಘಟನೆಯ ಕುರಿತು ತನಿಖೆ ಕೈಗೊಂಡಿರುವ ಹೈದರಾಬಾದ್ ಪೊಲೀಸರು ಆರೋಪಿಗಳ ಗುರುತು ಪತ್ತೆ ಹಚ್ಚಿದ್ದಾರೆ. ಇದೇ ಆರೋಪಿಗಳು ಬೀದರ್‌ನಲ್ಲಿ ಎಟಿಎಂ ವಾಹನದ ಹಣ ದೋಚಿರುವುದು ದೃಢಪಟ್ಟಿದೆ.
ಬಿಹಾರದ ಮನೀಶ್ ಹಾಗೂ ಅಮಿತ್‌ಕುಮಾರ್ ನೇತೃತ್ವದ ತಂಡ ದರೋಡೆಯಲ್ಲಿ ಭಾಗಿಯಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮನೀಶ್ ನೇತೃತ್ವದ ತಂಡ ಇತ್ತೀಚೆಗೆ ಛತ್ತೀಸಗಢದ ಬ್ಯಾಂಕಿನಿಂದ 70 ಲಕ್ಷ ರೂ. ದೋಚಿತ್ತು. ಆರೋಪಿಗಳಿಗಾಗಿ ತೆಲಂಗಾಣ, ಕರ್ನಾಟಕ ಹಾಗೂ ಛತ್ತೀಸಗಢದ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದರು.
ಎಟಿಎಂ ಸಿಬ್ಬಂದಿಯಿಂದಲೇ ಹಣ ಗುಳುಂ
ಮತ್ತೊಂದು ಪ್ರಕರಣದಲ್ಲಿ ಮೈಸೂರಿನಲ್ಲಿ ಎಟಿಎಂ ಯಂತ್ರಕ್ಕೆ ಹಣ ತುಂಬದೇ ಬ್ಯಾಗಿನಲ್ಲಿಟ್ಟುಕೊಂಡು ಹೋದ ಪ್ರಕರಣ ಸಂಬಂಧ ಎಟಿಎಂಗೆ ಹಣ ತುಂಬುವ ಇಬ್ಬರು ಸಿಬ್ಬಂದಿ ವಿರುದ್ಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತೇಜಸ್ವಿನಿ ಹಾಗೂ ಅಕ್ಷಯ್ ಕುಮಾರ್ ಎಂಬುವರು ಟಿಎಲ್ ಎಂಟರ್ ಪ್ರೈಸಸ್ನಲ್ಲಿ ಕೆಲಸ ಮಾಡುತ್ತಿದ್ದು, ಮೈಸೂರು ಜಿಲ್ಲೆಯ 16 ಎಟಿಎಂ ಯಂತ್ರಗಳಿಗೆ ಹಣ ತುಂಬಿಸುತ್ತಿದ್ದರು. ಈಚೆಗೆ ಗದ್ದಿಗೆ ಗ್ರಾಮದ ಎಟಿಎಂ ಒಂದರಲ್ಲಿ 5.80 ಲಕ್ಷ ರೂ. ಹಣವನ್ನು ಎಟಿಎಂ ಯಂತ್ರಕ್ಕೆ ತುಂಬದೇ ಬ್ಯಾಗಿನಲ್ಲಿರಿಸಿಕೊಂಡು, ಅದರಲ್ಲಿ ಚಿನ್ನ ಖರೀದಿಸಿದ್ದರು.
ಲೆಕ್ಕ ಪರಿಶೋಧನೆ ವೇಳೆ ಹಣದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಟಿಎಲ್ ಎಂಟರ್ಪ್ರೈಸಸ್ ಸಂಸ್ಥೆಯವರು ಸಿಸಿಟಿವಿಗಳನ್ನು ಪರಿಶೀಲಿಸಿದಾಗ ತೇಜಸ್ವಿನಿ ಹಾಗೂ ಅಕ್ಷಯ್ ಕುಮಾರ್ ಹಣ ಲಪಟಾಯಿಸಿರುವುದು ಬೆಳಕಿಗೆ ಬಂದಿತ್ತು.
ಹೀಗೆ ಸಾಲು ಸಾಲು ಅಪರಾಧ ಪ್ರಕರಣಗಳ ಹೆಚ್ಚಳದಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಳಿ ತಪ್ಪಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಗೃಹ ಸಚಿವ ಡಾ.ಪರಮೇಶ್ವರ್ ಮತ್ತಿತರೆ ಪ್ರಮುಖ ಸಚಿವರು ಮುಖ್ಯಮಂತ್ರಿ ಕುರ್ಚಿ ಮತ್ತು ಪಕ್ಷದ ಅಧ್ಯಕ್ಷ ಸ್ಥಾನದ ಹಗ್ಗಜಗ್ಗಾಟದಲ್ಲಿ ಮುಳುಗಿದ್ದರೆ, ಮತ್ತೊಂದು ಕಡೆ ದಿನಕ್ಕೊಂದು ದರೋಡೆ ಪ್ರಕರಣಗಳು ಜನಸಾಮಾನ್ಯರನ್ನು ಬೆಚ್ಚಿ ಬೀಳಿಸಿವೆ. ಇನ್ನು ಡಾ.ಜಿ.ಪರಮೇಶ್ವರ್ ಅವರು ಗೃಹ ಸಚಿವರಾಗಿ ಹುದ್ದೆ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ ಎಂಬ ಪ್ರತಿಪಕ್ಷಗಳ ಆರೋಪಗಳಿಗೆ ಸರಣಿ ದರೋಡೆ, ಕಳ್ಳತನ, ಸುಲಿಗೆ ಪ್ರಕರಣಗಳು ಮತ್ತಷ್ಟು ಆಹಾರ ಒದಗಿಸುತ್ತಿವೆ.