
ಎಐ ಆಧಾರರಿತ ಚಿತ್ರ
ವಸತಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ: ಹಿಂದುಳಿದ ವರ್ಗದ ಪ್ರತಿಭೆಯ ಭವಿಷ್ಯ ಅಸ್ಥಿರ
ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಹೆಚ್ಚಾಗಿ ಗ್ರಾಮೀಣ ಭಾಗದವರಾಗಿದ್ದು, ಶಿಕ್ಷಕರೇ ಅವರಿಗೆ ಸರ್ವಸ್ವ. ಆದರೆ ಶಿಕ್ಷಕರ ಕೊರತೆಯಿಂದಾಗಿ ಹಲವು ಸಮಸ್ಯೆಗಳು ಉದ್ಭವಿಸಿವೆ.
ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದ ಸ್ಥಾಪಿತಗೊಂಡಿರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (KREIS) ಅಡಿಯಲ್ಲಿ ನಡೆಯುತ್ತಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಅಟಲ್ ಬಿಹಾರಿ ವಾಜಪೇಯಿ, ಅಂಬೇಡ್ಕರ್ ಮತ್ತು ಏಕಲವ್ಯ ಮಾದರಿ ವಸತಿ ಶಾಲೆಗಳು ಇದೀಗ ಶಿಕ್ಷಕರ ಕೊರತೆಯ ಸವಾಲು ಎದುರಿಸುತ್ತಿವೆ. ಸಾವಿರಾರು ವಿದ್ಯಾರ್ಥಿಗಳ ಜೀವನದ ಬುನಾದಿಯಾಗಿರುವ ಈ ಶಾಲೆಗಳ ಪ್ರಗತಿ, ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಸಿಬ್ಬಂದಿ ಕೊರತೆಯಿಂದ ಕುಂಠಿತಗೊಂಡಿದೆ.
ಒಟ್ಟು ಮಂಜೂರಾದ 19,864 ಹುದ್ದೆಗಳಲ್ಲಿ, ಕೇವಲ 6,538 ಹುದ್ದೆಗಳು ಮಾತ್ರ ನಿಯಮಿತವಾಗಿ ಭರ್ತಿಯಾಗಿವೆ. ಸುಮಾರು 5,074 ಹುದ್ದೆಗಳು ಖಾಲಿಯಾಗಿದ್ದು, ಶೇ.60ಕ್ಕೂ ಹೆಚ್ಚು ಅಂದರೆ ಸುಮಾರು 12,673 ಹುದ್ದೆಗಳು ತಾತ್ಕಾಲಿಕ ಅಥವಾ ಹೊರಗುತ್ತಿಗೆಯ ಆಧಾರದ ಮೇಲೆ ನಿರ್ವಹಣೆಯಲ್ಲಿವೆ. ಈ ಅಸಮತೋಲನದಿಂದ ಬೋಧನೆಯ ಗುಣಮಟ್ಟ ಕುಸಿದಿದ್ದು, ಆಡಳಿತದ ಮೇಲ್ವಿಚಾರಣೆಯು ದುರ್ಬಲವಾಗಿದೆ.
ಸುಧಾರಣೆಗೆ ಅಡಚಣೆ
3,481 ಶಿಕ್ಷಕ ಹುದ್ದೆಗಳು ಖಾಲಿ ಇರುವುದು ಶಿಕ್ಷಣದ ತುರ್ತು ಸುಧಾರಣೆಗೆ ಅಡಚಣೆಯಾಗಿದೆ. ವಿದ್ಯಾರ್ಥಿನಿಯರ ಸಂಖ್ಯೆಯು ಶೇ.40ರಷ್ಟಿದ್ದರೂ 533 ಶುಶ್ರೂಷಕರ ಹುದ್ದೆಗಳು ಖಾಲಿ ಇರುವುದು ಅವರ ಆರೋಗ್ಯ ಮತ್ತು ಸುರಕ್ಷತೆಯ ಕಾಳಜಿ ಹೆಚ್ಚಿಸಿದೆ. ಜೊತೆಗೆ 384 ನಿಲಯಪಾಲಕರ ಹುದ್ದೆಗಳು ಖಾಲಿಯಿರುವುದರಿಂದ ಶಿಸ್ತು ಮತ್ತು ವಿದ್ಯಾರ್ಥಿಗಳ ಮೇಲ್ವಿಚಾರಣೆ ದುರ್ಬಲವಾಗಿದೆ ಎಂದು ಆಡಳಿತ ಸುಧಾರಣಾ ಆಯೋಗದ ವರದಿ ಎಚ್ಚರಿಸಿದೆ.
ಹೊಸ 278 ವಸತಿ ಶಾಲೆಗಳ ಸ್ಥಿತಿ ಹೆಚ್ಚು ಕಾಳಜಿ ಮೂಡಿಸುವಂತಿದೆ
ಇತ್ತೀಚೆಗೆ ಪ್ರಾರಂಭವಾದ 278 ಹೊಸ ವಸತಿ ಶಾಲೆಗಳು ಕೇವಲ 20 ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಪ್ರತಿ ಶಾಲೆಗೆ ಅನುಮೋದಿತ 25 ಹುದ್ದೆಗಳಲ್ಲಿ ಸಂಗೀತ ಶಿಕ್ಷಕರು, ಅಡುಗೆ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿಯಂತಹ ಐದು ಮುಖ್ಯ ಹುದ್ದೆಗಳು ಖಾಲಿ ಉಳಿದಿವೆ. ಇದರಿಂದ ಆಹಾರ ನಿರ್ವಹಣೆ, ಸುರಕ್ಷತೆ ಮತ್ತು ವಿದ್ಯಾರ್ಥಿ ಚಟುವಟಿಕೆಗಳು ಅಸ್ತವ್ಯಸ್ತಗೊಂಡಿವೆ. ಒಟ್ಟು 1,390 ಅಗತ್ಯ ಹುದ್ದೆಗಳು ತಕ್ಷಣ ಭರ್ತಿ ಆಗಬೇಕಿರುವ ಅಗತ್ಯವಿದೆ.
ಶಿಕ್ಷಕರ ಕೊರತೆಯ ಪ್ರಭಾವ: ಕಲಿಕೆಯ ಗುಣಮಟ್ಟ ಕುಸಿತ
ಹೆಚ್ಚು ವಿದ್ಯಾರ್ಥಿಗಳು ಗ್ರಾಮೀಣ ಭಾಗದವರಾಗಿದ್ದು, ಶೈಕ್ಷಣಿಕ ಬೆಂಬಲ ಕಡಿಮೆ. ಈ ಸಂದರ್ಭಗಳಲ್ಲಿ ಶಾಲೆಯ ಶಿಕ್ಷಕರು ಅವರಿಗೆ ಸರ್ವಸ್ವ. ಆದರೆ ಶಿಕ್ಷಕರ ಕೊರತೆಯಿಂದ ಅನೇಕ ಶಾಲೆಗಳಲ್ಲಿ ಒಬ್ಬ ಶಿಕ್ಷಕ ಮೂರು ವಿಷಯಗಳನ್ನು ಬೋಧಿಸುವ ಅನಿವಾರ್ಯತೆ ಎದುರಾಗಿದೆ. ವಿಜ್ಞಾನ ಶಿಕ್ಷಕರು ಗಣಿತ ಬೋಧಿಸುತ್ತಿರುವುದು ಸಾಮಾನ್ಯವಾಗಿದೆ. ಈ ಸ್ಥಿತಿಯು ವಿಷಯದ ಆಳವಾದ ವಿವರಣೆಯನ್ನು ನೀಡುವಲ್ಲಿ ವಿಫಲವಾಗುತ್ತಿದೆ.
ಇನ್ನೊಂದೆಡೆ, ವಿದ್ಯಾರ್ಥಿ–ಶಿಕ್ಷಕರ ಅನುಪಾತ ಅಸಮತೋಲನದಿಂದ ಪ್ರತಿಯೊಬ್ಬ ವಿದ್ಯಾರ್ಥಿಯ ಕಲಿಕೆಯ ಪ್ರಗತಿಯನ್ನು ವಿಶ್ಲೇಷಿಸಲು ಶಿಕ್ಷಕರಿಗೆ ಸಾಧ್ಯವಾಗುತ್ತಿಲ್ಲ. ಈ ಶಾಲೆಗಳು ಹಿಂದಿನ ವರ್ಷಗಳಲ್ಲಿ ಅಭಿವೃದ್ಧಿ ಫಲಿತಾಂಶಗಳಲ್ಲಿ ಅಗ್ರ ಸ್ಥಾನದಲ್ಲಿದ್ದರೂ, ಶಿಕ್ಷಕರ ಕೊರತೆಯು ಮುಂದಿನ ದಿನಗಳಲ್ಲಿ ಕುಸಿತ ತಂದೇಳಬಹುದು ಎಂದು ವರದಿ ಎಚ್ಚರಿಸುತ್ತದೆ.
ಶಿಕ್ಷಕರಿಗೇ ಮಾನಸಿಕ ಮತ್ತು ದೈಹಿಕ ಒತ್ತಡ
ಹುದ್ದೆಗಳ ಕೊರತೆಯಿಂದಲೇ ಈಗಿನ ಶಿಕ್ಷಕರ ಮೇಲೆ ಅತಿಯಾದ ಕೆಲಸದ ಹೊರೆ ಬಿದ್ದಿದೆ. ಬೋಧನೆಯ ಜೊತೆಗೆ ವಸತಿ ನಿಲಯದ ಉಸ್ತುವಾರಿ, ದಾಖಲಾತಿಗಳ ನಿರ್ವಹಣೆ ಮತ್ತು ಆಡಳಿತಾತ್ಮಕ ಕೆಲಸಗಳೆಲ್ಲ ಶಿಕ್ಷಕರ ಮೇಲೆಯೇ ಬಿದ್ದಿವೆ. ಇದರಿಂದ ಮಾನಸಿಕ ಒತ್ತಡ ಹೆಚ್ಚಾಗಿದ್ದು, ಬೋಧನೆಯ ಉತ್ಸಾಹ ಕುಗ್ಗುತ್ತಿದೆ. ವಿದ್ಯಾರ್ಥಿಗಳ ಕಲಿಕೆಯ ಆಸಕ್ತಿ ಸಹ ಹೀಗೆ ಮಂಕಾಗುತ್ತಿದೆ.
ಸಾಮಾಜಿಕ ಉದ್ದೇಶ ಕುಸಿಯುವ ಅಪಾಯ
ವಸತಿ ಶಾಲೆಗಳ ಉದ್ದೇಶವಾಗಿದ್ದ ಸಾಮಾಜಿಕ ನ್ಯಾಯ ಮತ್ತು ಹಿಂದುಳಿದ ವರ್ಗದ ಪ್ರತಿಭಾವಂತ ಮಕ್ಕಳಿಗೆ ಸಮಾನ ಶಿಕ್ಷಣ ನೀಡುವುದು ಈಗ ಅಪಾಯದಲ್ಲಿದೆ. ಶಿಕ್ಷಕರ ಕೊರತೆಯಿಂದ ಬಡ ವಿದ್ಯಾರ್ಥಿಗಳು ಖಾಸಗಿ ಶಾಲಾ ಮಾನದಂಡದ ಶಿಕ್ಷಣದಿಂದ ವಂಚಿತರಾಗುತ್ತಿರುವುದು ಅವರ ಭವಿಷ್ಯಕ್ಕೆ ಅಡ್ಡಿಯಾಗುತ್ತಿದೆ. ಸಮಾಜದ ಮುಖ್ಯವಾಹಿನಿಗೆ ಒಳಗೊಳ್ಳಲು ಹೋರಾಡುತ್ತಿರುವ ಮಕ್ಕಳ ಕನಸುಗಳಿಗೆ ಇದು ಹೊಡೆತವಾಗಿದೆ.
ಆಡಳಿತ ಸುಧಾರಣಾ ಆಯೋಗದ ಎಚ್ಚರಿಕೆ ಮತ್ತು ಶಿಫಾರಸುಗಳು
ಆಯೋಗವು ತನ್ನ ಇತ್ತೀಚಿನ ವರದಿಯಲ್ಲಿ ಈ ಸ್ಥಿತಿಯನ್ನು “ಆತಂಕಕಾರಿ" ಎಂದು ಪರಿಗಣಿಸಿ, ವಸತಿ ಶಿಕ್ಷಣ ವ್ಯವಸ್ಥೆಯ ಬಲವರ್ಧನೆಗೆ ಕ್ರಮಗಳ ಸರದಿಯನ್ನಷ್ಟೆ ಶಿಫಾರಸು ಮಾಡಿದೆ. ತುರ್ತು ಆದ್ಯತೆಯಾಗಿ 3,481 ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವುದು. ವಿದ್ಯಾರ್ಥಿಗಳ ಶಿಸ್ತು, ಸುರಕ್ಷತೆ ಮತ್ತು ನೈತಿಕ ಬೆಳವಣಿಗೆಗಾಗಿ 384 ನಿಲಯಪಾಲಕರ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕು ಎಂದಿದೆ.
ಹದಿಹರೆಯದ ವಿದ್ಯಾರ್ಥಿನಿಯರ ಆರೋಗ್ಯ ನಿರ್ವಹಣೆಗೆ 533 ಹುದ್ದೆಗಳನ್ನು ತುಂಬಬೇಕಾಗಿದ್ದು, ಹೊಸದಾಗಿ ಕಾರ್ಯ ಆರಂಭಿಸಿರುವ 278 ಶಾಲೆಗಳಿಗೆ ಸಂಗೀತ, ಅಡುಗೆ ಹಾಗೂ ಭದ್ರತಾ ಸಿಬ್ಬಂದಿಗಳನ್ನು ಸೇರಿಸಿದ 1,390 ಹುದ್ದೆಗಳನ್ನು ಅನುಮೋದಿಸಬೇಕಿದೆ. ಕಟ್ಟಡ, ದುರಸ್ತಿ ಮತ್ತು ಮೂಲಸೌಕರ್ಯ ನಿರ್ವಹಣೆಗೆ ವಿಭಾಗೀಯ ಮಟ್ಟದಲ್ಲಿ ತಾಂತ್ರಿಕ ಘಟಕಗಳನ್ನು ಸ್ಥಾಪಿಸಬೇಕು. ಪಬ್ಲಿಕ್ ವರ್ಕ್ಸ್ ಡಿಪಾರ್ಟ್ಮೆಂಟ್ನ ಎಂಜಿನಿಯರ್ಗಳನ್ನು ನಿಯೋಜನೆ ಹಾಗೂ ಶಿಕ್ಷಕರ ತರಬೇತಿ ಮತ್ತು ಪಠ್ಯ ಮಾರ್ಗದರ್ಶನಕ್ಕಾಗಿ ಪ್ರತ್ಯೇಕ ಶೈಕ್ಷಣಿಕ ಘಟಕ ಸ್ಥಾಪಿಸಬೇಕು ಎಂದು ಶಿಫಾರಸು ಮಾಡಿದೆ.
ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಹೇಳವುದೇನು?
ಈ ಶಿಫಾರಸುಗಳು ಆಡಳಿತಾತ್ಮಕ ದಕ್ಷತೆ ಮತ್ತು ಶೈಕ್ಷಣಿಕ ಗುಣಮಟ್ಟ ಎರಡನ್ನೂ ಬಲಪಡಿಸುತ್ತವೆ. ಸರ್ಕಾರವು ಶಿಫಾರಸುಗಳನ್ನು ತಕ್ಷಣ ಅನುಷ್ಠಾನಗೊಳಿಸಿದರೆ ವಸತಿ ಶಾಲೆಗಳ ಮಾನದಂಡ ಸುಧಾರಿಸಿ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿದೆ," ಎಂದು *ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ‘ದ ಫೆಡರಲ್ ಕರ್ನಾಟಕ’ ಗೆ ತಿಳಿಸಿದ್ದಾರೆ.

