
Karnataka Reservoirs | ಮುಂಗಾರು ಅಬ್ಬರ; ರಾಜ್ಯದ ಜಲಾಶಯಗಳಿಗೆ ಹೆಚ್ಚಿದ ಒಳ ಹರಿವು
ಕಳೆದ ವರ್ಷ ಜೂ.1 ರಿಂದ 15 ರವರೆಗಿನ ಅವಧಿಯಲ್ಲಿ ರಾಜ್ಯ ಜಲಾಶಯಗಳಿಗೆ ಕಡಿಮೆ ಪ್ರಮಾಣದ ನೀರು ಹರಿದು ಬಂದಿತ್ತು. ಆದರೆ, ಈ ಬಾರಿ ಕಳೆದ ವರ್ಷಕ್ಕಿಂತ ದುಪ್ಪಟ್ಟು ಪ್ರಮಾಣ ನೀರು ಜಲಾಶಯಗಳಲ್ಲಿ ಸಂಗ್ರಹವಾಗಿದೆ.
ರಾಜ್ಯದಲ್ಲಿ ಅವಧಿಗೂ ಮುನ್ನವೇ ಮುಂಗಾರು ಪ್ರವೇಶಿಸಿರುವುರಿಂದ ಉತ್ತಮ ಮಳೆಯಾಗುತ್ತಿದೆ. ಮೇ 24 ರಂದು ರಾಜ್ಯ ಪ್ರವೇಶಿಸಿದ ಮುಂಗಾರು ಮಳೆಯು ಕರಾವಳಿ, ಮಲೆನಾಡು ಹಾಗೂ ಒಳನಾಡು ಜಿಲ್ಲೆಗಳಲ್ಲಿ ಅಬ್ಬರಿಸುತ್ತಿದೆ. ಇದರ ಪರಿಣಾಮ, ರಾಜ್ಯದ ಬಹುತೇಕ ಜಲಾಶಯಗಳಿಗೆ ನೀರು ಹರಿದು ಬರುತ್ತಿದೆ.
ಜೂ.15 ರವರೆಗಿನ ರಾಜ್ಯದ ಕಾವೇರಿ, ಕೃಷ್ಣ ಕೊಳ್ಳದ ಅಣೆಕಟ್ಟುಗಳಿಗೆ ಭರಪೂರ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಇದೇ ಅವಧಿಗೆ ಜಲಾಶಯಗಳಿಗೆ ಹರಿದು ಬಂದಿದ್ದ ನೀರಿನ ಪ್ರಮಾಣ ಕಡಿಮೆ ಇತ್ತು. ಒಟ್ಟಾರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರಾಜ್ಯದ ಜಲಾಶಯಗಳಿಗೆ ಹೆಚ್ಚು ನೀರು ಹರಿದು ಬಂದಿದೆ.
ರಾಜ್ಯದ 14ಜಲಾಶಯಗಳಲ್ಲಿ ಒಟ್ಟು 895.62 ಟಿಎಂಸಿ ಅಡಿ ನೀರಿನ ಸಂಗ್ರಹ ಸಾಮರ್ಥ್ಯವಿದೆ. ಜೂ.15 ರ ವರೆಗೆ 349.01 ಟಿಎಂಸಿ ಅಡಿ ಒಳ ಹರಿವು ಬಂದಿದೆ. ಕಳೆದ ವರ್ಷ 187.46 ಟಿಎಂಸಿ ಅಡಿಗಳಷ್ಟು ನೀರು ಬಂದಿತ್ತು.
ಜಲವಿದ್ಯುತ್ ಯೋಜನೆಗಳ ವ್ಯಾಪ್ತಿಯಲ್ಲಿ ಬರುವ ಜಲಾಶಯಗಳಲ್ಲಿ ಪ್ರಮುಖವಾದ ಲಿಂಗನಮಕ್ಕಿ ಜಲಾಶಯ 151 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯ ಹೊಂದಿದೆ. ಪ್ರಸ್ತುತ ನೀರಿನ ಮಟ್ಟ 1763.75 ಅಡಿಗಳಷ್ಟಿದೆ. 2024 ಜೂ.15ರಲ್ಲಿ 1,745.55 ಅಡಿಗಳಷ್ಟಿತ್ತು. ಒಟ್ಟು151.75 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಜೂನ್ 15ರವರೆಗೆ ಒಟ್ಟು 31 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕೇವಲ 14.74 ಟಿಎಂಸಿ ಅಡಿ ನೀರು ಇತ್ತು. 10,991 ಕ್ಯುಸೆಕ್ ಒಳ ಹರಿವಿದ್ದು, ಹೊರಹರಿವು 5,862 ಕ್ಯುಸೆಕ್ ಇದೆ.
ಸೂಪಾ ಜಲಾಶಯದಲ್ಲಿ ಜೂ.15 ರವರೆಗೆ ಗರಿಷ್ಠ ನೀರಿನ ಸಂಗ್ರಹ ಪ್ರಮಾಣ 1,736.11 ಅಡಿಗಳಷ್ಟಿದೆ. ಕಳೆದ ವರ್ಷ 1,727.28 ಅಡಿಗಳಷ್ಟು ನೀರಿನ ಸಂಗ್ರಹವಿತ್ತು.ಒಟ್ಟು 145.33 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 36.90 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ 31.62 ಟಿಎಂಸಿ ಅಡಿ ನೀರಿತ್ತು. 7,704 ಕ್ಯುಸೆಕ್ ಒಳಹರಿವಿದೆ. ಹೊರಹರಿವು 3,242 ಕ್ಯುಸೆಕ್ ಇದೆ.
ವರಾಹಿ ಜಲಾಶಯದಲ್ಲಿ ಗರಿಷ್ಠ ನೀರಿನ ಮಟ್ಟ 1897.80 ಅಡಿಗಳಷ್ಟಿದೆ. ಕಳೆದ ವರ್ಷ ಜೂ.15ರವರೆಗೆ 1877.19 ಅಡಿಗಳಷ್ಟಿತ್ತು. 31.10 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯದಲ್ಲಿ 2024 ಜೂ.15 ರ ವೇಳೆಗೆ 3.46 ಟಿಎಂಸಿ ಅಡಿ ನೀರಿನ ಸಂಗ್ರಹವಿತ್ತು. ಈ ವರ್ಷ 8.34 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. 1578 ಕ್ಯುಸೆಕ್ ಒಳಹರಿವು, 384 ಹೊರ ಹರಿವಿದೆ.
ಕಾವೇರಿ ಕಣಿವೆಯ ಹಾರಂಗಿ ಜಲಾಶಯದಲ್ಲಿ 2851.73 ಅಡಿ ನೀರಿನ ಸಂಗ್ರಹವಿದೆ. ಕಳೆದ ವರ್ಷ 2827.63 ಅಡಿಗಳಷ್ಟಿತ್ತು. 8.50 ಟಿಎಂಸಿ ಅಡಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿರುವ ಈ ಜಲಾಶಯದಲ್ಲಿ ಪ್ರಸ್ತುತ 6.30 ಟಿಎಂಸಿ ಅಡಿ ನೀರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 3.22 ಟಿಎಂಸಿ ಅಡಿ ನೀರಿತ್ತು. 3208 ಕ್ಯುಸೆಕ್ ಒಳಹರಿವಿದ್ದರೆ, 3750 ಕ್ಯುಸೆಕ್ ಹೊರಹರಿವಿದೆ.
ಹೇಮಾವತಿ ಅಣೆಕಟ್ಟಿನಲ್ಲಿ 2907.60 ಅಡಿ ನೀರಿನ ಸಂಗ್ರಹವಿದೆ. ಕಳೆದ ವರ್ಷ ಈ ಅವಧಿಗೆ 2881.95 ಅಡಿಗಳಷ್ಟು ನೀರಿನ ಸಂಗ್ರಹವಾಗಿತ್ತು.
37.10 ಟಿಎಂಸಿ ಅಡಿ ಸಾಮರ್ಥ್ಯವಿರುವ ಜಲಾಶಯದಲ್ಲಿ ಪ್ರಸ್ತುತ 24.91ಟಿಎಂಸಿ ಅಡಿ ನೀರಿದೆ. ಕಳೆದ ವರ್ಷ 10.46 ಟಿಎಂಸಿ ಅಡಿ ನೀರು ಸಂಗ್ರಹವಿತ್ತು. 1907 ಕ್ಯುಸೆಕ್ ಒಳ ಹರಿವಿದೆ. ಹೊರ ಹರಿವು 350 ಕ್ಯುಸೆಕ್ ಇದೆ.
ಕೃಷ್ಣರಾಜಸಾಗರ (ಕೆಆರ್ಎಸ್) ಜಲಾಶಯದಲ್ಲಿ 109.12 ಅಡಿ ನೀರಿನ ಸಂಗ್ರಹವಿದೆ. ಕಳೆದ ವರ್ಷ 86.50 ಅಡಿ ನೀರಿತ್ತು. 49.45ಟಿಎಂಸಿ ಅಡಿ ಸಾಮರ್ಥ್ಯ ಜಲಾಶಯದಲ್ಲಿ ಪ್ರಸ್ತುತ 30.84 ಟಿಎಂಸಿ ಅಡಿ ನೀರಿದೆ. ಕಳೆದ ವರ್ಷ ಜಲಾಶಯದಲ್ಲಿ ಇದೇ ಅವಧಿಗೆ 13.96 ಟಿಎಂಸಿ ಅಡಿ ನೀರು ಇತ್ತು.
ಕಬಿನಿ ಜಲಾಶಯದಲ್ಲಿ 2,276.36 ಅಡಿಗಳಷ್ಟು ನೀರು ಸಂಗ್ರಹವಿದೆ. ಕಳೆದ ವರ್ಷ 2,263.61 ಅಡಿಗಳಷ್ಟು ನೀರಿನ ಮಟ್ಟವಿತ್ತು. 19.52ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 15.02 ಟಿಎಂಸಿ ಅಡಿ ನೀರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕೇವಲ 8.77 ಟಿಎಂಸಿ ಅಡಿ ನೀರಿತ್ತು. 3026 ಕ್ಯುಸೆಕ್ ಒಳ ಹರಿವಿದೆ, 3667 ಕ್ಯುಸೆಕ್ ಹೊರ ಹರಿವಿದೆ.
ಕೃಷ್ಣಾ ಜಲಾನಯನ ವ್ಯಾಪ್ತಿಯಲ್ಲಿ ಬರುವ ಭದ್ರಾ ಜಲಾಶಯದಲ್ಲಿ 2116.25 ಅಡಿಗಳಷ್ಟು ನೀರಿನ ಸಂಗ್ರಹವಿದೆ. ಕಳೆದ ವರ್ಷ 2090.86 ಅಡಿಗಳಷ್ಟು ನೀರಿತ್ತು. 71.54 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 29.90 ಟಿಎಂಸಿ ನೀರಿದೆ. 2024 ಜೂ.15ರ ಅವಧಿಯಲ್ಲಿ 15.05ಟಿಎಂಸಿ ಅಡಿ ನೀರಿತ್ತು. 1275 ಕ್ಯುಸೆಕ್ ಒಳ ಹರಿವು, 569 ಕ್ಯುಸೆಕ್ ಹೊರಹರಿವು ಇದೆ.
ತುಂಗಭದ್ರಾ ಜಲಾಶಯದಲ್ಲಿ 1603.82 ಅಡಿ ನೀರಿನ ಸಂಗ್ರಹವಿದೆ. ಕಳೆದ ವರ್ಷ 1582 ಅಡಿ ಇತ್ತು. 105.79 ಟಿಎಂಸಿ ಅಡಿ ನೀರಿನ ಸಂಗ್ರಹ ಸಾಮರ್ಥ್ಯದ ಈ ಜಲಾಶಯದಲ್ಲಿ ಪ್ರಸ್ತುತ 26.87 ಟಿಎಂಸಿ ಅಡಿ ನೀರಿದೆ. ಕಳೆದ ವರ್ಷ ಕೇವಲ 6.02ಟಿಎಂಸಿ ಅಡಿ ಇತ್ತು. 8776 ಕ್ಯುಸೆಕ್ ಒಳ ಹರಿವಿದ್ದರೆ, 178 ಕ್ಯುಸೆಕ್ ಹೊರ ಹರಿವಿದೆ.
ಘಟಪ್ರಭಾ ಜಲಾಶಯದಲ್ಲಿ 2104.30 ಅಡಿಗಳಷ್ಟು ನೀರಿನ ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2094 ಅಡಿ ಇತ್ತು. 51 ಟಿಎಂಸಿ ಅಡಿ ಸಾಮರ್ಥ್ಯದಲ್ಲಿ ಈ ಜಲಾಶಯದಲ್ಲಿ ಪ್ರಸ್ತುತ 11.13 ಟಿಎಂಸಿ ಅಡಿ ನೀರಿದೆ. ಕಳೆದ ವರ್ಷ ಕೇವಲ 7.98 ಟಿಎಂಸಿ ಇತ್ತು. 1324 ಕ್ಯುಸೆಕ್ ಒಳ ಹರಿವಿದ್ದರೆ, ಹೊರಹರಿವು 112 ಕ್ಯುಸೆಕ್ ಇದೆ.
ಮಲಪ್ರಭಾ ಆಣೆಕಟ್ಟೆಯಲ್ಲಿ 2051.02ಅಡಿಗಳಷ್ಟು ನೀರಿದೆ. ಕಳೆದ ವರ್ಷ 2042.48 ಅಡಿ ನೀರು ಬಂದಿತ್ತು. 37.73ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಈಗ 10.39ಟಿಎಂಸಿ ಅಡಿ ನೀರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 6.54 ಟಿಎಂಸಿ ಅಡಿ ನೀರಿತ್ತು. ಈ ಜಲಾಶಯಕ್ಕೆ ನೀರು ಹರಿದು ಬಂದಿಲ್ಲ. ಹೊರಹರಿವು 194 ಕ್ಯುಸೆಕ್ ಇದೆ.
ಆಲಮಟ್ಟಿ ಜಲಾಶಯದಲ್ಲಿ 1689.94 ಅಡಿಗಳಷ್ಟು ನೀರು ಸಂಗ್ರಹವಿದೆ. ಕಳೆದ ವರ್ಷ ಜೂನ್ 15 ರ ವೇಳೆಗೆ 1670.65ಅಡಿಗಳಿತ್ತು. ಒಟ್ಟು 123.08 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಈಗ 64.03 ಟಿಎಂಸಿ ಅಡಿ ನೀರಿದೆ. ಕಳೆದ ವರ್ಷ 26.31 ಟಿಎಂಸಿ ಅಡಿ ನೀರಿದೆ. ಜಲಾಶಯಕ್ಕೆ 23,230 ಕ್ಯುಸೆಕ್ ಒಳಹರಿವಿದೆ. ಹೊರ ಹರಿವು 8,666 ಕ್ಯುಸೆಕ್ ಇದೆ.
ನಾರಾಯಣಪುರ ಜಲಾಶಯದಲ್ಲಿ 1610.38 ಅಡಿಗಳಷ್ಟು ನೀರಿದೆ. ಕಳೆದ ವರ್ಷ 1604.48 ಅಡಿಗಳಷ್ಟು ನೀರಿತ್ತು. ಒಟ್ಟು 33.31 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯವಿರುವ ಈ ಜಲಾಯದಲ್ಲಿ ಸದ್ಯ 27.25 ಟಿಎಂಸಿ ಅಡಿ ನೀರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 21.03 ಟಿಎಂಸಿ ಅಡಿ ನೀರಿನ ಸಂಗ್ರಹವಿತ್ತು. ಯಾದಗಿರಿ ಗಡಿ ಭಾಗದ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನಾರಾಯಣಪುರ ಜಲಾಶಯದಕ್ಕೆ 34,909 ಕ್ಯುಸೆಕ್ ಒಳ ಹರಿವಿದೆ. ಅದೇ ರೀತಿ 49,922 ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದೆ.
30.42 ಟಿಎಂಸಿ ಅಡಿ ನೀರಿನ ಸಂಗ್ರಹ ಸಾಮರ್ಥ್ಯದ ವಾಣಿ ವಿಲಾಸ ಸಾಗರ ಜಲಾಶಯದಲ್ಲಿ 2136.10 ಅಡಿ ನೀರಿದೆ. ಕಳೆದ ವರ್ಷ 2124.10 ಅಡಿ ನೀರಿತ್ತು. ಪ್ರಸ್ತುತ ಜಲಾಶಯದಲ್ಲಿ 25.28 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. ಕಳೆದ ವರ್ಷ ಈ ಅವಧಿಯಲ್ಲಿ 18.31 ಟಿಎಂಸಿ ಅಡಿ ನೀರಿತ್ತು. ಈ ಜಲಾಶಯದಲ್ಲಿ ಯಾವುದೇ ಒಳಹರಿವು- ಹೊರಹರಿವು ದಾಖಲಾಗಿಲ್ಲ.
ಒಳ ಹರಿವು ಹೆಚ್ಚಳ
ರಾಜ್ಯದ ಜಲಾಶಯಗಳಲ್ಲಿ ಜೂ.1 ರಿಂದ 15ರವರೆಗೆ ಹೆಚ್ಚಿನ ಪ್ರಮಾಣ ನೀರನ್ನು ಹೊರ ಬಿಡಲಾಗಿದೆ. ಜಲವಿದ್ಯುತ್ ಯೋಜನೆಗಳ ವ್ಯಾಪ್ತಿಯ ಲಿಂಗನಮಕ್ಕಿ, ಸೂಫಾ ಹಾಗೂ ವರಾಹಿ ಜಲಾಶಯಕ್ಕೆ ಈ ಅವಧಿಯಲ್ಲಿ 9.1 ಟಿಎಂಸಿ ಅಡಿ ನೀರು ಒಳ ಹರಿವಿದ್ದರೆ, ಹೊರಹರಿವು 15.3 ಟಿಎಂಸಿ ಅಡಿಯಷ್ಟಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ 15.8 ಟಿಎಂಸಿ ಅಡಿ ಒಳ ಹರಿವಿದ್ದರೆ, 8.7 ಟಿಎಂಸಿ ಅಡಿ ಹೊರಹರಿವಿದೆ. ಕೃಷ್ಣಾ ಜಲಾನಯನ ಪ್ರದೇಶದಲ್ಲಿ 39.8ಟಿಎಂಸಿ ಅಡಿ ಒಳ ಹರಿವಿದೆ. ಆದರೆ, 6 ಟಿಎಂಸಿ ಅಡಿ ಹೊರ ಹರಿವಿದೆ.