
ಪಥಸಂಚಲನದಲ್ಲಿ ಸಾಗಲಿರುವ ರಾಜ್ಯದ ‘ಸಿರಿಧಾನ್ಯದಿಂದ ಮೈಕ್ರೋಚಿಪ್’ ವರೆಗೆ ಸ್ತಬ್ಧಚಿತ್ರ
ಗಣರಾಜ್ಯೋತ್ಸವಕ್ಕೆ ಸಿದ್ಧವಾಯ್ತು ಕರ್ನಾಟಕದ ಸಿರಿಧಾನ್ಯ, ಮೈಕ್ರೋಚಿಪ್’ ಸ್ತಬ್ಧಚಿತ್ರ
ರಾಜ್ಯದ ಪರವಾಗಿ ಗಣರಾಜ್ಯೋತ್ಸವದ ಪಥಸಂಚಲನ ಮತ್ತು ಭಾರತ ಪರ್ವದಲ್ಲಿ ಪಾಲ್ಗೊಳ್ಳುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರತಿ ವರ್ಷ ತನ್ನ ವೈಶಿಷ್ಟ್ಯ ಪೂರ್ಣ ಸ್ತಬ್ಧಚಿತ್ರಗಳ ಮೂಲಕವೇ ದೇಶದ ಗಮನ ಸೆಳೆಯುತ್ತಿದೆ.
ನವದೆಹಲಿಯಲ್ಲಿ ಜನವರಿ 26ರಂದು ಗಣರಾಜ್ಯೋತ್ಸವದ ಅಂಗವಾಗಿ ಕೆಂಪು ಕೋಟೆಯಲ್ಲಿ ಆಯೋಜಿಸುವ ಭಾರತ ಪರ್ವದಲ್ಲಿ ರಾಜ್ಯದಿಂದ ‘ಸಿರಿಧಾನ್ಯದಿಂದ ಮೈಕ್ರೋಚಿಪ್’ ವರೆಗೆ ಎನ್ನುವ ಸ್ತಬ್ಧಚಿತ್ರವನ್ನು ಪ್ರದರ್ಶಿಸಲಾಗುವುದು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್ ಎಂ ನಿಂಬಾಳ್ಕರ್ ತಿಳಿಸಿದ್ದಾರೆ.
ಈ ಕುರಿತು ಗುರುವಾರ(ಜ.22) ಪತ್ರಿಕಾಪಕ್ರಟಣೆ ಹೊರಡಿಸಿರುವ ಅವರು, ಭಾರತವನ್ನು ಆತ್ಮನಿರ್ಭರ ರಾಷ್ಟ್ರವನ್ನಾಗಿಸುವ ದಿಶೆಯಲ್ಲಿ ಕರ್ನಾಟಕದಂತಹ ಸ್ವಾವಲಂಬಿ ರಾಜ್ಯಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕೃಷಿಯಿಂದ ಕೈಗಾರಿಕೆವರೆಗೆ ಹಾಗೂ ಆಧುನಿಕ ತಂತ್ರಜ್ಞಾನದ ಬಳಕೆಯಲ್ಲಿ ನಮ್ಮ ರಾಜ್ಯ ಮುಂಚೂಣಿಯಲ್ಲಿದೆ. ಈ ಪಯಣವನ್ನು ಸಂಕೇತಿಸುವಂತೆ, ಸಿರಿಧಾನ್ಯದಿಂದ ಮೈಕ್ರೋಚಿಪ್ ವರೆಗೆ ಎಂಬ ಸ್ತಬ್ಧಚಿತ್ರ ಪ್ರದರ್ಶಿಸಲಾಗುವುದು ಎಂದರು.
ರಾಜ್ಯದ ಪರವಾಗಿ ಗಣರಾಜ್ಯೋತ್ಸವದ ಪಥಸಂಚಲನ ಮತ್ತು ಭಾರತ ಪರ್ವದಲ್ಲಿ ಪಾಲ್ಗೊಳ್ಳುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರತಿ ವರ್ಷ ತನ್ನ ವೈಶಿಷ್ಟ್ಯ ಪೂರ್ಣ ಸ್ತಬ್ಧಚಿತ್ರಗಳ ಮೂಲಕವೇ ದೇಶದ ಗಮನ ಸೆಳೆಯುತ್ತಿದೆ. ವರ್ಷದಿಂದ ವರ್ಷಕ್ಕೆ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸುತ್ತಲೇ ಸಾಗಿದೆ. ಈ ಬಾರಿ ಕೃಷಿ, ಶಿಕ್ಷಣ, ವಿಜ್ಞಾನ, ಉನ್ನತ ತಂತ್ರಜ್ಞಾನ ಹಾಗೂ ಮೈಕ್ರೋಚಿಪ್‍ಗಳ ಉತ್ಪಾದನೆಯಲ್ಲಿ ಸಾಧಿಸಿರುವ ಸಮತೋಲನಯುತ ಪ್ರಗತಿಯನ್ನು ಸ್ತಬ್ಧಚಿತ್ರದಲ್ಲಿ ತೋರಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಿರಿಧಾನ್ಯಗಳ ಉತ್ಪಾದನೆ ಮತ್ತು ಪೌಷ್ಟಿಕ ಆಹಾರದ ಬಳಕೆಯನ್ನು ಉತ್ತೇಜಿಸುವಲ್ಲಿ ಕರ್ನಾಟಕವು ದೇಶದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಬೆಂಗಳೂರು ಜಾಗತಿಕವಾಗಿ ಗಮನ ಸೆಳೆದಿದೆ. ಮೈಕ್ರೋಚಿಪ್, ಎಲೆಕ್ಟ್ರಾನಿಕ್ಸ್ ಹಾಗೂ ಸೆಮಿಕಂಡಕ್ಟರ್ ವಲಯಗಳಲ್ಲಿನ ಆವಿಷ್ಕಾರಗಳು ಕರ್ನಾಟಕವನ್ನು ಶ್ರೇಷ್ಠ ತಂತ್ರಜ್ಞಾನ ಕೇಂದ್ರವಾಗಿಸಿದೆ. ಇವೆಲ್ಲವೂ ಈ ಬಾರಿ ಸ್ತಬ್ಧಚಿತ್ರದಲ್ಲಿ ಮೇಳೈಸಿವೆ ಎಂದು ಮಾಹಿತಿ ನೀಡಿದರು.
ಕೈಗಾರಿಕಾ ಅಭಿವೃದ್ಧಿಯಲ್ಲಿ ಮುಂಚೂಣಿ
ಸಂಶೋಧನೆ, ನಾವಿನ್ಯತೆ ಮತ್ತು ಕೌಶಲ್ಯಾಭಿವೃದ್ಧಿಗೆ ನೀಡಲಾಗಿರುವ ವಿಶೇಷ ಆದ್ಯತೆಯ ಮೂಲಕ ಯುವಶಕ್ತಿಗೆ ಉದ್ಯಮಶೀಲ ಅವಕಾಶಗಳನ್ನು ಒದಗಿಸಿ, ಭವಿಷ್ಯದ ಆರ್ಥಿಕತೆಗೆ ಭದ್ರ ಬುನಾದಿಯನ್ನು ಕರ್ನಾಟಕ ನಿರ್ಮಿಸುತ್ತಿದೆ. ಹೂಡಿಕೆ ಸ್ನೇಹಿ ನೀತಿಗಳ ಮೂಲಕ ಉತ್ಪಾದನಾ ವಲಯದಲ್ಲಿ ಗರಿಷ್ಠ ಬೆಳವಣಿಗೆಯನ್ನು ಸಾಧಿಸಿರುವ ಕರ್ನಾಟಕವು ಕೈಗಾರಿಕಾ ಅಭಿವೃದ್ಧಿಯಲ್ಲಿಯೂ ಮುಂಚೂಣಿಯಲ್ಲಿದೆ. ಜೊತೆಗೆ, ಸಾರ್ಟ್ ಅಪ್ ಕ್ಯಾಪಿಟಲ್ ಆಫ್ ಇಂಡಿಯಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಜ್ಯವು ನವದೆಹಲಿಯಲ್ಲಿ ಪ್ರದರ್ಶಿಸುತ್ತಿರುವ ಈ ಸ್ತಬ್ಧಚಿತ್ರವು ಎಲ್ಲರ ಮನಸೂರೆಗೊಳ್ಳಲಿದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ರಾಜ್ಯದ ಸ್ಥಬ್ದಚಿತ್ರ
ರಕ್ಷಣಾ ಸಚಿವಾಲಯದಿಂದ ಅನುಮೋದನೆ
ದೆಹಲಿಯ ಗಣರಾಜ್ಯೋತ್ಸವದ ಸ್ತಬ್ಧಚಿತ್ರದ ವಿಷಯದ ಆಯ್ಕೆ, ವಿನ್ಯಾಸ, ಕೇಂದ್ರ ಸರ್ಕಾರ ರಕ್ಷಣಾ ಸಚಿವಾಲಯದಲ್ಲಿ ಅದರ ಅನುಮೋದನೆ, ನಿರ್ಮಾಣ, ಪಾಲ್ಗೊಳ್ಳುವಿಕೆ ಹೀಗೆ ಎಲ್ಲಾ ಹಂತಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದೆ. ಅಲ್ಲದೆ, ಇಲಾಖೆಯು ಕಳೆದ 16 ವರ್ಷಗಳಿಂದ ನಿರಂತರವಾಗಿ ಗಣರಾಜ್ಯೋತ್ಸವದ ಪಥಸಂಚಲನ ಮತ್ತು ಭಾರತ ಪರ್ವದ ಪ್ರದರ್ಶನದಲ್ಲಿ (2024 ಮತ್ತು 2026ರಲ್ಲಿ) ಪಾಲ್ಗೊಳ್ಳುತ್ತಿದೆ. ಇದು ಕನ್ನಡಿಗರೆಲ್ಲರೂ ಹೆಮ್ಮೆಪಡುವ ಸಂಗತಿ ಎಂದು ಹೇಳಿದ್ದಾರೆ.
ನಾಲ್ಕರಲ್ಲಿ ಒಂದು ಅಂತಿಮ
2026ರ ಜನವರಿ 26ರಂದು ನಡೆಯುವ ದೆಹಲಿ ಗಣರಾಜ್ಯೋತ್ಸವದ ಸ್ತಬ್ಧಚಿತ್ರಕ್ಕಾಗಿ ಇಲಾಖೆಯು ಕಿತ್ತೂರು ರಾಣಿ ಚೆನ್ನಮ್ಮ ಮತ್ತು ರಾಣಿ ಅಬ್ಬಕ್ಕದೇವಿ, ಕರ್ನಾಟಕ ಪುಷ್ಪ ವೈಭವ, ಹಲಗಲಿ ಬೇಡರು ಹಾಗೂ ‘ಸಿರಿಧಾನ್ಯದಿಂದ ಮೈಕ್ರೋಚಿಪ್’ ವರೆಗೆ ಎಂಬ ನಾಲ್ಕು ವಿಷಯಗಳನ್ನು ಆಯ್ಕೆ ಮಾಡಿ ಕಳುಹಿಸಿತ್ತು. ಮೊದಲ ಸಭೆಯಲ್ಲಿಯೇ ಸಿರಿಧಾನ್ಯದಿಂದ ಮೈಕ್ರೋಚಿಪ್ ವರೆಗೆ ಎಂಬ ವಿಷಯವನ್ನು ಪರಿಣತರ ಸಮಿತಿಯು ಒಮ್ಮತದಿಂದ ಅಂತಿಮಗೊಳಿಸಿತ್ತು. ಅದಕ್ಕನುಗುಣವಾಗಿ ಸಿರಿಧಾನ್ಯಗಳನ್ನು ಬೆಳೆಸಿದ ದೇಶೀಯ ಜ್ಞಾನದಿಂದ ಮೈಕ್ರೋಚಿಪ್‍ಗಳನ್ನು ಉತ್ಪಾದಿಸುವ ಸೂಕ್ಷ್ಮತೆಯನ್ನು ಈ ಸ್ತಬ್ಧಚಿತ್ರ ಮನಮುಟ್ಟುವಂತೆ ಕಟ್ಟಿಕೊಡುತ್ತದೆ ಎಂದರು.
ಸ್ತಬ್ಧಚಿತ್ರದಲ್ಲಿ ಏನಿರಲಿದೆ
ಸ್ತಬ್ಧಚಿತ್ರದ ಮುಂಭಾಗದಲ್ಲಿ ಉದಯಿಸುತ್ತಿರುವ ಸೂರ್ಯ ನಿರಂತರ ಪ್ರಗತಿ ಮತ್ತು ಚಲನಶೀಲತೆಯ ಸಂಕೇತವಾಗಿ ಹೊಳೆಯುತ್ತಿದೆ. ದೊಡ್ಡ ಮಡಿಕೆಗಳಲ್ಲಿ ಪ್ರದರ್ಶಿಸಲಾದ ವಿವಿಧ ಸಿರಿಧಾನ್ಯಗಳು ಕೃಷಿ ಸಮೃದ್ಧಿಯನ್ನು ತೋರಿಸುತ್ತವೆ. ಬೆಳೆದ ಫಸಲನ್ನು ಎತ್ತಿಹಿಡಿದಿರುವ ರೈತ, ಆತನ ಪತ್ನಿ ಹಾಗೂ ಉಲ್ಲಾಸದಿಂದ ಕಾಣಿಸುತ್ತಿರುವ ಮಕ್ಕಳು ಗ್ರಾಮೀಣ ಶಕ್ತಿಯ ಜೀವಂತ ಚಿತ್ರಣವಾಗಿದ್ದಾರೆ.
ಮಧ್ಯಭಾಗದಲ್ಲಿ ತಿರುಗುತ್ತಿರುವ ಅಣುವಿನ ಮಾಲಿಕ್ಯೂಲ್‍ಗಳ ಮಾದರಿ ತಂತ್ರಜ್ಞಾನ ಪ್ರಗತಿಯನ್ನು ಸೂಚಿಸುತ್ತದೆ. ಕೃತಕ ಬುದ್ಧಿಮತ್ತೆಯ ರೋಬೋಟ್ ಕಂಪ್ಯೂಟರ್ ನಲ್ಲಿ ಕಾರ್ಯನಿರ್ವಹಿಸುತ್ತಿರುವುದು ಭವಿಷ್ಯದ ಆವಿಷ್ಕಾರಗಳ ಸಂಕೇತವಾಗಿದೆ. ಇಕ್ಕೆಲಗಳಲ್ಲಿ ಬಾಹ್ಯಾಕಾಶ ಕ್ಷೇತ್ರವನ್ನು ಪ್ರತಿನಿಧಿಸುವ ರಾಕೆಟ್ ಮತ್ತು ವಿಜ್ಞಾನಿ, ಟೆಲಿಮೆಡಿಸಿನ್ ಮೂಲಕ ಮಾರ್ಗದರ್ಶನ ನೀಡುತ್ತಿರುವ ವೈದ್ಯೆ ಹಾಗೂ ಕೃಷಿಭೂಮಿಯಲ್ಲಿ ಡ್ರೋನ್ ಬಳಸುತ್ತಿರುವ ಮಹಿಳೆಯು ವಿಜ್ಞಾನ, ಆರೋಗ್ಯ ಮತ್ತು ಆಧುನಿಕ ಕೃಷಿಯ ಸಮನ್ವಯವನ್ನು ತೋರಿಸುತ್ತಾರೆ. ಕೈಗಾರಿಕಾ ವಲಯವನ್ನು ಪ್ರತಿನಿಧಿಸುವಂತೆ ಯಂತ್ರೋಪಕರಣಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು ಉತ್ಪಾದನಾ ಶಕ್ತಿಗೆ ಸಾಕ್ಷಿಯಾಗಿದ್ದಾರೆ.
ಇಡೀ ಸ್ತಬ್ಧಚಿತ್ರದ ಆಕರ್ಷಣೆಯ ಕೇಂದ್ರಬಿಂದುವಾಗಿ ಕೊನೆಯಲ್ಲಿ ಮಿನುಗುತ್ತಿರುವ ಮೈಕ್ರೋಚಿಪ್ ಹಾಗೂ ಬಂಗಾರದ ಬಣ್ಣದ ಸರ್ಕ್ಯೂಟ್‍ಗಳ ಮಧ್ಯೆ ರೋಬೋಟ್‍ನ ಮುಖವನ್ನು ಸಾಂಕೇತಿಕವಾಗಿ ಚಿತ್ರಿಸಲಾಗಿದೆ. ಇದು ಪರಂಪರೆಯಿಂದ ಪ್ರಗತಿಯತ್ತ, ಮಣ್ಣಿನಿಂದ ಯಂತ್ರಗಳತ್ತ ಸಾಗುತ್ತಿರುವ ಕರ್ನಾಟಕದ ಆತ್ಮನಿರ್ಭರ ಪಯಣದ ಸಾರವಾಗಿದೆ.
ತೀವ್ರ ಪೈಪೋಟಿ
ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಸ್ತಬ್ಧಚಿತ್ರದೊಂದಿಗೆ ಭಾಗವಹಿಸುವುದು ಪ್ರತಿ ರಾಜ್ಯಕ್ಕೂ ಹೆಮ್ಮೆಯ ಮತ್ತು ಪ್ರತಿಷ್ಠೆಯ ಸಂಕೇತ. ಹಿಂದೆ ಎಲ್ಲಾ ರಾಜ್ಯಗಳಿಗೂ ಪಥಸಂಚಲನದಲ್ಲಿ ಭಾಗವಹಿಸಲು ಅವಕಾಶವಿತ್ತು. ಭದ್ರತೆ ಮತ್ತು ಗಣರಾಜ್ಯೋತ್ಸವದ ಅವಧಿಯಲ್ಲಿ ಮಾಡಿದ ಇಳಿಕೆ, ಪ್ರಾತಿನಿಧ್ಯತೆಯಿಂದಾಗಿ ಸ್ತಬ್ಧಚಿತ್ರಕ್ಕಾಗಿ ಪ್ರತಿನಿಧಿಸುವ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆಯನ್ನು ರಕ್ಷಣಾ ಸಚಿವಾಲಯವು 2022ನೇ ಸಾಲಿನಿಂದ 15 ಕ್ಕೆ ಇಳಿಸಿದೆ. 2024ರಲ್ಲಿ ರಕ್ಷಣಾ ಸಚಿವಾಲಯವು ಎಲ್ಲಾ ರಾಜ್ಯಗಳಿಗೂ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಸ್ತಬ್ಧಚಿತ್ರದೊಂದಿಗೆ ಪಾಲ್ಗೊಳ್ಳಲು ಸಮಾನ ಅವಕಾಶ ಕಲ್ಪಿಸಲು ಆವರ್ತನ ಮಾದರಿಯಲ್ಲಿ ಒಂದು ವರ್ಷ ಪಥಸಂಚಲನ ಮತ್ತು ಅದರ ಮುಂದಿನ ವರ್ಷ ಭಾರತ ಪರ್ವದಲ್ಲಿ ಪ್ರದರ್ಶಿಸುವಂತೆ ಎಲ್ಲಾ ರಾಜ್ಯಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಹೀಗಾಗಿ, ಇದು ತೀವ್ರ ಪೈಪೋಟಿಗೆ ಕಾರಣವಾಗಿದೆ. ಅಷ್ಟೇ ಅಲ್ಲದೆ ಗುಣಮಟ್ಟಕ್ಕೆ, ವಿನ್ಯಾಸಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಸ್ತಬ್ಧಚಿತ್ರಕ್ಕಾಗಿ ಪ್ರಶಸ್ತಿ ಪಡೆದುಕೊಳ್ಳುವುದಕ್ಕಿಂತಲೂ ಪಥಸಂಚಲನ ಮತ್ತು ಪ್ರದರ್ಶನದಲ್ಲಿ ಭಾಗವಹಿಸುವುದೇ ಪ್ರತಿಷ್ಠೆಯ ಸಂಕೇತವಾಗಿದೆ. ಇಂತಹ ಕಠಿಣ ಪರೀಕ್ಷೆಯಲ್ಲಿ ಕರ್ನಾಟಕವು 16 ಬಾರಿ ಭಾಗವಹಿಸಿ, ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.
ಪ್ರಶಸ್ತಿಗಳ ಸರಮಾಲೆ
2022ರಲ್ಲಿ ಇಲಾಖೆಯು ಪ್ರದರ್ಶಿಸಿದ್ದ ಸಾಂಪ್ರದಾಯಿಕ ಕಸೂತಿ ತೊಟ್ಟಿಲು ಗೆ ದ್ವಿತೀಯ ಪ್ರಶಸ್ತಿ, 2015ರಲ್ಲಿ ರಾಜ್ಯವು ಚನ್ನಪಟ್ಟಣದ ಗೊಂಬೆಗಳಿಗೆ ತೃತೀಯ, 2012ರಲ್ಲಿ ದಕ್ಷಿಣ ಕನ್ನಡ ಭೂತಾರಾಧನೆಗೆ ತೃತೀಯ, 2011ರಲ್ಲಿ ಬೀದರ್ ನ ಪಾರಂಪರಿಕ ಕಲೆಯಾದ ಬಿದರಿ ಸ್ತಬ್ಧಚಿತ್ರಕ್ಕೆ ದ್ವಿತೀಯ ಮತ್ತು 2008ರಲ್ಲಿ ಹೊಯ್ಸಳ ವಾಸ್ತುಶಿಲ್ಪಕ್ಕೆ ದ್ವಿತೀಯ ಪ್ರಶಸ್ತಿ ಸಂದಿತ್ತು. 2005ರಲ್ಲಿ ವೈರಾಗ್ಯಮೂರ್ತಿ ಬಾಹುಬಲಿಯ ಮಹಾಮಸ್ತಕಾಭಿಷೇಕದ ಸ್ತಬ್ಧಚಿತ್ರಕ್ಕೆ ಪ್ರಥಮ ಪ್ರಶಸ್ತಿ ದೊರೆತಿತ್ತು. 2008ರಲ್ಲಿ ಹೊಯ್ಸಳ ಕಲೆಯ ಸ್ತಬ್ಧಚಿತ್ರವು ದ್ವಿತೀಯ ಪ್ರಶಸ್ತಿಯ ಜೊತೆಗೆ ಅತ್ಯುತ್ತಮ ನಿರೂಪಣೆ ಮತ್ತು ಅತ್ಯುತ್ತಮ ಫ್ಯಾಬ್ರಿಕೇಷನ್‍ಗಾಗಿ ಪ್ರಶಸ್ತಿ ಲಭಿಸಿತ್ತು. ಒಂದೇ ಸ್ತಬ್ಧಚಿತ್ರಕ್ಕಾಗಿ ಮೂರು ಪ್ರಶಸ್ತಿಗಳನ್ನು ಪಡೆದಂತಹ ಅಪರೂಪದ ಸಾಧನೆಯನ್ನು ನಮ್ಮ ರಾಜ್ಯವು ಮಾಡಿದೆ ಎನ್ನುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.

