
ಬೆಳಗಾವಿ ಚಲೋ | ಕಂಡಕ್ಟರ್ ಹಲ್ಲೆ ಪ್ರಕರಣ ಖಂಡಿಸಿ ಗಡಿನಾಡಿನಲ್ಲಿ ಮೊಳಗಿದ ಕನ್ನಡ ದನಿ
ಕನ್ನಡ ಮಾತನಾಡಿದ್ದಕ್ಕಾಗಿ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿ, ಪೋಕ್ಸೊ ಪ್ರಕರಣ ದಾಖಲಿಸಿರುವ ಮರಾಠಿಗರ ವಿರುದ್ಧ ಬೆಳಗಾವಿಯಲ್ಲಿ ಮಂಗಳವಾರ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿತು.
ಮರಾಠಿ ಮಾತನಾಡಿಲ್ಲವೆಂದು ಕಂಡಕ್ಟರ್ ಮೇಲೆ ಹಲ್ಲೆ ನಡೆಸಿ, ಅವರ ವಿರುದ್ಧ ದುರುದ್ದೇಶದಿಂದ ಪೋಕ್ಸೊ ಪ್ರಕರಣ ದಾಖಲಿಸಿದ್ದ ಪ್ರಕರಣ ವಿರೋಧಿಸಿ ಬೆಳಗಾವಿಯಲ್ಲಿ ಮಂಗಳವಾರ ಕರ್ನಾಟಕ ರಕ್ಷಣಾ ವೇದಿಕೆ ಬೃಹತ್ ಪ್ರತಿಭಟನೆ ನಡೆಸಿತು.
ಜೊತೆಗೆ ಬೆಳಗಾವಿಯಿಂದ ಬಾಳೆಕುಂದ್ರಿ ಚಲೋಕ್ಕೆ ಮುಂದಾಗಿದ್ದ ಕರವೇ ಅಧ್ಯಕ್ಷ ನಾರಾಯಣ ಗೌಡರನ್ನು ಮನವೊಲಿಸಲು ಸ್ಥಳಕ್ಕೆ ದೌಡಾಯಿಸಿದ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಕೊನೆಗೂ ಅವರನ್ನು ಮನವೊಲಿಸಿ ಬಾಳೆಕುಂದ್ರಿ ಚಲೋ ಕೈಬಿಡುವಂತೆ ಮಾಡುವಲ್ಲಿ ಸಫಲರಾಗಿದ್ದಾರೆ.
ಬಸ್ ಕಂಡಕ್ಟರ್ ಮೇಲಿನ ಹಲ್ಲೆ ಹಾಗೂ ವಿನಾಕಾರಣ ಪೋಕ್ಸೊ ಪ್ರಕರಣ ದಾಖಲಿಸಿದ್ದನ್ನು ಖಂಡಿಸಿ ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ನೇತೃತ್ವದಲ್ಲಿ ಬಾಳೇಕುಂದ್ರಿ ಚಲೋ ಹಮ್ಮಿಕೊಳ್ಳಲಾಗಿತ್ತು. ಬೆಳಗಾವಿ ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಕರವೇ ಕಾರ್ಯಕರ್ತರು, ಕನ್ನಡ ಬಾವುಟಗಳನ್ನು ಹಿಡಿದು ಎಂಇಎಸ್, ಶಿವಸೇನೆ ವಿರುದ್ಧ ಘೋಷಣೆ ಕೂಗಿದರು.
ಕಿತ್ತೂರು ಚನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರ ನಾರಾಯಣ ಗೌಡ, ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಮಹಾರಾಷ್ಟ್ರದವರಿಗೂ ಗೊತ್ತಿದೆ. ಮಹಾಜನ್ ಆಯೋಗದ ವರದಿಯಂತೆ ಈ ತೀರ್ಮಾನ ಆಗಿದೆ. ಆದರೂ ಎಂಇಎಸ್ ತನ್ನ ಕಿತಾಪತಿ ನಿಲ್ಲಿಸುತ್ತಿಲ್ಲ. ಎಂಇಎಸ್ ಪುಂಡ-ಪೋಕರಿಗಳ ದೌರ್ಜ್ಯನಕ್ಕೆ ಸಂಪೂರ್ಣ ಅಂತ್ಯ ಹಾಕಬೇಕಿದೆ. ಬೆಳಗಾವಿಯಲ್ಲಿ ಮೊದಲು ಎಂಇಎಸ್‌ನ 7 ಜನರು ಗೆದ್ದು ಶಾಸಕರಾಗುತ್ತಿದ್ದರು, ಈಗ ಅವರೆಲ್ಲ ನೆಲಕಚ್ಚಿದ್ದಾರೆ. ಇಲ್ಲಿ ಒಬ್ಬೆ ಒಬ್ಬ ಎಂಇಎಸ್ ಅಭ್ಯರ್ಥಿ ಗೆಲ್ಲದಂತೆ ಆಗಿದೆ. ಆ ಉರಿಗೆ ಇಂತಹ ಕೃತ್ಯಗಳನ್ನು ಎಂಇಎಸ್ ಮಾಡಿಸುತ್ತಿದೆ. ಶಿವಸೇನೆ ಕಿತ್ತೋಗಿದೆ. ಶಿವನ ಹೆಸರು ಯಾಕೆ ಇಟ್ಟುಕೊಂಡಿದ್ದಿರಿ? ಮಹಾರಾಷ್ಟ್ರ ಗೂಂಡಾಸೇನೆ ಅಂತಾ ಹೆಸರು ಬದಲಿಸಿಕೊಳ್ಳಿ’ ಎಂದು ಕಿಡಿ ಕಾರಿದರು.
ಬೆಳಗಾವಿಯ ಜನಪ್ರತಿನಿಧಿಗಳನ್ನೂ ನಾರಾಯಣ ಗೌಡ ಇದೇ ಸಂದರ್ಭದಲ್ಲಿ ತರಾಟೆಗೆ ತೆಗೆದುಕೊಂಡರು. ನಮ್ಮ ರಾಜಕಾರಣಿಗಳ ಮಾತೃಭಾಷೆ ಕನ್ನಡ. ನೀವು ಮರಾಠಿಗರ ಜೊತೆಗೆ ಒಳ ಒಪ್ಪಂದ ಮಾಡಿಕೊಳ್ಳುವುದನ್ನು ಬಿಟ್ಟು ಸ್ವಾಭಿಮಾನಿಗಳಾಗಿ ಬದುಕಿ. ಇಲ್ಲಿಂದ ಆಯ್ಕೆಯಾಗಿ ವಿಧಾನಸೌಧ ಪ್ರವೇಶಿಸುವಾಗ, ನಮ್ಮ ಬೆಳಗಾವಿ ಕನ್ನಡಿಗರಿಗೆ ಮೋಸ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿ. ಇವತ್ತು ಬೆಂಗಳೂರು ತಣ್ಣಗೆ ಇರಲು ಕನ್ನಡಿಗರ ತಾಕತ್ತು ಕಾರಣ ಎಂದರು.
ನಕಲಿ ಪೋಕ್ಸೊ ಕೇಸ್ ಹಿಂದಕ್ಕೆ ಪಡೆದಿದ್ದಾರೆ
ಪೋಕ್ಸೊ ಪ್ರಕರಣ ಹಿಂಪಡೆದಿದ್ದಾರೆ. ಅದು ನಕಲಿ ಅಂತಾ ಈಗ ಪೊಲೀಸರಿಗೆ ಗೊತ್ತಾಗಿರಬೇಕು. ಪೊಲೀಸರು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯಬಾರದು. ಈ ನೆಲದ ಸರ್ಕಾರದ ಆದೇಶ ಪಾಲಿಸಬೇಕು ಎಂದು ನಾರಾಯಣ ಗೌಡ ಆಗ್ರಹಿಸಿದರು.
ನಂತರ, ಕೆಎಸ್‌ಆರ್‌ಟಿಸಿ ಕಂಡಕ್ಟರ್ ಮೇಲೆ ಹಲ್ಲೆ ನಡೆದಿದ್ದ ಬಾಳೇಕುಂದ್ರಿಗೆ ಜಾಥಾ ನಡೆಸುವುದಾಗಿ ನಾರಾಯಣ ಗೌಡರು ಪಟ್ಟು ಹಿಡಿದರು. ಆಗ ಸ್ಥಳಕ್ಕೆ ದೌಡಾಯಿಸಿದ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ನಾರಾಯಣ ಗೌಡರ ಮನವೊಲಿಸಿ ಬಾಳೆಕುಂದ್ರಿ ಚಲೋ ಕೈಬಿಡುವಂತೆ ಮಾಡಿದರು.
ಬೆಳಗಾವಿಯಲ್ಲಿ ನಾನು ಇರೋವರೆಗೂ ಗೂಂಡಾಗಿರಿಗೆ ಅವಕಾಶ ನೀಡುವುದಿಲ್ಲ. ಕಿಡಿಗೇಡಿಗಳನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಈಗ ಈ ಪ್ರತಿಭಟನೆ ಮುಗಿಸೋಣ ಎಂದು ಯಡಾ ಮಾರ್ಟಿನ್ ಮನವಿ ಮಾಡಿಕೊಂಡರು.
ಅದಕ್ಕೆ ಸ್ಪಂಧಿಸಿದ ನಾರಾಯಣ ಗೌಡ, ಕಂಡಕ್ಟರ್ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಗೂಂಡಾ ಕಾಯ್ದೆ ಹಾಕಬೇಕು. ಲೈಂಗಿಕ ದೌರ್ಜನ್ಯ ಪ್ರಕರಣ ವಾಪಸ್ ಪಡೆದಿದ್ದರಿಂದ ಅದನ್ನು ರದ್ದುಪಡಿಸಬೇಕು. ಮತ್ತೆ ಇಂತಹ ಪ್ರಕರಣಗಳು ಮರುಕಳಿಸಬಾರದು. ಬಾಳೇಕುಂದ್ರಿಗೆ ಹೋಗಬೇಕು ಎಂದು ನಿರ್ಧರಿಸಿದ್ದೆವು. ಆದರೆ, ಪೊಲೀಸ್ ಕಮಿಷನರ್ ಹೋಗುವುದು ಬೇಡ ಎಂದು ಮನವಿ ಮಾಡಿಕೊಂಡಿದ್ದಾರೆ. ಪೋಕ್ಸೊ ಪ್ರಕರಣ ರದ್ದು ಮಾಡುವುದಾಗಿ ತಿಳಿಸಿದ್ದಾರೆ. ಹೀಗಾಗಿ ಬಾಳೆಕುಂದ್ರಿ ಚಲೋ ಮಾಡುವುದನ್ನು ಬಿಟ್ಟದ್ದೇವೆ ಎಂದು ಪ್ರತಿಭಟನಾಕಾರರಿಗೆ ತಿಳಿಸಿದರು.