ರಾಜ್ಯದಲ್ಲಿ ಮಳೆಹಾನಿಗೆ 2 ತಿಂಗಳಲ್ಲಿ 44 ಸಾವು, ಅಪಾರ ಬೆಳೆ ಹಾನಿ
ಜುಲೈನಲ್ಲಿ ರಾಜ್ಯದಲ್ಲಿ ಸರಾಸರಿ 371ಮಿಮೀ ಮಳೆಯಾಗಿದ್ದು, ವಾಡಿಕೆಗಿಂತ 255ಮಿಮೀ ಹೆಚ್ಚು ಮಳೆಯಾಗಿದೆ. ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ವಾಡಿಕೆಗಿಂತ 55% ಅಧಿಕ ಮಳೆ ದಾಖಲಾಗಿದೆ.
ರಾಜ್ಯದಲ್ಲಿ ಜೂನ್‌ನಲ್ಲಿ ಮುಂಗಾರು ಪ್ರವೇಶ ಮಾಡಿದಂದಿನಿಂದ ಈವರೆಗೆ ಮಳೆಯ ಆರ್ಭಟಕ್ಕೆ ಇದುವರೆಗೆ ಮುಖ್ಯವಾಗಿ ಪ್ರವಾಹದಲ್ಲಿ 44 ಜನರು ಸಾವನ್ನಪ್ಪಿದ್ದು, 2,632 ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಜೂನ್ ಅಂತ್ಯದ ವೇಳೆಗೆ ಮುಂಗಾರು ಮಳೆ ತೀವ್ರಗೊಂಡಿದ್ದು, ರಾಜ್ಯದ ಅನೇಕ ಭಾಗಗಳಲ್ಲಿ, ವಿಶೇಷವಾಗಿ ಕರಾವಳಿ, ಮಲೆನಾಡು ಮತ್ತು ಮುಂಬೈ-ಕರ್ನಾಟಕ ಪ್ರದೇಶಗಳಲ್ಲಿ ಸಾಮಾನ್ಯ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ.
ಜುಲೈನಲ್ಲಿ ರಾಜ್ಯದಲ್ಲಿ ಸರಾಸರಿ 371 ಮಿಮೀ ಮಳೆಯಾಗಿದ್ದು, ವಾಡಿಕೆಗಿಂತ 255ಮಿಮೀ ಹೆಚ್ಚು ಮಳೆಯಾಗಿದೆ. ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ವಾಡಿಕೆಗಿಂತ 55% ಅಧಿಕ ಮಳೆ ದಾಖಲಾಗಿದೆ.
ಉತ್ತರಕನ್ನಡದಲ್ಲಿ ಅತಿ ಹೆಚ್ಚು ಮನೆ ಹಾನಿ
ಭಾರೀ ಮಳೆಯಿಂದಾಗಿ ಕಳೆದ ಎರಡು ತಿಂಗಳಿನಲ್ಲಿ ಒಟ್ಟು 44 ಸಾವು ಸಂಭವಿಸಿದೆ. ಭೂಕುಸಿತ ಮತ್ತು ಮನೆ-ಕುಸಿತ ಘಟನೆಗಳು 50% ನಷ್ಟು ಸಾವುಗಳಿಗೆ ಕಾರಣವಾಗಿದೆ. ಈ ಘಟನೆಗಳಲ್ಲಿ ಉತ್ತರಕನ್ನಡ ಜಿಲ್ಲೆಯ ಶಿರೂರಿನಲ್ಲಿ ನಡೆದ ಭೂಕುಸಿತ ಪ್ರಕರಣ ಕೂಡ ಒಂದಾಗಿದೆ. ಈ ಭೂಕುಸಿತದಿಂದಾಗಿ ಒಟ್ಟು ಎಂಟು ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇನ್ನೂ ಮೂವರು ನಾಪತ್ತೆಯಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.
ಹವಾಮಾನ ವೈಪರೀತ್ಯದಿಂದಾಗಿ ಅಪಾರ ಪ್ರಮಾಣದ ಆಸ್ತಿ ಹಾನಿಯಾಗಿದೆ. ಸುಮಾರು 600 ಮನೆಗಳು ಸಂಪೂರ್ಣ ನಾಶವಾಗಿದ್ದು, 4,200 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಉತ್ತರಕನ್ನಡದಲ್ಲಿ ಅತಿ ಹೆಚ್ಚು; 543 ಮನೆಗಳಿಗೆ ಹಾನಿಯಾಗಿದ್ದು, ಉಡುಪಿ, ಹಾಸನ ಮತ್ತು ಬೆಳಗಾವಿ ಜಿಲ್ಲೆಗಳಿಗೂ ಅಪಾರ ನಷ್ಟವಾಗಿದೆ ಎಂದು ಕಂದಾಯ ಇಲಾಖೆ ಹೇಳಿದೆ.
ಬೆಳಗಾವಿ, ಬಾಗಲಕೋಟೆ, ಕಲಬುರಗಿ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದ ಕೃಷಿ ಭೂಮಿ ಜಲಾವೃತಗೊಂಡಿರುವುದರಿಂದ ಹಾನಿಯ ಪ್ರಮಾಣ ಹೆಚ್ಚಾಗುವ ನಿರೀಕ್ಷೆಯಿದೆ. ಈ ಪ್ರದೇಶಗಳು ಕೃಷ್ಣಾ, ಘಟಪ್ರಭಾ ಮತ್ತು ಭೀಮಾ ನದಿಗಳ ದಡದಲ್ಲಿರುವುದರಿಂದ ನರೆಯಿಂದಾಗಿ ಸಾಕಷ್ಟು ಕೃಷಿ ಭೂಮಿಗಳಿಗೆ ನಷ್ಟ ಉಂಟಾಗಿದೆ.