
ಪಿಎಸ್ಐ ಹಗರಣ: ಎಡಿಜಿಪಿ ಅಮೃತ್ ಪೌಲ್ ಅವರ 1.53 ಕೋಟಿ ಆಸ್ತಿ ಜಪ್ತಿ ಮಾಡಿದ ಇಡಿ
545 ಪಿಎಸ್ಐ ಹುದ್ದೆಗಳ ಭರ್ತಿಗಾಗಿ ನಡೆದ ಪರೀಕ್ಷೆಯಲ್ಲಿ ವ್ಯಾಪಕ ಅಕ್ರಮ ನಡೆದಿತ್ತು. ಅಂದಿನ ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದ ಅಮೃತ್ ಪೌಲ್ ಅವರು ಈ ಸಂಚಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ರಾಜ್ಯವನ್ನೇ ತಲ್ಲಣಗೊಳಿಸಿದ್ದ ಪಿಎಸ್ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇಡಿ) ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಂದಿನ ಎಡಿಜಿಪಿ ಅಮೃತ್ ಪೌಲ್ ಮತ್ತು ಹೆಡ್ ಕಾನ್ಸ್ಟೇಬಲ್ ಎಚ್. ಶ್ರೀಧರ್‌ಗೆ ಸೇರಿದ 1.53 ಕೋಟಿ ರೂಪಾಯಿ ಮೌಲ್ಯದ ಸ್ಥಿರ ಆಸ್ತಿಗಳನ್ನು ಜಪ್ತಿ ಮಾಡಿದೆ.
ಹಣ ವರ್ಗಾವಣೆ ತಡೆ ಕಾಯ್ದೆ 2002 ರ ಅಡಿಯಲ್ಲಿ ಈ ಕ್ರಮ ಕೈಗೊಂಡಿದೆ. 2021-22ರಲ್ಲಿ ಕರ್ನಾಟಕ ಪೊಲೀಸ್ ಇಲಾಖೆಯ 545 ಪಿಎಸ್ಐ ಹುದ್ದೆಗಳ ಭರ್ತಿಗಾಗಿ ನಡೆದ ಪರೀಕ್ಷೆಯಲ್ಲಿ ವ್ಯಾಪಕ ಅಕ್ರಮ ನಡೆದಿತ್ತು. ಅಂದಿನ ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದ ಅಮೃತ್ ಪೌಲ್ ಅವರು ಈ ಸಂಚಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಒಎಂಆರ್ ಉತ್ತರ ಪತ್ರಿಕೆಗಳನ್ನು ಇರಿಸಲಾಗಿದ್ದ ಸ್ಟ್ರಾಂಗ್ ರೂಮ್‌ಗೆ ಅಕ್ರಮವಾಗಿ ಪ್ರವೇಶಿಸಲು ಅವರು ದಾರಿ ಮಾಡಿಕೊಟ್ಟಿದ್ದರು.
ಅಮೃತ್ ಪೌಲ್ ಅವರು ಸ್ಟ್ರಾಂಗ್ ರೂಮ್‌ನ ಕೀಗಳನ್ನು ಹೊಂದಿದ್ದ ಅಲ್ಮೇರಾದ ಕೀಯನ್ನು ಡಿವೈಎಸ್‌ಪಿ ಶಾಂತ ಕುಮಾರ್ ಎಂಬುವವರಿಗೆ ನೀಡಿದ್ದರು. ಇದನ್ನು ಬಳಸಿಕೊಂಡು ಎಚ್.ಶ್ರೀಧರ್ ಮತ್ತು ಇತರ ಸಹಚರರು ಅನರ್ಹ ಅಭ್ಯರ್ಥಿಗಳ ಒಎಂಆರ್ ಶೀಟ್‌ಗಳನ್ನು ತಿದ್ದಿ, ಅವರು ಆಯ್ಕೆಯಾಗುವಂತೆ ಮಾಡಿದ್ದರು. ಈ ಅಕ್ರಮಕ್ಕಾಗಿ ಪ್ರತಿ ಅಭ್ಯರ್ಥಿಯಿಂದ 30 ಲಕ್ಷದಿಂದ 70 ಲಕ್ಷ ರೂ.ವರೆಗೆ ಲಂಚ ಪಡೆಯಲಾಗಿತ್ತು. ಈ ರೀತಿ ಸಂಗ್ರಹಿಸಿದ ಅಕ್ರಮ ಹಣವನ್ನು ಕೈ ಸಾಲ ಎಂಬ ನೆಪದಲ್ಲಿ ಮರೆಮಾಚಲಾಗಿತ್ತು. ಈ ಹಣವನ್ನು ಬಳಸಿಕೊಂಡು ವಸತಿ ಆಸ್ತಿಗಳನ್ನು ನಿರ್ಮಿಸಲಾಗಿತ್ತು ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ ಎಂದು ಇಡಿ ತಿಳಿಸಿದೆ.
2021-22ರಲ್ಲಿ ನಡೆದ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಮೇಲೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ನಂತರ ಸಿಐಡಿ ತನಿಖೆ ನಡೆಸಿ ದೋಷಾರೋಪಣೆ ಪಟ್ಟಿ ಸಲ್ಲಿಸಿತ್ತು. ಇದರ ಆಧಾರದ ಮೇಲೆ ಇಡಿ ತನ್ನ ತನಿಖೆಯನ್ನು ಆರಂಭಿಸಿತ್ತು. ಈಗಾಗಲೇ ವಿಶೇಷ ನ್ಯಾಯಾಲಯವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಮುಂದಿನ ತನಿಖೆ ಪ್ರಗತಿಯಲ್ಲಿದೆ ಎಂದು ಇಡಿ ಪ್ರಕಟಣೆಯಲ್ಲಿ ತಿಳಿಸಿದೆ.

