
ಎರಡೂವರೆ ವರ್ಷಗಳಲ್ಲಿ ರಾಜ್ಯಾದ್ಯಂತ ಪೊಲೀಸರಿಂದ 61,299 ಸ್ವಯಂ ಪ್ರೇರಿತ ದೂರು ದಾಖಲು
ಸಾರ್ವಜನಿಕರು ಠಾಣೆಗೆ ಬಂದು ದೂರು ನೀಡದಿದ್ದರೂ, ಸಮಾಜದ ಸ್ವಾಸ್ಥ್ಯ ಕಾಪಾಡುವ ದೃಷ್ಟಿಯಿಂದ ಪೊಲೀಸರೇ ದೂರುದಾರರಾಗಿ ಪ್ರಕರಣ ದಾಖಲಿಸಿಕೊಳ್ಳುವ ಪ್ರಕ್ರಿಯೆಯ ಬಗ್ಗೆ ಗೃಹ ಸಚಿವ ಪರಮೇಶ್ವರ್ ವಿವರಣೆ ನೀಡಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ಬರೋಬ್ಬರಿ 61,299 ಸ್ವಯಂ ಪ್ರೇರಿತ ದೂರುಗಳನ್ನು ದಾಖಲಿಸಿಕೊಂಡಿದ್ದಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ವಿಧಾನ ಪರಿಷತ್‌ಗೆ ಮಾಹಿತಿ ನೀಡಿದರು.
ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಸದಸ್ಯ ಸಿ.ಟಿ. ರವಿ ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯ ಪೊಲೀಸ್ ಇಲಾಖೆಯ ಕಾರ್ಯವೈಖರಿಯ ಅಂಕಿಅಂಶಗಳನ್ನು ಸದನದ ಮುಂದಿಟ್ಟರು. ದಾಖಲಾದ ಒಟ್ಟು ಸ್ವಯಂ ಪ್ರೇರಿತ ಪ್ರಕರಣಗಳ ಪೈಕಿ 57,646 ಪ್ರಕರಣಗಳಿಗೆ ಸಂಬಂಧಿಸಿದಂತೆ ಈಗಾಗಲೇ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಅಲ್ಲದೆ, ದಾಖಲಾದ ಯಾವುದೇ ದೂರುಗಳನ್ನು ಸರ್ಕಾರ ಹಿಂಪಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಯಾವ ಸಂದರ್ಭದಲ್ಲಿ ಸ್ವಯಂ ಪ್ರೇರಿತ ದೂರು?
ಸಾರ್ವಜನಿಕರು ಠಾಣೆಗೆ ಬಂದು ದೂರು ನೀಡದಿದ್ದರೂ, ಸಮಾಜದ ಸ್ವಾಸ್ಥ್ಯ ಕಾಪಾಡುವ ದೃಷ್ಟಿಯಿಂದ ಪೊಲೀಸರೇ ದೂರುದಾರರಾಗಿ ಪ್ರಕರಣ ದಾಖಲಿಸಿಕೊಳ್ಳುವ ಪ್ರಕ್ರಿಯೆಯ ಬಗ್ಗೆ ಸಚಿವರು ವಿವರಣೆ ನೀಡಿದರು. ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟಾದಾಗ, ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿಯಾದಾಗ, ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾದಾಗ ಹಾಗೂ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಸಂದರ್ಭಗಳಲ್ಲಿ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸುತ್ತಾರೆ ಎಂದು ತಿಳಿಸಿದರು.
ಮುಂದುವರಿದು ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ದ್ವೇಷ ಭಾಷಣ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಸೂಕ್ಷ್ಮ ಪ್ರಕರಣಗಳಲ್ಲಿ ಸಾರ್ವಜನಿಕರು ದೂರು ನೀಡಲು ಹಿಂಜರಿಯುತ್ತಾರೆ. ಅಂತಹ ಸಂದರ್ಭಗಳಲ್ಲಿ ಹಾಗೂ ವಾರಸುದಾರರಿಲ್ಲದ ಪ್ರಕರಣಗಳಲ್ಲಿ ಸಾರ್ವಜನಿಕರ ಪ್ರಾಣ ಮತ್ತು ಮಾನ ರಕ್ಷಣೆಗಾಗಿ ಪೊಲೀಸರೇ ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸ್ಥಳೀಯ ಮತ್ತು ವಿಶೇಷ ಕಾಯ್ದೆಗಳ ಅಡಿಯಲ್ಲಿಯೂ ಕಾನೂನುಬಾಹಿರ ಕೃತ್ಯಗಳ ವಿರುದ್ಧ ಸಂಜ್ಞೆಯ ಅಪರಾಧ ಎಂದು ಪರಿಗಣಿಸಿ ಕ್ರಮ ಜರುಗಿಸಲಾಗುತ್ತಿದೆ ಎಂದು ವಿವರಿಸಿದರು.
ದೇಶವಿರೋಧಿ ಘೋಷಣೆ: 12 ಮಂದಿ ಅಂದರ್
ಇದೇ ವೇಳೆ, ರಾಜ್ಯದಲ್ಲಿ ದೇಶವಿರೋಧಿ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ನೀಡಿದ ಗೃಹ ಸಚಿವರು, ಕಳೆದ ಮೂರು ವರ್ಷಗಳಲ್ಲಿ 'ಪಾಕಿಸ್ತಾನ್ ಜಿಂದಾಬಾದ್' ಎಂದು ಘೋಷಣೆ ಕೂಗಿದ ಘಟನೆಗಳಿಗೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಒಟ್ಟು 12 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿ, ಅವರನ್ನು ಬಂಧಿಸಲಾಗಿದೆ ಎಂದು ಸದನಕ್ಕೆ ತಿಳಿಸಿದರು.

