ರಾಜ್ಯದಲ್ಲಿ 1600 ಪಿಎಸ್‌ಐ ನೇಮಕಕ್ಕೆ ಪ್ರಸ್ತಾವನೆ: ಸದನದಲ್ಲಿ ಗೃಹ ಸಚಿವ ಪರಮೇಶ್ವರ್ ಘೋಷಣೆ
x

ರಾಜ್ಯದಲ್ಲಿ 1600 ಪಿಎಸ್‌ಐ ನೇಮಕಕ್ಕೆ ಪ್ರಸ್ತಾವನೆ: ಸದನದಲ್ಲಿ ಗೃಹ ಸಚಿವ ಪರಮೇಶ್ವರ್ ಘೋಷಣೆ

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ವೇಳೆ ಮಂಗಳವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಅವರು ಈ ಮಹತ್ವದ ಮಾಹಿತಿ ನೀಡಿದರು.


Click the Play button to hear this message in audio format

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 1600 ಪೊಲೀಸ್ ಸಬ್‌-ಇನ್‌ಸ್ಪೆಕ್ಟರ್ (ಪಿಎಸ್‌ಐ) ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ವೇಳೆ ಮಂಗಳವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಅವರು ಈ ಮಹತ್ವದ ಮಾಹಿತಿ ನೀಡಿದರು.

ಶಿವಮೊಗ್ಗಕ್ಕೆ ಶೀಘ್ರದಲ್ಲೇ ಹೊಸ ಪಿಎಸ್‌ಐಗಳು

ಶಿವಮೊಗ್ಗ ಶಾಸಕ ಎಸ್.ಎನ್. ಚನ್ನಬಸಪ್ಪ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದ 545 ಪಿಎಸ್‌ಐ ನೇಮಕಾತಿ ಅಕ್ರಮದಿಂದಾಗಿ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಆದರೆ, ನಮ್ಮ ಸರ್ಕಾರವು ಇದೀಗ 947 ಪಿಎಸ್‌ಐ ಹುದ್ದೆಗಳನ್ನು ಯಶಸ್ವಿಯಾಗಿ ಭರ್ತಿ ಮಾಡಿದ್ದು, ಆಯ್ಕೆಯಾದ ಅಭ್ಯರ್ಥಿಗಳು ತರಬೇತಿಯಲ್ಲಿದ್ದಾರೆ. ಈ ತರಬೇತಿ ಪೂರ್ಣಗೊಂಡ ನಂತರ ಶಿವಮೊಗ್ಗ ಜಿಲ್ಲೆಯಲ್ಲಿ ಖಾಲಿ ಇರುವ 42 ಪಿಎಸ್‌ಐ ಹುದ್ದೆಗಳ ಪೈಕಿ 32 ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲೆಯಲ್ಲಿ ಒಟ್ಟು 1549 ಮಂಜೂರಾದ ಹುದ್ದೆಗಳಿದ್ದು, 1394 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಾಕಿ ಇರುವ 155 ಹುದ್ದೆಗಳಿಂದ ದೈನಂದಿನ ಕರ್ತವ್ಯಕ್ಕೆ ಅಡ್ಡಿಯಾಗದಂತೆ 103 ಗೃಹ ರಕ್ಷಕ ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ನೇಮಿಸಲಾಗಿದೆ ಎಂದು ಸಚಿವರು ವಿವರಿಸಿದರು.

ಶಿವಮೊಗ್ಗಕ್ಕೆ ಪೊಲೀಸ್ ಕಮಿಷನರೇಟ್?

ಶಿವಮೊಗ್ಗ ನಗರದ ವ್ಯಾಪ್ತಿಯಲ್ಲಿ ಪೊಲೀಸ್ ಕಮಿಷನರೇಟ್ ಸ್ಥಾಪಿಸುವ ಕುರಿತು ಕೇಳಲಾದ ಪ್ರಶ್ನೆಗೆ, "ಮುಂಬರುವ ದಿನಗಳಲ್ಲಿ ನಿಗದಿತ ಮಾನದಂಡಗಳನ್ನು ಪರಿಶೀಲಿಸಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು," ಎಂದು ಪರಮೇಶ್ವರ್ ತಿಳಿಸಿದರು. ಅಲ್ಲದೆ, ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಈಗಾಗಲೇ ವಿಶೇಷ ಕಾರ್ಯಾಚರಣೆ ಪಡೆಯನ್ನು (Special Action Force) ನಿಯೋಜಿಸಲಾಗಿದೆ ಎಂದು ಹೇಳಿದರು.

ಸಿಗಂಧೂರು ಪೊಲೀಸ್ ಠಾಣೆ ಮೇಲ್ದರ್ಜೆಗೆ

ಇದೇ ವೇಳೆ, ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಪ್ರಸಿದ್ಧ ಯಾತ್ರಾ ಸ್ಥಳವಾದ ಸಿಗಂಧೂರಿನಲ್ಲಿರುವ ಉಪ ಪೊಲೀಸ್ ಠಾಣೆಯನ್ನು ಪೂರ್ಣ ಪ್ರಮಾಣದ ಪೊಲೀಸ್ ಠಾಣೆಯನ್ನಾಗಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Read More
Next Story