Karnataka overtakes Maharashtra to take first place in foreign direct investment
x

ಸಚಿವ ಎಂ.ಬಿ. ಪಾಟೀಲ್‌

ವಿದೇಶಿ ಬಂಡವಾಳ ನೇರ ಹೂಡಿಕೆ, ಮಹಾರಾಷ್ಟ್ರವನ್ನು ಹಿಂದಿಕ್ಕಿದ ಕರ್ನಾಟಕಕ್ಕೆ ಪ್ರಥಮ ಸ್ಥಾನ

ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ವಿಧಿಸಿರುವ ಸುಂಕವು ನಮ್ಮ ಎಲೆಕ್ಟ್ರಾನಿಕ್ ತಯಾರಿಕೆ, ಔಷಧ ಹಾಗೂ ಸೇವಾ ವಲಯಗಳಿಗೆ ಅನ್ವಯವಾಗದಿರುವುದು ಸಮಧಾನದ ಸಂಗತಿ ಎಂದು ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದರು.


Click the Play button to hear this message in audio format

ರಾಜ್ಯವು ಕಳೆದ ತ್ರೈಮಾಸಿಕದಲ್ಲಿ ವಿದೇಶಿ ಹೂಡಿಕೆ ಸೆಳೆಯುವಲ್ಲಿ ಮಹಾರಾಷ್ಟ್ರವನ್ನು ಹಿಂದಿಕ್ಕಿ ಮೊದಲ ಸ್ಥಾನದಲ್ಲಿದೆ. ಕರ್ನಾಟಕವು ಹೂಡಿಕೆಗೆ ಪ್ರಶಸ್ತ ಸ್ಥಳವಾಗಿ ಮುಂದುವರಿಯಬೇಕೆಂಬುದೇ ನಮ್ಮ ಆಶಯ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದರು.

ಶುಕ್ರವಾರ ಸದಾಶಿವನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ವಿಧಿಸಿರುವ ಸುಂಕವು ನಮ್ಮ ಎಲೆಕ್ಟ್ರಾನಿಕ್ ತಯಾರಿಕೆ, ಔಷಧ ಹಾಗೂ ಸೇವಾ ವಲಯಗಳಿಗೆ ಅನ್ವಯವಾಗದಿರುವುದು ಸಮಧಾನದ ಸಂಗತಿಯಾಗಿದೆ ಎಂದು ಮಾಹಿತಿ ನೀಡಿದರು.

ಜಿಎಸ್‌ಟಿ ಕಡಿತಕ್ಕೆ ಸ್ವಾಗತ

ಜಿಎಸ್‌ಟಿ ಅನುಷ್ಠಾನ ವಿಧಾನದಲ್ಲಿ ದೋಷವಿದೆ ಎಂದು ಕಾಂಗ್ರೆಸ್‌ ವರಿಷ್ಠ ರಾಹುಲ್ ಗಾಂಧಿ ಅವರು ಕಳೆದ ಒಂಬತ್ತು ವರ್ಷಗಳಿಂದ ಹೇಳುತ್ತಿದ್ದರು. ಆದರೆ, ಪ್ರಧಾನಮಂತ್ರಿ ಮೋದಿ ಅವರು ಗಮನಹರಿಸದೆ ಈಗ ಅದನ್ನು ಸರಿಪಡಿಸಿದ್ದಾರೆ. ಇದರಿಂದ ಇಷ್ಟು ವರ್ಷಗಳ ಕಾಲ ದೇಶದ ಜನರು ಸಮಸ್ಯೆ ಅನುಭವಿಸಬೇಕಾಯಿತು. ಜಿಎಸ್‌ಟಿಗೆ ಸಂಬಂಧಿಸಿದಂತೆ ಈಗ ಜಾರಿಗೊಳಿಸಿರುವ ಎರಡು ಹಂತಗಳ ನೀತಿ ಸ್ವಾಗತಾರ್ಹ. ಆದರೆ, ಇಷ್ಟು ವರ್ಷಗಳ ಕಾಲ ಜನರು ಸಮಸ್ಯೆಯಲ್ಲಿ ಸಿಲುಕಲು ಪ್ರಧಾನಿ ಮೋದಿ ಅವರ ಧೋರಣೆಯೇ ಕಾರಣ ಎಂದರು.

ಟ್ರಂಪ್‌ ತೆರಿಗೆ ಪ್ರಹಾರಕ್ಕೆ ಮೋದಿ ಓಲೈಕೆ ಕಾರಣ

ಮೋದಿ ಅವರು ಟ್ರಂಪ್ ಅವರನ್ನು ಹೆಚ್ಚಾಗಿಯೇ ಓಲೈಸುತ್ತಿದ್ದರು. ಆದರೂ, ಟ್ರಂಪ್ ಅವರು ಭಾರತದ ಮೇಲೆ ತೆರಿಗೆ ಪ್ರಹಾರ ಮಾಡಿದ್ದಾರೆ. ಈಗ ನಮ್ಮ ಪ್ರಧಾನಿಯವರು ಶೇ. 50ರಷ್ಟು ಸುಂಕವನ್ನು ಶೇ.25 ಕ್ಕೆ ಇಳಿಸಲು ಅಮೆರಿಕದ ಮೇಲೆ ಒತ್ತಡ ಹೇರಬೇಕು. ಭಾರತದ ಮೇಲಿನ ಟ್ರಂಪ್ ಅವರ ಈ ತೆರಿಗೆ ಪ್ರಹಾರಕ್ಕೆ ಮೋದಿ ಅವರ ಓಲೈಕೆ ನೀತಿಯೂ ಕಾರಣವಾಯಿತು ಎಂದು ತಿಳಿಸಿದರು.

ಭಾರತವು ಕೆಲವು ವರ್ಷಗಳಿಂದೀಚೆಗೆ ರಷ್ಯಾದಿಂದ ಕಡಿಮೆ ಬೆಲೆಗೆ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿದೆ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಕಚ್ಚಾ ತೈಲದ ಬೆಲೆ ಬ್ಯಾರೆಲ್ ಗೆ 140 ಡಾಲರ್ ಇದ್ದಾಗ ಇಲ್ಲಿ ಪೆಟ್ರೋಲ್ ಲೀಟರ್‌ಗೆ 65 ರೂ. ಡೀಸೆಲ್ 55 ರೂ. ಅಡುಗೆ ಅನಿಲದ ಬೆಲೆ ಸಿಲಿಂಡರ್‌ಗೆ 500 ರೂ. ಆಸುಪಾಸಿನಲ್ಲಿತ್ತು. ಆದರೆ, ಈಗ ಬ್ಯಾರೆಲ್ ಕಚ್ಚಾತೈಲದ ಬೆಲೆ 70 ಡಾಲರ್ ಆಸುಪಾಸಿನಲ್ಲಿದ್ದರೂ ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಬೆಲೆಗಳು ದುಬಾರಿಯಾಗಿವೆ ಎಂದು ವಿವರಿಸಿದರು.

ಕಚ್ಚಾತೈಲದ ಲಾಭ ಜನಸಾಮಾನ್ಯರಿಗೆ ವರ್ಗಾಯಿಸಲಿ

ಕಚ್ಚಾತೈಲದ ಬೆಲೆ ಇಳಿಕೆಯಿಂದ ಉಂಟಾದ ಲಾಭವನ್ನು ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಜನರಿಗೆ ವರ್ಗಾಯಿಸಿಯೇ ಇಲ್ಲ. ಇದರ ಒಟ್ಟಾರೆ ಮೌಲ್ಯ ಹತ್ತಾರು ಲಕ್ಷ ಕೋಟಿ ರೂಪಾಯಿಗಳಾಗುತ್ತದೆ. ನಿಜವಾದ ಜನಪರ ಕಾಳಜಿ ಇದ್ದಿದ್ದರೆ ಪ್ರಧಾನಿಯವರು ಈ ಲಾಭವನ್ನು ಜನರಿಗೆ ವರ್ಗಾಯಿಸಬೇಕಿತ್ತು ಎಂದರು.

20 ಹಳ್ಳಿಗಳ ಪುನರ್ವಸತಿ

ಕಷ್ಣಾ ಮೇಲ್ದಂಡೆ ಯೋಜನೆಯ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಸಿಎಂ ಹಾಗೂ ಡಿಸಿಎಂ ಅವರ ಉಪಸ್ಥಿತಿಯಲ್ಲಿ ಈಗಾಗಲೇ ಎರಡು ಸಲ ಸಭೆ ನಡೆಸಲಾಗಿದೆ. ಒಟ್ಟಾರೆ ಯೋಜನೆಗಾಗಿ 90,000 ಕೋಟಿ ರೂ. ಬೇಕಾಗುತ್ತದೆ. ಈ ಯೋಜನೆಗಾಗಿ 20 ಹಳ್ಳಿಗಳಿಗೆ ಪುನರ್ವಸತಿ ಕಲ್ಪಿಸಬೇಕಿದ್ದು, ಇದರ ದುರ್ಲಾಭ ಪಡೆಯಲು ಖಾಸಗಿ ರಿಯಲ್ ಎಸ್ಟೇಟ್ ಡೆವಲಪರ್ ಗಳು ಕಣ್ಣು ಹಾಕಿದ್ದಾರೆ. ಆದರೆ, ಯಾವ ಕಾರಣಕ್ಕೂ ರೈತರನ್ನು ಶೋಷಿಸಲು ಸರ್ಕಾರ ಅವಕಾಶ ನೀಡುವುದಿಲ್ಲ. ರೈತರು ಸೇರಿದಂತೆ ಎಲ್ಲಾ ಭಾಗೀದಾರರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ರೀತಿಯಲ್ಲಿ ಕಾಮಗಾರಿ ಕೈಗೊಳ್ಳಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಹಾಗೂ ಅವರ ಕುಟುಂಬದವರ ಪಾತ್ರವಿಲ್ಲ ಎಂದು ಏಕಸದಸ್ಯ ಆಯೋಗ ವರದಿ ನೀಡಿದೆ. ಸುಪ್ರೀಂಕೋರ್ಟು ಕೂಡ ಇದೇ ರೀತಿ ತೀರ್ಪು ನೀಡಿದೆ. ಪುನಃ ಇದರ ಬಗ್ಗೆ ಅನುಮಾನಪಟ್ಟರೆ ವ್ಯವಸ್ಥೆಯನ್ನು ಅಗೌರವಿಸಿದಂತಾಗುತ್ತದೆ ಎಂದರು.

ಬ್ಯಾಲೆಟ್‌ ಪೇಪರ್‌ ಬಳಕೆ, ರಾಜ್ಯಕ್ಕೆ ಅಧಿಕಾರ

ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಹೇಗೆ ನಡೆಸಬೇಕೆಂಬ ಬಗ್ಗೆ ನಿರ್ಧರಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ. ಹೀಗಾಗಿ, ಇವಿಎಂ ದುರ್ಬಳಕೆ ತಪ್ಪಿಸುವ ಉದ್ದೇಶದಿಂದ ನಾವು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಬ್ಯಾಲೆಟ್ ಮತಚಲಾವಣೆ ಮರುಜಾರಿಗೊಳಿಸಿದ್ದೇವೆ. ಆದರೆ, ರಾಜ್ಯ ಹಾಗೂ ರಾಷ್ಟ್ರ ಚುನಾವಣೆಗಳಲ್ಲಿ ಇವುಗಳ ಬಳಕೆ ಬಗ್ಗೆ ನಿರ್ಧರಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ. ಅದು ಚುನಾವಣಾ ಆಯೋಗದ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿದರು.

Read More
Next Story