ʻಮೇಲ್ಮನೆʼ ಅಧಿಪತ್ಯ ಸ್ಥಾಪಿಸಲು ಕಾಂಗ್ರೆಸ್‌ ಸರ್ವ ಪ್ರಯತ್ನ
x

ʻಮೇಲ್ಮನೆʼ ಅಧಿಪತ್ಯ ಸ್ಥಾಪಿಸಲು ಕಾಂಗ್ರೆಸ್‌ ಸರ್ವ ಪ್ರಯತ್ನ

ವಿಧಾನ ಸಭೆಯಲ್ಲಿ ಒಟ್ಟು 137 ಸದಸ್ಯ ಬಲವಿರುವ (ಮೂರು ಮಂದಿ ಸ್ವತಂತ್ರ ಸದಸ್ಯರೂ ಸೇರಿದಂತೆ) ಕಾಂಗ್ರೆಸ್‌ ಜೂನ್‌ 13 ರಂದು ನಡೆಯಲಿರುವ ಚುನಾವಣೆಯಲ್ಲಿ 7 ಸ್ಥಾನಗಳನ್ನು ನಿರಾಯಾಸವಾಗಿ ಗೆದ್ದುಕೊಳ್ಳಲಿದೆ. ಹೀಗಾಗಿ ಮೊನ್ನೆಮೊನ್ನೆಯಷ್ಟೇ ಲೋಕಸಭಾ ಚುನಾವಣೆಯ ಜ್ವರದಿಂದ ಚೇತರಿಸಿಕೊಳ್ಳುತ್ತಿರುವ ಕಾಂಗ್ರೆಸ್‌ ಮತ್ತೆ ಚುನಾವಣಾ ಕಣದಲ್ಲಿ ಸೆಣೆಸಬೇಕಾಗಿ ಬಂದಿದೆ.


ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳಲು ಇನ್ನು ಕೇವಲ ಒಂದು ವಾರ ಮಾತ್ರ ಉಳಿದಿದೆ. ಜೂನ್‌ 4 ರಂದು ಫಲಿತಾಂಶ ಹೊರಬೀಳಲಿದೆ. ನಂತರ ರಾಜ್ಯದ ರಾಜಕೀಯ ಚಿತ್ರಣ ಬದಲಾಗುವ ಎಲ್ಲ ಸಾಧ್ಯತೆಗಳೂ ಕಾಣಿಸುತ್ತಿವೆ. ಆದರೆ ಲೋಕಸಭಾ ಚುನಾವಣೆ ಫಲಿತಾಂಶ ಹೊರಬೀಳುವ ಒಂದು ದಿನ ಮುಂಚೆ ಅಂದರೆ ಜೂನ್‌ 3 ಕ್ಕೆ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದ್ದು ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದಿಂದ ತಲಾ ಮೂರು ಅಭ್ಯರ್ಥಿಗಳು ಆಯ್ಕೆಯಾಗಿ ಮೇಲ್ಮನೆ ಪ್ರವೇಶಿಸಲಿದ್ದಾರೆ. ಈ ಆರು ಕ್ಷೇತ್ರಗಳನ್ನು ಗೆದ್ದುಕೊಳ್ಳುವುದು ಆಡಳಿತರೂಢ ಕಾಂಗ್ರೆಸ್‌ ಗೆ ಅತ್ಯಗತ್ಯವಾಗಿದೆ. ಅನಿವಾರ್ಯವೂ ಆಗಿದೆ.

ವಿಧಾನ ಸಭೆಯಲ್ಲಿ ಒಟ್ಟು 137 ಸದಸ್ಯ ಬಲವಿರುವ (ಮೂರು ಮಂದಿ ಸ್ವತಂತ್ರ ಸದಸ್ಯರೂ ಸೇರಿದಂತೆ) ಕಾಂಗ್ರೆಸ್‌ ಜೂನ್‌ 13 ರಂದು ನಡೆಯಲಿರುವ ಚುನಾವಣೆಯಲ್ಲಿ 7 ಸ್ಥಾನಗಳನ್ನು ನಿರಾಯಾಸವಾಗಿ ಗೆದ್ದುಕೊಳ್ಳಲಿದೆ. ಹೀಗಾಗಿ ಮೊನ್ನೆಮೊನ್ನೆಯಷ್ಟೇ ಲೋಕಸಭಾ ಚುನಾವಣೆಯ ಜ್ವರದಿಂದ ಚೇತರಿಸಿಕೊಳ್ಳುತ್ತಿರುವ ಕಾಂಗ್ರೆಸ್‌ ಮತ್ತೆ ಚುನಾವಣಾ ಕಣದಲ್ಲಿ ಸೆಣೆಸಬೇಕಾಗಿ ಬಂದಿದೆ.

ಸದ್ಯದ ಪರಿಸ್ಥಿತಿಯಲ್ಲಿ ಮೇಲ್ಮನೆಯಲ್ಲಿ ತನ್ನ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದು ಕಾಂಗ್ರೆಸ್‌ ಮುಖ್ಯವಾಗಿದೆ. ಮತ್ತು ಸವಾಲಿನ ಸಂಗತಿ ಕೂಡ ಆಗಿದೆ. ಏಕೆಂದರೆ ವಿಧಾನ ಪರಿಷತ್ ನಲ್ಲಿ 32 ಸದಸ್ಯರ ಬೆಂಬಲವನ್ನು ಹೊಂದಿರುವ ಬಿಜೆಪಿ ಮೇಲ್ಮನೆಯ ಅತಿದೊಡ್ಡ ಪಕ್ಷ. ನಂತರದ ಸ್ಥಾನ, 29 ಸದಸ್ಯರ ಶಕ್ತಿ ಇರುವ ಕಾಂಗ್ರೆಸ್ ಗೆ. ಜೆಡಿಎಸ್ ಗೆ 7 ಸದಸ್ಯರ ಬೆಂಬಲವಿದೆ. ಇನ್ನು ಐದು ಸ್ಥಾನಗಳು ಖಾಲಿಯಾಗಿದ್ದು ಅವುಗಳನ್ನು ತುಂಬ ಬೇಕಿದೆ.

ಸದಸ್ಯ ಬಲವನ್ನು ಅವಲಂಬಿಸಿರುವ ಮಸೂದೆ

ಮೇಲ್ಮನೆಯಲ್ಲಿ ಸದಸ್ಯರ ಬೆಂಬಲ ಕಡಿಮೆ ಇರುವುದರಿಂದಾಗಿ ಕಳೆದ ಒಂದು ವರ್ಷದಿಂದ ಆಡಳಿತರೂಢ ಕಾಂಗ್ರೆಸ್‌ ಅನೇಕ ಬಾರಿ ಮುಖಭಂಗ ಎದುರಿಸಬೇಕಾಗಿ ಬಂದಿದೆ. ಯಾವುದೇ ಮಸೂದೆ ಮಂಡನೆಯಾಗಿ ಅಂಗೀಕೃತವಾಗಬೇಕಾದರೆ, ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರು ಒಂದಾದರೆ ಆ ಮಸೂದೆ ಸದನದ ಅಂಗೀಕಾರ ಪಡೆಯುವುದು ಕಷ್ಟವಾಗುತ್ತಿದೆ ಕಳೆದ ಫೆಬ್ರುವರಿಯಲ್ಲಿ ಹಿಂದೂ ಧಾರ್ಮಿಕ ಮತ್ತ ದೇವಳ ದತ್ತಿ (ತಿದ್ದುಪಡಿ) ಮಸೂದೆ 2024, ಮಂಡನೆಯಾದಾಗ ಸಂಖ್ಯಾಬಲದ ಕೊರತೆಯಿಂದ ಆ ಮಸೂದೆ ಮೇಲ್ಮನೆಯಲ್ಲಿ ಅಂಗೀಕಾರ ಪಡೆಯಲು ಸಾಧ್ಯವಾಗಲಿಲ್ಲ. ನಂತರ ಮುಜುಗರದಿಂದ ತಪ್ಪಿಸಿಕೊಳ್ಳಲು ಕಾಂಗ್ರೆಸ್‌ ಸರ್ಕಾರ ವಿಧಾನ ಸಭೆಯಲ್ಲಿ ತನಗಿರುವ ಸಂಖ್ಯಾ ಬಲದಿಂದ ಅಂಗೀಕಾರ ಪಡೆಯಿತು. ಯಾವುದೇ ಮಸೂದೆ ಮೇಲ್ಮನೆಯಲ್ಲಿ ಅಂಗೀಕಾರ ಪಡೆಯಲು ವಿಫಲವಾದಲ್ಲಿ, ಅದನ್ನು ವಿಧಾನ ಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆಯಬಹುದು. ಆದರೆ, ಅದು ಒಂದು ರೀತಿಯಲ್ಲಿ ಆಡಳಿತದಲ್ಲಿರುವ ಪಕ್ಷಕ್ಕೆ ಮುಖಭಂಗವಾದಂತೆಯೇ. ಆದರೆ ಮೇಲ್ಮನೆಯಲ್ಲಿ ಮಸೂದೆಯನ್ನು ಸದನ ಸಮಿತಿಗೆ ಒಪ್ಪಿಸಿದರೆಂದುಕೊಳ್ಳಿ, ಆಗ ಅದು ವರದಿ ನೀಡಿ, ಅದನ್ನು ಆಧರಿಸಿ ಮುಂದಿನ ಕ್ರಮ ಜರುಗಿಸಲು ಸಾಕಷ್ಟು ಕಾಲಾವಕಾಶ ಬೇಕಾಗುತ್ತದೆ.

ದ್ವಿಸದನ ವ್ಯವಸ್ಥೆ

ಇಷ್ಟೆಲ್ಲ ವಿವರ ನೀಡಬೇಕಾಗಿ ಬಂದಿರುವುದು, ಸದ್ಯಕ್ಕೆ ಮೇಲ್ಮನೆಗೆ ನಡೆಯಲಿರುವ ಚುನಾವಣೆಯ ಮಹತ್ವವನ್ನು ಮನವರಿಕೆ ಮಾಡಿಕೊಡಲು ಮಾತ್ರ. ಈ ದ್ವಿಸದನ ವಿಧಾನ ಮಂಡಲ ವ್ಯವಸ್ಥೆ ಇರುವುದು ಕರ್ನಾಟಕವೂ ಸೇರಿದಂತೆ ದೇಶದ ಆರು ರಾಜ್ಯಗಳಲಿ ಮಾತ್ರ. ಉಳಿದ ರಾಜ್ಯಗಳೆಂದರೆ, ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಬಿಹಾರ ಮತ್ತು ಉತ್ತರ ಪ್ರದೇಶ ರಾಜ್ಯಗಳು. ನಮ್ಮ 75 ಸದಸ್ಯರ ವಿಧಾನ ಪರಿಷತ್ತಿನಲ್ಲಿ 25 ಮಂದಿ ವಿಧಾನ ಸಭೆ ಹಾಗೂ ಸ್ಥಳೀಯ ಸಂಸ್ಥೆಗಳಿಂದ ನೇರವಾಗಿ ಆಯ್ಕೆಯಾಗುತ್ತಾರೆ. ಏಳು ಮಂದಿ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದಿಂದ ಆಯ್ಕೆಯಾಗುತ್ತಾರೆ. ಒಟ್ಟು 11 ಮಂದಿ ಸರ್ಕಾರದಿಂದ ನಾಮಾಂಕಿತರಾಗುತ್ತಾರೆ. ಮೇಲ್ಮನೆ ಎನ್ನುವುದು ಹೆಚ್ಚೂ ಕಡಿಮೆ ರಾಜ್ಯ ಸಭೆಯಂತೆಯೇ. ಅರ್ಥಪೂರ್ಣ ಮತ್ತು ರಚನಾತ್ಮಕ ಚರ್ಚೆ ಮತ್ತು ಆಡಳಿತ ಸುಧಾರಣೆಗಾಗಿ ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಆದರೆ ಮೇಲ್ಮನೆ ಎನ್ನುವುದು ಕೆಳಮನೆಯ ಕೃಪಾಪೋಷಿತ ನಾಟಕ ಮಂಡಳಿಯಂತೆ ಕಾರ್ಯನಿರ್ವಹಿಸಬೇಕಾಗಿದೆ. ಎನ್ನುತ್ತಾರೆ, ಮೇಲ್ಮನೆಯ ಮಾಜಿ ಸಭಾಧ್ಯಕ್ಷ ವಿ. ಆರ್‌. ಸುದರ್ಶನ್.‌ ಆದರೆ ರಾಜ್ಯ ಸಭೆಗೆ ಸಂವಿಧಾನದ ರಕ್ಷಣೆ ಇದೆ. ವಿಧಾನ ಪರಿಷತ್‌ ಆ ರೀತಿಯ ರಕ್ಷಣೆಯಿಂದ ವಂಚಿತವಾಗಿದೆ.

ಪಟ್ಟಿ ಹೊತ್ತು ದೆಹಲಿ ತಲುಪಿದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್

ಮೇಲ್ಮನೆಗೆ ಆಯ್ಕೆ ಮಾಡಬೇಕಾದ 7 ಮಂದಿ ಸದಸ್ಯರ ಆಯ್ಕೆ ಈಗ ಕಾಂಗ್ರೆಸ್‌ ಪಕ್ಷಕ್ಕೆ ತಲೆನೋವಾಗಿ ಪರಿಣಮಿಸಿದೆ. ವಿಧಾನ ಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಹೆಸರನ್ನು ಆಖೈರುಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಹಾಗೂ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್‌ ಅವರು ದೆಹಲಿಗೆ ತೆರಳಿದ್ದಾರೆ. ಇಂದು ಬೆಳಿಗ್ಗೆ 11 ಗಂಟೆಗೆ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿದ ಕಾಂಗ್ರೆಸ್‌ ಪಕ್ಷದ ಈ ಇಬ್ಬರು ನಾಯಕರು ವಿಮಾನದಲ್ಲಿಯೇ ತಮ್ಮ ಮೊದಲ ಸಭೆ ನಡೆಸಿದರೆಂದು ಅವರ ಸಮೀಪವರ್ತಿಗಳು ತಿಳಿಸಿದ್ದಾರೆ. ಕಾರಣ ಇಷ್ಟೇ. ಈ ಏಳು ಸ್ಥಾನಗಳಿಗೆ ನೂರಕ್ಕೂ ಹೆಚ್ಚು ಆಕಾಂಕ್ಷಿಗಳಿರುವುದರಿಂದ, ಯಾರನ್ನು ನೋಯಿಸುವುದು, ಯಾರನ್ನು ನೋಯಿಸದಿರುವುದು ಎಂಬುದು ಈ ಇಬ್ಬರು ನಾಯಕರಿಗೆ ಇಬ್ಬಂದಿತನ ತಂದಿದೆ. ಹಾಗಾಗೆ ತಲೆನೋವೇ ಬೇಡವೆಂದು ಈ ಜವಾಬ್ದಾರಿಯನ್ನು ಕೇಂದ್ರದ ನಾಯಕರ ತಲೆಗೆ ಕಟ್ಟಲು ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ್‌ ಅವರು ನಿರ್ಧರಿಸಿದಂತಿದೆ. ಆಶ್ಚರ್ಯದ ಸಂಗತಿಯೆಂದರೆ, ಇವರಿಗಿಂತ ಮುಂಚೆ ಆಕಾಂಕ್ಷಿಗಳು ದೆಹಲಿಗೆ ತೆರಳಿ, ದೆಹಲಿ ನಾಯಕರ, ಅದರಲ್ಲೂ, ಮುಖ್ಯವಾಗಿ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಸಮಯಕ್ಕಾಗಿ ಕಾಯುತ್ತಿದ್ದಾರೆ ಎನ್ನಲಾಗಿದೆ.

ಸಂಭವನೀಯರ ಪೈಕಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಸಿದ್ದರಾಮಯ್ಯ, ಸಚಿವ ಬೋಸರಾಜು, ಒಕ್ಕಲಿಗರ ಪೈಕಿ ಕೆ. ಗೋವಿಂದರಾಜು, ಅಥವಾ ವಿನಯ್‌ ಕಾರ್ತಿಕ್‌, ಅವರ ಹೆಸರು ಮಾತ್ರ ಕೇಳಿ ಬರುತ್ತಿದೆ. ಯತೀಂದ್ರ ತಂದೆ ಸಿದ್ದರಾಮಯ್ಯನವರಿಗಾಗಿ ತಮ್ಮ ಕ್ಷೇತ್ರವನ್ನು ತ್ಯಾಗಮಾಡಿದ್ದಕ್ಕಾಗಿ ನೀಡಲಿರುವ ಬಳುವಳಿ ಇದೆಂದು ಹೇಳಲಾಗುತ್ತಿದೆ. ಬೋಸರಾಜು ಕಿರು ನೀರಾವರಿ ಮಂತ್ರಿ ಸ್ಥಾನದಲ್ಲಿ ಮುಂದುವರಿಯಲು ಅವರನ್ನು ವಿಧಾನ ಪರಿಷತ್ತಿಗೆ ಕಳುಹಿಸುವುದು ಅನಿವಾರ್ಯವಾಗಿದೆ. ಎಂದು ಕಾಂಗ್ರೆಸ್‌ ಮೂಲಗಳು ಹೇಳುತ್ತವೆ.

ಮುಂಚೂಣಿಯಲ್ಲಿರುವ ಹೆಸರುಗಳು

ಕಾಂಗ್ರೆಸ್‌ ಪಕ್ಷದ ಲೆಕ್ಕಾಚಾರವೆಂದರೆ, ಇತರೆ ಹಿಂದುಳಿದ ವರ್ಗಗಳಿಗೆ 2 ಸ್ಥಾನ, ಅಲ್ಪಸಂಖ್ಯಾತರಿಗೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟವರ್ಗದವರಿಗೆ, ಬಲಿಷ್ಠ ಲಿಂಗಾಯತ ಮತು ಒಕ್ಕಲಿಗ ಕೋಮಿನವರಿಗೆ ತಲಾ ಒಂದು ಸ್ಥಾನವನ್ನು ನೀಡುವುದು ಎಂದು ಗೊತ್ತಾಗಿದೆ. ವಿಧಾನ ಪರಿಷತ್ ಪ್ರವೇಶಿಸಲು ಮುಂಚೂಣಿಯಲ್ಲಿರುವ ನಾಯಕರೆಂದರೆ, ಇತ್ತೀಚೆಗೆ ವಿಧಾನ ಪರಿಷತ್ತಿನ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ ಸೇರಿದ ಕೆ. ಪಿ. ನಂಜುಂಡಿ, ತೇಜಸ್ವಿನಿ ಗೌಡ, ಕಾಂಗ್ರೆಸ್‌ನ ಕಾರ್ಯಕಾರಿ ಅಧ್ಯಕ್ಷ ವಸಂತ್‌ ಕುಮಾರ್‌, ಮಾಜಿ ಲೋಕಸಭಾ ಸದಸ್ಯರಾದ ಬಿ.ಎಲ್.‌ ಶಂಕರ್‌ ಹಾಗೂ ವಿ.ಎಸ್.‌ ಉಗ್ರಪ್ಪ, ಮಾಜಿ ವಿಧಾನ ಪರಿಷತ್‌ ಸದಸ್ಯ ಐವಾನ್‌ ಡಿಸೋಜ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ. ಎಸ್.‌ ದ್ವಾರಕಾನಾಥ್‌, ಎಸ್.‌ ಎ. ಹುಸೇನ್‌, ಸಿರಾಜ್‌ ಶೇಕ್‌, ಆಗಾ ಸುಲ್ತಾನ್‌, ಇಸ್ಮಾಯಿಲ್‌ ತಮಟಗಾರ, ಮಾಜಿ ಸಚಿವರಾದ ಎಸ್.‌ ಆರ್.‌ ಪಾಟೀಲ್‌, ಮತ್ತು ರಾಣಿ ಸತೀಶ್.‌

ಹೈಕಮಾಂಡ್‌ ಅಚ್ಚರಿಯ ಆಯ್ಕೆ ಸಾಧ್ಯತೆ

ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ್‌ ಅವರ ಹೆಸರುಗಳನ್ನೂ ಮೀರಿ, ಹೈಕಮಾಂಡ್‌ ಅಚ್ಚರಿಯ ಹೆಸರುಗಳನ್ನು ಪ್ರಕಟಿಸುವು ಸಾಧ್ಯತೆ ಇರುವುದಾಗಿ ಮಲ್ಲಿಕಾರ್ಜುನ ಖರ್ಗೆ ಸಮೀಪವರ್ತಿಗಳು ತಿಳಿಸಿದ್ದಾರೆ. ಏಕೆಂದರೆ ಬಿಜೆಪಿ ಮತ್ತು ಜೆಡಿಎಸ್‌ ಒಂದಾಗಿ ಕಾಂಗ್ರೆಸ್‌ ಸರ್ಕಾರವನ್ನು ಉರುಳಿಸುವ ಸೂಚನೆಗಳನ್ನು ನೀಡಿರುವುದರಿಂದ ಕಾಂಗ್ರೆಸ್‌ ಹೈಕಮಾಂಡ್‌ ಎಚ್ಚರಿಕೆಯ ಹೆಜ್ಜೆಗಳನ್ನು ಇಡುತ್ತಿದೆ ಎಂದು ಹೇಳಲಾಗುತ್ತಿದೆ. ಈ ಏಳು ಸ್ಥಾನಗಳ ಪೈಕಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಮತ್ತು ಮಲ್ಲಿಕಾರ್ಜು ಖರ್ಗೆ ಅವರುಗಳು ಸೂಚಿಸುವ ಹೆಸರುಗಳಿಗೆ ಪ್ರಾಧಾನ್ಯ ದೊರೆಯಲಿದೆ ಎಂದು ಬಹು ಕಾಂಗ್ರೆಸ್ಸಿಗರ ಭಾವನೆ.

ಮತ್ತೆ ಮತ್ತೆ ಮನವಿ

ಹಿರಿಯ ಕಾಂಗ್ರೆಸ್‌ ನಾಯಕರು 7 ಸ್ಥಾನಗಳಿಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ನಿರತರಾಗಿರುವಾಗ ಕೆಲವು ಕಾಂಗ್ರೆಸ್ಸಿಗರು ಪಕ್ಷದ ಹಿರಿಯರಿಗೆ ಮನವಿಯೊಂದನ್ನು ಕಳುಹಿಸಿ, “ಅಧಿಕಾರ ಅನುಭವಿಸಿದವರಿಗೇ ಮತ್ತೆ ಮತ್ತೆ ಅವಕಾಶ ನೀಡಬೇಡಿ. ಪಕ್ಷಕ್ಕಾಗಿ ಹಗಲಿರುಳೂ ದುಡಿದವರನ್ನೂ ಗಮನದಲ್ಲಿಟ್ಟುಕೊಳ್ಳು” ದಂತೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದರಿಂದ ಪಕ್ಷದ ಕಾರ್ಯಕರ್ತರ ನೈತಿಕ ಸಾಮಾರ್ಥ್ಯ ಹೆಚ್ಚುತ್ತದೆ. ಎಂದು ಅವರು ಕಳಕಳಿಯ ಮನವಿ ಮಾಡಿದ್ದಾರೆ. ಕಾಂಗ್ರೆಸ್‌ ಪಕ್ಷದ ಮೂಲಗಳ ಪ್ರಕಾರ ವಿಜಯ್‌ ಮುಳಗುಂದ್‌, ವಿ. ಶಂಕರ್‌, ಬಿ ಆರ್.‌ ನಾಯ್ಡು, ಎಸ್.‌ ಮನೋಹರ್‌, ಅಬ್ದುಲ್‌ ವಾಜಿದ್‌, ಎ. ಕೆಂಚೇಗೌಡ, ವಿ ಆರಾಧ್ಯ, ಎಂ. ರಾಮಚಂದ್ರಪ್ಪ ಅವರು ಈ ಮನವಿಯನ್ನು ಸಲ್ಲಿಸಿದ್ದಾರೆ. “ಹಾಗೆ ನೋಡಿದರೆ ಇವರೆಲ್ಲರೂ ಆ 7 ಸ್ಥಾನಗಳಿಗೆ ನಡೆದಿರುವ ಪೈಪೋಟಿಯ ಮುಂಚೂಣಿಯಲ್ಲಿರುವವರೇ”, ಎಂದು ಕಾಂಗ್ರೆಸ್‌ ನ ಹಿರಿಯ ನಾಯಕರೊಬ್ಬರು ಹೇಳುತ್ತಾರೆ.

“ ಪ್ರತಿಬಾರಿ ವಿಧಾನ ಪರಿಷತ್ತಿಗೆ ಚುನಾವಣೆ ನಡೆದಾಗಲೆಲ್ಲ. ಈ ರೀತಿಯ ಮನವಿಗಳು ಸಲ್ಲಿಕೆಯಾಗುತ್ತವೆ. ಆದರೆ. ನಾಯಕರು ಅಧಿಕಾರ ಅನುಭವಿಸಿದವರಿಗೇ ಮತ್ತೆಮತ್ತೆ ಅವಕಾಶ ನೀಡುತ್ತಾರೆ. ಇದೊಂದು ರೀತಿಯ ಸಂಪ್ರದಾಯ. ನಾಯಕರಿಗೂ, ರಾಜಕೀಯವಾಗಿ, ಆಡಳಿತಾತ್ಮಕವಾಗಿ ಕೆಲವೊಂದು ಒತ್ತಡಗಳಿರುತ್ತವೆ”, ಎಂದು ಅವರು ಮುಗುಮ್ಮಾಗಿ ಉತ್ತರಿಸುತ್ತಾರೆ.

ಬಿಜೆಪಿ ಸ್ಥಿತಿ ಭಿನ್ನವಲ್ಲ

ಈ ರೀತಿಯ ರಾಜಕೀಯ ಉಭವ ಸಂಕಟಕ್ಕೆ ಬಿಜೆಪಿ ಕೂಡ ಹೊರತಲ್ಲ. ಅಭ್ಯರ್ಥಿಗಳ ಒತ್ತಡ ಬಿಜೆಪಿ ನಾಯಕರಿಗೆ ತಲೆನೋವು ತಂದಿದೆ. “ ಈ ಬಗ್ಗೆ ಪಕ್ಷದ ರಾಜ್ಯ ನಾಯಕರು ಹೈಕಮಾಂಡ್‌ ಗೆ ಮಾಹಿತಿ ನೀಡಿದ್ದು, ʼನೀವು ಪಟ್ಟಿ ಕಳುಹಿಸಿ. ಅಸಮಾಧಾನವಿದ್ದರೆ ಅದನ್ನು ನಾವು ನೋಡಿಕೊಳ್ಳುತ್ತೇವೆ” ಎಂದು ಹೈಕಮಾಂಡ್‌ ಹೇಳಿರುವುದಾಗಿ ಬಿಜೆಪಿ ನಾಯಕರೇ ಹೇಳುತ್ತಿದ್ದಾರೆ. ಬಿಜೆಪಿಗೆ ಸಿಕ್ಕಲಿರುವ 3 ಸ್ಥಾನಗಳಿಗೆ 45 ಮಂದಿ ಆಕಾಂಕ್ಷಿಗಳಿದ್ದು, ಎಲ್ಲರೂ, ನೀ ಕೊಡೆ, ನಾ ಬಿಡೆ ಎನ್ನುವಂತಿದ್ದಾರೆ. ಕಳೆದ ವಿಧಾನ ಸಭೆಯಲ್ಲಿ ಸೋತವರು, ಟಿಕೆಟ್‌ ವಂಚಿತರಾದವರು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಆಕಾಂಕ್ಷಿಗಳಾಗಿದ್ದವರು, ಹೀಗೆ ಅನೇಕರು ರಾಜ್ಯ ನಾಯಕರಿಗೆ ಪರಿಷತ್‌ ಚುನಾವಣೆಗೆ ಅವಕಾಶ ಕಲ್ಪಿಸುವಂತೆ ಒತ್ತಾಯಿಸುತ್ತಿದ್ದಾರೆ.

ಎರಡೂ ಪಕ್ಷಗಳೂ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ನಾಳೆ ಸಂಜೆ ವೇಳೆಗೆ ಅಂತಿಮಗೊಳಿಸುವ ಸಾಧ್ಯತೆ ದಟ್ಟವಾಗಿದೆ.

Read More
Next Story