
'ದ ಫೆಡರಲ್ ಕರ್ನಾಟಕ'ದ ಪ್ರಭುಸ್ವಾಮಿ ನಟೇಕರ್ಗೆ 'ಕರ್ನಾಟಕ ಮಾಧ್ಯಮ ಅಕಾಡೆಮಿ' ಪ್ರಶಸ್ತಿ
ಆಂದೋಲನ', 'ಅಭಿಮಾನಿ', 'ಮೈಸೂರು ದಿಗಂತ' ಸೇರಿದಂತೆ ವಿವಿಧ ದತ್ತಿ ಪ್ರಶಸ್ತಿಗಳಿಗೂ ಅರ್ಹರನ್ನು ಆಯ್ಕೆ ಮಾಡಲಾಗಿದೆ ಎಂದು ಅಕಾಡೆಮಿ ಕಾರ್ಯದರ್ಶಿ ಸಹನಾ ಎಂ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಕರ್ನಾಟಕ ಮಾಧ್ಯಮ ಅಕಾಡೆಮಿಯು 2025ನೇ ಸಾಲಿನ ಪ್ರತಿಷ್ಠಿತ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ದ ಫೆಡರಲ್ ಕರ್ನಾಟಕದ ಹಿರಿಯ ವರದಿಗಾರ ಪ್ರಭುಸ್ವಾಮಿ ನಟೇಕರ್ ಅವರು ಈ ಗೌರವಕ್ಕೆ ಭಾಜನರಾಗಿದ್ದಾರೆ.
ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಆಯೇಶಾ ಖಾನಂ ಅವರ ಅಧ್ಯಕ್ಷತೆಯಲ್ಲಿ ಜನವರಿ 8ರಂದು ನಡೆದ ಸರ್ವ ಸದಸ್ಯರ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದೆ. ಮಾಧ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಪ್ರಭುಸ್ವಾಮಿ ನಟೇಕರ್ ಸೇರಿದಂತೆ ಒಟ್ಟು 30 ಮಂದಿ ಸಾಧಕ ಪತ್ರಕರ್ತರನ್ನು ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೆ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಈ ವಾರ್ಷಿಕ ಪ್ರಶಸ್ತಿಯು 50,000 ರೂ. ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ.
ಇತರೆ ಪ್ರಮುಖ ಪ್ರಶಸ್ತಿಗಳು
ಇದೇ ವೇಳೆ 2025ನೇ ಸಾಲಿನ ವಿಶೇಷ ಪ್ರಶಸ್ತಿಗೆ ಹಿರಿಯ ಪತ್ರಕರ್ತೆ ಶ್ರೀಮತಿ ಸರಿತಾ ರೈ ಅವರನ್ನು ಆಯ್ಕೆ ಮಾಡಲಾಗಿದ್ದು, ಇವರು 1 ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನು ಪಡೆಯಲಿದ್ದಾರೆ. ಇವರಲ್ಲದೆ, ರಾಜ್ಯದ ವಿವಿಧ ಭಾಗಗಳ ಪತ್ರಕರ್ತರು ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಜೊತೆಗೆ, 'ಆಂದೋಲನ', 'ಅಭಿಮಾನಿ', 'ಮೈಸೂರು ದಿಗಂತ' ಸೇರಿದಂತೆ ವಿವಿಧ ದತ್ತಿ ಪ್ರಶಸ್ತಿಗಳಿಗೂ ಅರ್ಹರನ್ನು ಆಯ್ಕೆ ಮಾಡಲಾಗಿದೆ ಎಂದು ಅಕಾಡೆಮಿ ಕಾರ್ಯದರ್ಶಿ ಸಹನಾ ಎಂ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ

