
ಡೀಸೆಲ್ ದರ, ಟೋಲ್ ಶುಲ್ಕ ಹೆಚ್ಚಳ ವಿರೋಧಿಸಿ ನಾಳೆಯಿಂದ ರಾಜ್ಯದಲ್ಲಿ ಲಾರಿ ಮಾಲೀಕರಿಂದ ಅನಿರ್ದಿಷ್ಟಾವಧಿ ಮುಷ್ಕರ
ಮುಷ್ಕರದ ಭಾಗವಾಗಿ, ರಾಜ್ಯದ 6 ಲಕ್ಷಕ್ಕೂ ಅಧಿಕ ಲಾರಿಗಳು ಏಪ್ರಿಲ್ 14ರಿಂದ ಸಂಪೂರ್ಣವಾಗಿ ಸಂಚಾರ ಸ್ಥಗಿತಗೊಳಿಸಲಿವೆ. ಇದರ ಜೊತೆಗೆ, ಹೊರ ರಾಜ್ಯಗಳಿಂದ ರಾಜ್ಯಕ್ಕೆ ಆಗಮಿಸುವ ಲಾರಿಗಳಿಗೂ ಅವಕಾಶ ನೀಡದಿರಲು ನಿರ್ಧರಿಸಲಾಗಿದೆ.
ರಾಜ್ಯದಲ್ಲಿ ಡೀಸೆಲ್ ಬೆಲೆ ಏರಿಕೆ ಹಾಗೂ ಟೋಲ್ ಶುಲ್ಕದ ಹೆಚ್ಚಳದ ವಿರುದ್ಧ ರಾಜ್ಯ ಲಾರಿ ಮಾಲೀಕರ ಸಂಘವು ಸಿಡಿದೆದ್ದಿದ್ದು, ಏಪ್ರಿಲ್ 14ರ ಮಧ್ಯರಾತ್ರಿಯಿಂದ ಅನಿರ್ದಿಷ್ಟಾವಧಿಯ ಲಾರಿ ಮುಷ್ಕರಕ್ಕೆ ಕೊಟ್ಟಿದೆ. ಸಂಘದ ಅಧ್ಯಕ್ಷ ಜಿ.ಆರ್. ಷಣ್ಮುಖಪ್ಪ ಈ ಕುರಿತು ಮಾಹಿತಿ ನೀಡಿದ್ದು. ಮುಷ್ಕರಕ್ಕೆ ರಾಜ್ಯದ ಲಾರಿ ಮಾಲೀಕರು ಮಾತ್ರವಲ್ಲದೆ, ಹೊರ ರಾಜ್ಯಗಳ ಲಾರಿ ಮಾಲೀಕರ ಸಂಘಗಳೂ ಬೆಂಬಲ ಸೂಚಿಸಿವೆ. ಯಾವುದೇ ಕಾರಣಕ್ಕೂ ಈ ಮುಷ್ಕರವನ್ನು ಹಿಂಪಡೆಯುವುದಿಲ್ಲ ಎಂದು ತಿಳಿಸಿದ್ದಾರೆ.
ಮುಷ್ಕರದ ಭಾಗವಾಗಿ, ರಾಜ್ಯದ 6 ಲಕ್ಷಕ್ಕೂ ಅಧಿಕ ಲಾರಿಗಳು ಏಪ್ರಿಲ್ 14ರಿಂದ ಸಂಪೂರ್ಣವಾಗಿ ಸಂಚಾರ ಸ್ಥಗಿತಗೊಳಿಸಲಿವೆ. ಇದರ ಜೊತೆಗೆ, ಹೊರ ರಾಜ್ಯಗಳಿಂದ ರಾಜ್ಯಕ್ಕೆ ಆಗಮಿಸುವ ಲಾರಿಗಳಿಗೂ ಅವಕಾಶ ನೀಡದಿರಲು ನಿರ್ಧರಿಸಲಾಗಿದೆ. ಇದರಿಂದಾಗಿ ವಾಣಿಜ್ಯ ಸರಕು ಸಾಗಾಟ, ದೈನಂದಿನ ಅಗತ್ಯ ವಸ್ತುಗಳ ಸರಬರಾಜು ಸೇರಿದಂತೆ ಎಲ್ಲಾ ಸರಕು ಸೇವೆಗಳು ಸಂಪೂರ್ಣವಾಗಿ ಸ್ತಬ್ಧಗೊಳ್ಳುವ ಸಾಧ್ಯತೆ ಇದೆ.
"ಈ ಕ್ರಮಕ್ಕೆ ರಾಜ್ಯದ ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಪೆಟ್ರೋಲ್ ಬಂಕ್ ಮಾಲೀಕರ ಸಂಘ ಸೇರಿದಂತೆ ವಿವಿಧ ವಾಣಿಜ್ಯ ಸಂಘಟನೆಗಳು ಮುಷ್ಕರಕ್ಕೆ ಒಗ್ಗಟ್ಟು ತೋರಿವೆ. "ಈ ಮುಷ್ಕರ ನಡೆಸುವುದು ಖಚಿತವಾಗಿದೆ. ಸರ್ಕಾರವು ಡೀಸೆಲ್ ದರ ಮತ್ತು ಟೋಲ್ ಶುಲ್ಕ ಕಡಿಮೆ ಮಾಡದಿದ್ದರೆ, ಈ ಹೋರಾಟ ಮುಂದುವರಿಯಲಿದೆ," ಎಂದು ಷಣ್ಮುಖಪ್ಪ ತಿಳಿಸಿದ್ದಾರೆ.
ಒಗ್ಗಟ್ಟು ಇಲ್ಲ
ಈ ಮುಷ್ಕರಕ್ಕೆ ಫೆಡರೇಶನ್ ಆಫ್ ಲಾರಿ ಓನರ್ಸ್ ಅಸೋಸಿಯೇಷನ್ ಗೌರವಾಧ್ಯಕ್ಷ ಚನ್ನಾರೆಡ್ಡಿ ವಿರೋಧ ವ್ಯಕ್ತಪಡಿಸಿದ್ದಾರೆ. "ನಾವು ಈ ಮುಷ್ಕರಕ್ಕೆ ಬೆಂಬಲಿಸುವುದಿಲ್ಲ. ಲಾರಿಗಳು ಎಂದಿನಂತೆ ಸಂಚರಿಸಲಿವೆ. ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ," ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಚನ್ನಾರೆಡ್ಡಿ ಅವರ ಪ್ರಕಾರ, ಕರ್ನಾಟಕದಲ್ಲಿ ಲಾರಿಗಳಿಗೆ ವಿಧಿಸುವ ತೆರಿಗೆ ಇತರ ರಾಜ್ಯಗಳಿಗಿಂತ ಕಡಿಮೆಯಿದೆ. "ಪುದುಚೆರಿ ಬಿಟ್ಟರೆ, ಕರ್ನಾಟಕದಲ್ಲಿ ಡೀಸೆಲ್ ದರವೇ ಕನಿಷ್ಠವಾಗಿದೆ. ಈಗಿರುವ ಎರಡು ರೂಪಾಯಿಗಳ ತೆರಿಗೆ ಹೆಚ್ಚಳ ನೋಡಿದರೆ ಅದು ಹೊರೆಯಾಗಿಲ್ಲ. ಸರ್ಕಾರದೊಂದಿಗೆ ಘರ್ಷಣೆಗೆ ಇಳಿಯುವ ಬದಲು, ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳಬೇಕು," ಎಂದು ಹೇಳಿದ್ದಾರೆ..
"ಡೀಸೆಲ್ ಬೆಲೆ ಏರಿಕೆ ಕುರಿತು ಸರ್ಕಾರಕ್ಕೆ ಈಗಾಗಲೇ ಪತ್ರ ಬರೆದಿದ್ದೇವೆ. ಆದರೆ, ಮುಷ್ಕರದ ಮೂಲಕ ಒತ್ತಡ ಹೇರಲು ಸಾಧ್ಯವಿಲ್ಲ. ಸರ್ಕಾರಗಳು ಸಾಮಾನ್ಯವಾಗಿ ಎರಡು ದಿನಗಳ ಮುಷ್ಕರದ ಬಳಿಕವೇ ಮಾತುಕತೆಗೆ ಕರೆಯುತ್ತವೆ. ಆದ್ದರಿಂದ, ಈಗಲೇ ತಾಳ್ಮೆಯಿಂದ ಕಾಯಬೇಕು," ಎಂದು ತಿಳಿಸಿದ್ದಾರೆ.