Lokayukta Raid | ಭ್ರಷ್ಟರಿಗೆ ಬೆಳ್ಳಂಬೆಳಿಗ್ಗೆ ಶಾಕ್:‌ ವಿವಿಧೆಡೆ ಲೋಕಾಯುಕ್ತ ದಾಳಿ
x
karnataka lokayuktha

Lokayukta Raid | ಭ್ರಷ್ಟರಿಗೆ ಬೆಳ್ಳಂಬೆಳಿಗ್ಗೆ ಶಾಕ್:‌ ವಿವಿಧೆಡೆ ಲೋಕಾಯುಕ್ತ ದಾಳಿ


ಶುಕ್ರವಾರ ಬೆಳ್ಳಂಬೆಳಿಗ್ಗೆ ಭ್ರಷ್ಟ ಅಧಿಕಾರಿಗಳು, ನೌಕರರಿಗೆ ಬಿಸಿ ಮುಟ್ಟಿಸಿರುವ ಲೋಕಾಯುಕ್ತ ಅಧಿಕಾರಿಗಳು, ಬೆಳಗಾವಿ, ಬಾಗಲಕೋಟೆ, ರಾಯಚೂರು ಸೇರಿದಂತೆ ಉತ್ತರಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

ಮುಖ್ಯವಾಗಿ ಪಂಚಾಯ್ತಿ ಮತ್ತು ಜಿಲ್ಲಾ ಪಂಚಾಯ್ತಿ ಸೇರಿದಂತೆ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಭ್ರಷ್ಟರನ್ನೇ ಗುರಿಯಾಗಿಸಿ ಈ ದಾಳಿ ನಡೆದಿದ್ದು, ಬೆಳಗಾವಿ ಜಿಲ್ಲೆಯ ಇಬ್ಬರು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು, ಬಾಗಲಕೋಟೆಯ ಓರ್ವ ಪಿಡಿಒ ಹಾಗೂ ರಾಯಚೂರು ಜಿಪಂ ಲೆಕ್ಕಪತ್ರ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಲಾಗಿದೆ.

ಅಲ್ಲದೆ ಬೆಂಗಳೂರು ಬಿಬಿಎಂಪಿ ಎಇಇ ಮಾಧವರಾವ್ ಎಂಬುವರ ಮನೆ ಮೇಲೆ ಕೂಡ ದಾಳಿ ನಡೆದಿದ್ದು, ಭ್ರಷ್ಟಾಚಾರ ಮತ್ತು ಆದಾಯ ಮೀರಿದ ಆಸ್ತಿ ಗಳಿಕೆ ದೂರುಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಅಲ್ಲದೆ, ಬೆಳಗಾವಿ ನಗರದ ಅನಗೋಳದಲ್ಲಿರುವ, ಬೆಳಗಾವಿ ಪ್ರಭಾರ ಸಬ್ ರಿಜಿಸ್ಟರ್ ಸಚಿನ್ ಮಂಡೇದ್ ಎಂಬುವವರ ಮನೆ ಮೇಲೆ ಕೂಡ ದಾಳಿ ನಡೆಸಿರುವ ಅಧಿಕಾರಿಗಳು, ಮಹತ್ವದ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಸಚಿನ್ ಮಂಡೇದ್ ಅವರಿಗೆ ಸೇರಿದ ಮನೆ, ಕಚೇರಿ ಸೇರಿ 3 ಕಡೆಗಳಲ್ಲಿ ದಾಳಿ ನಡೆಸಲಾಗಿದೆ.

ಹಾರೂಗೇರಿ ವೆಟರ್ನರಿ ಇನ್ಸ್ಪೆಕ್ಟರ್ ಸಂಜಯ್ ಮನೆ ಮೇಲೂ ದಾಳಿ ನಡೆದಿದೆ. ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿರುವ ಅವರ ನಿವಾಸದ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು, ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.

ಅಲ್ಲದೆ, ಬಾಗಲಕೋಟೆಯ ಗ್ರಾಮ ಪಂಚಾಯತ್ ಪಿಡಿಒ ಎಸ್.ಪಿ.ಹಿರೇಮಠ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಬಾಗಲಕೋಟೆಯ ವಿದ್ಯಾಗಿರಿಯಲ್ಲಿರುವ ಮನೆ ಮೇಲೆ ಬಾಗಲಕೋಟೆ ಲೋಕಾಯುಕ್ತ ಡಿವೈಎಸ್ಪಿ ಸಿದ್ದೇಶ್ ನೇತೃತ್ವದಲ್ಲಿ ದಾಳಿ ನಡೆದಿದೆ. ಲೋಕಾಯುಕ್ತರು ಏಕಕಾಲಕ್ಕೆ ಮೂರು ಕಡೆ ದಾಳಿ ನಡೆಸಿದ್ದಾರೆ. ಹಿರೇಮಠ ಅವರ ನರಗುಂದದ ನಿವಾಸದ ಮೇಲೂ ದಾಳಿ ನಡೆದಿದೆ.

ಹೂಲಗೇರಿ ಪಿಡಿಒ ಎಸ್.ಪಿ.ಹಿರೇಮಠ ಅವರ ಐಷಾರಾಮಿ ಮನೆ ಹೊಂದಿದ್ದು, ಅವರ ಮನೆಯಲ್ಲಿ ಭಾರೀ ಪ್ರಮಾಣದ ನಗದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ನೋಟುಗಳನ್ನು ಎಣಿಸಲು ಲೋಕಾಯುಕ್ತರು ಹಣ ಎಣಿಸುವ ಮಷಿನ್ ತೆಗೆದುಕೊಂಡು ಹೋಗಿದ್ದಾರೆ.

ಮತ್ತೊಂದೆಡೆ, ಜಿ.ಪಂ. ಲೆಕ್ಕಪತ್ರ ಸಹಾಯಕ ಅಧಿಕಾರಿ ನರಸಿಂಗ್ ರಾವ್ ಅವರ ರಾಯಚೂರು ನಗರದ ಜವಾರ್ ಕಾಲೋನಿಯಲ್ಲಿನ ಮನೆ ಮೇಲೆ ಲೋಕಾ ದಾಳಿ ನಡೆದಿದೆ. ಸದ್ಯ ಅಧಿಕಾರಿಗಳಿಂದ ದಾಖಲೆಗಳ ಪರಿಶೀಲನೆ ಮುಂದುವರಿದಿದೆ.

Read More
Next Story