Good news for graduates: Applications invited for several positions in the Cooperative Consumers Federation
x
ಎಐ ಅಧಾರಿತ ಚಿತ್ರ

ಪದವೀಧರರಿಗೆ ಗುಡ್‌ ನ್ಯೂಸ್; ಸಹಕಾರ ಗ್ರಾಹಕರ ಮಹಾಮಂಡಳದಲ್ಲಿ ಅರ್ಜಿ ಆಹ್ವಾನ

ಸಹಕಾರ ಗ್ರಾಹಕರ ಮಹಾಮಂಡಳದಲ್ಲಿ ಖಾಲಿ ಇರುವ 34 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಫೆ.7 ಕೊನೆಯ ದಿನಾಂಕವಾಗಿದೆ.


Click the Play button to hear this message in audio format

ಪದವಿ ಪೂರೈಸಿರುವ ಉದ್ಯೋಗಾಂಕ್ಷಿಗಳಿಗೆ ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ ಸಿಹಿ ಸುದ್ದಿ ನೀಡಿದೆ. ಮಂಡಳಿಯಲ್ಲಿ ಖಾಲಿ ಇರುವ 34 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಫೆ.7 ಕೊನೆಯ ದಿನಾಂಕವಾಗಿದೆ. ಅರ್ಜಿಗಳನ್ನು ಖುದ್ದು, ಅಂಚೆ ಅಥವಾ ಕೋರಿಯರ್ ಮೂಲಕ ಪಡೆಯುವುದಿಲ್ಲ. ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು. ಅರ್ಜಿ ಶುಲ್ಕವನ್ನು ನಿಗದಿಪಡಿಸಿದ ಕೊನೆಯ ದಿನಾಂಕದ ರಾತ್ರಿ 11.59ರ ಒಳಗಾಗಿ ಪಾವತಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ಸಹಕಾರ ಸಂಘಗಳ ನಿಯಮಗಳು 1960 ಹಾಗೂ ಸಹಕಾರ ಸಂಘಗಳ (ತಿದ್ದುಪಡಿ) ನಿಯಮಗಳು 2017 ರ ನಿಯಮ 17(ಎ) ಮತ್ತು ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ ನಿಯಮಿತ ಬೆಂಗಳೂರು ಇದರ ಪೂರಕ ನಿಯಮಗಳಲ್ಲಿ ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಶೈಕ್ಷಣಿಕ ಅರ್ಹತೆ ನಿಗದಿಪಡಿಸಿದೆ.

ಫಾರ್ಮಾಸಿಸ್ಟ್ ಹುದ್ದೆಗೆ ಸರ್ಕಾರದ ಅಂಗೀಕೃತ ಸಂಸ್ಥೆಯಿಂದ ಡಿಪ್ಲೋಮಾ ಇನ್ ಫಾರ್ಮಾಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಕಂಪ್ಯೂಟರ್ ಅಪರೇಷನ್ಸ್ ಮತ್ತು ಅಪ್ಲಿಕೇಷನ್ಸ್‌ನಲ್ಲಿ ಜ್ಞಾನ ಹೊಂದಿರಬೇಕು. ಎಫ್‌ಡಿಎ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದೇಶದ ಯಾವುದೇ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ವಿಕ್ರಯ ಸಹಾಯಕರ ಹುದ್ದೆಗಳಿಗೆ ದ್ವಿತೀಯ ಪಿಯುಸಿ ತೇರ್ಗಡೆಯಾಗಿರಬೇಕು.

ವಯೋಮಿತಿ ಹಾಗೂ ಶುಲ್ಕ

ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಕನಿಷ್ಠ 18 ವರ್ಷ ವಯೋಮಿತಿ ಹೊಂದಿರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 38 ವರ್ಷ ಮೀರಿರಬಾರದು. ಪ್ರವರ್ಗ 2ಎ, ಪ್ರವರ್ಗ 2ಬಿ, ಪ್ರವರ್ಗ 3ಎ, ಪ್ರವರ್ಗ 3ಬಿ 41 ವರ್ಷ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು 43 ವರ್ಷ ಮೀರಿರಬಾರದು. ವಿಕಲಚೇತನರಿಗೆ ಹಾಗೂ ವಿಧವೆಯರಿಗೆ 10 ವರ್ಷಗಳ ಸಡಿಲಿಕೆ ಇರುತ್ತದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ 500 ರೂ. ಹಾಗೂ ಸಾಮಾನ್ಯ ಅಭ್ಯರ್ಥಿಗಳಿಗೆ 1,000 ರೂ. ಶುಲ್ಕ ನಿಗದಿಪಡಿಸಿದೆ.

ಆಯ್ಕೆ ವಿಧಾನ

ಅರ್ಜಿ ಸಲ್ಲಿಸಿದ ಹುದ್ದೆಗಳಿಗೆ ನಿಗದಿಪಡಿಸಿದ ವಿದ್ಯಾರ್ಹತೆ ಹಾಗೂ ಅಗತ್ಯ ದಾಖಲಾತಿಗಳ ಆಧಾರದ ಮೇಲೆ ಪರಿಶೀಲಿಸಿ, ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುವುದು. ಹುದ್ದೆಗಳಿಗೆ ನಿಗದಿಪಡಿಸಿದ ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಶೇಕಡಾವಾರು ಆಧಾರದ ಮೇಲೆ 1:5ರ ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು. ಸಂದರ್ಶನಕ್ಕೆ 15 ಅಂಕಗಳನ್ನು ನಿಗದಿಪಡಿಸಿದ್ದು, ಲಿಖಿತ ಪರೀಕ್ಷೆಯಲ್ಲಿ ಪಡೆಯಲಾದ ಅಂಕಗಳನ್ನು ಶೇ. 85ಕ್ಕೆ ಇಳಿಸಿ ಮತ್ತು ಸಂದರ್ಶನಲ್ಲಿ ಗಳಿಸಿದ ಅಂಕಗಳನ್ನು ಒಟ್ಟುಗೂಡಿಸಿ ಪಡೆಯಲಾದ ಒಟ್ಟು ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳ ಅರ್ಹತಾ ಪಟ್ಟಿ ತಯಾರಿಸಲಾಗುವುದು.

ಅರ್ಹತಾ ಪಟ್ಟಿಯ ಆಧಾರದ ಮೇಲೆ ಕರ್ನಾಟಕ ಸರ್ಕಾರದ ಮೀಸಲಾತಿ ನಿಯಮಗಳನ್ನು ಅನುಸರಿಸಿ ಆಯ್ಕೆ ಪಟ್ಟಿ ಸಿದ್ದಪಡಿಸಲಾಗುವುದು. ಅಭ್ಯರ್ಥಿಗಳ ಆಯ್ಕೆ ಬಗ್ಗೆ ನೇಮಕಾತಿ ಪ್ರಾಧಿಕಾರದ ನಿರ್ಣಯ ಅಂತಿಮವಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಯಾವ ವಿಷಯಗಳಿಗೆ ಎಷ್ಟು ಅಂಕ

ಫಾರ್ಮಾಸಿಸ್ಟ್, ಪ್ರಥಮ ದರ್ಜೆ ಸಹಾಯಕರು ಮತ್ತು ವಿಕ್ರಯ ಸಹಾಯಕರು ಹುದ್ದೆಗಳಿಗೆ ನಡೆಸುವ ಲಿಖಿತ ಪರೀಕ್ಷೆಯಲ್ಲಿ ಕನ್ನಡ ಭಾಷೆಗೆ 50 ಅಂಕಗಳು, ಸಾಮಾನ್ಯ ಆಂಗ್ಲ ಭಾಷೆಗೆ 25 ಅಂಕಗಳು, ಸಾಮಾನ್ಯ ಜ್ಞಾನಕ್ಕೆ 25 ಅಂಕಗಳು, ಸಹಕಾರಿ ವಿಷಯಕ್ಕೆ 50 ಅಂಕಗಳು, ಭಾರತದ ಸಂವಿಧಾನಕ್ಕೆ 25 ಅಂಕಗಳು, ಸಮಾಜಯುಕ್ತವಾದ ಚಟುವಟಿಕೆಗಳು ಹಾಗೂ ವಸ್ತುನಿಷ್ಟ ವಿಷಯಗಳಿಗೆ 25 ಅಂಕಗಳು ಸೇರಿ ಒಟ್ಟು 200 ಅಂಕಗಳಿಗೆ ಪರೀಕ್ಷೆ ನಡೆಸಲಾಗುವುದು.

ಅರ್ಜಿ ಸಲ್ಲಿಸುವುದು ಹೇಗೆ ?

* ಅಭ್ಯರ್ಥಿಗಳು ಮಹಾಮಂಡಳದ ಅಧಿಕೃತ ಜಾಲತಾಣ https://virtualofficeerp.com/ksccf2026 ಪರದೆಯ ಮೇಲೆ KSCCF RECURITMENT 2026 ಎಂಬ ಸೂಚನೆಗಳನ್ನು ಕಡ್ಡಾಯವಾಗಿ ಓದಬೇಕು. ಅಂತಿಮವಾಗಿ ನಿಯಮ ಮತ್ತು ಷರತ್ತುಗಳನ್ನು ಕೆಳಗಿನ ಚೆಕ್ ಬಾಕ್ಸ್ ಅನ್ನು ಒತ್ತುವ ಮೂಲಕ ಒಪ್ಪಿಕೊಳ್ಳಬೇಕು. NEW REGISTRATION ಆಗಬೇಕು.

* ಸಂಬಂಧಪಟ್ಟ ಹುದ್ದೆಯನ್ನು ಆಯ್ಕೆ ಮಾಡಿ ಅಪ್ಲೈ ಒತ್ತಿ ಅರ್ಜಿಗಳನ್ನು ಭರ್ತಿ ಮಾಡಬೇಕು. ಅರ್ಜಿಯನ್ನು ಭರ್ತಿ ಮಾಡಿದ ನಂತರ ನಮೂದಿಸಿದ ವಿವರಗಳನ್ನು ಮತ್ತೊಮ್ಮೆ ಕೂಲಂಕಷವಾಗಿ ಪರಿಶೀಲಿಸಿಕೊಂಡು, ಎಲ್ಲಾ ವಿವರಗಳು ಸರಿಯಾಗಿರುತ್ತವೆ ಎಂದು ಖಚಿತ ಪಡಿಸಿಕೊಂಡ ನಂತರವೇ PREVIEW ಮಾಡಬೇಕು.

* ಅರ್ಜಿಯ ಯಾವುದೇ ವಿವರಗಳ ಬದಲಾವಣೆ ಅಗತ್ಯವಿದ್ದರೆ ಎಡಿಟ್‌ ಬಟನ್‌ ಒತ್ತಿ ನಿಮ್ಮ ಅರ್ಜಿಯಲ್ಲಿನ ಮಾಹಿತಿ ಸರಿಪಡಿಸಿಕೊಂಡು ವಿವರಗಳು ಸರಿ ಇರುವುದನ್ನು ಖಚಿತಪಡಿಸಿಕೊಂಡು, ನಿಮ್ಮ ಸಹಿಯೊಂದಿಗಿನ ಪಾಸ್ ಪೋರ್ಟ್ ಗಾತ್ರದ ಸ್ಕ್ಯಾನ್ ಮಾಡಿದ ಭಾವಚಿತ್ರವನ್ನು ಅಪ್ ಲೋಡ್ ಮಾಡುವ ಬಗ್ಗೆ NEXT ಒತ್ತಬೇಕು.

* ಈ ಹಂತದಲ್ಲಿ ಅಭ್ಯರ್ಥಿಯು ಕಂಪ್ಯೂಟರ್ ಪರದೆಯ ಮೇಲೆ ಮೂಡಲಾದ ನೋಂದಣಿ ಐಡಿಯನ್ನು ತಪ್ಪದೇ ಬರೆದಿಟ್ಟುಕೊಳ್ಳಬೇಕು. ಅಭ್ಯರ್ಥಿಯು ನೋಂದಾಯಿಸಿದ ಇ-ಮೇಲ್‌ ವಿಳಾಸಕ್ಕೆ ಒಂದು ಸ್ವಯಂ ಚಾಲಿತ ನೋಂದಾಯಿತ ಐಡಿ ಹಾಗೂ ಪಾಸ್‌ವರ್ಡ್‌ ಕಳುಹಿಸಲಾಗುವುದು. ಅಭ್ಯರ್ಥಿಯು EDIT APPLICATION ಒತ್ತಿ, ಅವರ ನೋಂದಾಯಿತ ಐಡಿ ಮತ್ತು ಪಾಸ್‌ವರ್ಡ್‌ ಬಳಸಿ ತಮ್ಮ ವಿವರಗಳನ್ನು ಅಪ್ ಲೋಡ್ ಮಾಡಬಹುದು ಅಥವಾ ಅಪ್ ಲೋಡ್ ಮಾಡಿದ ಮಾಹಿತಿಯನ್ನು ಬದಲಾಯಿಸಬಹುದು. ಅಭ್ಯರ್ಥಿಯು ತಾನು ಅಪ್ ಲೋಡ್ ಮಾಡಿದ ಎಲ್ಲಾ ಮಾಹಿತಿಗಳನ್ನು ಖಚಿತ ಪಡಿಸಿಕೊಂಡ ನಂತರವೇ NEXT ಒತ್ತಬೇಕು.

* ಅಭ್ಯರ್ಥಿಯು ಸ್ವ-ಸಹಿಯೊಂದಿಗೆ ಸ್ಕ್ಯಾನ್ ಮಾಡಿದ ಪಾಸ್ ಪೋರ್ಟ್ ಗಾತ್ರದ ಭಾವಚಿತ್ರವನ್ನು ಆಯ್ಕೆ ಮಾಡಿ ತಮ್ಮ ಸಹಿಯೊಂದಿಗೆ ಭಾವಚಿತ್ರವನ್ನು ಸಬ್‌ಮಿಟ್‌ ಮಾಡಬೇಕು. ಅರ್ಜಿಯನ್ನು ಭರ್ತಿ ಮಾಡುವ ಮುನ್ನ ಅಭ್ಯರ್ಥಿಯು ತನ್ನ ಇತ್ತೀಚಿನ ಭಾವಚಿತ್ರವನ್ನು ಖಾಲಿ ಬಿಳಿ ಕಾಗದದ ಮೇಲೆ ಇರಿಸಿ, ಕಪ್ಪು, ಮಾರ್ಕರ್ ಪೆನ್ನಿನಿಂದ ಭಾವಚಿತ್ರದ ಕೆಳಗೆ ಸಹಿ ಮಾಡಿರುವುದನ್ನು ಮತ್ತು ಅಂಕಣದೊಳಗೆ ಇರುವುದನ್ನು ಖಚಿತಪಡಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಭಾವ ಚಿತ್ರದ ಮೇಲೆ ಸಹಿ ಮಾಡಬಾರದು.

* ಅಭ್ಯರ್ಥಿಗಳು ಸಂಬಂಧಪಟ್ಟ ವಿದ್ಯಾರ್ಹತೆಯ ಎಲ್ಲಾ ಸೆಮಿಸ್ಟರ್ ಅಂಕ ಪಟ್ಟಿಗಳು, ಕಂಪ್ಯೂಟರ್ ಪ್ರಮಾಣ ಪತ್ರಗಳು, ನೀರಾಕ್ಷೇಪಣಾ ಪ್ರಮಾಣ ಪತ್ರ, ಮೀಸಲಾತಿ ಜಾತಿ ಪ್ರಮಾಣ ಪತ್ರ, ವಿಕಲಚೇತನ ದೃಢೀಕರಣ ಪತ್ರ, ಗ್ರಾಮೀಣ ಮೀಸಲಾತಿ ಪ್ರಮಾಣ ಪತ್ರ, ಜನ್ಮ ದಿನಾಂಕಕ್ಕೆ ಸಂಬಂಧಿಸಿದ ಪ್ರಮಾಣ ಪತ್ರಗಳ ಜೆರಾಕ್ಸ್ ಪ್ರತಿಗಳಿಗೆ ಸ್ವಯಂ ದೃಢೀಕರಿಸಿ ಸಂಬಂಧಪಟ್ಟ ಎಲ್ಲಾ ಪ್ರಮಾಣ ಪತ್ರಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್‌ ಮಾಡಬೇಕು.

* ಗ್ರೇಡ್ ಅಂಕಗಳನ್ನು ಪಡೆದ ಅಭ್ಯರ್ಥಿಗಳು ಅವರ ಗ್ರೇಡ್ ಅಂಕಗಳನ್ನು ಶೇಕಡಾವಾರು ಅಂಕಗಳಿಗೆ ಪರಿವರ್ತಿಸಿ ಕಾಲೇಜು ಅಥವಾ ವಿಶ್ವವಿದ್ಯಾಲಯ ನೀಡಿರುವ ಪ್ರಮಾಣ ಪತ್ರದಲ್ಲಿ ನಮೂದಿಸಿರುವ ಶೇಕಡಾವಾರು ಅಂಕಗಳನ್ನು ತಪ್ಪದೇ ನಮೂದಿಸಬೇಕು.

* ಅರ್ಜಿ ಶುಲ್ಕ ಹಾಗೂ ಅನ್ವಯಿಸುವ ಸೇವಾ ಶುಲ್ಕವನ್ನು PAYMENT GATEWAY ಲಿಂಕ್ ಬಳಸಿ ಪಾವತಿಸಬೇಕು.

Read More
Next Story