ಕನ್ನಡಿಗರಿಗೆ ಮೀಸಲಾತಿ | ಉನ್ನತ ಕೌಶಲ ಉದ್ಯೋಗಗಳಿಗೆ ವಿನಾಯಿತಿ ನೀಡಿ: ಕಿರಣ್ ಶಾ
ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕದ ಸ್ಥಾನದ ಮೇಲೆ ಮೀಸಲು ಆದೇಶ ಪರಿಣಾಮ ಬೀರಬಾರದು ಎಂದು ಬಯೋಕಾನ್ ಅಧ್ಯಕ್ಷೆ ಹೇಳಿದ್ದಾರೆ.
ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಮೀಸಲು ಕಡ್ಡಾಯಗೊಳಿಸುವ ಕರ್ನಾಟಕ ಸರ್ಕಾರದ ನೀತಿಯಲ್ಲಿ ಉನ್ನತ ಕೌಶಲ ಕ್ಷೇತ್ರಗಳಲ್ಲಿನ ನೇಮಕಗಳಿಗೆ ವಿನಾಯಿತಿ ನೀಡಬೇಕು ಎಂದು ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಬುಧವಾರ (ಜುಲೈ 17) ಹೇಳಿದರು.
ಉದ್ಯಮಗಳು, ಕಾರ್ಖಾನೆಗಳು ಮತ್ತು ಇತರ ಸಂಸ್ಥೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಮಸೂದೆ, 2024 ನ್ನು ರಾಜ್ಯ ಸಚಿವ ಸಂಪುಟ ಸೋಮವಾರ (ಜುಲೈ 15) ಅಂಗೀಕರಿಸಿದೆ.
ರಾಜ್ಯದ ಉದ್ಯಮಗಳು, ಕಾರ್ಖಾನೆಗಳು ಮತ್ತು ಇತರ ಸಂಸ್ಥೆಗಳು ಸ್ಥಳೀಯ ಅಭ್ಯರ್ಥಿಗಳನ್ನುನಿರ್ವಹಣೆ ಹುದ್ದೆಗಳಲ್ಲಿ ಶೇ. 50 ರಷ್ಟು ಮತ್ತು ಶೇ.75 ರಷ್ಟು ನಿರ್ವಹಣೇತರ ಹುದ್ದೆಗಳಲ್ಲಿ ನೇಮಕ ಮಾಡುವುದನ್ನು ಮಸೂದೆ ಕಡ್ಡಾಯಗೊಳಿಸುತ್ತದೆ.
ʻರಾಜ್ಯ ತಂತ್ರಜ್ಞಾನ ಕ್ಷೇತ್ರದಲ್ಲಿ ಅಗ್ರಣಿಯಾಗಿದ್ದು, ಅದರ ಪ್ರಮುಖ ಸ್ಥಾನದ ಮೇಲೆ ಆದೇಶ ಪರಿಣಾಮ ಬೀರಬಾರದುʼ ಎಂದು ಮಜುಂದಾರ್ ಶಾ ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.
ʻಟೆಕ್ ಕೇಂದ್ರವಾಗಿ ನಮಗೆ ನುರಿತ ಉನ್ನತ ಪ್ರತಿಭೆಗಳ ಅಗತ್ಯವಿದೆ. ಸ್ಥಳೀಯರಿಗೆ ಉದ್ಯೋಗ ನೀತಿಯಿಂದ ತಂತ್ರಜ್ಞಾನದಲ್ಲಿ ನಮ್ಮ ಮುಖ್ಯ ಸ್ಥಾನದ ಮೇಲೆ ಪರಿಣಾಮ ಬೀರಬಾರದು. ಹೆಚ್ಚು ಕೌಶಲ ಅಗತ್ಯವಿರುವ ನೇಮಕಗಳಿಗೆ ಈ ನೀತಿಯಿಂದ ವಿನಾಯಿತಿ ನೀಡಬೇಕು,ʼ ಎಂದು ಶಾ ಹೇಳಿದ್ದಾರೆ.