
ಕೌಶಲ್ಯವಿರುವ ಮಾನವ ಸಂಪನ್ಮೂಲಕ್ಕೆ ಯಾವುದೇ ಕೊರತೆಯಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ನಮ್ಮ ರಾಜ್ಯದಲ್ಲಿ ಹೂಡಿಕೆಗೆ ಪೂರಕ ವಾತಾವರಣವಿದೆ: ಸಿಎಂ ಸಿದ್ದರಾಮಯ್ಯ
ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ (WEF) ಸಮಾವೇಶದಲ್ಲಿ ಉಪಮುಖ್ಯಮಂತ್ರಿಗಳು ಹಾಗೂ ಕೈಗಾರಿಕಾ ಸಚಿವರು ಭಾಗವಹಿಸಿದ್ದಾರೆ.
ರಾಜ್ಯದಲ್ಲಿ ಹೂಡಿಕೆಗೆ ಅತ್ಯುತ್ತಮ ಅವಕಾಶ ಮತ್ತು ಪೂರಕ ವಾತಾವರಣವಿದ್ದು, ಕೌಶಲ್ಯವಿರುವ ಮಾನವ ಸಂಪನ್ಮೂಲಕ್ಕೆ ಯಾವುದೇ ಕೊರತೆಯಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇಂದು ಮೈಸೂರು ವಿಮಾನ ನಿಲ್ದಾಣದಲ್ಲಿ ಜಿಲ್ಲಾಡಳಿತದಿಂದ ಗೌರವ ವಂದನೆ ಸ್ವೀಕರಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ ಸಮಾವೇಶದಲ್ಲಿ ಉಪಮುಖ್ಯಮಂತ್ರಿಗಳು ಹಾಗೂ ಕೈಗಾರಿಕಾ ಸಚಿವರು ಭಾಗವಹಿಸಿದ್ದಾರೆ. ರಾಜ್ಯದಲ್ಲಿ ಲಭ್ಯವಿರುವ ಮಾನವ ಸಂಪನ್ಮೂಲಕ್ಕೆ ಅಗತ್ಯ ತರಬೇತಿಯನ್ನು ನೀಡಲಾಗುತ್ತಿದ್ದು, ತರಬೇತಿ ಪಡೆದವರಿಗೆ ನೂರರಷ್ಟು ಉದ್ಯೋಗ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಧಾನ ಮಂಡಲದ ಅಧಿವೇಶನದಲ್ಲಿ ರಾಜ್ಯಪಾಲರು ರಾಷ್ಟ್ರಪತಿಗಳಿಗೆ ವರದಿ ನೀಡಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಸಿಎಂ, ಸಂವಿಧಾನದ 176 ಮತ್ತು 163ನೇ ಪರಿಚ್ಛೇದದ ಪ್ರಕಾರ ರಾಜ್ಯಪಾಲರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಬೇಕು. ಸರ್ಕಾರ ಸಿದ್ಧಪಡಿಸಿಕೊಟ್ಟಿರುವ ಭಾಷಣವನ್ನೇ ಅವರು ಓದಬೇಕಾಗುತ್ತದೆ. ಆದರೆ, ಸರ್ಕಾರ ನೀಡಿದ ಭಾಷಣವನ್ನು ರಾಜ್ಯಪಾಲರು ಬದಲಾಯಿಸುವ ಸಾಧ್ಯತೆ ಇರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಜೆಡಿಎಸ್ ವಿರುದ್ಧ ವಾಗ್ದಾಳಿ
ಇದೇ ವೇಳೆ ಜೆಡಿಎಸ್ ಸಮಾವೇಶ ಹಾಗೂ ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಕಾನೂನಿನ ಪ್ರಕಾರವೇ ಪ್ರಜ್ವಲ್ ರೇವಣ್ಣ ಬಂಧನವಾಗಿದೆ. ಈ ಪ್ರಕರಣದಲ್ಲಿ ಮಾತ್ರವಲ್ಲದೆ ಯಾವುದೇ ಪ್ರಕರಣದಲ್ಲಿಯೂ ಸರ್ಕಾರ ಮಧ್ಯಪ್ರವೇಶ ಮಾಡುವುದಿಲ್ಲ. ಅಧಿಕಾರಿಗಳಿಗೆ ಸರ್ಕಾರ ಬಹುಮಾನ ನೀಡಿದೆ ಎಂಬುದು ಸುಳ್ಳು ಎಂದು ಸ್ಪಷ್ಟಪಡಿಸಿದರು. ನಮಗೂ ಸಮಯ ಬರುತ್ತದೆ ಎಂಬ ಹೆಚ್.ಡಿ.ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿ, ಕೇವಲ 17 ಸ್ಥಾನ ಗೆದ್ದಿರುವವರು ಹೇಗೆ ಅಧಿಕಾರಕ್ಕೆ ಬರುತ್ತಾರೆ? ಜೆಡಿಎಸ್ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ. ಕಾಂಗ್ರೆಸ್ 140 ಸ್ಥಾನಗಳನ್ನು ಗಳಿಸಿದ್ದು, 2028ರಲ್ಲೂ ನಾವೇ ಅಧಿಕಾರಕ್ಕೆ ಬರುತ್ತೇವೆ. ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಂಡರೂ ಅಧಿಕಾರ ಹಿಡಿಯಲು ಸಾಧ್ಯವಿಲ್ಲ ಎಂದರು.

