ಆರ್ಥಿಕ ಸಂಕಷ್ಟದಲ್ಲಿ ರಾಜ್ಯ: ಕೃಷ್ಣಾ ಯೋಜನೆಗೆ ಸಂಪನ್ಮೂಲ ಹೊಂದಿಸಲು ಗ್ಯಾರಂಟಿಗಳಿಗೆ ಕತ್ತರಿ?
x

ಆರ್ಥಿಕ ಸಂಕಷ್ಟದಲ್ಲಿ ರಾಜ್ಯ: ಕೃಷ್ಣಾ ಯೋಜನೆಗೆ ಸಂಪನ್ಮೂಲ ಹೊಂದಿಸಲು ಗ್ಯಾರಂಟಿಗಳಿಗೆ ಕತ್ತರಿ?

ರಾಜ್ಯ ಸರ್ಕಾರ ಇತ್ತೀಚೆಗೆ ವಿಶೇಷ ಸಚಿವ ಸಂಪುಟ ಸಭೆ ನಡೆಸಿ, ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತಕ್ಕಾಗಿ ಮುಳುಗಡೆಯಾಗುವ ಜಮೀನಿಗೆ ಪರಿಹಾರ ನೀಡಲು ತೀರ್ಮಾನ ಕೈಗೊಂಡಿತ್ತು. ಇದಕ್ಕಾಗಿ ಈ ವರ್ಷವೇ ಕನಿಷ್ಠ 20,000 ಕೋಟಿ ರೂ.ಗಳನ್ನು ಹೊಂದಿಸಬೇಕಿದೆ.


ರಾಜ್ಯದ ಉತ್ತರ ಕರ್ನಾಟಕ ಭಾಗದ ಜೀವನಾಡಿಯಾದ ಕೃಷ್ಣಾ ಮೇಲ್ದಂಡೆ ಯೋಜನೆಗೆ ಭೂ ಪರಿಹಾರ ನೀಡುವ ಸರ್ಕಾರದ ಐತಿಹಾಸಿಕ ತೀರ್ಮಾನದ ಹಿಂದೆ, ಆರ್ಥಿಕ ಸಂಕಷ್ಟದ ಆತಂಕಕಾರಿ ಚಿತ್ರಣವೊಂದು ಅನಾವರಣಗೊಂಡಿದೆ. ಅಭಿವೃದ್ಧಿಗೆ ಹಣದ ಕೊರತೆಯಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪದೇ ಪದೆ ಹೇಳುತ್ತಿದ್ದರೂ, ವಾಸ್ತವದಲ್ಲಿ ರಾಜ್ಯದ ಬೊಕ್ಕಸ ಚಿಂತಾಜನಕ ಸ್ಥಿತಿಯಲ್ಲಿದೆ ಎಂಬ ಆಂತರಿಕ ವರದಿಯೊಂದು ಸರ್ಕಾರದ ನಿದ್ದೆಗೆಡಿಸಿದೆ. ಕೃಷ್ಣಾ ಯೋಜನೆಗೆ 70,000 ಕೋಟಿ ರೂ. ಹೊಂದಿಸಲು, ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಿಗೆ ಕತ್ತರಿ ಹಾಕಬೇಕಾಗಬಹುದು ಎಂದು ಹಣಕಾಸು ಇಲಾಖೆಯೇ ಸ್ಪಷ್ಟ ಎಚ್ಚರಿಕೆ ನೀಡಿರುವುದು ಇದೀಗ ಬೆಳಕಿಗೆ ಬಂದಿದೆ.

ರಾಜ್ಯ ಸರ್ಕಾರ ಇತ್ತೀಚೆಗೆ ವಿಶೇಷ ಸಚಿವ ಸಂಪುಟ ಸಭೆ ನಡೆಸಿ, ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತಕ್ಕಾಗಿ ಮುಳುಗಡೆಯಾಗುವ ಜಮೀನಿಗೆ ಪರಿಹಾರ ನೀಡಲು ಮಹತ್ವದ ತೀರ್ಮಾನ ಕೈಗೊಂಡಿತ್ತು. ಇದಕ್ಕಾಗಿ ಈ ವರ್ಷವೇ ಕನಿಷ್ಠ 20,000 ಕೋಟಿ ರೂ.ಗಳನ್ನು ಹೊಂದಿಸಬೇಕಿದೆ. ಆದರೆ, ಹಣಕಾಸು ಇಲಾಖೆಯ ವರದಿಯ ಪ್ರಕಾರ, ರಾಜ್ಯದ ಆರ್ಥಿಕ ಸ್ಥಿತಿ ಈ ಬೃಹತ್ ವೆಚ್ಚವನ್ನು ಭರಿಸುವ ಸ್ಥಿತಿಯಲ್ಲಿಲ್ಲ. ಹಾಗಾಗಿ, ಈ ಹಣವನ್ನು ಹೊಂದಿಸಲು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಂಖ್ಯೆಯನ್ನು ಕಡಿತಗೊಳಿಸಬೇಕು ಅಥವಾ ಯೋಜನೆಗಳನ್ನು "ತರ್ಕಬದ್ಧಗೊಳಿಸಬೇಕು" ಎಂದು ಹಣಕಾಸು ಇಲಾಖೆ ಸೂಚಿಸಿದೆ. ಇದು ಕೇವಲ ಗ್ಯಾರಂಟಿಗಳಿಗಷ್ಟೇ ಅಲ್ಲ, ರೈತರ ಪಂಪ್‌ಸೆಟ್‌ಗಳಿಗೆ ನೀಡುವ ಉಚಿತ ವಿದ್ಯುತ್ (IP Set) ಯೋಜನೆಗೂ ಕತ್ತರಿ ಬೀಳುವ ಸಾಧ್ಯತೆಯನ್ನು ತೆರೆದಿಟ್ಟಿದೆ

ಆರ್ಥಿಕ ಇಲಾಖೆಯ ಆತಂಕಕಾರಿ ಸೂಚನೆ

ರಾಜ್ಯದ ಆರ್ಥಿಕ ವಾಸ್ತವ ಸ್ಥಿತಿಯನ್ನು ಅಂಕಿ-ಅಂಶಗಳ ಸಮೇತ ಮುಂದಿಟ್ಟಿರುವ ಹಣಕಾಸು ಇಲಾಖೆ, ಆದಾಯದ ಕೊರತೆ ಮತ್ತು ಸಂಪನ್ಮೂಲ ಕ್ರೋಢೀಕರಣದ ಅಸಾಧ್ಯತೆಯನ್ನು ಸ್ಪಷ್ಟಪಡಿಸಿದೆ. 2025-26ನೇ ಸಾಲಿನಲ್ಲಿ ಅಂದಾಜಿಸಿದ್ದ ರಾಜಸ್ವ ಸಂಗ್ರಹಣೆಯಲ್ಲಿ, ಮೊದಲ ಐದು ತಿಂಗಳಲ್ಲೇ 7,413 ಕೋಟಿ ರೂ.ಗಳ ಕೊರತೆ ಉಂಟಾಗಿದೆ. ಕೇಂದ್ರ ಸರ್ಕಾರದ ಜಿಎಸ್‌ಟಿ ತರ್ಕಬದ್ಧಗೊಳಿಸುವಿಕೆಯಿಂದಾಗಿ, ರಾಜ್ಯಕ್ಕೆ ವಾರ್ಷಿಕ 15,000 ಕೋಟಿ ರೂ. ನಷ್ಟವಾಗಲಿದೆ. ಇದರ ಜೊತೆಗೆ, ಗಣಿಗಾರಿಕೆ ಮೇಲಿನ ತೆರಿಗೆ ವಿಧೇಯಕಕ್ಕೆ ರಾಷ್ಟ್ರಪತಿಗಳ ಅಂಕಿತ ಸಿಗದ ಕಾರಣ, ನಿರೀಕ್ಷಿತ 3,000 ಕೋಟಿ ರೂ. ಆದಾಯ ಬರುವುದು ಅನುಮಾನ. ಒಟ್ಟಾರೆಯಾಗಿ, ಈ ವರ್ಷ ರಾಜ್ಯದ ರಾಜಸ್ವ ಸ್ವೀಕೃತಿಯಲ್ಲಿ ಅಂದಾಜು 22,000 ಕೋಟಿ ರೂ.ಗಳ ಬೃಹತ್ ಕೊರತೆ ಎದುರಾಗಲಿದೆ ಎಂದು ಇಲಾಖೆ ತಿಳಿಸಿದೆ.

ಹೆಚ್ಚುವರಿ ಸಾಲಕ್ಕೂ ಇಲ್ಲ ಅವಕಾಶ

ಈಗಾಗಲೇ ರಾಜ್ಯ ಸರ್ಕಾರವು ತನ್ನ ಸಾಲ ಪಡೆಯುವ ಮಿತಿಯನ್ನು ಸಂಪೂರ್ಣವಾಗಿ ತಲುಪಿದೆ. ಆರ್ಥಿಕ ಹೊಣೆಗಾರಿಕೆ ಅಧಿನಿಯಮದ ಪ್ರಕಾರ, ರಾಜ್ಯದ ವಿತ್ತೀಯ ಕೊರತೆ ಮತ್ತು ಒಟ್ಟು ಹೊಣೆಗಾರಿಕೆ ನಿಗದಿತ ಮಿತಿಯಲ್ಲಿರುವುದರಿಂದ, ಹೆಚ್ಚುವರಿ ಸಾಲ ಪಡೆಯಲು ಯಾವುದೇ ಅವಕಾಶವಿಲ್ಲ. ಇದೇ ಪರಿಸ್ಥಿತಿ ಮುಂದಿನ ನಾಲ್ಕು ವರ್ಷಗಳ ಕಾಲ ಮುಂದುವರಿಯಲಿದೆ ಎಂದು ಹಣಕಾಸು ಇಲಾಖೆ ಸ್ಪಷ್ಟಪಡಿಸಿದೆ. ತೆರಿಗೆ ದರಗಳನ್ನು ಈಗಾಗಲೇ ಹೆಚ್ಚಿಸಿರುವುದರಿಂದ, ಮತ್ತೊಮ್ಮೆ ತೆರಿಗೆ ಏರಿಕೆಗೂ ಅವಕಾಶವಿಲ್ಲ.

ವೆಚ್ಚ ಕಡಿತವೇ ಏಕೈಕ ದಾರಿ?

ಸಂಪನ್ಮೂಲ ಕ್ರೋಢೀಕರಣ ಮತ್ತು ಸಾಲಕ್ಕೆ ಅವಕಾಶವಿಲ್ಲದ ಕಾರಣ, ವೆಚ್ಚ ಕಡಿತವೊಂದೇ ಸರ್ಕಾರದ ಮುಂದಿರುವ ದಾರಿ. ಕೃಷ್ಣಾ ಯೋಜನೆಗೆ ವಾರ್ಷಿಕ 18,000 ಕೋಟಿ ರೂ. ಹೊಂದಿಸಲು, ಅಭಿವೃದ್ಧಿ ವೆಚ್ಚಗಳಲ್ಲಿ (ಗ್ಯಾರಂಟಿ ಮತ್ತು ಬದ್ಧ ವೆಚ್ಚ ಹೊರತುಪಡಿಸಿ) ಶೇ. 20ರಷ್ಟು ಕಡಿತ ಮಾಡಬೇಕಾಗುತ್ತದೆ. ಇದು ಶಿಕ್ಷಣ, ಆರೋಗ್ಯ, ನಗರಾಭಿವೃದ್ಧಿ ಸೇರಿದಂತೆ ಎಲ್ಲಾ ಇಲಾಖೆಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ.

ಗ್ಯಾರಂಟಿಗೆ ಕೊಕ್ಕೆ. ಸರ್ಕಾರಕ್ಕೆ ಧರ್ಮಸಂಕಟ

ಹಣಕಾಸು ಇಲಾಖೆ ಎರಡು ಆಯ್ಕೆಗಳನ್ನು ಸರ್ಕಾರದ ಮುಂದಿಟ್ಟಿದೆ: ಎಲ್ಲಾ ಇಲಾಖೆಗಳ ಅಭಿವೃದ್ಧಿ ವೆಚ್ಚವನ್ನು ಕಡಿತಗೊಳಿಸುವುದು, ಅಥವಾ ಅಭಿವೃದ್ಧಿ ವೆಚ್ಚ ಕಡಿತ ಮಾಡದಿದ್ದರೆ, ಗ್ಯಾರಂಟಿ ಯೋಜನೆಗಳು ಮತ್ತು ಐಪಿ ಸೆಟ್ ಸಹಾಯಧನದಲ್ಲಿ 15,000 ಕೋಟಿ ರೂ. ಕಡಿತಗೊಳಿಸುವುದು. ಈ ಹಿನ್ನೆಲೆಯಲ್ಲಿ, ಸರ್ಕಾರವು "ಕೃಷ್ಣೆಯ ಮಕ್ಕಳಿಗೆ" ನೀಡಿದ ಪರಿಹಾರದ ಭರವಸೆಯನ್ನು ಈಡೇರಿಸಲು, ತಾನೇ ಜಾರಿಗೆ ತಂದ "ಗ್ಯಾರಂಟಿ" ಯೋಜನೆಗಳಿಗೆ ಕೊಕ್ಕೆ ಹಾಕಲಿದೆಯೇ? ಅಥವಾ, ಕೃಷ್ಣಾ ಕಣಿವೆಯ ಜನರ ದಶಕಗಳ ಬೇಡಿಕೆಯನ್ನು ಮತ್ತೊಮ್ಮೆ ಬದಿಗೊತ್ತಿ, ಅವರ ಕಣ್ಣೀರಿನ ಕಥೆಯನ್ನು ಮುಂದುವರಿಸಲಿದೆಯೇ ಎಂಬ ನಿರ್ಣಾಯಕ ಪ್ರಶ್ನೆ ಈಗ ಸಿದ್ದರಾಮಯ್ಯ ಸರ್ಕಾರದ ಮುಂದಿದೆ.

Read More
Next Story