ನಮ್ಮ ಮೆಟ್ರೋ ರಾಜ್ಯದ್ದಲ್ಲ, ಕೇಂದ್ರ ಸರ್ಕಾರದ್ದು ಎಂದ ಹೈಕೋರ್ಟ್
x

ನಮ್ಮ ಮೆಟ್ರೋ ರಾಜ್ಯದ್ದಲ್ಲ, ಕೇಂದ್ರ ಸರ್ಕಾರದ್ದು ಎಂದ ಹೈಕೋರ್ಟ್

ಮೆಟ್ರೋ ನೌಕರರ ಮುಷ್ಕರವನ್ನು ನಿಯಂತ್ರಿಸಲು ರಾಜ್ಯ ಸರ್ಕಾರ 'ಎಸ್ಮಾ' ಜಾರಿಗೊಳಿಸಿದ್ದನ್ನು ಪ್ರಶ್ನಿಸಿ ಬಿಎಂಆರ್‌ಸಿಎಲ್‌ ನೌಕರರ ಸಂಘವು ನ್ಯಾಯಾಲಯದ ಮೊರೆ ಹೋಗಿತ್ತು.


Click the Play button to hear this message in audio format

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ, ಅದು ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುವ ಒಂದು 'ರೈಲ್ವೆ ಕಂಪನಿ' ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಮೂಲಕ, 'ನಮ್ಮ ಮೆಟ್ರೋ' ಸೇವೆಗಳನ್ನು 'ಅತ್ಯವಶ್ಯಕ ಸೇವೆ' ಎಂದು ಪರಿಗಣಿಸಿ, ನೌಕರರ ಮುಷ್ಕರವನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಹೊರಡಿಸಿದ್ದ 'ಎಸ್ಮಾ' (Karnataka Essential Services Maintenance Act) ಅಧಿಸೂಚನೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಸರ್ಕಾರದ ಅಧಿಕಾರಕ್ಕೆ ಬಿದ್ದ ಬ್ರೇಕ್

ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ಏಕಸದಸ್ಯ ಪೀಠವು, ಬಿಎಂಆರ್‌ಸಿಎಲ್‌ ನೌಕರರ ಸಂಘ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ ಈ ತೀರ್ಪು ನೀಡಿದೆ. 2017ರಲ್ಲಿ ಮೆಟ್ರೋ ಸೇವೆಯನ್ನು 'ಅತ್ಯವಶ್ಯಕ ಸೇವೆ' ಎಂದು ಮತ್ತು 2019ರಲ್ಲಿ 'ಸಾರ್ವಜನಿಕ ಉಪಯುಕ್ತ ಸೇವೆ' ಎಂದು ರಾಜ್ಯ ಸರ್ಕಾರ ಹೊರಡಿಸಿದ್ದ ಎರಡೂ ಅಧಿಸೂಚನೆಗಳನ್ನು ನ್ಯಾಯಾಲಯ ರದ್ದುಪಡಿಸಿದೆ. ಈ ಮೂಲಕ, ಮೆಟ್ರೋ ನೌಕರರ ಯಾವುದೇ ಕೈಗಾರಿಕಾ ವ್ಯಾಜ್ಯಗಳನ್ನು ಪರಿಹರಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆಯೇ ಹೊರತು ರಾಜ್ಯ ಸರ್ಕಾರಕ್ಕಿಲ್ಲ ಎಂದು ಸ್ಪಷ್ಟಪಡಿಸಿದೆ.

ಕೇಂದ್ರದ ನಿಯಂತ್ರಣವೇ ಅಂತಿಮ

ಬಿಎಂಆರ್‌ಸಿಎಲ್‌ನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಲಾ ಶೇ. 50ರಷ್ಟು ಷೇರುಗಳನ್ನು ಹೊಂದಿದ್ದರೂ, ಆಡಳಿತಾತ್ಮಕ ವಿಚಾರಗಳಲ್ಲಿ ಕೇಂದ್ರ ಸರ್ಕಾರದ ನಿರ್ಧಾರವೇ ಅಂತಿಮವಾಗಿರುತ್ತದೆ ಎಂದು ನ್ಯಾಯಾಲಯ ಹೇಳಿದೆ. "ಮೆಟ್ರೋ ರೈಲ್ವೆಗಳು ಕೇಂದ್ರದ ಕಾಯಿದೆಗಳಿಂದ ನಿಯಂತ್ರಿಸಲ್ಪಡುತ್ತವೆ. ರಾಜ್ಯ ಸರ್ಕಾರವು ಮೆಟ್ರೋ ಸೇವೆಗಳ ನಿರ್ವಹಣೆ ಮತ್ತು ಕಾರ್ಯಾಚರಣೆ ನಡೆಸಬೇಕಾದರೆ ಕೇಂದ್ರದಿಂದ ಅನುಮತಿ ಪಡೆಯುವುದು ಕಡ್ಡಾಯ. ಹೀಗಿರುವಾಗ, ಎಸ್ಮಾ ಕಾಯಿದೆಯಡಿ ಮೆಟ್ರೋ ಸೇವೆಯನ್ನು ಅತ್ಯವಶ್ಯಕ ಸೇವೆ ಎಂದು ಘೋಷಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ" ಎಂದು ಪೀಠವು ತನ್ನ ಆದೇಶದಲ್ಲಿ ತಿಳಿಸಿದೆ.

ನೌಕರರ ಸಂಘದ ವಾದಕ್ಕೆ ಮನ್ನಣೆ

ಮೆಟ್ರೋ ನೌಕರರ ಮುಷ್ಕರವನ್ನು ನಿಯಂತ್ರಿಸಲು ರಾಜ್ಯ ಸರ್ಕಾರ 'ಎಸ್ಮಾ' ಜಾರಿಗೊಳಿಸಿದ್ದನ್ನು ಪ್ರಶ್ನಿಸಿ ಬಿಎಂಆರ್‌ಸಿಎಲ್‌ ನೌಕರರ ಸಂಘವು ನ್ಯಾಯಾಲಯದ ಮೊರೆ ಹೋಗಿತ್ತು. ತಮ್ಮ ಕೈಗಾರಿಕಾ ವಿವಾದಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವೇ 'ಸಂಬಂಧಪಟ್ಟ ಸರ್ಕಾರ' (appropriate government) ಆಗಿರುವುದರಿಂದ, ರಾಜ್ಯ ಸರ್ಕಾರದ ಆದೇಶ ಅಸಿಂಧು ಎಂದು ಸಂಘ ವಾದಿಸಿತ್ತು. ಈ ವಾದವನ್ನು ಮನ್ನಿಸಿದ ಹೈಕೋರ್ಟ್, ರಾಜ್ಯ ಸರ್ಕಾರದ ಅಧಿಸೂಚನೆಗಳನ್ನು ರದ್ದುಪಡಿಸಿ, ನೌಕರರ ವ್ಯಾಜ್ಯಗಳನ್ನು ಕೇಂದ್ರ ಸರ್ಕಾರದ ಕೈಗಾರಿಕಾ ನ್ಯಾಯಮಂಡಳಿಯೇ ವಿಚಾರಣೆ ನಡೆಸಬೇಕು ಎಂದು ನಿರ್ದೇಶನ ನೀಡಿದೆ.

Read More
Next Story