
Water Contamination| ಬರಿದಾಗುತ್ತಿದೆ ಅಂತರ್ಜಲ; 45 ತಾಲೂಕುಗಳಲ್ಲಿ ಜೀವಜಲ ಕಲುಷಿತ!
ಪ್ರಸ್ತುತ, ವಾರ್ಷಿಕ ಹೊರತೆಗೆಯುವಿಕೆ ಪ್ರಮಾಣ 11.58 ಬಿಲಿಯನ್ ಕ್ಯೂಬಿಕ್ ಮೀಟರ್ ಇದೆ. ಈ ಅಂತರ್ಜಲದಲ್ಲಿ ಬಳಕೆಯ ಪ್ರಮಾಣವು ಶೇ 66.49 ರಷ್ಟಿದೆ ಎಂದು ವರದಿ ಹೇಳಿದೆ.
ಕರ್ನಾಟಕದಲ್ಲಿ ನೀರು ಕಲುಷಿತದ ಪರಿಣಾಮ ಅಂತರ್ಜಲವೂ ವಿಷವಾಗಿ ಬದಲಾಗಿದೆ. ಮಧ್ಯಪ್ರದೇಶದ ಇಂದೋರ್ ನಲ್ಲಿ ಕಲುಷಿತ ನೀರು ಸೇವನೆಯಿಂದ ಪ್ರಾಣಹಾನಿ ಸಂಭವಿಸಿದ್ದ ಬೆನ್ನಲ್ಲೇ ಬೆಂಗಳೂರಿನ ಲಿಂಗರಾಜಪುರಂನಲ್ಲಿ ಕಲುಷಿತ ನೀರು ಪೂರೈಕೆಯಾಗಿ ಆತಂಕ ಸೃಷ್ಟಿಸಿತ್ತು.
ಕಲುಷಿತ ನೀರಿನ ಚರ್ಚೆಯ ಬೆನ್ನಲ್ಲೇ ಕೇಂದ್ರ ಅಂತರ್ಜಲ ಮಂಡಳಿ (CGWB) ಮತ್ತು ರಾಜ್ಯದ ಅಂತರ್ಜಲ ಇಲಾಖೆ ಜಂಟಿಯಾಗಿ ನಡೆಸಿದ ಅಧ್ಯಯನದಲ್ಲಿ ಕರ್ನಾಟಕದ ಅಂತರ್ಜಲ ಸ್ಥಿತಿಗತಿಯನ್ನು ಬಹಿರಂಗಪಡಿಸಿದೆ. ಅಂತರ್ಜಲ ಮಂಡಳಿಯು 2025 ನವೆಂಬರ್ ತಿಂಗಳಲ್ಲಿ ವರದಿ ಪ್ರಕಟಿಸಿದೆ.
ಅಂತರ್ಜಲದಲ್ಲಿ ಹೇಗಿದೆ ರಾಜ್ಯದ ಪರಿಸ್ಥಿತಿ?
ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕೊಳವೆಬಾವಿಗಳೇ ಕುಡಿಯುವ ನೀರು ಒದಗಿಸುವ ಜಲಮೂಲಗಳಾಗಿವೆ. ಪ್ರತಿ ವರ್ಷದಂತೆ ಈ ವರ್ಷವೂ ಅಂತರ್ಜಲ ಹೊರತೆಗೆಯುವ ಪ್ರಮಾಣ ಕರ್ನಾಟಕದಲ್ಲಿ ಹೆಚ್ಚಾಗಿದೆ. 2025-26 ರಲ್ಲಿ ಶೇ66.49 ಬಿಲಿಯನ್ ಕ್ಯೂಬಿಕ್ ಮೀಟರ್ ಅಂತರ್ಜಲ ಹೊರತೆಗೆಯಲಾಗಿದೆ.
ರಾಜ್ಯದ ಪ್ರತಿ ತಾಲೂಕಿನಲ್ಲಿ 'ವಾರ್ಷಿಕವಾಗಿ ಹೊರತೆಗೆಯಬಹುದಾದ ಅಂತರ್ಜಲ' ಮತ್ತು 'ವಾರ್ಷಿಕವಾಗಿ ಹೊರತೆಗೆದಿರುವ ಅಂತರ್ಜಲ ಪ್ರಮಾಣʼವನ್ನು ನೀಡಲಾಗಿದೆ. ರಾಜ್ಯದಲ್ಲಿ ಸುರಕ್ಷಿತ ಅಂತರ್ಜಲದ ಪ್ರಮಾಣ ಶೇ 70 ಕ್ಕಿಂತ ಕಡಿಮೆ ಅಥವಾ ಅದಕ್ಕೆ ಸಮನಾಗಿದೆ. ಅರೆ-ಅಪಾಯಕಾರಿ ಸ್ಥಿತಿಯಲ್ಲಿ ಶೇ 70 ಕ್ಕಿಂತ ಹೆಚ್ಚು ಮತ್ತು ಶೇ 90 ಕ್ಕಿಂತ ಕಡಿಮೆ ಇದೆ. ಅಪಾಯಕಾರಿ ಮಟ್ಟದಲ್ಲಿ ಶೇ 90 ಕ್ಕಿಂತ ಹೆಚ್ಚು ಮತ್ತು ಶೇ 100 ಕ್ಕಿಂತ ಕಡಿಮೆ ಇದೆ. ಅತಿಯಾದ ಅಂತರ್ಜಲ ಬಳಕೆ ಪ್ರಮಾಣ ಶೇ 100 ಕ್ಕಿಂತ ಹೆಚ್ಚಿದೆ.
ಅಂತರ್ಜಲ ಸಂಪನ್ಮೂಲ ಮೌಲ್ಯಮಾಪನದಲ್ಲಿ 2025, 2024, 2023, 2022 ಮತ್ತು 2020 ರ ಅಂದಾಜುಗಳನ್ನು ಐಐಟಿ ಹೈದರಾಬಾದ್ ಸಹಯೋಗದೊಂದಿಗೆ ಕೇಂದ್ರ ಅಂತರ್ಜಲ ಮಂಡಳಿಯು ಅಭಿವೃದ್ಧಿಪಡಿಸಿದ “INDIA-GROUNDWATER RESOURCE ESTIMATION SYSTEM (IN-GRES)” ಎಂಬ ಸಾಫ್ಟ್‌ವೇರ್ ಮೂಲಕ ಸಮೀಕ್ಷೆ ನಡೆಸಲಾಗಿದೆ.
ಕರ್ನಾಟಕದಲ್ಲಿ ವಾರ್ಷಿಕ 1,035.07 ಮಿ.ಮೀ. ಮಳೆಯಾಗುತ್ತಿದೆ. ರಾಜ್ಯದ ಬಹುತೇಕ ಭಾಗಗಳು ಪುರಾತನ ಕಠಿಣ ಶಿಲೆಗಳಿಂದ ಕೂಡಿದೆ. ಉತ್ತರದ ಭಾಗಗಳಲ್ಲಿ ದಖನ್ ಪ್ರಸ್ತಭೂಮಿ ಶಿಲೆಗಳಿವೆ. ಕರಾವಳಿ ತೀರ ಮತ್ತು ನದಿ ಪಾತ್ರಗಳಲ್ಲಿ ಮಾತ್ರ ಮೆಕ್ಕಲು ಮಣ್ಣು ಕಂಡುಬರುತ್ತದೆ. ಜಲ ಮರುಪೂರಣಕ್ಕೆ ಯೋಗ್ಯವಾದ ಪ್ರದೇಶವು 1.71 ಲಕ್ಷ ಚದರ ಕಿ.ಮೀ. ಇದೆ. ಹಾಗಾಗಿ ಅಂತರ್ಜಲ ಮರುಪೂರಣ ಪ್ರದೇಶ ಕಡಿಮೆ ಇದೆ ಎಂದು ವರದಿ ಹೇಳಿದೆ.
ಅಂತರ್ಜಲ ಸಂಪನ್ಮೂಲ ಸಮೀಕ್ಷೆಯನ್ನು ಒಟ್ಟು 237 ತಾಲೂಕುಗಳಲ್ಲಿ ನಡೆಸಲಾಗಿದೆ. ವಾರ್ಷಿಕವಾಗಿ ಅಂತರ್ಜಲ ಮರುಪೂರಣ 19.27 ಬಿಲಿಯನ್ ಕ್ಯೂಬಿಕ್ ಮೀಟರ್ ಪ್ರದೇಶದಲ್ಲಿ ನಡೆಯುತ್ತಿದೆ. ಹೊರತೆಗೆಯಬಹುದಾದ ಸಂಪನ್ಮೂಲವು 17.41 ಬಿಲಿಯನ್ ಕ್ಯೂಬಿಕ್ ಮೀಟರ್ ಇದೆ. ಪ್ರಸ್ತುತ, ವಾರ್ಷಿಕ ಹೊರತೆಗೆಯುವಿಕೆ ಪ್ರಮಾಣ 11.58 ಬಿಲಿಯನ್ ಕ್ಯೂಬಿಕ್ ಮೀಟರ್ ಇದೆ. ಈ ಅಂತರ್ಜಲದಲ್ಲಿ ಬಳಕೆಯ ಪ್ರಮಾಣವು ಶೇ 66.49 ರಷ್ಟಿದೆ ಎಂದು ವರದಿ ಹೇಳಿದೆ.
45 ತಾಲೂಕುಗಳಲ್ಲಿ ಅತಿಯಾದ ಬಳಕೆ
237 ತಾಲ್ಲೂಕುಗಳ ಪೈಕಿ 45 ತಾಲೂಕುಗಳಲ್ಲಿ ಅತಿಯಾಗಿ ಅಂತರ್ಜಲ ಬಳಕೆಯಾಗುತ್ತಿದೆ. 11 ತಾಲೂಕುಗಳಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದೆ. 36 ತಾಲೂಕಿಗಳಲ್ಲಿ ಅರೆ-ಅಪಾಯಕಾರಿಯಾಗಿದ್ದರೆ, 145 ತಾಲೂಕುಗಳಲ್ಲಿ ಅಂತರ್ಜಲವು ಸುರಕ್ಷಿತವಾಗಿದೆ. ಆದರೆ, ಯಾವುದೇ ತಾಲ್ಲೂಕು 'ಲವಣಯುಕ್ತ' (Saline) ಶ್ರೇಣಿಯಲ್ಲಿಲ್ಲ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ.
ಕೇಂದ್ರ ಅಂತರ್ಜಲ ಮಂಡಳಿ ಹಲವು ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದೆ. ವಿದ್ಯುತ್ ವಾಹಕತೆಗೆ ಸಂಬಂಧಿಸಿದಂತೆ 398 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದೆ. ಇದರಲ್ಲಿ ಕೇವಲ 60 ಮಾತ್ರ ಬಳಕೆಗೆ ಯೋಗ್ಯವಾಗಿವೆ.
ಫ್ಲೋರೈಡ್‌ಗೆ ಸಂಬಂಧಿಸಿದ 398 ಮಾದರಿಗಳನ್ನು ಪರೀಕ್ಷೆ ನಡೆಸಿದ್ದು,1.5 ಮಿಲಿ ಗ್ರಾಂ ಬಳಕೆಗೆ ಯೋಗ್ಯವಾಗಿದೆ. ಆದರೆ, ಈ ನಮೂನೆಗಳಲ್ಲಿ 67 ಮಾತ್ರ ಬಳಸಬಹುದಾಗಿದೆ. ಉಳಿದ ಮಾದರಿಗಳಲ್ಲಿ ಹೆಚ್ಚಿನ ಫ್ಲೋರೈಡ್ ಅಂಶ ಇರುವುದು ಪತ್ತೆಯಾಗಿದೆ.
ನೈಟ್ರೇಟ್ ಅಂಶವಿರುವ 398 ಮಾದರಿಗಳ ಪರೀಕ್ಷೆಯಲ್ಲಿ (45 ಎಂಜಿ) 181 ಮಾತ್ರ ಬಳಕೆಗೆ ಯೋಗ್ಯವಾಗಿವೆ. ಆರ್ಸೆನಿಕ್ ಅಂಶವಿರುವ 118 ಮಾದರಿಗಳ ತಪಾಸಣೆಯಲ್ಲಿ ಕೇವಲ 2 ಮಾತ್ರ ಬಳಕೆಗೆ ಅರ್ಹವಾಗಿವೆ. ಯುರೇನಿಯಂ ಅಂಶವಿರುವ 118 ನಮೂನೆಗಳಲ್ಲಿ 10 ಮಾತ್ರ ಬಳಕೆಗೆ ಯೋಗ್ಯವಾಗಿವೆ. ಯುರೇನಿಯಂ ಪ್ರಮಾಣ 30ಪಿಪಿಬಿ ಇದ್ದರೆ ಮಾತ್ರ ಬಳಸಬಹುದಾಗಿದೆ.
ಯಾವ ಜಿಲ್ಲೆಯಲ್ಲಿ ಹೆಚ್ಚು ಖನಿಜಾಂಶ?
ವಿದ್ಯುತ್ ವಾಹಕ( EC 3000 μS/cm) ಅಂದರೆ ನೀರಿನಲ್ಲಿ ಕರಗುವ ಹೆಚ್ಚಿನ ಖನಿಜಾಂಶಗಳು ಬಾಗಲಕೋಟೆ, ಬೆಳಗಾವಿ, ಬೆಳಗಾವಿ, ಬಿಜಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಧಾರವಾಡ, ಗದಗ,ಕೊಪ್ಪಳ, ರಾಯಚೂರು, ತುಮಕೂರು, ವಿಜಯನಗರ, ವಿಜಯಪುರ, ಯಾದಗಿರಿ ಜಿಲ್ಲೆಯಲ್ಲಿವೆ.
ಫ್ಲೋರೈಡ್ ಅಂಶವು ಬಾಗಲಕೋಟೆ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೋಲಾರ, ಕೊಪ್ಪಳ, ಮೈಸೂರು, ರಾಯಚೂರು, ರಾಮನಗರ, ತುಮಕೂರು, ವಿಜಯಪುರ, ಯಾದಗಿರಿ ಜಿಲ್ಲೆಯಲ್ಲಿ ಹೆಚ್ಚಿದೆ. ಈ ಜಿಲ್ಲೆಗಳಲ್ಲಿ ಪ್ರತಿ ಲೀಟರ್ ನೀರಿನಲ್ಲಿ 1.5 ಮಿಲಿ ಗ್ರಾಂ ಫ್ಲೋರೈಡ್ ಅಂಶವಿದೆ.
ನೈಟ್ರೇಟ್ ಅಂಶವು ಬಾಗಲಕೋಟೆ, ಬೆಳಗಾವಿ, ಬೆಳಗಾವಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬೀದರ್, ಬಿಜಾಪುರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಕ್ಷಿಣ ಕನ್ನಡ, ದಾವಣಗೆರೆ, ಧಾರವಾಡ, ಗದಗ, ಗುಲ್ಬರ್ಗ, ಹಾಸನ, ಹಾವೇರಿ, ಕಲಬುರಗಿ, ಕೊಡಗು, ಕೋಲಾರ, ಕೊಪ್ಪಳ, ಮಂಡ್ಯ, ಮೈಸೂರು, ರಾಯಚೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಹೆಚ್ಚಿದೆ. ಈ ಜಿಲ್ಲೆಗಳಲ್ಲಿ ಲೀಟರ್ ನೀರಿನಲ್ಲಿ 45 ಮಿಲಿ ಗ್ರಾಂ ನೈಟ್ರೇಟ್ ಅಂಶವಿದೆ.
ಗದಗ ಹಾಗೂ ರಾಯಚೂರು ಜಿಲ್ಲೆಯಲ್ಲಿ ಆರ್ಸೆನಿಕ್ ಅಂಶ ಕಂಡುಬಂದಿದೆ. ಎರಡೂ ಜಿಲ್ಲೆಗಳಲ್ಲಿ 10 ಪಿಪಿಬಿ( ಪಾರ್ಟ್ಸ್ ಪರ್ ಬಿಲಿಯನ್) ಆರ್ಸೆನಿಕ್ ಅಂಶವಿದೆ.
ವರದಿಯ ಶಿಫಾರಸುಗಳೇನು?
- ಕರ್ನಾಟಕದ ಬಹುಭಾಗವು ಪೆನಿನ್ಸುಲರ್ ಬಂಡೆ, ಗ್ರಾನೈಟ್ಸ್ ಮತ್ತು ಧಾರವಾಡ್ ಶಿಲಾಖಂಡಗಳಿಂದ (ಜೇಡಿ ಮಣ್ಣಿನಿಂದ ರೂಪಾಂತರವಾಗಿ ಶಿಲೆ) ಆವೃತವಾಗಿವೆ. ಇಲ್ಲಿ 1000 ಮಿ.ಮೀ ಗಿಂತ ಹೆಚ್ಚು ಮಳೆ ಆಗುತ್ತಿದೆ. ಕಠಿಣ ಶಿಲಾ ಪ್ರದೇಶಗಳಲ್ಲಿ ಮಳೆ ನೀರು ಕೊಯ್ಲು ಮತ್ತು ಜಲ ಸಂರಕ್ಷಣಾ ಘಟಕಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಿಸಬೇಕಿದೆ.
- ಮೇಲ್ಮೈ ನೀರು ಸಂಗ್ರಹ ಹಾಗೂ ಮರುಪೂರಣದ ಮೂಲಕ ಅಂತರ್ಜಲ ಹೆಚ್ಚಿಸಲು ಅಸ್ತಿತ್ವದಲ್ಲಿರುವ ಎಲ್ಲಾ ಕೆರೆಗಳ ಪುನಶ್ಚೇತನ ಕಾರ್ಯವನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಬೇಕು.
- ಅಂತರ್ಜಲ ನಿರ್ವಹಣೆಯಲ್ಲಿ ಕೇಂದ್ರ ಅಂತರ್ಜಲ ಮಂಡಳಿ ಪ್ರಕಟಿಸುವ 'ರಾಷ್ಟ್ರೀಯ ಜಲ ಮ್ಯಾಪಿಂಗ್' (NAQUIM) ವರದಿ ಮತ್ತು ಅಂತರ್ಜಲ ಗುಣಮಟ್ಟದ ದತ್ತಾಂಶ ಬಳಸಿಕೊಳ್ಳಬೇಕು.
- ನೀರಾವರಿ ಕ್ಷೇತ್ರವು ಶೇ 89 ರಷ್ಟು ಅಂತರ್ಜಲ ಬಳಸುತ್ತಿದೆ. ಆದ್ದರಿಂದ, ನೀರಿನ ದಕ್ಷತೆ ಹೆಚ್ಚಿಸಲು ಮತ್ತು ಅಂತರ್ಜಲದ ಮೇಲಿನ ಹೊರೆ ತಗ್ಗಿಸಲು ಹನಿ ಮತ್ತು ತುಂತುರು ನೀರಾವರಿ ಪದ್ಧತಿಗಳನ್ನು ಅಳವಡಿಸಬೇಕು.
- ರೈತರು ಮತ್ತು ಸಾರ್ವಜನಿಕರಿಗೆ ಜಲ ಸಂರಕ್ಷಣೆಯ ಬಗ್ಗೆ ಶಿಬಿರಗಳು, ಪ್ರಬಂಧ ಸ್ಪರ್ಧೆಗಳು ಮತ್ತು ತರಬೇತಿ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಬೇಕು.
- ನಗರ ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ಕೈಗಾರಿಕಾ ತ್ಯಾಜ್ಯ, ಘನತ್ಯಾಜ್ಯ ಮತ್ತು ಒಳಚರಂಡಿ ನೀರನ್ನು ಸಂಸ್ಕರಿಸಿದ ನಂತರವೇ ವಿಲೇವಾರಿ ಮಾಡಬೇಕು, ಇದರಿಂದ ಅಂತರ್ಜಲ ಕಲುಷಿತ ತಡೆಯಬಹುದು.
- ಜಲ ಶಕ್ತಿ ಸಚಿವಾಲಯ ಹೊರಡಿಸಿದ ಅಂತರ್ಜಲ ಹೊರತೆಗೆಯುವಿಕೆ ನಿಯಂತ್ರಣ ಮಾರ್ಗಸೂಚಿಗಳನ್ನು (ಸೆಪ್ಟೆಂಬರ್ 2020 ಮತ್ತು ಮಾರ್ಚ್ 2023 ರ ತಿದ್ದುಪಡಿ) ಸಂಬಂಧಿತ ಇಲಾಖೆಗಳು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.

