
Bank Robbery |ದೊಡ್ಡಬಳ್ಳಾಪುರದ ಕರ್ನಾಟಕ ಗ್ರಾಮೀಣ ಬ್ಯಾಂಕ್ ದರೋಡೆ ಪ್ರಕರಣ; ಎರಡು ವರ್ಷದ ಬಳಿಕ ಸೆರೆಸಿಕ್ಕ ನಾಲ್ವರು ಆರೋಪಿಗಳು
2022ರಲ್ಲಿ ಮುಖವಾಡ ಧರಿಸಿ ಬಂದಿದ್ದ 12 ಮಂದಿ ದುಷ್ಕರ್ಮಿಗಳ ತಂಡ ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಕರ್ನಾಟಕ ಗ್ರಾಮೀಣ ಬ್ಯಾಂಕ್ನೊಳಗೆ ನುಗ್ಗಿ, ಗ್ಯಾಸ್ ಕಟರ್ನಿಂದ ಲಾಕರ್ ಮುರಿದು ಬರೋಬ್ಬರಿ 3 ಕೋಟಿ 50 ಲಕ್ಷ ರೂ. ಮೌಲ್ಯದ 5 ಕೆ.ಜಿ ಚಿನ್ನ, 15 ಲಕ್ಷ ನಗದು ದೋಚಿ ಪರಾರಿಯಾಗಿತ್ತು.
ದೊಡ್ಡಬಳ್ಳಾಪುರ ತಾಲೂಕಿನ ಗುಂಡಮಗೆರೆ ಹೊಸಹಳ್ಳಿಯಲ್ಲಿ ಎರಡು ವರ್ಷದ ಹಿಂದೆ ನಡೆದಿದ್ದ ಕರ್ನಾಟಕ ಗ್ರಾಮೀಣ ಬ್ಯಾಂಕ್ ದರೋಡೆ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಹೊಸಹಳ್ಳಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಒಟ್ಟು 12ಮಂದಿಯ ಪೈಕಿ ಈ ಹಿಂದಿನ ಸರ್ಕಲ್ ಇನ್‌ಸ್ಪೆಕ್ಟರ್ ಹರೀಶ್ ನೇತೃತ್ವದ ತಂಡವು ಮೂವರು ದರೋಡೆಕೋರರನ್ನು ಉತ್ತರ ಪ್ರದೇಶದ ಬದಾಯೂನ್ ಜಿಲ್ಲೆಯ ಅಲಾಪುರ್ ನಲ್ಲಿ ಬಂಧಿಸಿತ್ತು. ಈಗಿನ ಸರ್ಕಲ್ ಇನ್‌ಸ್ಪೆಕ್ಟರ್ ರಾವ್ ಗಣೇಶ್ ನೇತೃತ್ವದ ತಂಡವು ನಾಲ್ವರು ಆರೋಪಿಗಳನ್ನು ಬಂಧಿಸಿ ಕರೆತಂದಿದೆ. ಉಳಿದ ಐವರು ಆರೋಪಿಗಳಿಗಾಗಿ ಶೋಧ ಮುಂದುವರಿಸಿದೆ. ಆರೋಪಿಗಳನ್ನು ಶನಿವಾರ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.
ಏನಿದು ಘಟನೆ?
2022ರಲ್ಲಿ ನ.25 ರಂದು ಮುಖವಾಡ ಧರಿಸಿ ಬಂದಿದ್ದ 12 ಮಂದಿ ದುಷ್ಕರ್ಮಿಗಳ ತಂಡವು ಹೊಸಹಳ್ಳಿ ಕರ್ನಾಟಕ ಗ್ರಾಮೀಣ ಬ್ಯಾಂಕಿಗೆ ನುಗ್ಗಿ, ಗ್ಯಾಸ್ ಕಟರ್ನಿಂದ ಲಾಕರ್ ಮುರಿದು ಬರೋಬ್ಬರಿ 3 .50 ಕೋಟಿ ರೂ. ಮೌಲ್ಯದ 5 ಕೆ.ಜಿ ಚಿನ್ನ, 15 ಲಕ್ಷ ರೂ. ನಗದು ದೋಚಿ ಪರಾರಿಯಾಗಿತ್ತು.
ಬ್ಯಾಂಕ್ ದರೋಡೆ ಸಂಬಂಧ ಎಫ್‌ಐಆರ್ ದಾಖಲಿಕೊಂಡ ಪೊಲೀಸರಿಗೆ ಪ್ರಕರಣ ಬೇಧಿಸುವುದು ದೊಡ್ಡ ಸವಾಲಾಗಿತ್ತು. ಆದರೂ, ಸುಮಾರು ಒಂದು ವರ್ಷದ ಬಳಿಕ ಉತ್ತರಪ್ರದೇಶ ಮೂಲದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ತಲೆಮರೆಸಿಕೊಂಡಿದ್ದ ಉಳಿದ ಆರೋಪಿಗಳ ಪೈಕಿ ನಾಲ್ವರನ್ನು ಎರಡು ವರ್ಷದ ಬಳಿಕ ಬಂಧಿಸಲಾಗಿದೆ. ಬಂಧಿತ 7 ಮಂದಿ ಆರೋಪಿಗಳನ್ನು ಅಲಾಪುರ ನಿವಾಸಿಯಾದ ಟ್ರಕ್ ಚಾಲಕ ಸರ್ತಾಜ್, ಉಜಾನಿಯ ನಿವಾಸಿ ಕಾಳಿಚರಣ್, ಗುಡ್ಡು ಅಲಿಯಾಸ್ ಕಾಲಿಯಾ, ಅಸ್ಲಾಂ ಅಲಿಯಾಸ್ ಟನ್, ಹಸ್ರತ್ ಅಲಿ, ಕಮ್ರುದ್ದೀನ್ ಅಲಿಯಾಸ್ ಬಾಬು ಸರೇಲಿ ಎಂದು ಗುರುತಿಸಲಾಗಿದೆ.
ಟ್ರಕ್ ಗ್ಯಾಂಗ್ ಎಂದೇ ಕುಖ್ಯಾತಿ
2022ರ ನ.25 ರಂದು ಸಿನಿಮೀಯ ಶೈಲಿಯಲ್ಲಿ ಬ್ಯಾಂಕ್ ಲೂಟಿ ಮಾಡಿದ್ದ ದರೋಡೆಕೋರರನ್ನು ಟ್ರಕ್ ಗ್ಯಾಂಗ್ ಎಂದೇ ಕರೆಯಲಾಗಿತ್ತು. ಈ ತಂಡವು ಬ್ಯಾಂಕ್, ಮನೆ, ಎಟಿಎಂ ಯಂತ್ರಗಳನ್ನು ದರೋಡೆ ಮಾಡುವುದೇ ಕಾಯಕ ಮಾಡಿಕೊಂಡಿತ್ತು. ಉತ್ತರ ಪ್ರದೇಶದಿಂದ ಬರುತ್ತಿದ್ದ ಈ ಗ್ಯಾಂಗ್ ಒಮ್ಮೆ ದರೋಡೆ ಮಾಡಿಕೊಂಡು ಹೋದರೆ ಮತ್ತೆ ಆರು ತಿಂಗಳ ಬಳಿಕ ಇತ್ತ ಬರುತ್ತಿತ್ತು. ವಿವಿಧ ನಗರ,ಪಟ್ಟಣಗಳಲ್ಲಿ ಸಂಚರಿಸಿ ದರೋಡೆಗೆ ಹೊಂಚು ಹಾಕುತ್ತಿತ್ತು. ದರೋಡೆಗಾಗಿಯೇ ಬೃಹತ್ ಟ್ರಕ್ ಸಿದ್ದಪಡಿಸಿಕೊಂಡಿತ್ತು.
ಟ್ರಕ್ ನಲ್ಲಿ ಗ್ಯಾಸ್ ಕಟರ್, ಸಿಲಿಂಡರ್ ಸೇರಿದಂತೆ ಹಲವು ಉಪಕರಣಗಳನ್ನು ಇಟ್ಟುಕೊಂಡು ದರೋಡೆಗೆ ಸಂಚು ರೂಪಿಸುತ್ತಿದ್ದರು. ಹೊಸಹಳ್ಳಿಯು ದೊಡ್ಡಬಳ್ಳಾಪುರ ನಗರದಿಂದ ಸುಮಾರು 20ಕಿ.ಮೀ. ದೂರದಲ್ಲಿದ್ದು, ಜನಸಂದಣಿ ಕಡಿಮೆ ಇತ್ತು. ಈ ಹಿನ್ನೆಲೆಯಲ್ಲಿ ಬ್ಯಾಂಕ್ ವಹಿವಾಟು, ಜನರ ಚಲನವಲನ ಗಮನಿಸಿದ್ದ ದುಷ್ಕರ್ಮಿಗಳು ಹೊಂಚು ಹಾಕಿ ದರೋಡೆ ಎಸಗಿದ್ದರು. ಪೊಲೀಸರಿಗೆ ಸಿಸಿಟಿವಿ ದೃಶ್ಯದಲ್ಲಿ ಟ್ರಕ್ ಕಾಣಿಸಿತ್ತು. ಅನುಮಾನದ ಮೇರೆಗೆ ಟ್ರಕ್ ಪರಿಶೀಲಿಸಿ ಬೆನ್ನತ್ತಿದಾಗ ಆರೋಪಿಗಳ ಮಹತ್ವದ ಸುಳಿವು ಸಿಕ್ಕಿತ್ತು.
ಲಾರಿ ಚಾಲಕರ ಬೆರಳಚ್ಚು ಸಂಗ್ರಹ
ಕರ್ನಾಟಕ ಗ್ರಾಮೀಣ ಬ್ಯಾಂಕ್ ದರೋಡೆ ಪ್ರಕರಣ ಬೇಧಿಸಲು ವಿಳಂಬವಾಗಿದ್ದಕ್ಕೆ ಬ್ಯಾಂಕಿನ ಗ್ರಾಹಕರು ಪ್ರತಿಭಟನೆ ಕೂಡ ನಡೆಸಿದ್ದರು. ಆದರೆ, ದೊಡ್ಡಬೆಳವಂಗಲ ಹಾಗೂ ಹೊಸಹಳ್ಳಿ ಪೊಲೀಸರು ಮಾತ್ರ ಆರೋಪಿಗಳ ಪತ್ತೆಗಾಗಿ ಹಗಲಿರುಳು ಶ್ರಮಿಸಿದ್ದರು. ದಾಬಸ್‌ಪೇಟೆ-ಹೊಸಕೋಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವೇಳೆ ಸಂಚರಿಸುವ ಲಾರಿ ಹಾಗೂ ಟ್ರಕ್ ಚಾಲಕರನ್ನು ತೀವ್ರ ತಪಾಸಣೆ ನಡೆಸಿದ್ದರು. ಬ್ಯಾಂಕ್ ದರೋಡೆ ವೇಳೆ ದೊರೆತ ಬೆರಳಚ್ಚು ಮಾದರಿ ಸಂಗ್ರಹಿಸಿದ್ದ ಪೊಲೀಸರು ಅದಕ್ಕೆ ತಾಳೆಯಾಗುವ ಚಾಲಕರ ಬೆರಳಚ್ಚು ಸಂಗ್ರಹಿಸತೊಡಗಿದರು. ಹಾಗಾಗಿ ಟ್ರಕ್, ಲಾರಿ ಚಾಲಕರ ಬೆರಳಚ್ಚು ಸಂಗ್ರಹಿಸಲಾಗಿತ್ತು.