ಚಲೋ ದಿಲ್ಲಿ | ಐತಿಹಾಸಿಕ ಪ್ರತಿಭಟನೆಗೆ ಸಾಕ್ಷಿಯಾದ ಜಂತರ್-ಮಂತರ್‌
x
ಜಂತರ್‌ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಸಿಎಂ ಸಿದ್ದರಾಮಯ್ಯ ಭಾಷಣ (ಫೋಟೋ: INCKarnataka/x)

ಚಲೋ ದಿಲ್ಲಿ | ಐತಿಹಾಸಿಕ ಪ್ರತಿಭಟನೆಗೆ ಸಾಕ್ಷಿಯಾದ ಜಂತರ್-ಮಂತರ್‌

ತೆರಿಗೆ ಮತ್ತು ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ದೆಹಲಿಯಲ್ಲಿ ನಡೆಸಿದ ಹೋರಾಟ ಐತಿಹಾಸಿಕ ಪ್ರತಿರೋಧವಾಗಿ ದಾಖಲಾಯಿತು.


ದೆಹಲಿಯ ಜಂತರ್‌ ಮಂತರ್‌ ಬುಧವಾರ ಸ್ವತಂತ್ರ ಭಾರತದ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ರಾಜ್ಯದ ಸ್ವತಃ ಮುಖ್ಯಮಂತ್ರಿ ತಮ್ಮ ಸಂಪುಟದ ಸಚಿವರು, ಸಂಸದರು ಮತ್ತು ಪಕ್ಷದ ಶಾಸಕರೊಂದಿಗೆ ಜಂತರ್‌ ಮಂತರ್‌ನಲ್ಲಿ ಧರಣಿ ನಡೆಸಿದರು.

ಹಿಂದೆಂದೂ ಯಾವ ಸರ್ಕಾರದ ಅವಧಿಯಲ್ಲೂ ಹಣಕಾಸು ಹಂಚಿಕೆ ತಾರತಮ್ಯ, ಮಲತಾಯಿ ಧೋರಣೆಯನ್ನು ಖಂಡಿಸಿ ಮುಖ್ಯಮಂತ್ರಿಯೊಬ್ಬರು ಹೀಗೆ ಸಚಿವಸಂಪುಟ, ಲೋಕಸಭಾ, ರಾಜ್ಯಸಭಾ ಹಾಗೂ ವಿಧಾನಸಭಾ ಸದಸ್ಯರೊಂದಿಗೆ ದೆಹಲಿಗೆ ಬಂದು ಧರಣಿ ಕುಳಿದ ಉದಾಹರಣೆ ಇರಲಿಲ್ಲ. ಹಾಗಾಗಿ ಈ ಬೆಳವಣಿಗೆಯನ್ನು ರಾಷ್ಟ್ರ ರಾಜಕಾರಣ ಕುತೂಹಲದಿಂದ ಗಮನಿಸಿತು.

ಹಾಗೆ ನೋಡಿದರೆ, ಕಳೆದ ಒಂದು ದಶಕದಲ್ಲಿ ಹಣಕಾಸು ಹಂಚಿಕೆ ವಿಷಯದಲ್ಲಿ ಕೇಂದ್ರ ಅನ್ಯಾಯ ಎಸಗುತ್ತಿದೆ, ತಾರತಮ್ಯ ಮಾಡುತ್ತಿದೆ, ಉತ್ತರದ ರಾಜ್ಯಗಳಿಗೆ ಒಂದು, ದಕ್ಷಿಣದ ರಾಜ್ಯಗಳಿಗೆ ಮತ್ತೊಂದು ಬಗೆದು ಮಲತಾಯಿ ಧೋರಣೆ ತೋರುತ್ತಿದೆ ಎಂಬ ಆರೋಪ ಕರ್ನಾಟಕ ಮಾತ್ರವಲ್ಲದೆ, ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಿಂದ ಮತ್ತೆ ಮತ್ತೆ ಕೇಳಿಬರುತ್ತಲೇ ಇದೆ.

ಈ ಬಾರಿಯ ಕೇಂದ್ರ ಬಜೆಟ್‌ ನಲ್ಲಿ ಕರ್ನಾಟಕಕ್ಕೆ ಯಾವುದೇ ವಿಶೇಷ ಅನುದಾನ ಘೋಷಿಸದೇ ಇರುವುದು, ತೀವ್ರ ಬರ ಎದುರಿಸುತ್ತಿರುವ ರಾಜ್ಯದ ಬರ ಪರಿಹಾರ ಕೋರಿಕೆಗೆ ಯಾವ ಸ್ಪಂದನೆಯನ್ನೂ ನೀಡದೇ ಇರುವುದು, ಸಹಜವಾಗೇ ಕಾಂಗ್ರೆಸ್‌ ಸರ್ಕಾರವನ್ನು ಕೆರಳಿಸಿದೆ. ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕರ್ನಾಟಕದ ಹಿತಾಸಕ್ತಿ ರಕ್ಷಣೆಯ ಪ್ರಶ್ನೆಯನ್ನೇ ಮುಂದಿಟ್ಟುಕೊಂಡು ಸಿದ್ದರಾಮಯ್ಯ ಪ್ರಬಲ ಪ್ರತಿರೋಧವನ್ನು ಒಡ್ಡಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮೆಗಾ ಈವೆಂಟ್‌ ಆಗಿ ತಮ್ಮ ಪ್ರತಿರೋಧ, ಪ್ರತಿಭಟನೆಯನ್ನು ದಾಖಲಿಸುವ ಮೂಲಕ ಇಡೀ ಧರಣಿ ಒಂದು ರಾಷ್ಟ್ರೀಯ ಘಟನಾವಳಿಯಾಗಿ ಪ್ರದರ್ಶನವಾಗುಂತೆ ಮಾಡುವಲ್ಲಿಯೂ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ.

ಕನ್ನಡಿಗರ ಸ್ವಾಭಿಮಾನ, ಹಕ್ಕಿನ ಪ್ರಶ್ನೆ

ಜಂತರ್‌ ಮಂತರ್‌ನಲ್ಲಿ ತಮ್ಮ ಭಾಷಣದುದ್ದಕ್ಕೂ ಕರ್ನಾಟಕದ ಸ್ವಾಭಿಮಾನ, ಕನ್ನಡಿಗರ ಹಕ್ಕು ಮತ್ತು ಹಿತಾಸಕ್ತಿಯನ್ನು ಮತ್ತೆ ಮತ್ತೆ ಉಲ್ಲೇಖಿಸಿ ಸಿದ್ದರಾಮಯ್ಯ, ಬಿಜೆಪಿ ಸರ್ಕಾರದ ತಾರತಮ್ಯ, ಅಸಮಾನತೆಯ ನೀತಿಯ ವಿರುದ್ಧದ ಕನ್ನಡಿಗರ ಹೋರಾಟ ಇದು ಎಂಬುದನ್ನು ಪ್ರತಿಬಿಂಬಿಸಲು ಯತ್ನಿಸಿದರು. ಆ ಮೂಲಕ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ನೆಲ-ಜಲ ಮತ್ತು ಹಕ್ಕಿನ ಪ್ರಶ್ನೆಯನ್ನೇ ಮುಂದಿಟ್ಟುಕೊಂಡು ಬಿಜೆಪಿಯ ರಾಷ್ಟ್ರವಾದ, ಹಿಂದುತ್ವದಂತಹ ಮೆಗಾ ನರೇಟಿವ್‌ ಗಳಿಗೆ ಟಕ್ಕರ್‌ ಕೊಡುವ ಸುಳಿವು ನೀಡಿದ್ದಾರೆ.

ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ನಿರಂತರವಾಗಿ ದ್ರೋಹ, ವಂಚನೆ ಆಗುತ್ತಿದೆ. ಇತರೆ ಉತ್ತರದ ರಾಜ್ಯಗಳಿಗೆ ಅನುದಾನ ನೀಡುವ ವಿಚಾರದಲ್ಲಿ ನಮಗೆ ತೊಂದರೆಯಿಲ್ಲ. ಆದರೆ, ಕರ್ನಾಟಕಕ್ಕೆ, ಕನ್ನಡಿಗರಿಗೆ ದ್ರೋಹ ಮಾಡಬೇಡಿ. ಮಾಡದ ತಪ್ಪಿಗೆ ರಾಜ್ಯಕ್ಕೆ ಶಿಕ್ಷೆ ಕೊಟ್ಟು ಅನ್ಯಾಯ ಮಾಡಬೇಡಿ. ನಾವು ಯಾರಿಗೆ ಹಣ ನೀಡಿರುವುದನ್ನೂ ಪ್ರಶ್ನಿಸುತ್ತಿಲ್ಲ, ಅಥವಾ ಯಾವುದೇ ಪಕ್ಷ ಅಥವಾ ವ್ಯಕ್ತಿಯ ವಿರುದ್ಧ ಈ ಹೋರಾಟ ನಡೆಸುತ್ತಿಲ್ಲ. ನಾವು ನಮ್ಮ ಹಕ್ಕು ಕೇಳುತ್ತಿದ್ದೇವೆ. ನಮ್ಮ ಹಣ ನಮಗೆ ಕೊಡಿ, ನಮ್ಮ ಪಾಲು ನಮಗೆ ಕೊಡಿ ಎನ್ನುತ್ತಿದ್ದೇವೆ ಎಂದು ಹೇಳುವ ಮೂಲಕ ಅತ್ಯಂತ ಚಾಣಾಕ್ಷ ಮಾತನಾಡಿ, ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.

“ದೇಶದಲ್ಲೇ ಎರಡನೇ ಅತಿ ಹೆಚ್ಚು ತೆರಿಗೆ ಕಟ್ಟುವ ರಾಜ್ಯ ಕರ್ನಾಟಕ. ಕನ್ನಡಿಗರು ವರ್ಷಕ್ಕೆ 4.30 ಲಕ್ಷ ಕೋಟಿ ರೂ. ತೆರಿಗೆ ಕಟ್ಟುತ್ತೇವೆ. ನಮಗೆ ವಾಪಾಸ್ ಬರುವುದು ಕೇವಲ 50,000 ಕೋಟಿ ರೂ. ಮಾತ್ರ. ಅಂದರೆ ನಾವು ಕೊಡುವ ಪ್ರತಿ 100 ರೂ. ನಲ್ಲಿ ಕೇವಲ 13 ರೂ. ಮಾತ್ರ ನಮಗೆ ಮರಳಿ ಬರುತ್ತಿದೆ. 15 ನೇ ಹಣಕಾಸು ಆಯೋಗದಿಂದಾಗಿ ನಮಗೆ 62,098 ಕೋಟಿ ರೂ ನಮಗೆ ತೆರಿಗೆಯೊಂದರಲ್ಲೇ ಅನ್ಯಾಯ ಆಗಿದೆ. ಈ ಕಾರಣಗಳಿಗೇ ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ಕಳೆದ 10 ವರ್ಷಗಳಿಂದ ಹಂತ ಹಂತವಾಗಿ ರಾಜ್ಯದ ಪಾಲಿನ ತೆರಿಗೆ ಪಾಲು, ಕೇಂದ್ರದ ಅನುದಾನದ ಪಾಲು ನಿರಂತರವಾಗಿ ಕಡಿಮೆ ಆಗುತ್ತಿದೆ. ಜಿಎಸ್‌ಟಿಯಲ್ಲಿ ರಾಜ್ಯಕ್ಕೆ 59,000 ಕೋಟಿಗೂ ಅಧಿಕ ವಂಚನೆ ಆಗಿದೆ. ಇದು ಅನ್ಯಾಯವಲ್ಲವೆ? ಇದನ್ನು ಪ್ರಶ್ನಿಸುವುದು ಬೇಡವೇ? ನಮ್ಮ ಹಕ್ಕನ್ನು ಕೇಳುವುದು ತಪ್ಪೇ?” ಎಂದು ಪ್ರಶ್ನಿಸುವ ಮೂಲಕ ಸಿದ್ದರಾಮಯ್ಯ ರಾಜ್ಯದ ಬಿಜೆಪಿ ನಾಯಕರಿಗೂ ಚಾಟಿ ಬೀಸಿದರು.

ರಾಜ್ಯದಿಂದ ಆಯ್ಕೆ ಆಗಿರುವ ಬಿಜೆಪಿ ಸಂಸದರ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ, “ಬಿಜೆಪಿ ಸಂಸದರು ಮೋದಿ ಎದುರಿಗೆ ಕೋಲೆ ಬಸವನ ರೀತಿಯಲ್ಲಿ ತಲೆ ಅಲ್ಲಾಡಿಸುವುದು ಬಿಟ್ಟರೆ ರಾಜ್ಯದ ಪಾಲನ್ನು ಬಾಯಿ ಬಿಟ್ಟು ಕೇಳಲೇ ಇಲ್ಲ. ಯಡಿಯೂರಪ್ಪ, ಬೊಮ್ಮಾಯಿ ಅವರು ಸಿಎಂ ಆಗಿದ್ದಾಗಲೂ ಕೇಂದ್ರದ ಮುಂದೆ ರಾಜ್ಯದ ಹಕ್ಕು ಮಂಡಿಸಲು ಆಗ್ರಹಿಸಿದ್ದೆವು. ಮೋದಿ ಅವರ ಸರ್ಕಾರ ರಚಿಸಿದ 15 ನೇ ಹಣಕಾಸು ಆಯೋಗದಲ್ಲಿ ದಕ್ಷಿಣ ಭಾರತ ರಾಜ್ಯಗಳಿಂದ ಒಬ್ಬನೇ ಒಬ್ಬ ಸದಸ್ಯನೂ ಇರಲಿಲ್ಲ. ಇದರಿಂದ ನಮ್ಮ ರಾಜ್ಯಗಳಿಗೆ ಅನ್ಯಾಯ ಆಗಿದೆ. 15 ನೇ ಹಣಕಾಸು ಆಯೋಗ ಒಂದರಿಂದಲೇ ಇದುವರೆಗೂ ಒಟ್ಟು 1,87,000 ಕೋಟಿ ರಾಜ್ಯಕ್ಕೆ ಅನ್ಯಾಯ ಆಗಿದೆ. ರಾಜ್ಯಕ್ಕೆ ಭೀಕರ ಬರಗಾಲ ಬಂದರೂ ಇದುವರೆಗೂ ಬಿಡಿಗಾಸಿನ ಬರ ಪರಿಹಾರ ಕೊಟ್ಟಿಲ್ಲ” ಎಂದು ಸಿದ್ದರಾಮಯ್ಯ ಕಿಡಿ ಕಾರಿದರು.

ಬಳಿಕ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್‌, ಗ್ಯಾರಂಟಿ ಅನುಷ್ಠಾನದಿಂದ ಕರ್ನಾಟಕದ ಬೊಕ್ಕಸ ಖಾಲಿಯಾಗಿದೆ ಎಂಬ ಬಿಜೆಪಿ ನಾಯಕರ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ, “ಗ್ಯಾರಂಟಿ ಯೋಜನೆಯಿಂದ ಹಣ ಖಾಲಿಯಾಗಿಲ್ಲ. ಸರ್ಕಾರ ನಡೆಸುವ ಸಾಮರ್ಥ್ಯ ನಮಗಿದೆ. ಕೇಂದ್ರ ಬಿಜೆಪಿ ಸರ್ಕಾರ ನಮ್ಮ ಪಾಲಿನ ಹಣ ನೀಡಲಿ ಸಾಕು” ಎಂದು ಹೇಳಿದರು.

“ಬೇರೆ ರಾಜ್ಯಗಳು ಲಾಭ ಪಡೆಯುವ ಬಗ್ಗೆ ನಮಗೆ ಆಕ್ಷೇಪವಿಲ್ಲ. ಕೇಂದ್ರ ಸರ್ಕಾರ ಗುಜರಾತಿಗೆ ಗಿಫ್ಟ್ ಸಿಟಿ ಯೋಜನೆ ನೀಡಿದೆ. ನಮ್ಮ ರಾಜ್ಯಕ್ಕೂ ಒಂದು ಗಿಫ್ಟ್ ಸಿಟಿ ನೀಡಲಿ. ಎಲ್ಲಾ ರಾಜ್ಯಗಳಿಗೂ ಇಂತಹ ಯೋಜನೆ ನೀಡಲಿ. ಭಾರತ ಒಕ್ಕೂಟ ರಾಷ್ಟ್ರ. ನಮಗೂ ಯೋಜನೆ ನೀಡಿ ಎಂದು ನಾವು ಆಗ್ರಹಿಸುತ್ತಿದ್ದೇವೆ” ಎಂದು ಡಿಕೆಶಿ ಹೇಳಿದ್ದಾರೆ.

ಪ್ರತಿಭಟನೆಯಲ್ಲಿ ರಾಜ್ಯ ಸಚಿವ ಸಂಪುಟದ ಎಲ್ಲಾ ಸದಸ್ಯರು, ಸಂಸದರು, ರಾಜ್ಯಸಭಾ ಸದಸ್ಯರು ಸೇರಿದಂತೆ ಕಾಂಗ್ರೆಸ್‌ ನಾಯಕರು ಭಾಗವಹಿಸಿದ್ದರು.

ನಾಳೆ ಕೇರಳ ಸರ್ಕಾರದಿಂದಲೂ ಧರಣಿ

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೇರಳ ರಾಜ್ಯದ ಆಡಳಿತರೂಢ ಎಲ್‌ಡಿಎಫ್‌ ಮೈತ್ರಿಕೂಟವೂ ದೆಹಲಿಯಲ್ಲಿ ಪ್ರತಿಭಟನೆಗೆ ಮುಂದಾಗಿದೆ. ಈಗಾಗಲೇ ಕೇರಳ ಸಿಎಂ ಪಿಣರಾಯಿ ವಿಜಯನ್‌ ತಮ್ಮ ಸಚಿವ ಸಂಪುಟ ಹಾಗೂ ಮೈತ್ರಿಕೂಟದ ನಾಯಕರೊಂದಿಗೆ ದೆಹಲಿಗೆ ಆಗಮಿಸಿದ್ದು, ನಾಳೆ (ಫೆ.8) ರಂದು ಜಂತರ್‌ ಮಂತರ್‌ನಲ್ಲಿ ಅವರು ಪ್ರತಿಭಟನೆ ನಡೆಸಲಿದ್ದಾರೆ.

ಎಲ್‌ಡಿಎಫ್‌ ಮೈತ್ರಿಕೂಟದ ಪ್ರತಿಭಟನೆಗೆ ಕೇರಳದ ಪ್ರತಿಪಕ್ಷವಾಗಿರುವ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಮೈತ್ರಿ ಕೂಟ ಬೆಂಬಲ ನೀಡದಿದ್ದರೂ, ತಮಿಳುನಾಡು ಸಿಎಂ ಎಂ ಕೆ ಸ್ಟಾಲಿನ್‌, ಪಂಜಾಬ್‌ ಸಿಎಂ ಭಗವಂತ್‌ ಮಾನ್‌ ಸಿಂಗ್‌ ಹಾಗೂ ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಬೆಂಬಲ ವ್ಯಕ್ತಪಡಿಸಿದ್ದಾರೆ. ಆ ಮೂವರೂ ಮುಖ್ಯಮಂತ್ರಿಗಳು ಪಿಣರಾಯಿ ಅವರೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.

Read More
Next Story