
ಎಸ್‌ಬಿಐ, ಪಿಎನ್‌ಬಿ ಖಾತೆಗಳನ್ನು ಮುಚ್ಚುವಂತೆ ಇಲಾಖೆಗಳಿಗೆ ರಾಜ್ಯ ಸರ್ಕಾರ ಆದೇಶ
ಎರಡು ಬ್ಯಾಂಕ್‌ಗಳು ಸರ್ಕಾರಿ ಖಾತೆಗಳಿಂದ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪಗಳನ್ನು ಎದುರಿಸುತ್ತಿವೆ. ಹಾಗಾಗಿ ಈ ಆದೇಶ ಹೊರಡಿಸಲಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಜೊತೆಗಿನ ವಹಿವಾಟುಗಳನ್ನು ಸ್ಥಗಿತಗೊಳಿಸುವಂತೆ ಕರ್ನಾಟಕ ಸರ್ಕಾರವು ಎಲ್ಲಾ ರಾಜ್ಯ ಸರ್ಕಾರದ ಇಲಾಖೆಗಳಿಗೆ ಸೂಚನೆ ನೀಡಿದೆ.
ಬುಧವಾರ (ಆ.14) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದಿಸಿದ ಬಳಿಕ ಹಣಕಾಸು ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಆದೇಶದಲ್ಲಿ, ʻʻಎಸ್‌ಬಿಐ ಮತ್ತು ಪಿಎನ್‌ಬಿಯಲ್ಲಿನ ತಮ್ಮ ಖಾತೆಗಳನ್ನು ಮುಚ್ಚಲು ಮತ್ತು ತಕ್ಷಣದಿಂದಲೇ ಜಾರಿಗೆ ಬರುವಂತೆ ಠೇವಣಿಗಳನ್ನು ಮರುಪಡೆಯಲು ಎಲ್ಲಾ ರಾಜ್ಯ ಇಲಾಖೆಗಳಿಗೆ ತಿಳಿಸಲಾಗಿದೆ. ಇನ್ನು ಮುಂದೆ ಎರಡು ಬ್ಯಾಂಕ್‌ಗಳಲ್ಲಿ ಠೇವಣಿ ಇಡದಂತೆ ಇಲಾಖೆಗಳಿಗೆ ಸೂಚಿಸಲಾಗಿದೆʼʼ.
ʻʻರಾಜ್ಯ ಸರ್ಕಾರದ ಇಲಾಖೆಗಳಲ್ಲದೆ, ಆದೇಶವು ಸಾರ್ವಜನಿಕ ಉದ್ದಿಮೆಗಳು, ನಿಗಮಗಳು, ಸ್ಥಳೀಯ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಮತ್ತು ಇತರ ಸಂಸ್ಥೆಗಳಿಗೂ ಅನ್ವಯಿಸುತ್ತದೆʼʼ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಎಸ್‌ಬಿಐ ಮತ್ತು ಪಿಎನ್‌ಬಿ ಸರ್ಕಾರಿ ಖಾತೆಗಳಿಂದ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ನಡುವೆ ಸರ್ಕಾರದ ಈ ನಿರ್ದೇಶನ ಬಂದಿದೆ. ಆರೋಪದ ಮೇಲೆ ಸರ್ಕಾರ ಈ ಹಿಂದೆಯೇ ಬ್ಯಾಂಕ್‌ಗಳಿಗೆ ಎಚ್ಚರಿಕೆ ನೀಡಿದ್ದರೂ ಸಮಸ್ಯೆ ಬಗೆಹರಿಯದ ಕಾರಣ ಖಾತೆಗಳನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಲಾಗಿದೆ.