ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ: ರಾಜ್ಯ ಸರ್ಕಾರದಿಂದ ಪರಿಷ್ಕೃತ ರೋಸ್ಟರ್ ಆದೇಶ
x

ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ: ರಾಜ್ಯ ಸರ್ಕಾರದಿಂದ ಪರಿಷ್ಕೃತ ರೋಸ್ಟರ್ ಆದೇಶ

ಈ ಒಳಮೀಸಲಾತಿಯನ್ನು ನೇಮಕಾತಿಗಳಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಲು, ಸರ್ಕಾರವು 100 ಬಿಂದುಗಳ ಪರಿಷ್ಕೃತ ಮೀಸಲಾತಿ ರೋಸ್ಟರ್ ಅನ್ನು ಪ್ರಕಟಿಸಿದೆ.


ರಾಜ್ಯದ ಸಿವಿಲ್ ಸೇವೆಗಳಲ್ಲಿನ ನೇರ ನೇಮಕಾತಿಗಳಿಗೆ ಸಂಬಂಧಿಸಿದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಪ್ರಕಟಣೆ ಹೊರಡಿಸಿದ್ದು. ಪರಿಶಿಷ್ಟ ಜಾತಿಗಳಿಗೆ ಮೀಸಲಾದ ಶೇ. 17ರಷ್ಟು ಮೀಸಲಾತಿಯನ್ನು ಆಂತರಿಕವಾಗಿ ಮರುವಿಂಗಡನೆ ಮಾಡಲಾಗಿದೆ.

ಈ ಆದೇಶದ ಅನ್ವಯ, ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿರುವ 101 ಜಾತಿಗಳನ್ನು ಅವುಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳಿಗೆ ಅನುಗುಣವಾಗಿ ಪ್ರವರ್ಗ-ಎ, ಪ್ರವರ್ಗ-ಬಿ, ಮತ್ತು ಪ್ರವರ್ಗ-ಸಿ ಎಂದು ಮೂರು ಪ್ರವರ್ಗಗಳಾಗಿ ವರ್ಗೀಕರಿಸಲಾಗಿದೆ. ಈ ಪ್ರವರ್ಗಗಳಿಗೆ ಮೀಸಲಾತಿಯನ್ನು ಕ್ರಮವಾಗಿ ಶೇ. 6, ಶೇ. 6, ಮತ್ತು ಶೇ. 5ರಷ್ಟು ಹಂಚಿಕೆ ಮಾಡಲಾಗಿದೆ. ಈ ಮೂಲಕ, ಪರಿಶಿಷ್ಟ ಜಾತಿಗಳಿಗೆ ಒಟ್ಟಾರೆಯಾಗಿ ನೀಡಲಾಗುವ ಶೇ. 17ರಷ್ಟು ಮೀಸಲಾತಿಯನ್ನು ಆಂತರಿಕವಾಗಿ ಸಮಾನವಾಗಿ ಹಂಚುವ ಪ್ರಯತ್ನ ಮಾಡಲಾಗಿದೆ.

ಈ ಒಳಮೀಸಲಾತಿಯನ್ನು ನೇಮಕಾತಿಗಳಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಲು, ಸರ್ಕಾರವು 100 ಬಿಂದುಗಳ ಪರಿಷ್ಕೃತ ಮೀಸಲಾತಿ ರೋಸ್ಟರ್ ಅನ್ನು ಪ್ರಕಟಿಸಿದೆ. ಈ ಹಿಂದೆ, 2022ರ ಆದೇಶದಂತೆ ಪರಿಶಿಷ್ಟ ಜಾತಿಗಳಿಗೆ ನೀಡಲಾಗಿದ್ದ 17 ರೋಸ್ಟರ್ ಬಿಂದುಗಳು, ಈಗ ಹೊಸದಾಗಿ ರಚಿಸಲಾದ ಪ್ರವರ್ಗಗಳಿಗೆ ಅನುಗುಣವಾಗಿ ಮರುವಿಂಗಡಿಸಲಾಗಿದೆ.

ಈ ಆದೇಶವು ತಕ್ಷಣದಿಂದಲೇ ಜಾರಿಗೆ ಬರಲಿದೆ. ಒಂದು ವೇಳೆ, ಯಾವುದೇ ವೃಂದದ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯು ಹಳೆಯ ರೋಸ್ಟರ್ ಅನ್ವಯ ಈಗಾಗಲೇ ಆರಂಭವಾಗಿದ್ದರೆ, ಪ್ರಕ್ರಿಯೆ ನಿಂತಿರುವ ಬಿಂದುವಿನಿಂದಲೇ ಈ ಹೊಸ ಪರಿಷ್ಕೃತ ರೋಸ್ಟರ್ ಅನ್ನು ಅನುಸರಿಸಿ ಮುಂದುವರಿಸಬೇಕು ಎಂದು ಆದೇಶದಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ.

Read More
Next Story