
ರಾಜ್ಯದ 10 ಲಕ್ಷ ವಿದ್ಯಾರ್ಥಿನಿಯರಿಗೆ 'ಮುಟ್ಟಿನ ಕಪ್' ವಿತರಣೆ
ರಾಜ್ಯಾದ್ಯಂತ 'ಶುಚಿ' ಯೋಜನೆ ವಿಸ್ತರಣೆ: 10 ಲಕ್ಷಕ್ಕೂ ಅಧಿಕ ವಿದ್ಯಾರ್ಥಿನಿಯರಿಗೆ ಮುಟ್ಟಿನ ಕಪ್ ಭಾಗ್ಯ
ಸುಮಾರು 61 ಕೋಟಿ ರೂಪಾಯಿ ವೆಚ್ಚದಲ್ಲಿ ರಾಜ್ಯದ 10 ಲಕ್ಷಕ್ಕೂ ಅಧಿಕ ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೆ ಮುಟ್ಟಿನ ಕಪ್‌ಗಳನ್ನು ವಿತರಿಸಲು ಸರ್ಕಾರ ನಿರ್ಧರಿಸಿದೆ.
ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಶಾಲಾ-ಕಾಲೇಜು ವಿದ್ಯಾರ್ಥಿನಿಯರ ಆರೋಗ್ಯ ಮತ್ತು ನೈರ್ಮಲ್ಯವನ್ನು ಕಾಪಾಡುವ ನಿಟ್ಟಿನಲ್ಲಿ ರಾಜ್ಯದ ಆಯ್ದ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದ 'ಮುಟ್ಟಿನ ಕಪ್' ವಿತರಣಾ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ನಿರ್ಧರಿಸಿದೆ.
ಪ್ರಾಯೋಗಿಕ ಯೋಜನೆ ಯಶಸ್ವಿಯಾದ ಬೆನ್ನಲ್ಲೇ, ಈ ಯೋಜನೆಯನ್ನು ರಾಜ್ಯದಾದ್ಯಂತ ವಿಸ್ತರಿಸಲು ಸರ್ಕಾರ ಮುಂದಾಗಿದೆ. ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ಈ ಯೋಜನೆಯು ಅನುಷ್ಠಾನಗೊಳ್ಳುತ್ತಿದ್ದು, ರಾಜ್ಯ ವೈದ್ಯಕೀಯ ಸರಬರಾಜು ನಿಗಮದ ಮೂಲಕ ಸುಮಾರು 61 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಹತ್ತು ಲಕ್ಷಕ್ಕೂ ಅಧಿಕ ವಿದ್ಯಾರ್ಥಿನಿಯರಿಗೆ ಮುಟ್ಟಿನ ಕಪ್‌ಗಳನ್ನು ವಿತರಿಸಲು ಸರ್ಕಾರ ಹಸಿರು ನಿಶಾನೆ ತೋರಿದೆ.
ಈ ಯೋಜನೆಯು ಕೇವಲ ಆರೋಗ್ಯದ ದೃಷ್ಟಿಯಿಂದ ಮಾತ್ರವಲ್ಲದೆ, ಆರ್ಥಿಕವಾಗಿಯೂ ಸರ್ಕಾರಕ್ಕೆ ಲಾಭದಾಯಕವಾಗಿ ಪರಿಣಮಿಸಲಿದೆ. ಈ ಹಿಂದೆ ಸ್ಯಾನಿಟರಿ ನ್ಯಾಪ್ಕಿನ್‌ಗಳ ವಿತರಣೆಗಾಗಿ ವಾರ್ಷಿಕವಾಗಿ ಸುಮಾರು 71 ಕೋಟಿ ರೂಪಾಯಿಗಳನ್ನು ವ್ಯಯಿಸಲಾಗುತ್ತಿತ್ತು. ಈಗ ಮುಟ್ಟಿನ ಕಪ್‌ಗಳ ಬಳಕೆಯಿಂದಾಗಿ ಈ ವೆಚ್ಚದಲ್ಲಿ ಸರಿಸುಮಾರು 10 ಕೋಟಿ ರೂಪಾಯಿಗಳಷ್ಟು ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.
ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿನಿಗೆ ಒಂದು ಮುಟ್ಟಿನ ಕಪ್ ನೀಡಲು ನಿರ್ಧರಿಸಲಾಗಿದ್ದು, ಅಲ್ಲಿಯವರೆಗೆ ಮುಂದಿನ ಮೂರು ತಿಂಗಳ ಅವಧಿಗೆ ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ಒದಗಿಸುವುದನ್ನು ಇಲಾಖೆ ಮುಂದುವರಿಸಲಿದೆ.
ಕಳೆದ ಡಿಸೆಂಬರ್‌ನಲ್ಲಿ 'ಶುಚಿ ಕಿಟ್' ವಿತರಣೆಯಲ್ಲಿ ಉಂಟಾದ ವ್ಯತ್ಯಯದಿಂದಾಗಿ ಹದಿಹರೆಯದ ವಿದ್ಯಾರ್ಥಿನಿಯರು ಶಾಲೆಗಳಿಗೆ ಗೈರುಹಾಜರಾಗುತ್ತಿದ್ದಾರೆ ಎಂಬ ಗಂಭೀರ ವಿಷಯವು ಚರ್ಚೆಗೆ ಬಂದಿತ್ತು. ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಈ ಕುರಿತು ತೀವ್ರ ಚರ್ಚೆ ಕೂಡ ನಡೆದಿತ್ತು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಈ ಸಮಸ್ಯೆಗೆ ತಕ್ಷಣದ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದ್ದರು. ಅದರಂತೆ ಸದ್ಯಕ್ಕೆ ಮೂರು ತಿಂಗಳ ಅವಧಿಯ ಸ್ಯಾನಿಟರಿ ನ್ಯಾಪ್ಕಿನ್ ಪೂರೈಕೆಗೆ ಅನುಮೋದನೆ ಸಿಕ್ಕಿದ್ದು, ಮುಟ್ಟಿನ ಕಪ್‌ಗಳ ವಿತರಣೆಗೆ ಸಂಬಂಧಿಸಿದ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿವೆ. ಈ ಹೊಸ ಯೋಜನೆಯು ರಾಜ್ಯದ ವಿದ್ಯಾರ್ಥಿನಿಯರಲ್ಲಿ ಸುಸ್ಥಿರ ನೈರ್ಮಲ್ಯ ಪದ್ಧತಿಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ಮುಟ್ಟಿನ ರಜೆ
ಇತ್ತೀಚೆಗಷ್ಟೇ ರಾಜ್ಯದಲ್ಲಿ ಮುಟ್ಟಿನ ರಜೆ ನೀತಿ ಜಾರಿಗೊಳಿಸಿ ಕಾರ್ಮಿಕ ಇಲಾಖೆ ಅಧಿಕೃತ ಆದೇಶ ಹೊರಡಿಸಿತ್ತು.. ಉದ್ಯೋಗಸ್ಥ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ರಜೆಯನ್ನು ಕಡ್ಡಾಯವಾಗಿ ನೀಡುವಂತೆ ಆದೇಶದಲ್ಲಿ ತಿಳಿಸಲಾಗಿತ್ತು. ಅಂದರೆ, ಮಹಿಳಾ ನೌಕರರಿಗೆ ವರ್ಷಕ್ಕೆ ಒಟ್ಟು 12 ದಿನಗಳ ವೇತನ ಸಹಿತ ಮುಟ್ಟಿನ ರಜೆ ಲಭ್ಯವಾಗಲಿದೆ.
ಈ ನೀತಿಯು 18 ರಿಂದ 52 ವರ್ಷ ವಯೋಮಿತಿಯ ಎಲ್ಲಾ ಮಹಿಳಾ ನೌಕರರಿಗೆ ಅನ್ವಯಿಸುತ್ತದೆ. ಕಾಯಂ ಉದ್ಯೋಗಿಗಳು, ಗುತ್ತಿಗೆ ಆಧಾರದ ಮೇಲೆ ಮತ್ತು ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಮಹಿಳೆಯರಿಗೂ ಇದು ಕಡ್ಡಾಯವಾಗಿ ಅನ್ವಯವಾಗುತ್ತದೆ.
ಕಾರ್ಖಾನೆಗಳ ಕಾಯ್ದೆ-1948, ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ-1961, ತೋಟಗಾರಿಕಾ ಕಾರ್ಮಿಕರ ಕಾಯ್ದೆ-1951, ಬೀಡಿ ಮತ್ತು ಸಿಗರೇಟು ಕಾರ್ಮಿಕರ ಕಾಯ್ದೆ-1966, ಮತ್ತು ಮೋಟಾರು ವಾಹನ ಕಾರ್ಮಿಕರ ಕಾಯ್ದೆ-1961ರ ಅಡಿ ನೋಂದಣಿಯಾಗಿರುವ ಎಲ್ಲಾ ಸಂಸ್ಥೆಗಳು ಮುಟ್ಟಿನ ರಜೆ ನೀಡಬೇಕು. ಐಟಿ ಮತ್ತು ಐಟಿಇಎಸ್ ವಲಯದ ಕಂಪನಿಗಳು ಸಹ ಈ ವ್ಯಾಪ್ತಿಗೆ ಒಳಪಡುತ್ತವೆ.
ಪ್ರತಿ ತಿಂಗಳ ಮುಟ್ಟಿನ ರಜೆಯನ್ನು ಅದೇ ತಿಂಗಳಿನಲ್ಲಿಯೇ ಬಳಸಿಕೊಳ್ಳಬೇಕು. ಅದನ್ನು ಮುಂದಿನ ತಿಂಗಳಿಗೆ ವರ್ಗಾಯಿಸಲು ಅವಕಾಶ ಇರುವುದಿಲ್ಲ. ಮುಖ್ಯವಾಗಿ ಮಹಿಳಾ ನೌಕರರು ಈ ರಜೆ ಪಡೆಯಲು ಯಾವುದೇ ವೈದ್ಯಕೀಯ ಪ್ರಮಾಣ ಪತ್ರ ನೀಡುವ ಅವಶ್ಯಕತೆ ಇರುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿತ್ತು.
ಈಗ ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೆ 'ಮುಟ್ಟಿನ ಕಪ್' ವಿತರಣಾ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ನಿರ್ಧರಿಸಿರುವುದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಕಾರಣವಾಗಿದೆ.

