Karnataka’s Union Budget Wishlist 2025 | ಮಲೆನಾಡು ಅಭಿವೃದ್ಧಿಗೆ 10 ಸಾವಿರ ಕೋಟಿ ರೂ. ಅನುದಾನ ಘೋಷಣೆಗೆ ಮನವಿ
x
ಮಲೆನಾಡು ಸಾಂದರ್ಭಿಕ ಚಿತ್ರ

Karnataka’s Union Budget Wishlist 2025 | ಮಲೆನಾಡು ಅಭಿವೃದ್ಧಿಗೆ 10 ಸಾವಿರ ಕೋಟಿ ರೂ. ಅನುದಾನ ಘೋಷಣೆಗೆ ಮನವಿ

ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಮೂಲಸೌಕರ್ಯ ಮತ್ತು ವಿಪತ್ತು ಪರಿಹಾರ ಕ್ರಮಗಳನ್ನು ವಿಶೇಷ ಅನುದಾನ ಒದಗಿಸುವಂತೆ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.


ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ಬರುವ ಮಲೆನಾಡು ಪ್ರದೇಶದ ಮುಂದಿನ ಐದು ವರ್ಷಗಳ ಸಮಗ್ರ ಅಭಿವೃದ್ಧಿಗಾಗಿ 10,000 ಕೋಟಿ ರೂ.ಗಳ ಅನುದಾನ ಘೋಷಿಸುವಂತೆ ರಾಜ್ಯ ಸರ್ಕಾರ ಕೇಂದ್ರವನ್ನು ಒತ್ತಾಯಿಸಿದೆ.

ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶವು 20,668 ಚದರ ಕಿ.ಮೀ ವಿಸ್ತೀರ್ಣ ಹೊಂದಿದ್ದು, ಅದರ ವಿಶಿಷ್ಟ ಭೌಗೋಳಿಕ ಮತ್ತು ಪರಿಸರ ಗುಣಲಕ್ಷಣಗಳಿಂದಾಗಿ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಲ್ಪಟ್ಟಿರುವ ಈ ಪ್ರದೇಶವು ಜೀವವೈವಿಧ್ಯ ಸಂರಕ್ಷಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಪಶ್ಚಿಮ ಘಟ್ಟದ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆ ನಿರ್ಬಂಧಿಸಿರುವ ಹಿನ್ನೆಲೆಯಲ್ಲಿ ಅರಣ್ಯ ಸಂರಕ್ಷಣೆ ಹಾಗೂ ನಿರ್ವಹಣೆಗಾಗಿ ಭರಿಸುವ ವೆಚ್ಚ ಹೆಚ್ಚಾಗಿದೆ.

ಚದುರಿದಂತಿರುವ ವಸಹತುಗಳಲ್ಲಿ ಸೇವೆಗಳನ್ನು ಒದಗಿಸುವುದು ವೆಚ್ಚದಾಯಕವಾಗಿದೆ. ಇದಲ್ಲದೆ, ಈ ಪ್ರದೇಶಗಳಲ್ಲಿ ಆಗಾಗ್ಗೆ ಭೂಕುಸಿತ ಮತ್ತು ಮೇಘಸ್ಫೋಟ ಸೇರಿದಂತೆ ನೈಸರ್ಗಿಕ ವಿಕೋಪಗಳು ಸಂಭವಿಸುತ್ತಿರುತ್ತವೆ. ಇದರಿಂದ ಮೂಲಸೌಕರ್ಯ ಮತ್ತು ವಿಪತ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಲು ರಾಜ್ಯದ ಜವಾಬ್ದಾರಿಯನ್ನು ಹೆಚ್ಚಿಸಿದೆ. ಹಾಗಾಗಿ ವಿಶೇಷ ಅನುದಾನ ಒದಗಿಸುವಂತೆ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರನ್ನು ಒತ್ತಾಯಿಸಿದ್ದಾರೆ.

ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಅನುದಾನ ಕೋರಿಕೆ

ಹೈದರಾಬಾದ್-ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲಿ ಇಂದಿಗೂ ಪ್ರಾದೇಶಿಕ ಅಸಮತೋಲನ ನಿವಾರಣೆ ಸಾಧ್ಯವಾಗಿಲ್ಲ. ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಮೂಲಸೌಕರ್ಯದಂತಹ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಈ ಅಸಮಾನತೆಯಿಂದಾಗಿ ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಕುಂಠಿತವಾಗಿದೆ. ರಾಜ್ಯ ಸರ್ಕಾರವು ಹೈದರಾಬಾದ್-ಕರ್ನಾಟಕದ ಜಿಲ್ಲೆಗಳ ಅಭಿವೃದ್ಧಿಗಾಗಿ ವಾರ್ಷಿಕವಾಗಿ 5,000 ಕೋಟಿ ರೂ. ಖರ್ಚು ಮಾಡುತ್ತಿದೆ. ಆದರೂ ಈ ಮೊತ್ತ ಸಾಕಾಗುತ್ತಿಲ್ಲ. ಆದ್ದರಿಂದ ರಾಜ್ಯಕ್ಕೆ ಹೆಚ್ಚುವರಿ ಹಣಕಾಸಿನ ನೆರವು ನೀಡುವಂತೆ ಸಿಎಂ ಒತ್ತಾಯಿಸಿದ್ದಾರೆ.

ನಗರ ಮೂಲಸೌಕರ್ಯ ಸುಧಾರಣೆ

ನಗರ ಪ್ರದೇಶಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಸಮಗ್ರ ಹೊಸ ಯೋಜನೆ ಪ್ರಕಟಿಸುವಂತೆ ರಾಜ್ಯಸರ್ಕಾರ ಮನವಿ ಮಾಡಿದೆ. ನಿರಂತರ ಅಭಿವೃದ್ಧಿ ಮತ್ತು ಉತ್ಪಾದಕತೆಯನ್ನು ಬೆಂಬಲಿಸುವ ಜೊತೆಗೆ ಜನರ ಜೀವನ ಮಟ್ಟವನ್ನು ಸುಧಾರಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ.

ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ, ದಾವಣಗೆರೆ, ಬಳ್ಳಾರಿ, ರಾಯಚೂರು ಮತ್ತು ಕಲಬುರಗಿಯಂತಹ ನಗರಗಳು ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಅವಕಾಶಗಳನ್ನು ಒದಗಿಸಲು ಅನುದಾನದ ಅಗತ್ಯವಿದೆ. ನಗರೀಕರಣ ಮತ್ತು ದೇಶದ ಇತರ ಭಾಗಗಳಿಂದ ವಲಸೆ ಬರುವವರಿಂದಾಗಿ ಈ ನಗರಗಳ ಮೇಲೆ ಒತ್ತಡ ಹೆಚ್ಚಾಗಿದೆ. ಹೊಸ ಸಮಗ್ರ ಯೋಜನೆಯಿಂದ ಕೈಗೆಟುಕುವ ವಸತಿ, ಸುಸ್ಥಿರ ಸಾರಿಗೆ ವ್ಯವಸ್ಥೆ, ಶುದ್ಧ ನೀರು ಸರಬರಾಜು, ಆಧುನಿಕ ನೈರ್ಮಲ್ಯ ಸೌಲಭ್ಯ, ಗುಣಮಟ್ಟದ ಆರೋಗ್ಯ ಸೇವೆ ಹಾಗೂ ಹವಾಮಾನ ಬದಲಾವಣೆಗೆ ಹೊಂದಿಕೊಂಳ್ಳುವಂತಹ ಸುಧಾರಿತ ನಗರ ನಿರ್ಮಾಣಕ್ಕೆ ಅಗತ್ಯ ಮೂಲಸೌಕರ್ಯ ಒದಗಿಸಬೇಕಾಗಿದೆ. ಈ ಯೋಜನೆಗಳಿಗೆ ಹಣವನ್ನು ಒದಗಿಸುವ ಮೂಲಕ ಅಭಿವೃದ್ಧಿಗೆ ನೇರವಾಗಬೇಕು ಎಂದು ಸಿಎಂ ಕೊರಿದ್ದಾರೆ.

ವಸತಿ ಯೋಜನೆಯ ಸಹಾಯಧನ ಹೆಚ್ಚಳಕ್ಕೆ ಮನವಿ

ಕರ್ನಾಟಕದ ಜನಸಂಖ್ಯೆಯ ಶೇ 50% ಜನರು ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವುದರಿಂದ ಕೈಗೆಟುಕುವ ವಸತಿ ಸೌಲಭ್ಯಕ್ಕೆ ಬೇಡಿಕೆ ಹೆಚ್ಚಾಗಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) ಅಡಿ, ಕೇಂದ್ರ ಸರ್ಕಾರವು ಪ್ರತಿ ಫಲಾನುಭವಿಗೆ 1.50 ಲಕ್ಷ ರೂ.ಗಳ ಸಹಾಯಧನ ನೀಡುತ್ತಿದೆ. ರಾಜ್ಯ ಸರ್ಕಾರವು ರಾಜ್ಯ ವಸತಿ ಯೋಜನೆಗಳನ್ನು ಒಟ್ಟುಗೂಡಿಸುವ ಮೂಲಕ ಹೆಚ್ಚುವರಿಯಾಗಿ 1.80 ಲಕ್ಷ ರೂ.ಗಳನ್ನು ಒದಗಿಸುತ್ತಿದೆ. ಆದರೆ, ನಗರ ಪ್ರದೇಶದಲ್ಲಿ ಒಂದು ಕೊಠಡಿಯ ಮನೆ ನಿರ್ಮಿಸಲು ಕನಿಷ್ಠ 10 ಲಕ್ಷ ರೂ. ವೆಚ್ಚವಾಗಲಿದೆ. ಕೇಂದ್ರ ಹಾಗೂ ರಾಜ್ಯದ ನೀಡುವ ಮೊತ್ತ 3.30 ಲಕ್ಷ ರೂ. ಸಾಕಾಗುವುದಿಲ್ಲ. ಆದ್ದರಿಂದ, ಉತ್ತಮವಾದ ವಸತಿ ಸೌಲಭ್ಯ ಒದಗಿಸಲು ಕೇಂದ್ರ ಸರ್ಕಾರ ಪ್ರತಿ ಫಲಾನುಭವಿಗೆ ನೀಡುವ ಸಹಾಯಧನವನ್ನು ಕನಿಷ್ಠ 5 ಲಕ್ಷ ರೂ.ಗಳಿಗೆ ಏರಿಕೆ ಮಾಡಬೇಕು.

ಅದೇ ರೀತಿ, ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ಅಡಿ ಕೇಂದ್ರ ಸರ್ಕಾರವು ಪ್ರತಿ ಫಲಾನುಭವಿಗೆ 72 ಸಾವಿರ ಸಹಾಯಧನ ನೀಡುತ್ತದೆ. ರಾಜ್ಯ ಸರ್ಕಾರ 42 ಸಾವಿರ ರೂ.ಗಳನ್ನು ಒದಗಿಸುತ್ತದೆ. ಆದ್ದರಿಂದ, ಗ್ರಾಮೀಣ ಪ್ರದೇಶಗಳಲ್ಲಿ ಕೈಗೆಟುಕುವ ದರದಲ್ಲಿ ಮನೆ ನಿರ್ಮಿಸಿಕೊಳ್ಳಲು ಕೇಂದ್ರದ ಪಾಲನ್ನು ಪ್ರತಿ ಫಲಾನುಭವಿಗೆ 3 ಲಕ್ಷ ರೂ.ಗಳಿಗೆ ಹೆಚ್ಚಿಸುವಂತೆ ಸಿಎಂ ಮನವಿ ಮಾಡಿದ್ದಾರೆ.

ವಿದ್ಯುತ್ ವಿತರಣಾ ಕೇಂದ್ರಗಳಿಗೆ ನೆರವು ನೀಡಲು ಒತ್ತಾಯ

ರಾಜ್ಯದ ವಿದ್ಯುತ್ ವಿತರಣಾ ಕೇಂದ್ರಗಳು (DISCOMS) ಸಾಲದ ಸುಳಿಗೆ ಸಿಲುಕಿವೆ. ಹೆಚ್ಚುತ್ತಿರುವ ವಿದ್ಯುತ್ ಸರಬರಾಜು ವೆಚ್ಚಗಳಿಂದಾಗಿ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿವೆ. PFC/REC ನೀಡುವ ಸಾಲಗಳು ಹೆಚ್ಚಿನ ಬಡ್ಡಿದರಗಳನ್ನು ಹೊಂದಿರುವುದರಿಂದ, DISCOM ಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆಯಾಗುತ್ತಿದೆ . ಬಡ್ಡಿರಹಿತ ಅಥವಾ ಮಧ್ಯಮ ಸಾಲಗಳನ್ನು ಒದಗಿಸುವ ಮೂಲಕ ವಿದ್ಯುತ್ ವಿತರಣಾ ಕೇಂದ್ರಗಳಿಗೆ ನೆರವು ನೀಡುವಂತೆ ರಾಜ್ಯ ಸರ್ಕಾರ ಒತ್ತಾಯಿಸಿದೆ.

Read More
Next Story