Uttara Kannada|ನದಿಗಳಲ್ಲಿ ಮರಳು ದಿಬ್ಬ ತೆರವು; ಪರಿಸರ ಪ್ರಾಧಿಕಾರದ ಒಪ್ಪಿಗೆ ನಂತರ ಕ್ರಮ
x

ಸಾಂದರ್ಭಿಕ ಚಿತ್ರ 

Uttara Kannada|ನದಿಗಳಲ್ಲಿ ಮರಳು ದಿಬ್ಬ ತೆರವು; ಪರಿಸರ ಪ್ರಾಧಿಕಾರದ ಒಪ್ಪಿಗೆ ನಂತರ ಕ್ರಮ

ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ನದಿಗಳಾದ ಶರಾವತಿ, ಗಂಗಾವಳಿ, ಕಾಳಿ ಮತ್ತು ಅಘನಾಶಿನಿ ನದಿಗಳಲ್ಲಿ ಸಂಗ್ರಹವಾಗಿರುವ ಮರಳು ದಿಬ್ಬಗಳನ್ನು ತೆರವುಗೊಳಿಸಲು ಕರ್ನಾಟಕ ಸರ್ಕಾರ ಕ್ರಮ ಕೈಗೊಂಡಿದೆ.


Click the Play button to hear this message in audio format

ಉತ್ತರ ಕನ್ನಡ ಜಿಲ್ಲೆಯಲ್ಲಿ ಹರಿಯುವ ಶರಾವತಿ, ಗಂಗಾವಳಿ, ಕಾಳಿ ಮತ್ತು ಅಘನಾಶಿನಿ ನದಿಗಳಲ್ಲಿ ಸೃಷ್ಟಿಯಾಗಿರುವ ಮರಳು ದಿಬ್ಬಗಳನ್ನು ತೆರವುಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಪರಿಸರ ಪ್ರಾಧಿಕಾರದ ಅನುಮತಿ ನಂತರ ತೆರವು ಕಾರ್ಯ ಕೈಗೊಳ್ಳಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸ್ಪಷ್ಟಪಡಿಸಿದೆ.

ಉತ್ತರ ಕನ್ನಡ ಜಿಲ್ಲೆಯ ನದಿಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ಕುರಿತು ಬಂದ ದೂರುಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಚೆನ್ನೈ ಪೀಠ ನೀಡಿದ್ದ ನೋಟಿಸ್‌ಗೆ ಪ್ರತಿಕ್ರಿಯೆಯಾಗಿ ಇಲಾಖೆಯು ಈ ಅಫಿಡವಿಟ್ ಸಲ್ಲಿಸಿದೆ.

ಉತ್ತರ ಕನ್ನಡ ಜಿಲ್ಲೆಯ ಶರಾವತಿ, ಗಂಗಾವಳಿ, ಕಾಳಿ ಮತ್ತು ಅಘನಾಶಿನಿ ನದಿಗಳಲ್ಲಿ ಮರಳು ದಿಬ್ಬಗಳನ್ನು ತೆಗೆದುಹಾಕಲು ಕರ್ನಾಟಕ ರಾಜ್ಯ ಪರಿಸರ ಪರಿಣಾಮ ಮೌಲ್ಯಮಾಪನ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಲಾಗಿದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

ಇಲಾಖೆಯು ಶರಾವತಿ ನದಿಯಲ್ಲಿ ಎಂಟು, ಕಾಳಿ ನದಿಯಲ್ಲಿ ಏಳು, ಅಘನಾಶಿನಿ ನದಿಯಲ್ಲಿ ನಾಲ್ಕು ಮತ್ತು ಗಂಗಾವಳಿ ನದಿಯಲ್ಲಿ ಮರಳು ದಿಬ್ಬ ತೆರವಿಗೆ ಒಂದು ಪ್ರಸ್ತಾವನೆ ಸಲ್ಲಿಸಿದೆ. ರಾಜ್ಯ ಮಟ್ಟದ ಪರಿಸರ ಪರಿಣಾಮ ಮೌಲ್ಯಮಾಪನಾ ಪ್ರಾಧಿಕಾರದಿಂದ ಅನುಮತಿ ದೊರೆತ ನಂತರವೇ ಮರಳು ದಿಬ್ಬಗಳ ತೆರವು ಕಾರ್ಯ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದೆ.

ಈ ಮೊದಲು, ನದಿಪಾತ್ರಗಳಲ್ಲಿ ಮರಳು ಸಂಗ್ರಹವಾಗುವುದರಿಂದ ನದಿ ಕಾಲುವೆಗಳು ಮುಚ್ಚಿಹೋಗುವುದು, ನದಿ ದಡಗಳ ಸವೆತ ಮತ್ತು ಪ್ರವಾಹಕ್ಕೆ ಕಾರಣವಾಗಬಹುದು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದರು. ಆದ್ದರಿಂದ, ಪರಿಸರ ರಕ್ಷಿಸುವ ಅತ್ಯುತ್ತಮ ಪರಿಸರ ಅಭ್ಯಾಸಗಳನ್ನು ಅನುಸರಿಸಿ ಮರಳು ತೆರವುಗೊಳಿಸಿ ಸ್ಥಳೀಯವಾಗಿ ಬಳಸಿದರೆ ಜಿಲ್ಲೆಯ ಜನರಿಗೆ ಪ್ರಯೋಜನವಾಗುತ್ತದೆ ಎಂದು ಸರ್ಕಾರ ಹೇಳಿದೆ.

ರಾಜ್ಯದಲ್ಲಿ ಹೊಸ ಮರಳು ನೀತಿ

ರಾಜ್ಯದಲ್ಲಿ ಮರಳು ಗಣಿಗಾರಿಕೆ ಮತ್ತು ವಿಲೇವಾರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಹೊಸ ಮರಳು ನೀತಿ-2020 ನಿರ್ಣಾಯಕ ಪಾತ್ರ ವಹಿಸುತ್ತಿದೆ. ಪರಿಸರಕ್ಕೆ ಹಾನಿಯಾಗದಂತೆ ಮರಳು ಪೂರೈಕೆ ಸುಗಮಗೊಳಿಸುವುದು ಮತ್ತು ಅಕ್ರಮ ದಂಧೆಗೆ ಕಡಿವಾಣ ಹಾಕುವುದು ಮರಳು ನೀತಿಯ ಉದ್ದೇಶವಾಗಿದೆ.

ಈ ಮಧ್ಯೆ, ರಾಷ್ಟ್ರೀಯ ಹಸಿರು ನ್ಯಾಯಾಧೀಕರಣವು ನದಿ ಪಾತ್ರಗಳಲ್ಲಿ ಮರಳು ತೆಗೆಯುವ ವಿಚಾರದಲ್ಲಿ ಕಟ್ಟುನಿಟ್ಟಿನ ಆದೇಶಗಳನ್ನು ನೀಡಿದೆ. ಇದರನ್ವಯ ರಾಜ್ಯ ಸರ್ಕಾರ ಕ್ರಮ ಜರುಗಿಸಬೇಕಾದ ಅನಿವಾರ್ಯತೆ ಇದೆ.

ನದಿಗಳಲ್ಲಿ ಯಂತ್ರೋಪಕರಣ ಬಳಕೆಗೆ ಅವಕಾಶವಿಲ್ಲ, ಗಣಿಗಾರಿಕೆ ನಡೆಯುವ ಸ್ಥಳದಲ್ಲಿ ಆಳವು ಮೂರು ಮೀಟರ್‌ ಮೀರಬಾರದು. ಕುಡಿಯುವ ನೀರಿನ ಮೂಲಗಳು, ಸೇತುವೆಗಳು ಮತ್ತು ಪರಿಸರ ಸೂಕ್ಷ್ಮ ಪ್ರದೇಶಗಳ ಸಮೀಪ ಮರಳು ತೆಗೆಯುವುದಕ್ಕೆ ನಿಷೇಧವಿದೆ. ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿದ ನಂತರವೇ ಪರಿಸರ ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ಎನ್‌ಸಿಜಿ ಸೂಚಿಸಿತ್ತು. ಕರ್ನಾಟಕ ಸರ್ಕಾರವು ಕರಾವಳಿ ನಿಯಂತ್ರಣ ವಲಯ (CRZ) ಮತ್ತು ಅದರ ಹೊರತಾದ ಪ್ರದೇಶಗಳಲ್ಲಿ ಸಾಂಪ್ರದಾಯಿಕ ಮರಳು ತೆಗೆಯುವುದಕ್ಕೆ ಅವಕಾಶ ಕಲ್ಪಿಸಲು ನಿಯಮಗಳಿಗೆ ತಿದ್ದುಪಡಿ ಮಾಡಿತ್ತು.

ರಾಜ್ಯ ಸರ್ಕಾರವು ಜಾರಿಗೆ ತಂದಿರುವ 'ನೂತನ ಮರಳು ನೀತಿ-2020' ಹಲವು ಬದಲಾವಣೆಗಳನ್ನು ತಂದಿದೆ. ನಾಲ್ಕು, ಐದು ಮತ್ತು ಆರನೇ ಶ್ರೇಣಿಯ ಹೊಳೆ, ನದಿ, ಜಲಾಶಯಗಳ ಪ್ರದೇಶಗಳಲ್ಲಿ ಸಾರ್ವಜನಿಕ ಸಂಸ್ಥೆಗಳ ಜೊತೆಗೆ ಸಾರ್ವಜನಿಕರಿಗೂ ಇ-ಹರಾಜು ಮೂಲಕ ಮರಳು ಗಣಿಗಾರಿಕೆ ನಡೆಸಲು ಅವಕಾಶ ನೀಡಲಾಗಿದೆ. ಪ್ರತಿ ಮೆಟ್ರಿಕ್‌ ಟನ್‌ ಮರಳಿಗೆ ಗರಿಷ್ಠ 850 ರೂ.ಗಳಿಂದ 900ರೂ.ಗಳವರೆಗೆ ಏಕರೂಪದ ದರ ನಿಗದಿಪಡಿಸಲಾಗಿದೆ.

Read More
Next Story