
ಸರ್ಕಾರಿ ಜಾಗದಲ್ಲಿ ಸಂಘಟನೆಗಳ ಕಾರ್ಯಕ್ರಮಕ್ಕೆ ಬ್ರೇಕ್; ಆರ್‌ಎಸ್‌ಎಸ್ ನಿರ್ಬಂಧಕ್ಕೆ 'ಬಿಜೆಪಿ' ನಿಯಮವೇ ಅಸ್ತ್ರ!
ಇತ್ತೀಚೆಗೆ ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ನ ಶಾಖೆ, ಬೈಠಕ್‌ನಂತಹ ಚಟುವಟಿಕೆಗಳನ್ನು ನಿಷೇಧಿಸುವ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಪ್ರಸ್ತಾವನೆ ಸಲ್ಲಿಸಿದ್ದು, ಇದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ಸರ್ಕಾರಿ ಶಾಲೆ, ಕಾಲೇಜುಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಸಂಘಟನೆಗಳು ಕಾರ್ಯಕ್ರಮಗಳನ್ನು ನಡೆಸಲು ಇನ್ನು ಮುಂದೆ ಕಡ್ಡಾಯವಾಗಿ ಪೂರ್ವಾನುಮತಿ ಪಡೆಯಬೇಕೆಂದು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಯಂತ್ರಿಸುವ ಉದ್ದೇಶದಿಂದಲೇ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಯಾವುದೇ ಒಂದು ಸಂಘಟನೆಯನ್ನು ನೇರವಾಗಿ ಉಲ್ಲೇಖಿಸದೆ, ಬಿಜೆಪಿ ಸರ್ಕಾರದ ಹಳೆಯ ಆದೇಶವನ್ನೇ ಅಸ್ತ್ರವಾಗಿ ಬಳಸಿಕೊಂಡು ಸರ್ಕಾರ ಈ ಬ್ರಹ್ಮಾಸ್ತ್ರ ಪ್ರಯೋಗಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಈ ನಿರ್ಧಾರದ ಪ್ರಕಾರ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಸೇರಿದಂತೆ ಯಾವುದೇ ಖಾಸಗಿ ಸಂಸ್ಥೆಗಳು ಅಥವಾ ಸಂಘಟನೆಗಳು ಸರ್ಕಾರಿ ಸ್ವಾಮ್ಯದ ಸ್ಥಳಗಳಲ್ಲಿ ತಮ್ಮ ಚಟುವಟಿಕೆಗಳನ್ನು ಆಯೋಜಿಸಬೇಕಾದರೆ, ಸಂಬಂಧಪಟ್ಟ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯುವುದು ಇನ್ನು ಮುಂದೆ ಕಡ್ಡಾಯವಾಗಲಿದೆ.
ಬಿಜೆಪಿ ಆದೇಶವನ್ನೇ ಅಸ್ತ್ರವಾಗಿಸಿಕೊಂಡ ಸರ್ಕಾರ
ಇತ್ತೀಚೆಗೆ ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ನ ಶಾಖೆ, ಬೈಠಕ್‌ನಂತಹ ಚಟುವಟಿಕೆಗಳನ್ನು ನಿಷೇಧಿಸುವ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಪ್ರಸ್ತಾವನೆ ಸಲ್ಲಿಸಿದ್ದು, ಇದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಸರ್ಕಾರ, ಯಾವುದೇ ಒಂದು ಸಂಘಟನೆಯನ್ನು ಗುರಿಯಾಗಿಸದೆ, "ಎಲ್ಲಾ ಖಾಸಗಿ ಸಂಘ-ಸಂಸ್ಥೆಗಳಿಗೆ" ಅನ್ವಯವಾಗುವಂತೆ ಹೊಸ ನಿಯಮವನ್ನು ಜಾರಿಗೆ ತರಲು ಮುಂದಾಗಿದೆ.
ವಿಶೇಷವೆಂದರೆ, 2013ರಲ್ಲಿ ಅಂದಿನ ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರವೇ "ಶೈಕ್ಷಣಿಕೇತರ ಚಟುವಟಿಕೆಗಳಿಗೆ ಶಾಲಾ-ಕಾಲೇಜುಗಳ ಆವರಣವನ್ನು ಬಳಸಬಾರದು" ಎಂದು ಹೊರಡಿಸಿದ್ದ ಆದೇಶವನ್ನೇ ಈ ಹೊಸ ನಿಯಮಕ್ಕೆ ಆಧಾರವಾಗಿಟ್ಟುಕೊಳ್ಳಲಾಗಿದೆ. ಈ ಮೂಲಕ ಬಿಜೆಪಿಗೇ ತಿರುಗೇಟು ನೀಡಿ, ವಿವಾದಗಳಿಂದ ಪಾರಾಗುವ ಜಾಣ ನಡೆಯನ್ನು ಸರ್ಕಾರ ಅನುಸರಿಸಿದೆ. ಈ ಹಳೆಯ ಆದೇಶವನ್ನು ಮರು ಜಾರಿಗೊಳಿಸುವ ಮೂಲಕ ಸರ್ಕಾರವು ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ಪರೋಕ್ಷವಾಗಿ ಕಡಿವಾಣ ಹಾಕಲು ಮುಂದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.