
ಹಾಲಿನ ಪ್ರೋತ್ಸಾಹಧನದ ಹಿಂಬಾಕಿ ನೀಡದೇ ಹೈನುಗಾರರಲ್ಲಿ ಹೊಸ ಆಸೆ ಚಿಗುರಿಸಿದ ಸರ್ಕಾರ
ಮೇವಿನ ಬೆಲೆ ಏರಿಕೆ, ಅಧಿಕ ನಿರ್ವಹಣಾ ವೆಚ್ಚಗಳಿಂದ ಹಾಲು ಉತ್ಪಾದಕರ ಸಮಸ್ಯೆ ಹೇಳತೀರದಾಗಿದೆ. ಹೀಗಿರುವಾಗ ಹಾಲಿನ ಬಾಕಿ ಪ್ರೋತ್ಸಾಹಧನ ನೀಡದೇ ಹೊಸ ಘೋಷಣೆ ಮಾಡಿರುವುದು ರೈತರನ್ನು ಗೊಂದಲಕ್ಕೆ ದೂಡಿದೆ.
ರಾಜ್ಯದಲ್ಲಿ ಹೈನುಗಾರಿಕೆಗೆ ಹಾಲು ಉತ್ಪಾದಕರಿಗೆ ನೀಡುತ್ತಿರುವ 5 ರೂ.ಪ್ರೋತ್ಸಾಹಧನವನ್ನು ಇದೇ ವರ್ಷದಲ್ಲಿ 7 ರೂ.ಗಳಿಗೆ ಹೆಚ್ಚಳ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿವೇಶನದಲ್ಲಿ ಘೋಷಿಸಿದ್ದಾರೆ. ರಾಜ್ಯ ಸರ್ಕಾರದ ಭರವಸೆಯನ್ನು ರೈತ ಸಮುದಾಯ ಸ್ವಾಗತ ಮಾಡಿದರೂ, ಬಾಕಿ ಹಣಕ್ಕಾಗಿ ಬೇಡುವ ರೈತರ ಪರಿಸ್ಥಿತಿ ಮಾತ್ರ ಸುಧಾರಿಸಿಲ್ಲ.
2025 ನವೆಂಬರ್ ತಿಂಗಳವರೆಗೆ ರಾಜ್ಯ ಸರ್ಕಾರ ಒಟ್ಟು ಆರು ತಿಂಗಳ ಪ್ರೋತ್ಸಾಹಧನವಾದ 675 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಹಣಕಾಸು ಇಲಾಖೆ ಅನುಮೋದನೆ ಸಿಗದ ಕಾರಣ ಬಾಕಿ ಹಣ ಬಿಡುಗಡೆಯಾಗಿಲ್ಲ ಎಂಬ ದೂರುಗಳು ಕೇಳಿಬಂದಿವೆ.
ಮೇವಿನ ಬೆಲೆ ಏರಿಕೆ, ಅಧಿಕ ನಿರ್ವಹಣಾ ವೆಚ್ಚಗಳಿಂದ ಹಾಲು ಉತ್ಪಾದಕರ ಸಮಸ್ಯೆ ಹೇಳತೀರದಾಗಿದೆ. ಹೀಗಿರುವಾಗ ಹಾಲಿನ ಬಾಕಿ ಪ್ರೋತ್ಸಾಹಧನ ನೀಡದೇ ಹೊಸ ಘೋಷಣೆ ಮಾಡಿರುವುದು ರೈತರನ್ನು ಗೊಂದಲಕ್ಕೆ ದೂಡಿದೆ. ಹಾಲಿನ ಉತ್ಪಾದನಾ ವೆಚ್ಚ ಅಧಿಕವಿರುವ ಕಾರಣ ಪ್ರೋತ್ಸಾಹಧನವನ್ನು ಕನಿಷ್ಠ ಲೀಟರ್‌ಗೆ 10 ರೂ. ಮಾಡುವಂತೆ ರೈತ ಸಂಘಟನೆಗಳು, ಹಾಲು ಉತ್ಪಾದಕರು ಒತ್ತಾಯಿಸಿದ್ದರು.
ಬಾಕಿ ಇರುವ ಹಣವೆಷ್ಟು?
ರಾಜ್ಯ ಸರ್ಕಾರ ಈವರೆಗೆ ಆರು ತಿಂಗಳ ಹಾಲಿನ ಪ್ರೋತ್ಸಾಹಧನ ಬಾಕಿ ಉಳಿಸಿಕೊಂಡಿದೆ. ಬರೋಬ್ಬರಿ 675.07 ಕೋಟಿ ಬಾಕಿ ಪಾವತಿಸಬೇಕಾಗಿದೆ. ಒಟ್ಟು 9,04,547 ಹಾಲು ಉತ್ಪಾದಕರಿಗೆ 5 ರೂ. ಗಳಂತೆ ಈ ಪ್ರೋತ್ಸಾಹಧನ ಬಾಕಿ ಉಳಿಸಿಕೊಂಡಿದೆ.
ಹಾಲು ಉತ್ಪಾದಕರ ಪೈಕಿ ಸಾಮಾನ್ಯ ವರ್ಗದವರಿಗೆ 613.58 ಕೋಟಿ ರೂ., ಪರಿಶಿಷ್ಟ ಜಾತಿಯವರಿಗೆ 18.29ಕೋಟಿ ರೂ., ಪರಿಶಿಷ್ಟ ಪಂಗಡದವರಿಗೆ 24.20 ಕೋಟಿ ರೂ. ಪಾವತಿಸಬೇಕಾಗಿದೆ. ರಾಜ್ಯದಲ್ಲಿ ಪ್ರತಿದಿನ ಸುಮಾರು 90ರಿಂದ 95 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಪ್ರತಿ ತಿಂಗಳ ಪ್ರೋತ್ಸಾಹಧನಕ್ಕಾಗಿ 125ರಿಂದ 135 ಕೋಟಿ ರೂ. ಪಾವತಿಸಬೇಕಾಗಿದೆ. 2019-20 ನೇ ಸಾಲಿನಲ್ಲಿ 54.88 ಕೋಟಿ, 2020-21 ನೇ ಸಾಲಿನಲ್ಲಿ101.54 ಕೋಟಿ, 2021-22 ನೇ ಸಾಲಿನಲ್ಲಿ 129.05 ಕೋಟಿ ಬಾಕಿ ಇದೆ. ಅದೇ ರೀತಿಯಲ್ಲಿ 2022-23 ರಲ್ಲಿ 208.58 ಕೋಟಿ ಹಾಗೂ 2023-24 ನೇ ಸಾಲಿಗೆ ರೂ.202.85 ಕೋಟಿ ಪ್ರೋತ್ಸಾಹಧನ ಬಾಕಿ ಉಳಿಸಿಕೊಂಡಿದೆ.
ವಿಳಂಬಕ್ಕೆ ಕಾರಣಗಳೇನು?
ಹಾಲಿನ ಪ್ರೋತ್ಸಾಹಧನ ಬಿಡುಗಡೆಗೆ ಪಶುಸಂಗೋಪನೆ ಇಲಾಖೆಯು ಪ್ರಸ್ತಾವನೆ ಸಲ್ಲಿಸಿದ್ದರೂ ಹಣಕಾಸು ಇಲಾಖೆ ಈವರೆಗೂ ಹಣ ಬಿಡುಗಡೆ ಮಾಡಿಲ್ಲ. ಬಜೆಟ್ ಹಂಚಿಕೆ ಹಾಗೂ ಗ್ಯಾರೆಂಟಿ ಯೋಜನೆಗಳಿಗೆ ಹಣ ಕ್ರೂಢೀಕರಣದ ಹಿನ್ನೆಲೆಯಲ್ಲಿ ಪ್ರೋತ್ಸಾಹಧನ ಬಿಡುಗಡೆ ವಿಳಂಬವಾಗುತ್ತಿದೆ ಎನ್ನಲಾಗಿದೆ.
ರಾಜ್ಯದಲ್ಲಿ ಪ್ರತಿ ವರ್ಷ ಹಾಲು ಉತ್ಪಾದನೆ ಪ್ರಮಾಣ ಹೆಚ್ಚುತ್ತಿದೆ. ದಿನಕ್ಕೆ ದಿನಕ್ಕೆ ಸುಮಾರು 85 ಲಕ್ಷ ಲೀಟರ್‌ನಿಂದ 1 ಕೋಟಿ ಲೀಟರ್‌ವರೆಗೆ ಹಾಲು ಸಂಗ್ರಹವಾಗುತ್ತಿದೆ. ಆದರೆ, ಸರ್ಕಾರ ಬಜೆಟ್‌ನಲ್ಲಿ ನಿಗದಿಪಡಿಸಿರುವ ಅನುದಾನ ಸಾಕಾಗುತ್ತಿಲ್ಲ ಎಂದು ಹೇಳಲಾಗಿದೆ.
2019-20ನೇ ಸಾಲಿನಲ್ಲಿ ಪ್ರತಿ ದಿನ ಸರಾಸರಿ 75.96 ಲಕ್ಷ ಲೀಟರ್, 2020-21 ರಲ್ಲಿ 78.74 ಲಕ್ಷ ಲೀಟರ್, 2021-22 ರಲ್ಲಿ 81.66 ಲಕ್ಷ ಲೀಟರ್, 2022-23 ರಲ್ಲಿ 80.32 ಲಕ್ಷ ಲೀಟರ್, 2023-24 ರಲ್ಲಿ 82.93 ಲಕ್ಷ ಲೀಟರ್ ಹಾಗೂ 2024-25 ಸಾಲಿನಲ್ಲಿ ಪ್ರತಿ ದಿನ ಸರಾಸರಿ 90 ರಿಂದ 95 ಲಕ್ಷ ಲೀಟರ್ ಹಾಲು ಸಂಗ್ರಹಣೆಯಾಗಿದೆ. ಆದರೆ, ಹಾಲಿನ ಸಂಗ್ರಹಕ್ಕೆ ಅನುಗುಣವಾಗಿ ಬಜೆಟ್ ಅನುದಾನ ನೀಡದೇ ಇರುವುದು ಪ್ರೋತ್ಸಾಹಧನ ಬಾಕಿ ಉಳಿಯಲು ಕಾರಣವಾಗಿದೆ.
ಹಾಲಿನ ದರ ಏರಿಸಿದ್ದ ಕೆಎಂಎಫ್
ರಾಜ್ಯ ಸರ್ಕಾರವು 2025 ಏ.1 ರಿಂದ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 4 ರೂ. ಹೆಚ್ಚಿಸಿತ್ತು. ಅದರಂತೆ ಟೋನ್ಡ್ ಹಾಲು ಲೀಟರ್ ಬೆಲೆ 44 ರಿಂದ 48 ರೂ.ಗಳಿಗೆ ಏರಿಕೆಯಾಗಿತ್ತು. ಹೋಮೋಜಿನೈಸ್ಡ್ ಟೋನ್ಡ್ ಹಾಲಿನ ಬೆಲೆ 43 ರಿಂದ 47 ರೂ, ಶುಭಂ ಹಾಲಿನ ಬೆಲೆ 48 ರಿಂದ 52 ರೂ.ಗೆ ಏರಿಕೆಯಾಗಿತ್ತು. ಮೊಸರಿನ ಬೆಲೆ ಪ್ರತಿ ಲೀಟರ್‌ಗೆ 4 ರೂ. ಹೆಚ್ಚಳವಾಗಿ ಹೊಸ ದರ 54 ರೂ. ಆಗಿತ್ತು.
2024 ಜೂ. 26 ರಂದು ಹಾಲಿನ ಬೆಲೆಯನ್ನು ಲೀಟರ್ ಮೇಲೆ 2 ರೂ. ಏರಿಕೆ ಮಾಡಿತ್ತು. ಗ್ರಾಹಕರಿಗೆ ಹೊರೆಯಾಗದಂತೆ ಪ್ರತಿ ಅರ್ಧ ಮತ್ತು ಒಂದು ಲೀಟರ್ ಹಾಲಿನ ಪಾಕೆಟ್‌ನಲ್ಲಿ ಹೆಚ್ಚುವರಿಯಾಗಿ 50 ಮಿ.ಲೀ. ಹಾಲು ನೀಡಲಾಗಿತ್ತು. 2023 ಜುಲೈ ತಿಂಗಳಲ್ಲಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 3 ರೂ. ಹೆಚ್ಚಳ ಮಾಡಿತ್ತು. ಇದು ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಾಡಿದ ಮೊದಲ ಬೆಲೆ ಏರಿಕೆಯಾಗಿತ್ತು.
ಹೈನುಗಾರರಿಗೆ ಉತ್ತೇಜನ ನೀಡಲು ಪ್ರೋತ್ಸಾಹಧನ
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು 2008ರಲ್ಲಿ ಹಾಲಿನ ಪ್ರೋತ್ಸಾಹಧನವನ್ನು ಪ್ರತಿ ಲೀಟರ್ ಹಾಲಿಗೆ 2 ರೂ. ನೀಡಲು ಆರಂಭಿಸಿದರು. 2013ರಲ್ಲಿಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅವರು ಪ್ರೋತ್ಸಾಹಧನವನ್ನು 4 ರೂ.ಗೆ ಹೆಚ್ಚಿಸಿದರು. ಬಳಿಕ 2015ರಲ್ಲಿ ಮತ್ತೆ ಸಿದ್ದರಾಮಯ್ಯ ಅವರು ಪ್ರೋತ್ಸಾಹಧನವನ್ನು 5 ರೂ.ಗೆ ಹೆಚ್ಚಳ ಮಾಡಿದ್ದರು. 2019ರಿಂದಲೂ ರಾಜ್ಯ ಸರ್ಕಾರವು ಪ್ರೋತ್ಸಾಹ ಧನವನ್ನು ಅಲ್ಪ ಸ್ವಲ್ಪ ಪಾವತಿಸುತ್ತಿದ್ದು, ಒಂದಷ್ಟು ಹಣ ಬಾಕಿ ಉಳಿಸಿಕೊಂಡಿದೆ.
"ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಲಿನ ಪ್ರೋತ್ಸಾಹಧನ ಏರಿಕೆ ಮಾಡುವ ಭರವಸೆ ನೀಡಿರುವುದು ಸ್ವಾಗತಾರ್ಹ. ಹೈನುಗಾರರು, ರೈತರು ಹಾಗೂ ರೈತ ಸಂಘಟನೆಗಳು ಕನಿಷ್ಠ 10ರೂ. ಹಾಲಿನ ಪ್ರೋತ್ಸಾಹಧನಕ್ಕೆ ಬೇಡಿಕೆ ಸಲ್ಲಿಸಿದ್ದವು. ಆದಾಗ್ಯೂ ಸರ್ಕಾರ 7 ರೂ. ಹೆಚ್ಚಳದ ಭರವಸೆ ನೀಡಿದೆ. ಘೋಷಣೆ ಮಾಡುವುದಷ್ಟೇ ಗೌರವ ಅಲ್ಲ, ಮಾತು ಉಳಿಸಿಕೊಳ್ಳುವುದು ಮುಖ್ಯ. ರೈತರು, ಸಂಘಟನೆಗಳ ಹಾದಿಯಾಗಿ ವಿಪಕ್ಷಗಳು ಕೂಡ ಸರ್ಕಾರದ ಮೇಲೆ ಬಾಕಿ ಹಣ ಪಾವತಿಗೆ ಒತ್ತಡ ಹೇರಬೇಕು. ನಮ್ಮ ಬೇಡಿಕೆ ಕೇಳಿಸಿಕೊಳ್ಳದೇ ಹೋರಾಟಕ್ಕೆ ಅವಕಾಶ ನೀಡಬಾರದು" ಎಂದು ರೈತಪರ ಹೋರಾಟಗಾರ್ತಿ ಸುನಂದಾ ಜಯರಾಂ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
"ಜನಾಕರ್ಷಿತ ಯೋಜನೆಗಳನ್ನು ಘೋಷಿಸಿದರೆ ಸಾಲದು, ಯೋಜನೆಯ ಮೂಲ ಉದ್ದೇಶ ಸಾಕಾರವಾಗುವಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ. ಕಳೆದ ಎರಡೂವರೆ ವರ್ಷದಲ್ಲಿ ರಾಜ್ಯ ಸರ್ಕಾರ ಕೇವಲ ಗ್ಯಾರೆಂಟಿ ಯೋಜನೆಗಳ ಅನುಷ್ಠಾನದಲ್ಲೇ ಕಾಲ ಕಳೆದಿದೆ. ಇನ್ನು ಮುಂದಾದರೂ ರೈತ ಕಲ್ಯಾಣ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ ನೀಡಬೇಕು" ಎಂದು ಒತ್ತಾಯಿಸಿದರು.
"ರಾಜ್ಯದಲ್ಲಿ ನಿತ್ಯ ಸರಾಸರಿ 1 ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. 5 ರೂ. ಪ್ರೋತ್ಸಾಹಧನದ ಪ್ರಕಾರ ದಿನಕ್ಕೆ 5 ಕೋಟಿ, ತಿಂಗಳಿಗೆ 150ರೂ. ಆಗಲಿದೆ. ವರ್ಷಕ್ಕೆ 1200 ಕೋಟಿ ರೂ. ಆಗಲಿದೆ. ತಿಂಗಳಿಗೊಮ್ಮೆ ಪ್ರೋತ್ಸಾಹಧನ ಪಾವತಿಸಿದರೆ ಹೊರೆ ಎನಿಸುವುದಿಲ್ಲ. ಒಟ್ಟಾಗಿ ನೀಡಲು ಹೋದರೆ ಕಷ್ಟವಾಗಲಿದೆ. ಪಶು ಆಹಾರ ಸೇರಿದಂತೆ ಹಾಲಿನ ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಒಂದು ಲೀಟರ್ ಹಾಲು ಉತ್ಪಾದನೆಗೆ ರೈತರಿಗೆ ಕನಿಷ್ಠ 50-60 ರೂ. ಖರ್ಚಾಗಲಿದೆ. ಆದರೆ, ಸರ್ಕಾರ ಕೇವಲ 30-35 ರೂ ನೀಡುತ್ತಿದೆ. ಈ ವೆಚ್ಚ ಸರಿದೂಗಿಸಲು ಪ್ರೋತ್ಸಾಹಧನ ಅಗತ್ಯ" ಎಂದು ವಿವರಿಸಿದರು.
ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
ಕಾಂಗ್ರೆಸ್ ನೇತೃತ್ವದ ಸರ್ಕಾರ ಪ್ರತಿ ಲೀಟರ್ ಹಾಲಿನ ಬೆಲೆಯನ್ನು ಒಮ್ಮೆ 3ರೂ, ಮತ್ತೊಮ್ಮೆ 4 ರೂ. ಹೆಚ್ಚಳ ಮಾಡಿದೆ. ಹಾಲಿನ ಬೆಲೆ ಹೆಚ್ಚಳದ ಲಾಭವನ್ನು ರೈತರಿಗೆ ವರ್ಗಾಯಿಸಲಾಗಿದೆ. ಕಾಂಗ್ರೆಸ್ ಸರ್ಕಾರ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ 7 ರೂ. ಪ್ರೋತ್ಸಾಹಧನವನ್ನು ಇದೇ ಅವಧಿಯಲ್ಲಿ ಕೊಡಲಿದೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
ಬೆಲೆ ಏರಿಕೆ ಹೊರತಾಗಿಯೂ ಸರ್ಕಾರದಿಂದ ನೆರವು ಮುಂದುವರಿಯಲಿದೆ. ಡಾ. ನಂಜುಂಡಪ್ಪ ವರದಿ ಜಾರಿಯ ಬಳಿಕ ಉತ್ತರ ಕರ್ನಾಟಕದಲ್ಲೂ ಹೈನುಗಾರಿಕೆ ಚಟುವಟಿಕೆಗಳು ಹೆಚ್ಚಾಗಿವೆ. ಹಾಲಿನ ಉತ್ಪಾದನೆ ಹೆಚ್ಚಳಕ್ಕೆ ಅನುಗುಣವಾಗಿ ಸರ್ಕಾರ ರೈತರಿಗೆ ನೆರವಾಗುತ್ತಿದೆ ಎಂದು ಹೇಳಿದರು.

