ಹೆಚ್ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಗಡುವು ವಿಸ್ತರಣೆ
ರಾಜ್ಯದಾದ್ಯಂತ ವಾಹನಗಳಿಗೆ ಹೆಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಯಲ್ಲಿನ ವಿಳಂಬವನ್ನು ನಿವಾರಿಸಲು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮೂರು ತಿಂಗಳ ಅವಧಿ ವಿಸ್ತರಣೆಯನ್ನು ಘೋಷಿಸಿದ್ದಾರೆ.
ಬೆಂಗಳೂರು: ಹೆಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ನೀಡಿದ್ದ ಗಡುವನ್ನು ಮೂರು ತಿಂಗಳವರೆಗೆ ವಿಸ್ತರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ರಾಜ್ಯದಲ್ಲಿ ಈವರೆಗೆ ಕೇವಲ 9.16% ವಾಹನಗಳು ಹೆಚ್ಎಸ್ಆರ್‌ಪಿ ಪ್ಲೇಟುಗಳನ್ನು ಹೊಂದಿದ್ದು ರಾಜ್ಯದಾದ್ಯಂತ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಅಳವಡಿಕೆಯಲ್ಲಿನ ವಿಳಂಬವನ್ನು ನಿವಾರಿಸಲು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹೆಚ್ಚುವರಿಯಾಗಿ ಮತ್ತೆ ಮೂರು ತಿಂಗಳ ಅವಧಿ ವಿಸ್ತರಣೆ ಘೋಷಿಸಿದ್ದಾರೆ.
ಇದಕ್ಕೂ ಮುನ್ನ ನವೆಂಬರ್ 17ರೊಳಗೆ ಹೊಸ ಎಚ್ ಎಸ್ ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಗಡುವು ನೀಡಲಾಗಿತ್ತು. ಆದರೆ ನಂತರ ಫೆಬ್ರವರಿ 17ವರೆಗೂ ಗುಡುವು ವಿಸ್ತರಿಸಲಾಗಿತ್ತು. ಸರ್ವರ್ ನಿಧಾನಗತಿ ಮತ್ತು ಇತರ ತಾಂತ್ರಿಕ ಸಮಸ್ಯೆಗಳಿಂದ ಎಚ್ಎಸ್ಆರ್‌ಪಿ ಬುಕ್ ಮಾಡುವಲ್ಲಿ ವಾಹನ ಸವಾರರು ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇದರಿಂದ ಪ್ರಕ್ರಿಯೆ ವಿಳಂಬವಾಗಿದ್ದರಿಂದ ಇದೀಗ ಮತ್ತೊಮ್ಮೆ ಗಡುವು ವಿಸ್ತರಿಸಲಾಗಿದೆ.
ಏನಿದು ಹೆಚ್ಎಸ್ಆರ್‌ಪಿ ನಂಬರ್ ಪ್ಲೇಟ್ ?
ಹೆಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಎಂದರೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ಪ್ಲೇಟ್. ಭದ್ರತೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಮೋಟಾರು ವಾಹನ ಕಾಯ್ದೆ-1989 ಸೆಕ್ಷನ್ 50 ಹಾಗೂ 51 ಅನ್ವಯ ಎಲ್ಲಾ ವಾಹನಗಳಿಗೆ ಈ ಪ್ಲೇಟ್‌ಗಳನ್ನು ಅಳವಡಿಸಬೇಕಾಗಿದ್ದು, ಹೆಚ್ಎಸ್ಆರ್‌ಪಿ ಅಳವಡಿಸದಿದ್ದರೆ ಮಾಲೀಕತ್ವದ ಬದಲಾವಣೆ, ವಿಳಾಸ ಬದಲಾವಣೆ, ಆರ್ಸಿ, ವಿಮೆ ಹಾಗೂ ಇನ್ನಿತರ ಕೆಲಸಗಳನ್ನು ಮಾಡಲಾಗುವುದಿಲ್ಲ. ಇದಲ್ಲದೆ ಅಧಿಕೃತವಾಗಿಲ್ಲದ ವಾಹನಗಳು ರಸ್ತೆಯಲ್ಲಿ ಓಡಾಡುವುದನ್ನು ಸುಲಭವಾಗಿ ಪತ್ತೆ ಹಚ್ಚಲು ಸಾರಿಗೆ ಇಲಾಖೆಗೆ ಸುಲಭವಾಗಲಿದೆ.