ಬೈಕ್ ಟ್ಯಾಕ್ಸಿಗಳ ನಿಷೇಧ| ಹೈಕೋರ್ಟ್‌ಗೆ ವರದಿ ಸಲ್ಲಿಸಿದ ಸರ್ಕಾರ; ವರದಿಯಲ್ಲಿ ಏನಿದೆ?
x
ಎಐ ಚಿತ್ರ.

ಬೈಕ್ ಟ್ಯಾಕ್ಸಿಗಳ ನಿಷೇಧ| ಹೈಕೋರ್ಟ್‌ಗೆ ವರದಿ ಸಲ್ಲಿಸಿದ ಸರ್ಕಾರ; ವರದಿಯಲ್ಲಿ ಏನಿದೆ?

ಸಾರಿಗೆ ಇಲಾಖೆಯ ಕಾರ್ಯದರ್ಶಿ ನೇತೃತ್ವದಲ್ಲಿ ರಚಿಸಲಾಗಿದ್ದ ಸಮಿತಿಯು ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನೀಡುವುದರಿಂದ ಆಗುವ ಸಾಧಕ-ಬಾಧಕಗಳು, ಕಾನೂನು, ಸಂಚಾರ ಹಾಗೂ ಸುರಕ್ಷತೆಯ ಅಂಶಗಳನ್ನು ಪರಿಶೀಲಿಸಿ ವರದಿ ಸಿದ್ಧಪಡಿಸಿದೆ.


Click the Play button to hear this message in audio format

ಸರ್ಕಾರದ ಅನುಮೋದನೆ ಇಲ್ಲದೇ ಬೈಕ್ ಟ್ಯಾಕ್ಸಿ ಆರಂಭಿಸುವುದು ಸಂಪೂರ್ಣ ಕಾನೂನು ಬಾಹಿರ. ಕಾನೂನು ಚೌಕಟ್ಟಿನಡಿ ಬೈಕ್‌ ಟ್ಯಾಕ್ಸಿಯನ್ನು ನಿಯಮಬದ್ಧಗೊಳಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಸರ್ಕಾರವು ಹೈಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ.

ಬೈಕ್ ಟ್ಯಾಕ್ಸಿ ಸೇವೆಗಳ ಕಾರ್ಯಾಚರಣೆಯು ಮೋಟಾರು ವಾಹನ ಕಾನೂನು ಉಲ್ಲಂಘಿಸುತ್ತದೆ. ನಗರದಲ್ಲಿ ಸಂಚಾರದ ಒತ್ತಡ ಹೆಚ್ಚಿಸುತ್ತದೆ. ಹೀಗಾಗಿ, ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಉನ್ನತ ಮಟ್ಟದ ಸಮಿತಿ ಅಭಿಪ್ರಾಯಪಟ್ಟಿದೆ.

ಸಾರಿಗೆ ಇಲಾಖೆ ಕಾರ್ಯದರ್ಶಿ ನೇತೃತ್ವದಲ್ಲಿ ರಚಿಸಲಾಗಿದ್ದ ಈ ಸಮಿತಿಯು ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನೀಡುವ ಕುರಿತು ಸಾಧಕ-ಬಾಧಕಗಳು, ಕಾನೂನು, ಸಂಚಾರ ಹಾಗೂ ಸುರಕ್ಷತೆಯ ಅಂಶಗಳನ್ನು ಪರಿಶೀಲಿಸಿ ವರದಿ ಸಲ್ಲಿಸಿದೆ. ನಗರಾಭಿವೃದ್ಧಿ, ಭೂ ಸಾರಿಗೆ ನಿರ್ದೇಶನಾಲಯ, ಕಾರ್ಮಿಕ ಇಲಾಖೆ, ಬೆಂಗಳೂರು ಸಂಚಾರ ಪೊಲೀಸ್, ಬಿಎಂಟಿಸಿ, ಬಿಎಂಆರ್‌ಸಿಎಲ್ ಸೇರಿದಂತೆ ಹಲವು ಪ್ರಮುಖ ಇಲಾಖೆಗಳ 11 ಹಿರಿಯ ಅಧಿಕಾರಿಗಳು ಈ ಸಮಿತಿಯಲ್ಲಿದ್ದರು.

ಖಾಸಗಿ ದ್ವಿಚಕ್ರ ವಾಹನಗಳನ್ನು ವಾಣಿಜ್ಯ ಪ್ರಯಾಣಿಕರ ಸಾಗಣೆಗೆ ಬಳಸಿದರೆ ಅದು ಕೇಂದ್ರದ ಮೋಟಾರು ವಾಹನ ಕಾಯಿದೆಯನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ವರದಿಯು ಈಗಾಗಲೇ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳ ಬಳಕೆ ನಿಷೇಧಿಸಿರುವ ಏಕಸದಸ್ಯ ಪೀಠದ ಆದೇಶವನ್ನು ಎತ್ತಿಹಿಡಿದಿದೆ.

ಬೈಕ್ ಟ್ಯಾಕ್ಸಿಗಳಿಂದ ಹೆಚ್ಚಿನ ಅಪಘಾತದ ಅಪಾಯವಿದೆ. ನಗರ ಪ್ರದೇಶಗಳಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಗೆ ಕಾರಣವಾಗುತ್ತದೆ ಎಂದು ಸಮಿತಿಯು ಸಾರ್ವಜನಿಕ ಸುರಕ್ಷತೆಯ ಕಳವಳಗಳನ್ನು ವ್ಯಕ್ತಪಡಿಸಿದೆ.

ಬೆಂಗಳೂರಿನಲ್ಲಿ ಈಗಾಗಲೇ ಬಿಎಂಟಿಸಿ ಬಸ್‌ಗಳು ಮತ್ತು ಮೆಟ್ರೋ ಸೇವೆಗಳಂತಹ ಸುಸ್ಥಾಪಿತ ಸಾರ್ವಜನಿಕ ಸಾರಿಗೆ ಆಯ್ಕೆಗಳು ಲಭ್ಯವಿದ್ದು, ಜನರು ಇವುಗಳನ್ನು ಅವಲಂಬಿಸಬಹುದು. ಅನಿಯಂತ್ರಿತ ಬೈಕ್ ಟ್ಯಾಕ್ಸಿಗಳನ್ನಲ್ಲ ಎಂದು ವರದಿ ಹೇಳಿದೆ.

ವರದಿ ಸ್ವಾಗತಿಸಿದ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ

ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟವು ಸಮಿತಿಯ ಈ ವರದಿಯನ್ನು ಸ್ವಾಗತಿಸಿದೆ. ಪ್ರಯಾಣಿಕರಿಗೆ ಬೈಕ್ ಟ್ಯಾಕ್ಸಿಗಳು ಅನುಕೂಲಕರವಾಗಿ ಕಂಡರೂ, ಅವು ಕಾನೂನುಬದ್ಧ ಅನುಮತಿಯೊಂದಿಗೆ ಮಾತ್ರ ಕಾರ್ಯನಿರ್ವಹಿಸಬೇಕು ಎಂದು ಒಕ್ಕೂಟ ಒತ್ತಿಹೇಳಿದೆ.

ಪ್ರಸ್ತುತ ನ್ಯಾಯಾಲಯದಲ್ಲಿರುವ ಬೈಕ್ ಟ್ಯಾಕ್ಸಿಗಳ ಕುರಿತ ವಿಚಾರಣೆಯ ಭಾಗವಾಗಿ ಹೈಕೋರ್ಟ್ ಈಗ ಸಮಿತಿಯ ವರದಿ ಮತ್ತು ಅದರ ಶಿಫಾರಸುಗಳನ್ನು ಪರಿಶೀಲಿಸಲಿದೆ.

Read More
Next Story