ನವ ಕರ್ನಾಟಕದ ನಿರ್ಮಾತೃ ಎಸ್‌ ನಿಜಲಿಂಗಪ್ಪ ಮನೆ ಮಾರಾಟಕ್ಕೆ!
x

ನವ ಕರ್ನಾಟಕದ ನಿರ್ಮಾತೃ ಎಸ್‌ ನಿಜಲಿಂಗಪ್ಪ ಮನೆ ಮಾರಾಟಕ್ಕೆ!

ಸರಳತೆ ಮತ್ತು ಸಜ್ಜನಿಕೆಗೆ ಹೆಸರಾಗಿದ್ದ ಎಸ್ ನಿಜಲಿಂಗಪ್ಪ ಅವರು ಮುಖ್ಯಮಂತ್ರಿಯಾಗಿ ಅತ್ಯಂತ ಪ್ರಾಮಾಣಿಕ ಆಡಳಿತ ನೀಡಿದವರು. ಅಂತಹ ನಾಯಕರ ಸ್ವಂತ ಮನೆ ಇದೀಗ ಮಾರಾಟಕ್ಕೆ ಇದೆ.


ಆಧುನಿಕ ಕರ್ನಾಟಕದ ಶಿಲ್ಪಿಗಳಲ್ಲಿ ಒಬ್ಬರಾದ ಮಾಜಿ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪ ಅವರ ಚಿತ್ರದುರ್ಗದ ಮನೆ ಮಾರಾಟಕ್ಕಿದೆ!

ಹೌದು, ಅಖಿಲ ಭಾರತ ಕಾಂಗ್ರೆಸ್ ಸಮಿತಿ(ಎಐಸಿಸಿ) ಮಾಜಿ ಅಧ್ಯಕ್ಷರೂ ಆಗಿದ್ದ ನಿಜಲಿಂಗಪ್ಪ ಅವರು ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿಯಾಗಿ ಎರಡು ಅವಧಿ ಪೂರೈಸಿದ್ದರು. ನವ ಕರ್ನಾಟಕದ ನಿರ್ಮಾತೃ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಅವರು, ಬೃಹತ್ ನೀರಾವರಿ ಯೋಜನೆಗಳು, ಹಲವು ಕೈಗಾರಿಕೆಗಳು ಸೇರಿದಂತೆ ಕರ್ನಾಟಕವನ್ನು ಕಟ್ಟುವ ಮಹತ್ವದ ಕಾರ್ಯಗಳ ಮೂಲಕ ರಾಜ್ಯದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದ್ದಾರೆ.

ಸರಳತೆ ಮತ್ತು ಸಜ್ಜನಿಕೆಗೆ ಹೆಸರಾಗಿದ್ದ ಎಸ್ ನಿಜಲಿಂಗಪ್ಪ ಅವರು ಮುಖ್ಯಮಂತ್ರಿಯಾಗಿ ಅತ್ಯಂತ ಪ್ರಾಮಾಣಿಕ ಆಡಳಿತ ನೀಡಿದವರು. ಅಂತಹ ನಾಯಕರ ಸ್ವಂತ ಮನೆ ಇದೀಗ ಮಾರಾಟಕ್ಕೆ ಇದೆ.

ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಮಾತ್ರವಲ್ಲದೆ, ಕರ್ನಾಟಕದ ಏಕೀಕರಣ ಹೋರಾಟದ ಮುಂಚೂಣಿಯಲ್ಲಿದ್ದು ನಾಡಿಗಾಗಿ ಬದುಕನ್ನೇ ಮುಡಿಪಾಗಿಟ್ಟ ಧೀರೋದ್ದಾತ ನಾಯಕ, ಹಿರಿಯ ಮುತ್ಸದ್ಧಿ ಬಾಳಿ- ಬದುಕಿನ ಮನೆಯನ್ನು ಸ್ಮಾರಕ ಮಾಡಬೇಕು ಎಂಬ ಅವರ ಕುಟುಂಬ ಮತ್ತು ಹಿತೈಷಿಗಳು ಪ್ರಯತ್ನಗಳಿಗೆ ಸರ್ಕಾರದ ಕಡೆಯಿಂದ ಸರಿಯಾದ ಸ್ಪಂದನೆ ಸಿಕ್ಕಿರಲಿಲ್ಲ. ದಶಕಗಳ ಕಾಲ ನಡೆದ ಆ ಪ್ರಯತ್ನ ಫಲಿಸದೆ ಇದೀಗ ಕುಟುಂಬ ಕೈಚೆಲ್ಲಿದ್ದು, ಚಿತ್ರದುರ್ಗ ನಗರದ ʼಎಸ್ಎನ್ʼ ಅವರ ಮನೆಯನ್ನು ಇದೀಗ ಮಾರಾಟಕ್ಕೆ ಇಡಲಾಗಿದೆ.

ದಿವಂಗತ ನಿಜಲಿಂಗಪ್ಪ ಅವರ ಮನೆಯನ್ನು ಸ್ಮಾರಕವಾಗಿ ರೂಪಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ನಡೆಸಿದ ಕಾಂಗ್ರೆಸ್ ನಾಯಕ, ಹಾಗೂ ಲೇಖಕ ಮೋಹನ್ ಕೊಂಡಜ್ಜಿ ಅವರೇ ಇದೀಗ ತಮ್ಮ ಸಾಮಾಜಿಕ ಜಾಲತಾಣ ಫೇಸ್ಬುಕ್ ಪುಟದಲ್ಲಿ ಮನೆ ಮಾರಾಟದ ವಿಷಯವನ್ನು ಹಂಚಿಕೊಂಡಿದ್ದಾರೆ.

ಮನೆಯ ಚಿತ್ರ ಹಾಗೂ ಮಾರಾಟದ ಮಾಹಿತಿ ಒಳಗೊಂಡ ಜಾಹೀರಾತು ಕಾರ್ಡನ್ನು ತಮ್ಮ ವಾಲ್ನಲ್ಲಿ ಹಂಚಿಕೊಂಡಿರುವ ಮೋಹನ್ ಕೊಂಡಜ್ಜಿ ಅವರು, “ಚಿತ್ರದುರ್ಗ ನಗರದ ಜಿಲ್ಲಾಧಿಕಾರಿಗಳ ಬಂಗಲೆಯ ಬಳಿ ಇರುವ ಪಾರಂಪರಿಕ ಕಟ್ಟಡವಾದ ಮಾಜಿ ಮುಖ್ಯಮಂತ್ರಿ ಹಾಗೂ ಎಐಸಿಸಿ ಮಾಜಿ ಅಧ್ಯಕ್ಷ ಎಸ್ ನಿಜಲಿಂಗಪ್ಪ ಅವರ ಮನೆ ಮಾರಾಟಕ್ಕಿದೆ. ಇವತ್ತಿನ ಮಾರುಕಟ್ಟೆ ದರದಲ್ಲಿ ಸುಮಾರು 10 ಕೋಟಿ ರೂ. ಬೆಲೆ ಬಾಳುವ ಮನೆ ಇದಾಗಿದ್ದು, ಆಸಕ್ತರು ಕಿರಣ್ ಶಂಕರ್ ಅವರನ್ನು ಸಂಪರ್ಕಿಸಬಹುದು” ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣದ ಈ ಪೋಸ್ಟನ್ನು ಹಂಚಿಕೊಂಡಿರುವ ಹಿರಿಯ ಪತ್ರಕರ್ತ ಜಗದೀಶ್ ಕೊಪ್ಪ ಅವರು, “ನನ್ನ ಹಿರಿಯ ಮಿತ್ರ ಮೋಹನ್ ಕೊಂಡಜ್ಜಿಯವರು ಹಂಚಿಕೊಂಡ ಈ ಪೋಸ್ಟ್ ನಮ್ಮಗಳ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ನೆರೆಯ ತಮಿಳುನಾಡಿನಲ್ಲಿ ಅಲ್ಲಿನ ಮಾಜಿ ಮುಖ್ಯಮಂತ್ರಿಗಳು ಮಾತ್ರವಲ್ಲದೆ, ಅಭಿವೃದ್ಧಿಗೆ ಶ್ರಮಿಸಿದ ಕಾಮರಾಜ ನಾಡಾರ್ ಅವರ ನಿವಾಸವನ್ನು ವಿರುಧನಗರ್ ಪಟ್ಟಣದಲ್ಲಿ ಹಾಗೂ ಸಿ.ಎನ್.ಅಣ್ಣಾದೊರೈ ನಿವಾಸವನ್ನು ಕಾಂಚಿಪುರಂ ನಲ್ಲಿ ಅಲ್ಲಿನ ಸರ್ಕಾರವು ಸ್ಮಾರಕವಾಗಿ ರಕ್ಷಿಸಿ ಇಟ್ಟಿದೆ. ಅರಸು, ನಿಜಲಿಂಗಪ್ಪ ಅವರ ನಿವಾಸಗಳನ್ನು ರಕ್ಷಿಸಿ ಇಡಬೇಕಾದ್ದು ನಮ್ಮ ನೈತಿಕ ಕರ್ತವ್ಯ” ಎಂದು ಹೇಳಿದ್ದಾರೆ.

Read More
Next Story