ಕೇಂದ್ರದ ದ್ವೇಷ ರಾಜಕಾರಣ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
x

ಡಿ. ಕೆ ಶಿವಕುಮಾರ್‌ 

ಕೇಂದ್ರದ 'ದ್ವೇಷ ರಾಜಕಾರಣ' ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ಪ್ರತಿಭಟನೆಯ ನಂತರ ಸದನದಲ್ಲಿಯೂ ಈ ವಿಷಯವನ್ನು ಪ್ರಸ್ತಾಪಿಸಿ ಚರ್ಚೆ ನಡೆಸಲಾಗುವುದು. ಕೇವಲ ಬೆಳಗಾವಿಯಲ್ಲಿ ಮಾತ್ರವಲ್ಲದೆ, ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿಯೂ ಬುಧವಾರ ಪ್ರತಿಭಟನೆ ನಡೆಸಲು ಕರೆ ನೀಡಲಾಗಿದೆ.


Click the Play button to hear this message in audio format

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ವಿರುದ್ಧ ಕೇಂದ್ರ ಸರ್ಕಾರ ನಡೆಸುತ್ತಿರುವ ದ್ವೇಷ ರಾಜಕಾರಣವನ್ನು ಖಂಡಿಸಿ, ಬುಧವಾರ (ಡಿ.17) ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮಂಗಳವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಸರ್ಕಾರದ ನಡೆ ಮತ್ತು ತನಿಖಾ ಸಂಸ್ಥೆಗಳ ದುರ್ಬಳಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸುವರ್ಣಸೌಧದ ಗಾಂಧಿ ಪ್ರತಿಮೆ ಎದುರು ಧರಣಿ

ಬುಧವಾರ ಬೆಳಗ್ಗೆ 9.30ಕ್ಕೆ ಸರಿಯಾಗಿ ಬೆಳಗಾವಿಯ ಸುವರ್ಣ ವಿಧಾನಸೌಧದ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಎದುರು ಸಾಂಕೇತಿಕವಾಗಿ ಧರಣಿ ನಡೆಸಲಾಗುವುದು. ಈ ಪ್ರತಿಭಟನೆಯಲ್ಲಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾನು (ಡಿ.ಕೆ. ಶಿವಕುಮಾರ್), ಸಂಪುಟದ ಸಚಿವರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಭಾಗವಹಿಸಲಿದ್ದೇವೆ. ಪಕ್ಷದ ಎಲ್ಲಾ ಶಾಸಕರು ಮತ್ತು ಮುಖಂಡರು ಈ ಹೋರಾಟದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

ಪ್ರತಿಭಟನೆಯ ನಂತರ ಸದನದಲ್ಲಿಯೂ ಈ ವಿಷಯವನ್ನು ಪ್ರಸ್ತಾಪಿಸಿ ಚರ್ಚೆ ನಡೆಸಲಾಗುವುದು. ಕೇವಲ ಬೆಳಗಾವಿಯಲ್ಲಿ ಮಾತ್ರವಲ್ಲದೆ, ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿಯೂ ಬುಧವಾರ ಪ್ರತಿಭಟನೆ ನಡೆಸಲು ಕರೆ ನೀಡಲಾಗಿದೆ. ಇದರ ಜೊತೆಗೆ ಶನಿವಾರ ಪ್ರತ್ಯೇಕ ಹೋರಾಟದ ಕಾರ್ಯಕ್ರಮವನ್ನೂ ರೂಪಿಸಲಾಗುವುದು ಎಂದು ಮಾಹಿತಿ ನೀಡಿದರು.

ನ್ಯಾಯಾಲಯ ಜೀವಂತವಾಗಿದೆ ಎಂಬುದಕ್ಕೆ ತೀರ್ಪೇ ಸಾಕ್ಷಿ

ನ್ಯಾಷನಲ್ ಹೆರಾಲ್ಡ್ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಅದು ಕಾಂಗ್ರೆಸ್ ಪಕ್ಷದ ಆಸ್ತಿಯಾಗಿದೆ. 1937ರಲ್ಲಿ ಜವಾಹರಲಾಲ್ ನೆಹರು ಅವರು ನ್ಯಾಷನಲ್ ಹೆರಾಲ್ಡ್ ಸಂಸ್ಥೆಯನ್ನು ಸ್ಥಾಪಿಸಿದರು. ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಅದರ ಷೇರುಗಳನ್ನು ಇಟ್ಟುಕೊಳ್ಳದೆ ಬೇರೆ ಯಾರು ಇಟ್ಟುಕೊಳ್ಳಲು ಸಾಧ್ಯ? ಆದರೆ, ಕೇಂದ್ರ ಸರ್ಕಾರ ಅದನ್ನು ಮುಟ್ಟುಗೋಲು ಹಾಕಿಕೊಂಡು, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಅನಗತ್ಯ ಕಿರುಕುಳ ನೀಡುತ್ತಿದೆ. ನಾವು ಪಕ್ಷದ ಕಾರ್ಯಕರ್ತರಾಗಿ ನಮ್ಮ ಸಂಸ್ಥೆಗೆ ದೇಣಿಗೆ ನೀಡಿದ್ದೇವೆ ಎಂದರು.

ಈಗ ನ್ಯಾಯಾಲಯವು ದಾಖಲಿಸಿರುವ ಪ್ರಕರಣ ಸರಿ ಇಲ್ಲ ಎಂದು ವಜಾಗೊಳಿಸಿದೆ. ದೇಶದಲ್ಲಿ ನ್ಯಾಯಾಲಯ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಈ ತೀರ್ಪೇ ಸಾಕ್ಷಿಯಾಗಿದೆ. ಅಧಿಕಾರವನ್ನು ಹೇಗೆ ದುರುಪಯೋಗಪಡಿಸಿಕೊಂಡು ವಿಪಕ್ಷ ನಾಯಕರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬುದು ಇದರಿಂದ ಸಾಬೀತಾಗಿದೆ. ನಿನ್ನೆ ನಾನು ಮತ್ತು ನನ್ನ ಸಹೋದರ ಡಿ.ಕೆ. ಸುರೇಶ್ ಇಬ್ಬರೂ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ನೋಟಿಸ್‌ಗೆ ಉತ್ತರ ನೀಡಲು ಹೋಗಬೇಕಿತ್ತು. ಆದರೆ ನಾವು ಎಫ್‌ಐಆರ್ ಪ್ರತಿ ಕೇಳಿದೆವು. ಎಫ್‌ಐಆರ್ ಇಲ್ಲದೆಯೇ ಇ.ಡಿ ಸಂಸ್ಥೆ ಚಾರ್ಜ್ ಶೀಟ್ ಸಲ್ಲಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನರೇಗಾ ಹೆಸರು ಬದಲಾವಣೆ ಗಾಂಧೀಜಿಗೆ ಮಾಡುವ ಅಪಮಾನ

ಇದೇ ವೇಳೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ)ಯ ಹೆಸರನ್ನು ಬದಲಾಯಿಸಲು ಕೇಂದ್ರ ಸರ್ಕಾರ ಮುಂದಾಗಿರುವ ಬಗ್ಗೆಯೂ ಡಿಸಿಎಂ ಕಿಡಿಕಾರಿದರು. ನಮ್ಮ ಯುಪಿಎ ಸರ್ಕಾರ ಮಹಾತ್ಮ ಗಾಂಧಿ ಅವರ ಹೆಸರಿನಲ್ಲಿ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ರೂಪಿಸಿತ್ತು. ಆದರೆ ಈಗ ಕೇಂದ್ರ ಸರ್ಕಾರ ಗಾಂಧೀಜಿಯವರ ಹೆಸರನ್ನು ತೆಗೆಯಲು ಹೊರಟಿದೆ. ಇದು ಮಹಾತ್ಮ ಗಾಂಧಿಯವರಿಗೆ ಮಾಡುವ ಅಪಮಾನವಾಗಿದೆ. ಯೋಜನೆಯ ಅನುದಾನವನ್ನು ಕಡಿಮೆ ಮಾಡಲು ಮತ್ತು ಯೋಜನೆಯನ್ನೇ ನಿಷ್ಕ್ರಿಯಗೊಳಿಸುವ ಹುನ್ನಾರ ಇದರ ಹಿಂದೆ ಅಡಗಿದೆ. ಇದರ ವಿರುದ್ಧ ದೆಹಲಿ ಸೇರಿದಂತೆ ದೇಶಾದ್ಯಂತ ಪ್ರತಿಭಟನೆ ಮಾಡಿ ಜನರಿಗೆ ಅರಿವು ಮೂಡಿಸಲಾಗುವುದು ಎಂದು ಹೇಳಿದರು.

ಬಿಜೆಪಿ ಆರೋಪಕ್ಕೆ ತಿರುಗೇಟು

ಬಿಹಾರ ಚುನಾವಣೆಗೆ ಕರ್ನಾಟಕದ ಗೃಹಲಕ್ಷ್ಮಿ ಯೋಜನೆಯ ಹಣ ಬಳಕೆಯಾಗಿದೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್, ಬಿಹಾರ ಚುನಾವಣೆಗೂ ಗೃಹಲಕ್ಷ್ಮಿ ಹಣಕ್ಕೂ ಏನು ಸಂಬಂಧ? ಇಂತಹ ಆರೋಪ ಮಾಡುವವರನ್ನು ಆಸ್ಪತ್ರೆಗೆ ಸೇರಿಸಬೇಕಿದೆ. ಅವರಿಗೆ ಧೈರ್ಯವಿದ್ದರೆ ಬಂದು ನಮ್ಮ ಬಳಿ ನೇರವಾಗಿ ಚರ್ಚೆ ಮಾಡಲಿ ಎಂದು ಸವಾಲು ಹಾಕಿದರು.


Read More
Next Story