
ಸಾಂದರ್ಭಿಕ ಚಿತ್ರ
ರಾಜ್ಯದಲ್ಲಿ ತೀವ್ರಗೊಂಡ ಚಳಿ| ಬೀದರ್ ಮತ್ತು ವಿಜಯಪುರದಲ್ಲಿ ಶೀತಗಾಳಿ
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಆಳವಾದ ವಾಯುಭಾರ ಕುಸಿತದ ಪರಿಣಾಮ ಜನವರಿ 10ರಂದು ಶ್ರೀಲಂಕಾ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ.
ರಾಜ್ಯಾದ್ಯಂತ ಒಣ ಹವೆ ಮುಂದುವರಿದಿದ್ದು, ಹಲವು ಜಿಲ್ಲೆಗಳಲ್ಲಿ ಚಳಿಯ ತೀವ್ರತೆ ಗಣನೀಯವಾಗಿ ಹೆಚ್ಚಾಗಿದೆ. ಉತ್ತರ ಒಳನಾಡಿನ ಬೀದರ್ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ತೀವ್ರ ಶೀತಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ ದಕ್ಷಿಣ ಒಳನಾಡಿನ ಹಾಸನದಲ್ಲಿ ಕನಿಷ್ಠ ತಾಪಮಾನವು ಗಮನಾರ್ಹವಾಗಿ ಇಳಿಕೆಯಾಗಿದ್ದು, ಇಲ್ಲಿ ಕೇವಲ 7.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರಲಿದೆ. ಉತ್ತರ ಒಳನಾಡಿನ ರಾಯಚೂರಿನಲ್ಲಿಯೂ ಚಳಿ ಹೆಚ್ಚಾಗಿದ್ದು, ಗದಗದಲ್ಲಿ ತಾಪಮಾನ ಸ್ವಲ್ಪ ಮಟ್ಟಿಗೆ ಏರಿಕೆಯಾಗಿದೆ. ಬೆಂಗಳೂರಿನ ಹೆಚ್‌ಎಎಲ್ ವಿಮಾನ ನಿಲ್ದಾಣ, ಬೆಳಗಾವಿ, ಧಾರವಾಡ ಸೇರಿದಂತೆ ಪ್ರಮುಖ ನಗರಗಳಲ್ಲಿ ತಾಪಮಾನ 9.0 ರಿಂದ 13.9 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿದೆ. ಕರಾವಳಿ ಭಾಗದ ಮಂಗಳೂರು ಮತ್ತು ಕಾರವಾರದಲ್ಲಿ ತಾಪಮಾನ 20.9 ರಿಂದ 23.0 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇಲ್ಲಿನ ಉಷ್ಣಾಂಶ ಸಾಮಾನ್ಯಕ್ಕಿಂತ ಹೆಚ್ಚಿದೆ.
ರಾಜ್ಯದ ಒಳನಾಡಿನ ಕೆಲವು ಭಾಗಗಳಲ್ಲಿ ಮುಂಜಾನೆ ದಟ್ಟ ಮಂಜು ಕವಿಯುತ್ತಿದ್ದು, ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಬಂಗಾಳಕೊಲ್ಲಿಯ ನೈಋತ್ಯ ಭಾಗದಲ್ಲಿ ಸೃಷ್ಟಿಯಾಗಿರುವ ಆಳವಾದ ವಾಯುಭಾರ ಕುಸಿತವು ವಾಯುವ್ಯ ದಿಕ್ಕಿನತ್ತ ಚಲಿಸುತ್ತಿದೆ. ಇದು ಜನವರಿ 10ರ ಮಧ್ಯಾಹ್ನದ ವೇಳೆಗೆ ಶ್ರೀಲಂಕಾ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ. ಅರೇಬಿಯನ್ ಸಮುದ್ರದ ದಕ್ಷಿಣ ಕೇರಳ ಕರಾವಳಿಯಲ್ಲಿ ವಾಯು ಚಂಡಮಾರುತದ ಪರಿಚಲನೆಯೂ ಕಂಡುಬರುತ್ತಿದೆ ಎಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ.
ಮುಂದಿನ ಏಳು ದಿನಗಳ ಮುನ್ಸೂಚನೆ
ಹವಾಮಾನ ಇಲಾಖೆಯ ವರದಿಯ ಪ್ರಕಾರ, ಮುಂದಿನ ಏಳು ದಿನಗಳ ಕಾಲ (ಜನವರಿ 15ರವರೆಗೆ) ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಾದ್ಯಂತ ಯಾವುದೇ ಮಳೆಯ ಮುನ್ಸೂಚನೆ ಇಲ್ಲ. ರಾಜ್ಯದ ಬಹುತೇಕ ಭಾಗಗಳಲ್ಲಿ ಒಣ ಹವೆಯೇ ಮುಂದುವರಿಯಲಿದ್ದು, ಚಳಿಯ ಪ್ರಭಾವ ಇನ್ನೂ ಕೆಲವು ದಿನಗಳ ಕಾಲ ತೀವ್ರವಾಗಿರುವ ಸಾಧ್ಯತೆಯಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ.

