
ʼಗದ್ದುಗೆ ಗುದ್ದಾಟʼ| ರಾಹುಲ್ ಕೈಯಲ್ಲಿ ಸಿಎಂ ಬದಲಾವಣೆಯ ಚೆಂಡು; ಹೈಕಮಾಂಡ್‌ಗೆ ಡಿಕೆಶಿ ಒತ್ತಡ ತಂತ್ರ?
ಕಾಂಗ್ರೆಸ್‌ನಲ್ಲಿ ಶಾಸಕರ ಖರೀದಿ ನಡೆಯುತ್ತಿದೆ, ತಲಾ ಒಬ್ಬ ಶಾಸಕರಿಗೆ 50 ಕೋಟಿ, ಒಂದು ಫ್ಲ್ಯಾಟ್ ಹಾಗೂ ಫಾರ್ಚೂನರ್ ಕಾರು ನೀಡಲಾಗುತ್ತಿದೆ ಎಂಬ ಆರೋಪವನ್ನು ಬಿಜೆಪಿ ಮಾಡಿದೆ.
ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ–ಡಿಸಿಎಂ ನಡುವಿನ ʼಗದ್ದುಗೆ ಗುದ್ದಾಟʼ ಹೈಕಮಾಂಡ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಡಿ.ಕೆ. ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ಪಾಳಯದಲ್ಲಿ ಉರುಳಿಸುತ್ತಿರುವ ರಾಜಕೀಯ ದಾಳಗಳು ಕ್ಷಣ ಕ್ಷಣಕ್ಕೂ ರೋಚಕತೆ ಕಟ್ಟಿಕೊಡುತ್ತಿವೆ. ಅಧಿಕಾರಿ ಹಸ್ತಾಂತರ ಅಥವಾ ನಾಯಕತ್ವ ಬದಲಾವಣೆಗಾಗಿ ನಾಯಕರ ಕಚ್ಚಾಟವು ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದಿದ್ದು, ಹೈಕಮಾಂಡ್ ಅಂಗಳ ತಲುಪಿದೆ.
ನಾಯಕತ್ವ ಬದಲಾವಣೆ ವಿಚಾರವು ಸಿದ್ದರಾಮಯ್ಯ- ಡಿ.ಕೆ. ಶಿವಕುಮಾರ್ ನಡುವೆ ಬಿರುಕು ಮೂಡಿಸುತ್ತಿದ್ದು, ಹೈಕಮಾಂಡ್ ರಂಗ ಪ್ರವೇಶ ಅನಿವಾರ್ಯವಾಗಿದೆ. ಅಂತೆಯೇ ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಅವರು ಬಿಕ್ಕಟ್ಟು ಶಮನ ಅಂತಿಮಗೊಳಿಸಲು ಅಖಾಡಕ್ಕೆ ಇಳಿಯಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿ, ರಾಜ್ಯ ರಾಜಕೀಯ ಸ್ಥಿತಿಗತಿಗಳ ವರದಿಯನ್ನು ರಾಹುಲ್ ಮುಂದಿಟ್ಟಿದ್ದಾರೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ರಾಹುಲ್ ಗಾಂಧಿ ಅವರೇ ನಾಯಕತ್ವ ಬದಲಾವಣೆ ಬಿಕ್ಕಟ್ಟಿಗೆ ಇತಿಶ್ರೀ ಹಾಡಲಿದ್ದಾರೆ ಎಂದು ತಿಳಿದು ಬಂದಿದೆ.
ರಾಹುಲ್‌ಗೆ ವರದಿ ಸಲ್ಲಿಸಿದ ಖರ್ಗೆ
ಬೆಂಗಳೂರಿನಲ್ಲಿ ನಾಲ್ಕು ದಿನಗಳ ಕಾಲ ವಾಸ್ತವ್ಯ ಹೂಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಾಯಕತ್ವ ಬದಲಾವಣೆ ಗೊಂದಲಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ನಾಯಕರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಇದರ ವರದಿಯನ್ನು ರಾಹುಲ್ ಗಾಂಧಿ ಅವರಿಗೆ ಸಲ್ಲಿಸಲು ಮಂಗಳವಾರ ದೆಹಲಿಗೆ ತೆರಳಿದ್ದಾರೆ. ಈ ಮಧ್ಯೆ ನಾಲ್ಕು ದಿನಗಳಿಂದ ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಸಿದ್ದರಾಮಯ್ಯ, ಸಚಿವರಾದ ಕೆ.ಜೆ. ಜಾರ್ಜ್ ಸೇರಿದಂತೆ ಸಿಎಂ ಬಣದ ನಾಯಕರು ಭೇಟಿ ಮಾಡಿ ಅಭಿಪ್ರಾಯ ದಾಖಲಿಸಿದ್ದರು. ಆದರೆ, ಡಿ.ಕೆ. ಶಿವಕುಮಾರ್ ಮಾತ್ರ ಭೇಟಿ ಆಗಿರಲಿಲ್ಲ.
ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿಗೆ ಆಗಮಿಸಿದ್ದರೂ ಡಿಕೆಶಿ ಬೆಂಬಲಿಗ ಶಾಸಕರೂ ದೆಹಲಿಯಲ್ಲಿ ಬೀಡು ಬಿಟ್ಟು, ರಾಹುಲ್ ಭೇಟಿಗೆ ಎಡತಾಕಿದ್ದರು. ಆದರೆ, ಅದು ಸಾಧ್ಯವಾಗಿರಲಿಲ್ಲ. ನಾಯಕತ್ವ ಬದಲಾವಣೆಗಾಗಿ ಹೈಕಮಾಂಡ್ ಮೇಲೆ ಒತ್ತಡ ತೀವ್ರಗೊಳಿಸಲು ನಿರ್ಧರಿಸಿರುವ ಡಿ.ಕೆ. ಶಿವಕುಮಾರ್ ಬಣದ ಶಾಸಕರು ಈಗಾಗಲೇ ಎರಡು ತಂಡಗಳಲ್ಲಿ ದೆಹಲಿಗೆ ಭೇಟಿ ನೀಡಿದ್ದಾರೆ. ಮಂಗಳವಾರ ಕೂಡ ಮೂರನೇ ತಂಡ ದೆಹಲಿಗೆ ತೆರಳಲು ಸಜ್ಜಾಗಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಡಿ.ಕೆ. ಶಿವಕುಮಾರ್ ಅವರಿಗೆ ಶಾಸಕರ ಬೆಂಬಲವಿಲ್ಲ ಎಂಬ ಸಿಎಂ ಹೇಳಿಕೆಗೆ ತಿರುಗೇಟು ನೀಡಲು ಡಿ.ಕೆ.ಶಿ ಬಣದಲ್ಲಿ ಗುರುತಿಸಿಕೊಂಡ ಹಾಗೂ ಬಣಕ್ಕೆ ಹೊಸದಾಗಿ ಸೇರುತ್ತಿರುವ ಶಾಸಕರು ದೆಹಲಿ ಯಾತ್ರೆ ಕೈಗೊಂಡಿದ್ದಾರೆ. ಆ ಮೂಲಕ ನಾಯಕತ್ವ ಬದಲಾವಣೆಗೆ ಮುಂದಾಗುವಂತೆ ಹೈಕಮಾಂಡ್ ಮುಂದೆ ಬೇಡಿಕೆ ಇಡಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
ಹೊಸ ಬೆಳವಣಿಗೆ ಎಂದರೆ ದಿನೇ ದಿನೇ ಡಿ.ಕೆ. ಶಿವಕುಮಾರ್ ಪರವಿರುವ ಶಾಸಕರ ಸಂಖ್ಯೆ ಹೆಚ್ಚುತ್ತಿರುವುದು ಸಿಎಂ ಬಣದ ನಾಯಕರನ್ನು ಚಿಂತೆಗೀಡು ಮಾಡಿದೆ. ಎರಡೂ ಬಣಗಳಲ್ಲಿ ಶಾಸಕರು ಇಬ್ಭಾಗವಾದರೆ ರೆಸಾರ್ಟ್ ರಾಜಕಾರಣವೂ ಆರಂಭವಾಗುವ ಸಾಧ್ಯತೆಗಳು ದಟ್ಟವಾಗಿವೆ ಎಂದು ತಿಳಿದು ಬಂದಿದೆ.
ರಾಜಕೀಯ ಲೆಕ್ಕಾಚಾರದಲ್ಲಿ ಶಾಸಕರು
ನಾಯಕತ್ವ ಬದಲಾವಣೆ ವಿಚಾರದಲ್ಲಿ ಬಹುತೇಕ ಶಾಸಕರ ನಿಲುವು ಭಿನ್ನವಾಗಿದೆ. 2028 ರ ವಿಧಾನಸಭೆ ಚುನಾವಣೆಗೆ ಸಿಎಂ ಸ್ಪರ್ಧಿಸುವುದು ಅನುಮಾನ ಎಂಬ ಹೇಳಿಕೆಗಳ ಹಿನ್ನೆಲೆ ಹಾಗೂ ಡಿಕೆ ಶಿವಕುಮಾರ್ ಅವರ ರಾಜಕೀಯ ಭವಿಷ್ಯ ಪರಿಗಣಿಸಿ ವ್ಯಕ್ತಿಗತ ನಿಲುವು ಕೈಗೊಳ್ಳುತ್ತಿದ್ದಾರೆ ಎನ್ನಲಾಗಿದೆ. ಪ್ರಸ್ತುತ, ನಾಯಕತ್ವ ಬದಲಾವಣೆ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿದರೆ ರಾಜಕೀಯ ಭವಿಷ್ಯ ಮಸುಕಾಗಬಹುದು ಎಂಬ ಆತಂಕ ಹಲವರಲ್ಲಿದೆ.
ಡಿ.ಕೆ.ಶಿವಕುಮಾರ್ ಅವರು ಚುನಾವಣೆಗಳನ್ನು ಎದುರಿಸುವಷ್ಟು ಆರ್ಥಿಕವಾಗಿ ಸಶಕ್ತರಾಗಿದ್ದು, ಕನಿಷ್ಠ 15-20 ವರ್ಷ ರಾಜಕೀಯದಲ್ಲಿ ಉಳಿಯಲಿದ್ದಾರೆ. ಹಾಗಾಗಿ ಡಿ.ಕೆ. ಶಿವಕುಮಾರ್ ಅವರನ್ನು ಬೆಂಬಲಿಸಿದರೆ ರಾಜಕೀಯ ಭವಿಷ್ಯ ಭದ್ರವಾಗಿರಲಿದೆ ಎಂಬುದು ಹಲವರ ಆಲೋಚನೆಯಾಗಿದ್ದು, ನಾಯಕತ್ವ ಬದಲಾವಣೆ ವಿಚಾರದಲ್ಲಿ ಡಿಕೆಶಿ ಬೆಂಬಲಕ್ಕೆ ನಿಲ್ಲುತ್ತಿದ್ದಾರೆ ಎನ್ನಲಾಗಿದೆ.
ಕಾರಿನಲ್ಲೇ ಖರ್ಗೆ ಜತೆ ಡಿಕೆಶಿ ಚರ್ಚೆ
ರಾಜ್ಯ ರಾಜಕೀಯ ಬೆಳವಣಿಗೆಗಳ ವರದಿ ಸಮೇತ ದೆಹಲಿಗೆ ತೆರಳಲು ಮಲ್ಲಿಕಾರ್ಜುನ ಖರ್ಗೆ ಅವರು ಅಣಿಯಾಗಿದ್ದ ವೇಳೆ ಡಿ.ಕೆ.ಶಿವಕುಮಾರ್ ಅವರು ಭೇಟಿಗೆ ಮುಂದಾಗಿದ್ದರು. ಆದರೆ, ದೆಹಲಿ ಪ್ರಯಾಣಕ್ಕೆ ಹೊರಟಿದ್ದರಿಂದ ಖರ್ಗೆ ನಿವಾಸದಲ್ಲಿ ಚರ್ಚೆ ಸಾಧ್ಯವಾಗಲಿಲ್ಲ. ಬದಲಿಗೆ ಖರ್ಗೆ ಅವರೊಂದಿಗೇ ದೇವನಹಳ್ಳಿ ವಿಮಾನ ನಿಲ್ದಾಣದವರೆಗೆ ಕಾರಿನಲ್ಲೇ ಜೊತೆಯಾಗಿ ಪ್ರಯಾಣಿಸಿದ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ಹಂಚಿಕೆ ಒಪ್ಪಂದ ನೆನಪಿಸಿದ್ದಾರೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದಿರುವಲ್ಲಿ ತಮ್ಮ ಪಾತ್ರವನ್ನು ಪರಿಗಣಿಸಿ ನಾಯಕತ್ವ ಬದಲಾವಣೆಗೆ ಅವಕಾಶ ಮಾಡಿಕೊಡಲು ರಾಹುಲ್ ಗಾಂಧಿ ಅವರಿಗೆ ತಿಳಿಸಲು ಮನವಿ ಮಾಡಿದ್ದಾರೆ ಎನ್ನಲಾಗಿದೆ. ದೇವನಹಳ್ಳಿ ವಿಮಾನ ನಿಲ್ದಾಣ ವಿವಿಐಪಿ ಗೇಟ್ ವರೆಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬಿಟ್ಟು ನಂತರ ವಾಪಸ್ ಕನಕಪುರಕ್ಕೆ ತೆರಳಿದರು ಎಂದು ಮೂಲಗಳು ತಿಳಿಸಿವೆ.
ರಾಹುಲ್ ಗಾಂಧಿಗೆ ಗ್ರೌಂಡ್ ರಿಪೋರ್ಟ್
ಕಳೆದ ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ರಾಜ್ಯ ನಾಯಕರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಈ ಕುರಿತಾದ ವರದಿಯನ್ನು ರಾಹುಲ್ ಗಾಂಧಿ ಅವರಿಗೆ ನೀಡಲಿದ್ದಾರೆ. ರಾಜ್ಯ ರಾಜಕಾರಣದ ಗೊಂದಲ, ಡಿ.ಕೆ.ಶಿವಕುಮಾರ್ ಪರ ಶಾಸಕರ ಬಲ, ಎರಡೂ ಬಣಗಳ ನಾಯಕರ ಬಹಿರಂಗ ಹೇಳಿಕೆಗಳಿಂದ ಪಕ್ಷಕ್ಕೆ ಆಗುತ್ತಿರುವ ಹಾನಿ ಕುರಿತು ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಹೇಳಲಾಗಿದೆ.
ಮಲ್ಲಿಕಾರ್ಜುನ ಖರ್ಗೆ ಅವರಿಂದ ವರದಿ ಪಡೆಯಲಿರುವ ರಾಹುಲ್ ಗಾಂಧಿ ಅವರು ಮುಂದಿನ ಹಂತದಲ್ಲಿ ಸಿಎಂ ಮತ್ತು ಡಿಸಿಎಂ ಇಬ್ಬರನ್ನೂ ಕರೆಸಿ ಮನವೊಲಿಸುವ ಸಾಧ್ಯತೆ ಇದೆ. ಗೊಂದಲ ಬಗೆಹರಿಸಲು ವಿಳಂಬ ಮಾಡಿದಷ್ಟೂ ಸರ್ಕಾರದ ಸ್ಥಿರತೆ ಮತ್ತು ಪಕ್ಷದ ವರ್ಚಸ್ಸಿಗೆ ಹಾನಿಯಾಗಲಿದೆ ಎಂಬುದು ಹೈಕಮಾಂಡ್‌ಗೆ ಮನವರಿಕೆಯಾಗಿದ್ದು, ಸಿಎಂ-ಡಿಸಿಎಂ ಇಬ್ಬರನ್ನೂ ಒಂದೇ ವೇದಿಕೆಯಡಿ ಕೂರಿಸಿ ಮಾತುಕತೆ ನಡೆಸುವ ಸಾಧ್ಯತೆ ಇದೆ.
ರಾಹುಲ್-ಹರಿಪ್ರಸಾದ್ ಭೇಟಿ ಮೂಡಿಸಿದ ಕುತೂಹಲ
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಕಲಹ ಬಗೆಹರಿಸಲು ಖುದ್ದು ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿನಲ್ಲಿ ಮೇಲಿಂದ ಮೇಲೆ ಸಭೆ ನಡೆಸಿದರೆ, ಅತ್ತ ದೆಹಲಿಯಲ್ಲಿ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ಸೋಮವಾರ ಸಂಜೆ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ರಾಜ್ಯದ ರಾಜಕೀಯ ಸ್ಥಿತಿಗತಿಗಳನ್ನು ವಿವರಿಸಿದ್ದಾರೆ.
ಹೈಕಮಾಂಡ್ ಜತೆ ನಿಕಟ ಸಂಬಂಧ ಹೊಂದಿರುವ ಹರಿಪ್ರಸಾದ್ ಅವರು ಸಿಎಂ ಸಿದ್ದರಾಮಯ್ಯ ಪರವಾಗಿ ವಕಾಲತು ವಹಿಸಿ ಚರ್ಚೆ ನಡೆಸಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಮತ್ತೊಂದು ಮೂಲಗಳ ಪ್ರಕಾರ, ಸಂಪುಟ ಪುನಾರಚನೆ ವೇಳೆ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಲು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ ಎನ್ನಲಾಗುತ್ತಿದೆ. ದೆಹಲಿಯಲ್ಲಿ ಕಳೆದೊಂದು ವಾರದಿಂದ ಸಿಎಂ ಹಾಗೂ ಡಿಸಿಎಂ ಸೇರಿದಂತೆ ಯಾರ ಭೇಟಿಗೂ ಅವಕಾಶ ನೀಡದ ರಾಹುಲ್ ಗಾಂಧಿ ಅವರು ಹರಿಪ್ರಸಾದ್ ಅವರಿಗೆ ಅವಕಾಶ ನೀಡಿದ್ದೇಗೆ ಎಂಬ ಪ್ರಶ್ನೆಗಳು ಅನುಮಾನ ಮೂಡಿಸಿವೆ.
ಮಲ್ಲಿಕಾರ್ಜುನ ಖರ್ಗೆ ಅವರ ವರದಿಗೂ ಮುನ್ನವೇ ಬಿ.ಕೆ. ಹರಿಪ್ರಸಾದ್ ಅವರು ರಾಜ್ಯದಲ್ಲಿ ಗೊಂದಲ ಸೃಷ್ಟಿಸಿರುವ ಅಧಿಕಾರ ಹಂಚಿಕೆ ಕಾದಾಟ, ಸಿಎಂ ಹಾಗೂ ಡಿಸಿಎಂ ನಡುವಿನ ಬಣ ಘರ್ಷಣೆಯಿಂದ ಪಕ್ಷಕ್ಕೆ ಆಗುತ್ತಿರುವ ಹಾನಿ ಕುರಿತಂತೆ ರಾಹುಲ್ ಗಾಂಧಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಹಾಗಾಗಿ ಗೊಂದಲವನ್ನು ತ್ವರಿತವಾಗಿ ಬಗೆಹರಿಸುವ ಜರೂರತ್ತು ಹೈಕಮಾಂಡ್ ಮುಂದಿದೆ ಎಂದು ತಿಳಿದು ಬಂದಿದೆ.
ಡಿಕೆಶಿ ಪರ ಶಾಸಕರ ದೆಹಲಿ ಯಾತ್ರೆ
ಡಿಸಿಎಂ ಡಿ.ಕೆ.ಶಿವಕುಮಾರ್ ಪರ ಲಾಬಿ ನಡೆಸಲು ಶಾಸಕರು ಮೂರು ತಂಡಗಳಲ್ಲಿ ದೆಹಲಿಗೆ ತೆರಳುತ್ತಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ. ಮೂರು ತಂಡಗಳಲ್ಲಿ 30ಕ್ಕೂ ಹೆಚ್ಚು ಶಾಸಕರು ದೆಹಲಿಗೆ ತೆರಳುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈಗಾಗಲೇ ಮೊದಲ ತಂಡದಲ್ಲಿ 11 ಮಂದಿ, ಎರಡನೇ ತಂಡದಲ್ಲಿ 8 ಮಂದಿ ಶಾಸಕರು ತೆರಳಿದ್ದಾರೆ. ಮೂರನೇ ತಂಡವು ಮಂಗಳವಾರ ದೆಹಲಿಗೆ ಪ್ರಯಾಣ ಬೆಳೆಸಲು ಸಿದ್ಧತೆ ನಡೆಸಿದ್ದು,15 ಮಂದಿ ಶಾಸಕರು ತೆರಳಲಿದ್ದಾರೆ ಎಂದು ತಿಳಿದು ಬಂದಿದೆ.
ಬಿಜೆಪಿ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಕಾಂಗ್ರೆಸ್‌ನಲ್ಲಿ ಶಾಸಕರ ಖರೀದಿ ನಡೆಯುತ್ತಿದೆ, ತಲಾ ಒಬ್ಬ ಶಾಸಕರಿಗೆ 50 ಕೋಟಿ, ಒಂದು ಫ್ಲ್ಯಾಟ್ ಹಾಗೂ ಫಾರ್ಚೂನರ್ ಕಾರು ನೀಡಲಾಗುತ್ತಿದೆ ಎಂಬ ಆರೋಪ ಮಾಡಿದ್ದರು. ಸಿಎಂ ಹಾಗೂ ಡಿಸಿಎಂ ಮಧ್ಯೆ ಕುರ್ಚಿ ಕಾದಾಟ ತೀವ್ರಗೊಂಡು, ಶಾಸಕರ ಬಲಾಬಲ ಪ್ರದರ್ಶನಕ್ಕೆ ಮುಂದಾಗಿರುವುದು ಇಂತಹ ಆರೋಪಗಳಿಗೆ ಪುಷ್ಠಿ ನೀಡುವಂತಿದೆ.
ಈ ಹಿಂದೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರು ಕಾಂಗ್ರೆಸ್ ಶಾಸಕರು ಹಾಗೂ ಸಚಿವರೊಂದಿಗೆ ಪ್ರತ್ಯೇಕ ಸಭೆ ನಡೆಸಿದಾಗ ಡಿ.ಕೆ. ಶಿವಕುಮಾರ್ ಅವರಿಗೆ ಶಾಸಕರ ಬೆಂಬಲ ಕಡಿಮೆ ಇದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈಗ ದಿಢೀರನೇ ಡಿಕೆಶಿ ಪರ ಶಾಸಕರ ಸಂಖ್ಯೆ ಹೆಚ್ಚಾಗುತ್ತಿರುವುದು ಶಾಸಕರ ಖರೀದಿಯ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
"ಶಾಸಕರು ದೆಹಲಿಗೆ ಹೋಗುವುದು ಅವರ ಸ್ವಾತಂತ್ರ್ಯ. ಅವರು ಏನು ಹೇಳ್ತಾರೋ ಹೇಳಲಿ, ಅಂತಿಮವಾಗಿ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ. ಹೈಕಮಾಂಡ್ ಏನು ಹೇಳ್ತಾರೋ ಅದನ್ನು ಕೇಳಲಿಕ್ಕೆ ನಾವು ಸಿದ್ಧರಿದ್ದೇವೆ, ಅಂತಿಮವಾಗಿ ಎಲ್ಲ ಗೊಂದಲಗಳಿಗೆ ಹೈಕಮಾಂಡ್ ಪೂರ್ಣ ವಿರಾಮ ಹಾಕಬೇಕು. ಹೈಕಮಾಂಡ್ ಅನುಮತಿ ಕೊಟ್ಟಾಗ ಸಂಪುಟ ಪುನಾರಚನೆ ಮಾಡಲಿದ್ದೇವೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಡಿ.ಕೆ.ಸುರೇಶ್ ಹೆಗಲಿಗೆ ಶಾಸಕರ ಬಲ ಹೆಚ್ಚಿಸುವ ಹೊಣೆ
ನಾಯಕತ್ವ ಬದಲಾವಣೆಗೆ ಸಿಎಂ ಸಿದ್ದರಾಮಯ್ಯ ಬಣ ತೀವ್ರ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಅಣ್ಣನ ಪರವಾಗಿ ಡಿ.ಕೆ. ಸುರೇಶ್ ಲಾಬಿ ಆರಂಭಿಸಿದ್ದಾರೆ. ಕಳೆದ ವಾರ ಎಐಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿದ್ದ ಡಿ.ಕೆ. ಸಹೋದರರು, ಅಧಿಕಾರ ಹಂಚಿಕೆ ಒಪ್ಪಂದ ಪ್ರಸ್ತಾಪಿಸಿದ್ದರು. ಅದಾದ ಬಳಿಕವೂ ಯಾವುದೇ ಅಂತಿಮ ನಿರ್ಣಯ ಕೈಗೊಂಡಿರಲಿಲ್ಲ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಆಪ್ತರ ಹೇಳಿಕೆಗಳಿಂದ ಅಸಮಾಧಾನಗೊಂಡಿರುವ ಡಿ.ಕೆ. ಸುರೇಶ್ ಅವರು ನೇರವಾಗಿ ಹೈಕಮಾಂಡ್ ಹಾಗೂ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಸರ್ಕಾರ ರಚನೆಯ ಸಂದರ್ಭದಲ್ಲಿ ಕೊಟ್ಟ ಮಾತು ಉಳಿಸಿಕೊಳ್ಳಬೇಕು. ಅಧಿಕಾರ ಹಂಚಿಕೆ ಒಪ್ಪಂದಕ್ಕೆ ಖುದ್ದು ನಾನೇ ಸಾಕ್ಷಿಯಾಗಿದ್ದೆ. ಹೈಕಮಾಂಡ್ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಇಲ್ಲವಾದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.
ಹೈಕಮಾಂಡ್ ಮುಂದಿರುವ ಆಯ್ಕೆಗಳೇನು?
ನಾಯಕತ್ವ ಬದಲಾವಣೆ ಬಿಕ್ಕಟ್ಟು ಶಮನಕ್ಕೆ ಹೈಕಮಾಂಡ್ ಮುಂದೆ ಮೂರು ಅವಕಾಶಗಳಿವೆ. ಅವುಗಳೆಂದರೆ, ಹಂತ ಹಂತವಾಗಿ ಅಧಿಕಾರ ಹಸ್ತಾಂತರ ಮಾಡುವುದು, ಇಲ್ಲವೇ ಸಿದ್ದರಾಮಯ್ಯ ಅವರನ್ನು ಅಧಿಕಾರದಲ್ಲೇ ಮುಂದುವರಿಸುವುದು. 2026ರೊಳಗೆ ಅಧಿಕಾರ ಹಸ್ತಾಂತರಕ್ಕೆ ಗಡುವು ನೀಡುವುದು. ಎರಡು ಬಣಗಳಿಗೂ ಸ್ಪಷ್ಟ ಎಚ್ಚರಿಕೆ ನೀಡಿ ನಾಯಕತ್ವ ಬದಲಾವಣೆ ವಿಚಾರವನ್ನು ತಾತ್ಕಾಲಿಕ ಶಮನ ಮಾಡುವುದು. ಅಧಿವೇಶನದವರೆಗೆ ಗದ್ದಲ ನಿಲ್ಲಿಸಲು ನಿರ್ದೇಶನ ನೀಡುವುದು.
ಸಿದ್ದರಾಮಯ್ಯ ಅವರಿಂದ ಸಿಎಂ ಸ್ಥಾನ ಕಿತ್ತುಕೊಂಡು ಡಿ.ಕೆ. ಶಿವಕುಮಾರ್ ಅವರಿಗೆ ನೀಡುವ ಸಾಧ್ಯತೆ ಕ್ಷೀಣವಾಗಿದ್ದರೂ ಶಾಸಕರ ಬಲ ಪರೀಕ್ಷೆ ಆಧರಿಸಿ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಒಟ್ಟಾರೆ ರಾಜ್ಯ ಕಾಂಗ್ರೆಸ್‌ನಲ್ಲಿ ತಲೆದೋರಿರುವ ರಾಜಕೀಯ ಬಿಕ್ಕಟ್ಟು ಇದೀಗ ದೆಹಲಿಯ ನಾಯಕರ ನಿರ್ಧಾರದ ಮೇಲೆ ನಿಂತಿದೆ.
ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆ ತಿಕ್ಕಾಟ ಕೇವಲ ಬಣ ರಾಜಕಾರಣವಲ್ಲ, ಸರ್ಕಾರ ಹಾಗೂ ಪಕ್ಷದ ಭವಿಷ್ಯವನ್ನೂ ನಿರ್ಧರಿಸಲಿದೆ ಎಂದು ಮೂಲಗಳು ತಿಳಿಸಿವೆ.

