
ಸಚಿವ ಸಂಪುಟ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.
Cabinet Meeting| ನರೇಗಾ ಹೆಸರು ಬದಲು; ಕೇಂದ್ರದ ವಿರುದ್ಧ ಹೋರಾಟಕ್ಕೆ ಸಂಪುಟ ಒಪ್ಪಿಗೆ
ರಾಜ್ಯದ 31 ಜಿಲ್ಲೆಗಳು ಹಾಗೂ 5 ಪೊಲೀಸ್ ಆಯುಕ್ತಾಲಯಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ `ಅಕ್ಕ ಪಡೆ' ಯೋಜನೆಯನ್ನು ಜಾರಿಗೆ ತರಲು ಸಚಿವ ಸಂಪುಟ ಅನುಮೋದನೆ ನೀಡಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹೆಸರನ್ನು ಬದಲಾಯಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಗಟ್ಟಿ ಹೋರಾಟ ನಡೆಸಲು ರಾಜ್ಯ ಸಚಿವ ಸಂಪುಟ ಒಕ್ಕೊರಲ ತೀರ್ಮಾನ ಕೈಗೊಂಡಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನರೇಗಾ ಹೆಸರು ಬದಲಾಯಿಸಿದ ಕೇಂದ್ರದ ನಡೆಯನ್ನು ಪ್ರಸ್ತಾಪಿಸಿದರು.
ಕೇಂದ್ರ ಸರ್ಕಾರ ಕೇವಲ ಯೋಜನೆ ಹೆಸರನ್ನು ಬದಲಾಯಿಸಿಲ್ಲ. ಬದಲಾಗಿ ಯೋಜನೆಯ ಮೂಲ ಆಶಯವನ್ನೇ ಬುಡಮೇಲು ಮಾಡಿದೆ. ಕೇಂದ್ರದ ಈ ನಡೆಯನ್ನು ಖಂಡಿಸಿ ರಾಜ್ಯಾದ್ಯಂತ ದೊಡ್ಡ ಮಟ್ಟದ ಹೋರಾಟ ರೂಪಿಸಬೇಕಾಗಿದೆ. ಇದೇ ಹೋರಾಟವನ್ನು ರಾಜಕೀಯ ಮತ್ತು ಸಾಮಾಜಿಕವಾದ ಪ್ರಬಲ ಅಸ್ತ್ರವನ್ನಾಗಿ ಬಳಸಿಕೊಳ್ಳಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಯಿತು.
ಯೋಜನೆ ಬಗ್ಗೆ ಸಚಿವರ ಅಭಿಪ್ರಾಯ ಆಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇಂದು ಸಂಜೆ ಪಕ್ಷದ ಮುಖಂಡರೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಿ ಹೋರಾಟದ ಮುಂದಿನ ರೂಪರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು.
ಸಚಿವ ಸಂಪುಟ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್ ಅವರು, ಸಂಪುಟ ಸಭೆಯ ನಿರ್ಧಾರಗಳನ್ನು ವಿವರಿಸಿದರು.
ಅಕ್ಕಪಡೆಗೆ ರಾಜ್ಯಾದ್ಯಂತ ಅನುಷ್ಠಾನ
ಮಹಿಳಾ ಸುರಕ್ಷತೆಗಾಗಿ ವಿಶೇಷವಾಗಿ ರೂಪಿಸಲಾಗಿರುವ ʻಅಕ್ಕ ಪಡೆʼ ಯೋಜನೆಯನ್ನು ಗೃಹ ಇಲಾಖೆಯ ಸಹಯೋಗದೊಂದಿಗೆ ರಾಜ್ಯದ ಎಲ್ಲಾ 31 ಜಿಲ್ಲೆಗಳು ಹಾಗೂ 5 ಪೊಲೀಸ್ ಆಯುಕ್ತಾಲಯಗಳಲ್ಲಿ ಅನುಷ್ಠಾನಗೊಳಿಸಲು ಹಸಿರು ನಿಶಾನೆ ತೋರಿಸಲಾಗಿದೆ. ಶಿವಮೊಗ್ಗದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾಜಿ ಸೈನಿಕ ಆರ್.ಜಿ. ತೆಲಂಗ್ ಅವರಿಗೆ ಈ ಹಿಂದೆ ಹಂಚಿಕೆಯಾಗಿದ್ದ ನಿವೇಶನದ ಬದಲಿಗೆ, ವಿನೋಬನಗರ 1ನೇ ಹಂತದಲ್ಲಿ 1350 ಚದರ ಅಡಿಯ ಪರ್ಯಾಯ ನಿವೇಶನ ಮಂಜೂರು ಮಾಡಲು ಸರ್ಕಾರ ಒಪ್ಪಿಗೆ ನೀಡಿದೆ ಎಂದು ವಿವರಿಸಿದರು.
ಶಿಕ್ಷಣ ಮತ್ತು ಮೂಲಸೌಕರ್ಯ ಕ್ಷೇತ್ರಕ್ಕೂ ಸಂಪುಟ ಹೆಚ್ಚಿನ ಆದ್ಯತೆ ನೀಡಿದೆ. ಮಂಡ್ಯದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ 70.70 ಕೋಟಿ ರೂ. ವೆಚ್ಚದಲ್ಲಿ ನೂತನ ಆಡಳಿತ ಭವನ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ. ಹಾಗೆಯೇ, ಕರಾವಳಿ ಭಾಗದ ಸಮುದ್ರ ಕೊರೆತ ತಡೆಗಟ್ಟಲು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ದುಬ್ಬನಶಶಿ ಮತ್ತು ಗಂಗಕೊಳ್ಳ ಕಡಲತೀರದಲ್ಲಿ 11.03 ಕೋಟಿ ರೂ.ಗಳ ಪರಿಷ್ಕೃತ ಕಾಮಗಾರಿಗೆ ಒಪ್ಪಿಗೆ ನೀಡಲಾಗಿದೆ. ಸಾರಿಗೆ ಇಲಾಖೆಗೆ ಸಂಬಂಧಿಸಿದಂತೆ, ದಕ್ಷಿಣ ಕನ್ನಡದ ಉಳ್ಳಾಲ ತಾಲ್ಲೂಕಿನ ಬಾಳೆಪುಣಿ ಗ್ರಾಮದಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆಗಾಗಿ ಕೆಎಸ್‌ಆರ್‌ಟಿಸಿಗೆ 5 ಎಕರೆ ಜಮೀನು ಮಂಜೂರು ಮಾಡಲಾಗಿದೆ ಎಂದು ಅವರು ತಿಳಿಸಿದರು.
ಮೂರು ಎಕರೆ ಜಮೀನು
ಸಾಂಸ್ಕೃತಿಕ ಮತ್ತು ಸಾಮಾಜಿಕ ಕ್ಷೇತ್ರಗಳಿಗೂ ನೆರವು ಘೋಷಿಸಲಾಗಿದ್ದು, ಕೊಡಗು ಜಿಲ್ಲೆಯ ಅರೆಭಾಷಿಕ ಗೌಡ ಜನಾಂಗದ ಶೈಕ್ಷಣಿಕ ಮತ್ತು ಕ್ರೀಡಾ ಚಟುವಟಿಕೆಗಳಿಗಾಗಿ ಕೊಡಗು ಗೌಡ ಸಮಾಜಕ್ಕೆ ಮದೆ ಗ್ರಾಮದಲ್ಲಿ 2 ರಿಂದ 3 ಎಕರೆ ಜಮೀನು ನೀಡಲು ನಿರ್ಧರಿಸಲಾಗಿದೆ. ಮೈಸೂರು ಭಾಗದ ರೇಷ್ಮೆ ಬೆಳೆಗಾರರ ಹಿತದೃಷ್ಟಿಯಿಂದ ನಬಾರ್ಡ್ ಸಹಯೋಗದೊಂದಿಗೆ 20 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆ ಸ್ಥಾಪಿಸಲು ಸಂಪುಟ ಅನುಮೋದನೆ ನೀಡಿದೆ ಎಂದು ತಿಳಿಸಿದರು.
ಬೆಂಗಳೂರಿನ ಜಯನಗರದಲ್ಲಿ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ 2ನೇ ಹಂತದ ಕಟ್ಟಡಕ್ಕೆ 24 ಕೋಟಿ ರೂ. ಹಾಗೂ ಚಿಕ್ಕಬಳ್ಳಾಪುರದ ನಂದಿ ವೈದ್ಯಕೀಯ ಕಾಲೇಜಿಗೆ ಅವಶ್ಯವಿರುವ ಯಂತ್ರೋಪಕರಣಗಳ ಖರೀದಿಗಾಗಿ 40 ಕೋಟಿ ರೂ. ಬಿಡುಗಡೆ ಮಾಡಲು ಸರ್ಕಾರ ಮುಂದಾಗಿದೆ. ಕಾರಾಗೃಹಗಳಲ್ಲಿ ಸನ್ನಡತೆ ಆಧಾರದ ಮೇಲೆ 33 ಜೀವಾವಧಿ ಶಿಕ್ಷಾ ಬಂದಿಗಳನ್ನು ಕೇಂದ್ರ ಸರ್ಕಾರದ ಅನುಮತಿ ಪಡೆದು ಅವಧಿಪೂರ್ವ ಬಿಡುಗಡೆ ಮಾಡಲು ಸಭೆ ತೀರ್ಮಾನಿಸಿದೆ ಎಂದರು.
ತುಮಕೂರಿನ ಶಿರಾ ಮತ್ತು ರಾಯಚೂರಿನ ಸಿರವಾರದಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕಾಗಿ ಜಮೀನು ಮಂಜೂರು ಮಾಡಲಾಗಿದೆ. ಅಲ್ಲದೆ, ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ, ಇಂದಿರಾ ಗಾಂಧಿ, ಜವಾಹರಲಾಲ್ ನೆಹರೂ ಮತ್ತು ರಾಜೀವ್ ಗಾಂಧಿ ಅವರ ಪುತ್ಥಳಿಗಳನ್ನು ಸ್ಥಾಪಿಸಲು ಸರ್ಕಾರ ಅಧಿಕೃತ ಮುದ್ರೆ ಒತ್ತಿದೆ. ಆದರೆ, ಬೆಂಗಳೂರು ಉತ್ತರ ತಾಲ್ಲೂಕಿನ ರಾವುತನಹಳ್ಳಿಯಲ್ಲಿ ವಿವಿಧ ಮಠಗಳಿಗೆ ಜಮೀನು ಮಂಜೂರು ಮಾಡುವ ವಿಚಾರವನ್ನು ಸದ್ಯಕ್ಕೆ ಮುಂದೂಡಲಾಗಿದೆ ಎಂದು ಮಾಧ್ಯಮದವರಿಗೆ ತಿಳಿಸಿದರು.

