Karnataka By-poll | ಚನ್ನಪಟ್ಟಣ ಮೈತ್ರಿ ಅಭ್ಯರ್ಥಿ ಆಯ್ಕೆ ಕಗ್ಗಂಟು: ಸಿಪಿವೈ ಬಂಡಾಯ ಸಾಧ್ಯತೆ
x

Karnataka By-poll | ಚನ್ನಪಟ್ಟಣ ಮೈತ್ರಿ ಅಭ್ಯರ್ಥಿ ಆಯ್ಕೆ ಕಗ್ಗಂಟು: ಸಿಪಿವೈ ಬಂಡಾಯ ಸಾಧ್ಯತೆ

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಚನ್ನಪಟ್ಟಣ ಕ್ಷೇತ್ರದಿಂದ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ನಿರ್ಧರಿಸಿದ್ದಾರೆ. ಆದರೆ, ಬಿಜೆಪಿ ಪಕ್ಷ ಮೈತ್ರಿ ಅಭ್ಯರ್ಥಿಯ ಪರ ಒಲವು ತೋರುತ್ತಿದೆ. ಮೈತ್ರಿ ಪಕ್ಷಗಳ ನಡೆ ಆಧರಿಸಿ ತನ್ನ ಅಭ್ಯರ್ಥಿ ಪ್ರಕಟಿಸಲು ಕಾಂಗ್ರೆಸ್ ಕಾದು ನೋಡುವ ತಂತ್ರದ ಮೊರೆ ಹೋಗಿದೆ.


ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನ.13 ರಂದು ಉಪ ಚುನಾವಣೆ ನಡೆಸಲು ಚುನಾವಣಾ ಆಯೋಗ ದಿನಾಂಕ ಘೋಷಿಸಿದೆ.

ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಎಚ್.ಡಿ.ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ಹಾಗೂ ಇ.ತುಕಾರಾಂ ಅವರು ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಈ ಮೂರೂ ಕ್ಷೇತ್ರಗಳು ತೆರವಾಗಿದ್ದವು.

ಈ ಪೈಕಿ ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆಯ ಕದನ ಆಡಳಿತ ಪಕ್ಷ ಹಾಗೂ ವಿಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದೆ.

2023 ರ ವಿಧಾನಸಭೆ ಚುನಾವಣೆಯಲ್ಲಿ ಚನ್ನಪಟ್ಟಣದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ನಿರ್ಧರಿಸಿದ್ದಾರೆ. ಆದರೆ, ಬಿಜೆಪಿ ಪಕ್ಷ ಮೈತ್ರಿ ಅಭ್ಯರ್ಥಿಯ ಪರ ಒಲವು ತೋರುತ್ತಿದೆ. ಮೈತ್ರಿ ಪಕ್ಷಗಳ ನಡೆ ಆಧರಿಸಿ ತನ್ನ ಅಭ್ಯರ್ಥಿ ಪ್ರಕಟಿಸಲು ಕಾಂಗ್ರೆಸ್ ಕಾದು ನೋಡುವ ತಂತ್ರದ ಮೊರೆ ಹೋಗಿದೆ.

ಪುತ್ರನ ಪರ ಎಚ್ಡಿಕೆ ಬ್ಯಾಟಿಂಗ್

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಗೆದ್ದಿರುವ ಕುಮಾರಸ್ವಾಮಿ ಅವರು ಕ್ಷೇತ್ರವನ್ನು ಪುತ್ರನಿಗೆ ಬಿಟ್ಟುಕೊಡಲು ತೀರ್ಮಾನಿಸಿ, ಸ್ಪರ್ಧೆಗೆ ವೇದಿಕೆ ಅಣಿಗೊಳಿಸುತ್ತಿದ್ದಾರೆ.

ಅದಕ್ಕೆ ಪೂರಕವಾಗಿ ಬಿಡದಿಯ ತೋಟದ ಮನೆಯಲ್ಲಿ ಈಚೆಗೆ ಪ್ರಮುಖ ಕಾರ್ಯಕರ್ತ-ಮುಖಂಡರ ಸಭೆ ನಡೆಸಿದ್ದು, ಅಭ್ಯರ್ಥಿ ಆಯ್ಕೆ ಹಾಗೂ ಚುನಾವಣೆ ಸಿದ್ಧತೆಗಳ ಕುರಿತು ಚರ್ಚಿಸಿದ್ದಾರೆ. ಈ ವೇಳೆ ನಿಖಿಲ್ ಕುಮಾರಸ್ವಾಮಿ ಅವರನ್ನೇ ಅಭ್ಯರ್ಥಿಯನ್ನಾಗಿ ಘೋಷಿಸಿಬೇಕೆಂಬ ಒತ್ತಾಯ ಸಹ ಕೇಳಿ ಬಂದಿತ್ತು. ಜೆಡಿಎಸ್ ಭದ್ರಕೋಟೆಯಾಗಿರುವ ಕ್ಷೇತ್ರವನ್ನು ಮರಳಿ ತೆಕ್ಕೆಗೆ ಪಡೆಯಲು ನಿಖಿಲ್ ಅವರಿಗೇ ಟಿಕೆಟ್ ನೀಡಬೇಕು ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ದೆಹಲಿ ವರಿಷ್ಠರಿಗೆ ಮನವರಿಕೆ ಮಾಡಿಕೊಡಲಿದ್ದಾರೆ ಎಂದು ಜೆಡಿಎಸ್‌ ಪಕ್ಷದ ಮೂಲಗಳು ತಿಳಿಸಿವೆ.

ಮೈತ್ರಿ ಅಭ್ಯರ್ಥಿ ಪರ ಬಿಜೆಪಿ ಒಲವು

ಇನ್ನು ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಚನ್ನಪಟ್ಟಣ ಕ್ಷೇತ್ರಕ್ಕೆ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆಂಬ ಒಲವು ರಾಜ್ಯ ಬಿಜೆಪಿಯಲ್ಲಿದೆ.

ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ್ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿ, ಚುನಾವಣಾ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ರಾಮನಗರ ಜಿಲ್ಲಾ ಬಿಜೆಪಿ ಘಟಕ ಕೂಡ ಸಿ.ಪಿ.ಯೋಗೇಶ್ವರ್ ಪರ ವಕಾಲತು ವಹಿಸಿದೆ. ಐದು ದಿನಗಳ ಹಿಂದಷ್ಟೇ ಜಿಲ್ಲಾ ಬಿಜೆಪಿ ನಾಯಕರು ವರಿಷ್ಠರನ್ನು ಭೇಟಿ ಮಾಡಿ, ಸಿ.ಪಿ.ಯೋಗೇಶ್ವರ್ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದರು. ಬಿಜೆಪಿ ನಾಯಕರು ಸಿ.ಪಿ.ಯೋಗೇಶ್ವರ್ ಅವರನ್ನೇ ಮೈತ್ರಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವ ಇರಾದೆ ಹೊಂದಿದ್ದರೂ ಬಹಿರಂಗವಾಗಿ ಹೇಳಿಕೊಂಡಿಲ್ಲ. ಮೈತ್ರಿ ಧರ್ಮ ಪಾಲಿಸಬೇಕೆಂಬ ಮಾತುಗಳು ಮಾತ್ರ ಕೇಳಿಬರುತ್ತಿವೆ.

ಸಿ.ಪಿ.ಯೋಗೇಶ್ವರ್ ಬಂಡಾಯ ಸ್ಪರ್ಧೆ?

ಮೈತ್ರಿ ಟಿಕೆಟ್ ಸಾಧ್ಯತೆ ಕ್ಷೀಣಿಸಿರುವ ಹಿನ್ನೆಲೆಯಲ್ಲಿ ಸಿ.ಪಿ.ಯೋಗೇಶ್ವರ್ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ.

ತಮ್ಮನ್ನು ಮೈತ್ರಿ ಅಭ್ಯರ್ಥಿಯಾಗಿ ಘೋಷಿಸದೇ ಇದ್ದರೆ ಬಂಡಾಯ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಕುರಿತು ಚರ್ಚಿಸಲು ಇಂದು (ಅ.16) ಚನ್ನಪಟ್ಟಣದಲ್ಲಿ ಬೆಂಬಲಿಗರ ಸಭೆ ನಡೆಸಿದ್ದಾರೆ.

ಚನ್ನಪಟ್ಟಣ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಡಿ.ಕೆ. ಸಹೋದರರನ್ನು ಎದುರಿಸಲು ಸಿ.ಪಿ.ಯೋಗೇಶ್ವರ್ ಸೂಕ್ತ ಅಭ್ಯರ್ಥಿ. ಹಾಗಾಗಿ ಮೈತ್ರಿ ಅಭ್ಯರ್ಥಿ ಬದಿಗಿರಿಸಿ ಯೋಗೇಶ್ವರ್ ಅವರಿಗೆ ಟಿಕೆಟ್ ನೀಡಬೇಕು ಎಂಬುದು ಜಿಲ್ಲಾ ಬಿಜೆಪಿ ಮುಖಂಡರ ಆಗ್ರಹ. ಈ ಮಧ್ಯೆ ,ನಿಖಿಲ್ ಕುಮಾರಸ್ವಾಮಿ ಹೆಸರು ಅಂತಿಮಗೊಳಿಸಲು ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿ.ಪಿ.ಯೋಗೇಶ್ವರ್ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.

ರಾಮನಗರ ಲೋಕಸಭಾ ಕ್ಷೇತ್ರದಲ್ಲಿ ತಮ್ಮನಿಗಾದ ಅವಮಾನಕ್ಕೆ ಸೇಡು ತೀರಿಕೊಳ್ಳಲು ಡಿ.ಕೆ.ಶಿವಕುಮಾರ್ ಕಾರ್ಯತಂತ್ರ ಹೆಣೆಯುತ್ತಿದ್ದಾರೆ ಎನ್ನಲಾಗಿದೆ. ನಿರೀಕ್ಷಿಸಿದಂತೆ ನಿಖಿಲ್ ಕುಮಾರಸ್ವಾಮಿಗೆ ಮೈತ್ರಿ ಟಿಕೆಟ್ ಘೋಷಣೆಯಾದರೆ, ಯೋಗೇಶ್ವರ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಆಗ ಡಿ.ಕೆ.ಸುರೇಶ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಿಸುವ ಸಾಧ್ಯತೆ ಇದೆ. ಹಾಗೆಯೇ ಮಾಜಿ ಶಾಸಕ ಎಂ.ಸಿ. ಅಶ್ವಥ್ ಮತ್ತು ಬಿಎಂಐಸಿಪಿಎ ಅಧ್ಯಕ್ಷ ರಘುನಂದನ್ ರಾಮಣ್ಣ ಅವರ ಹೆಸರೂ ಆಕಾಂಕ್ಷಿಗಳ ಸಾಲಿನಲ್ಲಿ ಕೇಳಿಬರುತ್ತಿವೆ.

2-3 ದಿನಗಳಲ್ಲಿ ಸಂಭಾವ್ಯರ ಪಟ್ಟಿ

ಚನ್ನಪಟ್ಟಣ ಸೇರಿದಂತೆ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಸ್ಪರ್ಧೆಗೆ 2-3 ದಿನಗಳಲ್ಲಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಹೈಕಮಾಂಡ್‌ಗೆ ಕಳುಹಿಸಿಕೊಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಬುಧವಾರ ಹೇಳಿದ್ದಾರೆ.

ಚುನಾವಣಾ ಸಿದ್ಧತೆಯನ್ನು ಅ.17(ಗುರುವಾರ) ರಿಂದ ಆರಂಭಿಸಲಾಗುವುದು. ಈಗಾಗಲೇ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿ ಸ್ಥಳೀಯವಾಗಿ ಸಭೆಗಳನ್ನು ನಡೆಸಿದ್ದೇವೆ. ನಾಳೆಯಿಂದ ಪೂರ್ಣ ಪ್ರಮಾಣದಲ್ಲಿ ಚುನಾವಣಾ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಾಗುವುದು. ಎರಡು ಅಥವಾ ಮೂರು ದಿನಗಳಲ್ಲಿ ದೆಹಲಿ ಹೈಕಮಾಂಡ್ಗೆ ಸಂಭಾವ್ಯ ಅಭ್ಯರ್ಥಿ ಅಂತಿಮ ಪಟ್ಟಿ ಕಳುಹಿಸಿಕೊಡಲಾಗುವುದು ಎಂದು ಬೆಂಗಳೂರಿನಲ್ಲಿ ಮಾಧ್ಯಮದವರಿಗೆ ತಿಳಿಸಿದ್ದಾರೆ.

Read More
Next Story