Karnataka By-Election | ನಾಳೆ ಫಲಿತಾಂಶ; ಕುಟುಂಬ ರಾಜಕಾರಣ ಪರಂಪರೆ ಉಳಿಸುವ ಕಸರತ್ತು
x

Karnataka By-Election | ನಾಳೆ ಫಲಿತಾಂಶ; ಕುಟುಂಬ ರಾಜಕಾರಣ ಪರಂಪರೆ ಉಳಿಸುವ ಕಸರತ್ತು

ಕರ್ನಾಟಕದ ಮೂವರು ಲೋಕಸಭಾ ಸದಸ್ಯರು (ಇಬ್ಬರು ಮಾಜಿ ಮುಖ್ಯಮಂತ್ರಿಗಳು) ತಮ್ಮ ಕುಟುಂಬ ಸದಸ್ಯರನ್ನೇ (ಇಬ್ಬರ ಪುತ್ರರು ಹಾಗೂ ಒಬ್ಬರ ಪತ್ನಿ) ಚುನಾವಣಾ ಸ್ಪರ್ಧೆಗೆ ಇಳಿಸಿ, ತಮ್ಮ ನಿರ್ಗಮಿತ ವಿಧಾನಸಭಾ ಕ್ಷೇತ್ರಗಳನ್ನು ತಮ್ಮದೇ ಪಾರುಪತ್ಯದಲ್ಲಿಡಲು ತವಕಿಸುತ್ತಿದ್ದಾರೆ.


ರಾಜ್ಯದಲ್ಲಿ ಇತ್ತೀಚೆಗೆ ನಡೆದ ಮೂರು ಕ್ಷೇತ್ರಗಳ ಉಪ ಚುನಾವಣೆಗಳ ಫಲಿತಾಂಶ ಶನಿವಾರ (ನಾಳೆ) ಮಧ್ಯಾಹ್ನದ ಹೊತ್ತಿಗೆ ಹೊರ ಬೀಳಲಿದೆ. ಈಗಾಗಲೇ ಮೂರು ಕ್ಷೇತ್ರಗಳ ಮತದಾನೋತ್ತರ ಸಮೀಕ್ಷೆ (ಎಕ್ಸಿಟ್‌ ಪೋಲ್)ಗಳಲ್ಲಿ ಬಂದಿರುವ ಫಲಿತಾಂಶಗಳನ್ನು ನೋಡಿದರೆ, ಕುಟುಂಬ ರಾಜಕಾರಣದ ಪರಂಪರೆ ಉಪ ಚುನಾವಣೆಯಲ್ಲೂ ಮುಂದುವರಿಯಲಿದೆಯೇ ಎಂಬ ಕುತೂಹಲಕ್ಕೆ ಕಾರಣವಾಗಿದೆ.

ಈಗಿರುವ ಲೆಕ್ಕಾಚಾರಗಳ ಪ್ರಕಾರ ಈ ಹಿಂದೆ ಆಯಾ ಕ್ಷೇತ್ರದಲ್ಲಿ ಇದ್ದ ಪಕ್ಷಗಳ ಅಭ್ಯರ್ಥಿಗಳೆ ಗೆಲುವು ಸಾಧಿಸಲಿದ್ದಾರೆ ಎಂದು ಚುನಾವಣಾ ಸಮೀಕ್ಷೆಗಳು ಅಂದಾಜು ಮಾಡಿವೆ. ಶಿಗ್ಗಾವಿ, ಸಂಡೂರು, ಚನ್ನಪಟ್ಟಣ ಸೇರಿ ಮೂರು ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳು ತೆರವು ಮಾಡಿದ ನಾಯಕರ ಕುಟುಂಬಸ್ಥರೇ ಸ್ಪರ್ಧಿಸಿದ್ದಾರೆ. ಆ ಮೂಲಕ ಆಯಾ ಕುಟುಂಬಗಳ ಪಾರುಪತ್ಯವನ್ನು ತಾವು ತೆರವು ಗೊಳಿಸಿದ ವಿಧಾನಸಭೆ ಕ್ಷೇತ್ರಗಳಲ್ಲಿ ಮುಂದುವರಿಕೆ ಮಾಡಲು ಆ ನಾಯಕರು ಪರದಾಟ ನಡೆಸಿದ್ದಾರೆ.

ಈ ಮೂರು ಕ್ಷೇತ್ರಗಳಿಗಿಂತ ಅವರ ಕುಟುಂಬದ ರಾಜಕಾರಣ ಹಾಗೂ ರಾಜ್ಯ ನಾಯಕರುಗಳ ಪ್ರತಿಷ್ಟೇಯೇ ಈ ಚುನಾವಣೆಯಲ್ಲಿ ಹೆಚ್ಚು ಚರ್ಚೆಯಾಗಿದ್ದು, ಅಭ್ಯರ್ಥಿಗಳ ಪ್ರಚಾರ, ಅವರ ಕಾರ್ಯವೈಖರಿ ಅವರ ಚುನಾವಣಾ ಕಾರ್ಯತಂತ್ರ, ಜನರೊಂದಿಗಿನ ಅವರ ನಡವಳಿಕೆ, ಅವರಲ್ಲಿರುವ ನಾಯಕತ್ವ ಗುಣ ಯಾವುದೂ ಅಷ್ಟೊಂದು ಮುನ್ನೆಲೆಗೆ ಬರಲಿಲ್ಲ.

ಯಾರ ಪ್ರತಿಷ್ಠೆ?

ಚನ್ನಪಟ್ಟಣದಲ್ಲಿ ಡಿಸಿಎಂ ಡಿ.ಕೆ‌‌‌ ಶಿವಕುಮಾರ್ ಹಾಗೂ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರ ನಡುವಿನ ಪ್ರತಿಷ್ಠೆ ಪಣಕ್ಕಿಟ್ಟಿದ್ದು, ಈ ಉಪ ಚುನಾವಣೆಯಲ್ಲಿ ಒಂದುವೇಳೆ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಗೆಲುವು ಸಾಧಿಸಿದರೆ, ಕುಮಾರಸ್ವಾಮಿ ಅವರಿಗೆ "ಕಡೆಗೂ ಮಗನನ್ನು ದಡಕ್ಕೆ ಸೇರಿಸಿದೆ," ಎಂದು ನಿಟ್ಟುಸಿರು ಬಿಡುವಂತಾಗುತ್ತದೆ. ಆ ಮೂಲಕ ತಮ್ಮ ಕುಟುಂಬದ ಕುಡಿಯನ್ನು ವಿಧಾನಸೌಧದ ಮೆಟ್ಟಿಲು ಹತ್ತಿಸುವ ಮೂಲಕ ಕುಟುಂಬ ರಾಜಕಾರಣದ ಪರಂಪರೆ ಯಶಸ್ವಿಯಾಗಿ ಮುಂದುವರೆಯುವಂತೆ ನೋಡಿಕೊಂಡಂತಾಗುತ್ತದೆ.

ಶಿಗ್ಗಾವಿಯಲ್ಲಿಯೂ ಬೊಮ್ಮಾಯಿಯವರ ಕುಟುಂಬದ ಮೂರನೇ ತಲೆಮಾರು ಭರತ್ ಬೊಮ್ಮಾಯಿ ಅದೃಷ್ಠ ಪರೀಕ್ಷೆಗಿಳಿದಿದ್ದು, ಈ ಚುನಾವಣೆಯಲ್ಲಿ ಭರತ್ ಬೊಮ್ಮಾಯಿಗಿಂತ ಅವರ ತಂದೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಪ್ರತಿಷ್ಠೆ ಮುಖ್ಯವಾಗಿದ್ದು, ಈ ಫಲಿತಾಂಶ ಪಕ್ಷ ಮತ್ತು ಬಿಜೆಪಿ ಪಕ್ಷದಲ್ಲಿ ಅವರ ನಾಯಕತ್ವದ ಭವಿಷ್ಯವನ್ನು ನಿರ್ಧರಿಸುತ್ತದೆ.

ಶಿಗ್ಗಾವಿ ಕ್ಷೇತ್ರದಲ್ಲಿ ಸ್ಥಳೀಯರ ಲೆಕ್ಕಾಚಾರ ಹಾಗೂ ಎಕ್ಸಿಟ್ ಪೋಲ್‌ಗಳ ಫಲಿತಾಂಶ ಬಸವರಾಜ ಬೊಮ್ಮಾಯಿಯವರು ಅಲ್ಪ ಕಾಲದ ನೆಮ್ಮದಿಯಾಗಿರುವಂತೆ ಮಾಡಿವೆ. ಆದರೂ, ಅಂತಿಮ ಫಲಿತಾಂಶ ಬರೂವವರೆಗೂ ಅಂತರಂಗದಲ್ಲಿ ಹೇಳಿಕೊಳ್ಳಲಾಗದ ಒಂದು ತಳಮಳ ಇದ್ದೇ ಇರುತ್ತದೆ. ನಿರೀಕ್ಷೆಯಂತೆ ಅವರ ಮಗನ ಗೆಲುವಾದರೆ, ಬೊಮ್ಮಾಯಿ ಕುಟುಂಬದ ಮೂರನೇ ತಲೆಮಾರು ಶಕ್ತಿ ಸೌಧಕ್ಕೆ ಲಗ್ಗೆ ಇಟ್ಟಂತಾಗುತ್ತದೆ.

ಸಂಡೂರಿನಲ್ಲಿ ಸಂಸದ ಇ. ತುಕಾರಾಮ್ ಅವರ ಪತ್ನಿ ಅನ್ನಪೂರ್ಣ ಸ್ಪರ್ಧಿಯಾಗಿದ್ದರೂ, ಈ ಕ್ಷೇತ್ರದಲ್ಲಿ ಮಾಜಿ ಸಚಿವ ಜೆ. ಜನಾರ್ದನ ರೆಡ್ಡಿ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ನಡುವಿನ ಪ್ರತಿಷ್ಠೆಯಾಗಿತ್ತು. ಅಲ್ಲಿಯೂ ಎಕ್ಸಿಟ್ ಪೋಲ್ ರಿಪೋರ್ಟ್ ಅನ್ನಪೂರ್ಣ ತುಕಾರಾಂ ಗೆಲುವು ಸಾಧಿಸುತ್ತಾರೆ ಎಂದಿದ್ದು, ಈ ಮೂಲಕ ತುಕಾರಾಮ್ ಕುಟುಂಬದ ರಾಜಕಾರಣಕ್ಕೆ ಮುನ್ನುಡಿ ಬರೆದಂತಾಗಲಿದೆ‌.

ಸಿ.ಪಿ. ಯೋಗೇಶ್ವರ್‌

ಆದರೆ, ಚುನಾವಣೆಯಲ್ಲಿ ಕುಟುಂಬ ರಾಜಕಾರಣಕ್ಕೆ ಮತದಾರ ಮಣೆ ಹಾಕುತ್ತಾನೋ ಇಲ್ಲವೋ ಎಂಬ ಪ್ರಶ್ನೆಗೆ ಉತ್ತರ ಅಸಾಧ್ಯ. ಯಾಕೆಂದರೆ ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹುರಿಯಾಳಾಗಿರುವ ಮಾಜಿ ಸಚಿವ, ಶಾಸಕ ಹಾಗೂ ಬಿಜೆಪಿಯ ಮಾಜಿ ನಾಯಕ ಸಿ.ಪಿ. ಯೋಗೇಶ್ವರ್‌ ಅವರು ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಕುಮಾರಸ್ವಾಮಿ ವಿರುದ್ಧ ಭರ್ಜರಿಯಾಗಿಯೇ ಸ್ಪರ್ಧೆಯನ್ನೊಡ್ಡಿದ್ದಾರೆ. ಒಂದು ಕಡೆ ಡಿ.ಕೆ. ಶಿವಕುಮಾರ್‌ ಬೆಂಬಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಕೃಪೆ ಇರುವ ನಾಯಕ ಯೋಗೇಶ್ವರ್‌. ಶಿವಕುಮಾರ್‌, ಸಿದ್ದರಾಮಯ್ಯ ಹಾಗೂ ಯೋಗೇಶ್ವರ್‌ - ಹೀಗೆ ಮೂವರಿಗೂ ನಿಖಿಲ್‌ ಕುಮಾರಸ್ವಾಮಿ ಸೋಲು ಅಗತ್ಯವಾಗಿದೆ. ಆ ಮೂಲಕ ಮೂವರೂ ತಮ್ಮ ಪ್ರಬಲ ರಾಜಕೀಯ ವೈರಿಯಾಗಿರುವ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಮುಖಭಂಗ ತರುವುದು ಪ್ರಮುಖ ಉದ್ದೇಶವಾಗಿದೆ. ಆದರೆ ಆ ಎಲ್ಲಾ ಲೆಕ್ಕಾಚಾರಕ್ಕೂ ಮತದಾರ ಪ್ರಭು ಯಾವ ನಿಲುವು ವ್ಯಕ್ತಪಡಿಸಿದ್ದಾನೆ ಎನ್ನುವುದು ಶನಿವಾರ ಗೊತ್ತಾಗಲಿದೆ.

ಭರತ್‌ ಬೊಮ್ಮಾಯಿ ವರ್ಸಸ್‌ ಪಠಾಣ್‌

ಶಿಗ್ಗಾವಿ ವಿಧಾನಸಭಾ ಕ್ಷೇತ್ರ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಾಂಪ್ರದಾಯಿಕ ಕ್ಷೇತ್ರ; ಭದ್ರಕೋಟೆ. ನಾಲ್ಕು ಬಾರಿ ಶಾಸಕರಾಗಿ ತಾವು ಆಯ್ಕೆಯಾದ ಕ್ಷೇತ್ರದಲ್ಲಿ ತಮ್ಮ ಪುತ್ರ ಭರತ್ ಅವರನ್ನು ಪ್ರತಿಷ್ಠಾಪಿಸುವ ಉದ್ದೇಶ ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಅವರದು. ಭರತ್ ಬೊಮ್ಮಾಯಿ ಎದುರು ಕಣಕ್ಕಿಳಿದಿರುವ ಕಾಂಗ್ರೆಸ್‌ನ ಯಾಸೀರ್ ಅಹಮದ್ ಪಠಾಣ್, ಕ್ಷೇತ್ರದಲ್ಲಿ ಎರಡನೇ ಅತಿದೊಡ್ಡ ಮತದಾರ ಸಮೂಹದ ಬಲದ ಮೇಲೆ ಬೊಮ್ಮಾಯಿ ಅವರ ವಂಶಪಾರಂಪರ್ಯವನ್ನು ಮುರಿಯುವ ಉಮೇದಿನಲ್ಲಿದ್ದಾರೆ. ಆದರೆ ಅಜ್ಜಂಪೀರ್‌ ಖಾದ್ರಿ ಬಂಡಾಯ ಶಮನವಾಗಿದೆಯೇ ಅಥವಾ ಕಾಂಗ್ರೆಸ್‌ ಮತಗಳು ಭದ್ರವಾಗಿದ್ದು, ಬೊಮ್ಮಾಯಿ ಪಾರುಪತ್ಯವನ್ನು ಕೊನೆಗೊಳಿಸುತ್ತದೆಯೇ ಎಂಬುದರ ಬಗ್ಗೆ ಮತದಾರನ ಉತ್ತರ ಶನಿವಾರ ಗೊತ್ತಾಗಲಿದೆ.

ಸಂಡೂರು ಯಾರ ಕೈವಶ?

ಈ ನಡುವೆ ರಾಜ್ಯದ ಕಬ್ಬಿಣದ ಅದಿರಿನ ಗಣಿ ಸಂಡೂರು ಮೇಲೆ ಹಿಡಿತ ಸಾಧಿಸಲು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಭಾರೀ ಹಣಾಹಣಿ ನಡೆದಿದೆ. ಸಂಡೂರಿನಲ್ಲಿ ನಡೆಯುತ್ತಿರುವ ಈ ಉಪ ಚುನಾವಣೆಯ ಕದನ, ಎರಡು ಪಕ್ಷಗಳ ನಡುವಿನ ಸಮರಕ್ಕಿಂತಲೂ ಗಾಲಿ ಜನಾರ್ದನ ರೆಡ್ಡಿ ಮತ್ತು ಸಂತೋಷ್ ಲಾಡ್ ನಡುವಿನ ಪ್ರತಿಷ್ಠೆಯ ಕಾಳಗವಾಗಿದೆ. ಕಾಂಗ್ರೆಸ್‌ನಿಂದ ಹಾಲಿ ಸಂಸದ ಇ ತುಕಾರಾಂ ಅವರ ಪತ್ನಿ ಇ ಅನ್ನಪೂರ್ಣ ಕಣಕ್ಕಿಳಿದಿದ್ದರೆ ಬಿಜೆಪಿಯಿಂದ ಪಕ್ಷದ ಎಸ್ಟಿ ಮೋರ್ಚಾದ ರಾಜ್ಯಾಧ್ಯಕ್ಷ ಬಂಗಾರು ಹನುಮಂತ ಕಣಕ್ಕಿಳಿದಿದ್ದಾರೆ. ಬಿಜೆಪಿಯ ಅಭ್ಯರ್ಥಿ ಪರ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಬಲವಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಪರ ಲಾಡ್ ಮತ್ತು ಸ್ವತಃ ಸಿಎಂ ಸಿದ್ದರಾಮಯ್ಯ ಅವರ ಸಾಮರ್ಥ್ಯವನ್ನು ಒರೆಗೆ ಹಚ್ಚಲಾಗಿದೆ. ಇಲ್ಲೂ ತುಕಾರಾಂ ಕುಟುಂಬ ರಾಜಕಾರಣ ಅಥವಾ ಗಣಿರಾಜಕಾರಣ ಮೆರೆದಿದ್ದು, ಮತದಾರನ ತೀರ್ಮಾನ ಶನಿವಾರ ಹೊರಬೀಳಲಿದೆ.

ನಾಯಕತ್ವಕ್ಕೇನು ದಕ್ಕೆಯಿಲ್ಲ

ಈ ಮೂರು ಕ್ಷೇತ್ರಗಳ ಫಲಿತಾಂಶ ಏನೇ ಬಂದರೂ ರಾಜ್ಯ ಸರ್ಕಾರ ಹಾಗೂ ನಾಯಕತ್ವದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವ ಸಾಧ್ಯತೆ ಕಡಿಮೆ. ಏಕೆಂದರೆ ಈ ಚುನಾವಣೆ ಫಲಿತಾಂಶದಿಂದ ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಸಂಖ್ಯಾ ಬಲದ ಮೇಲೆ ಯಾವುದೇ ಪರಿಣಾಮ ಬೀರದಿರುವುದರಿಂದ, ಫಲಿತಾಂಶದ ನಂತರ ನಾಯಕತ್ವದ ಬಗ್ಗೆ ರಾಜಕೀಯ ಲಾಭಕ್ಕಾಗಿ ರಾಜಕೀಯ ನಾಯಕರುಗಳಿಂದ ಆರೋಪಗಳು ಕೇಳಿ ಬರಬಹುದು. ಆದರೆ, ಈ ಉಪ ಚುನಾವಣೆ ಫಲಿತಾಂಶ ನಾಯಕತ್ವದ ಮೇಲೆ ಯಾವುದೇ ಪರಿಣಾಮ ಬೀರುವುದು ಕಡಿಮೆ.

ಕಾಂಗ್ರೆಸ್‌ ಮಟ್ಟಿಗೆ ಕ್ಷೇತ್ರಗಳಲ್ಲಿ ಒಂದು ಗೆದ್ದರೆ ಇರುವ ಸಂಖ್ಯಾಬಲವನ್ನು ಯಥಾಸ್ಥಿತಿಯಲ್ಲಿ ಇಟ್ಟುಕೊಂಡಂತಾಗುತ್ತದೆ. ಎರಡು ಗೆದ್ದರೆ, ಮುಡಾ, ವಾಲ್ಮೀಕಿ ನಿಗಮ ಹಗರಣ.. ಹೀಗೆ ವಿವಾದಗಳ ನಡುವೆಯೂ ಗೆದ್ದು ಬೀಗಲಿದೆ ಕಾಂಗ್ರೆಸ್‌. ಆದರೆ, ಬಿಜೆಪಿ ಪಾಲಿಗೆ ಒಂದು ಗೆದ್ದರೆ ಅಷ್ಟೇನೂ ಲಾಭವಿಲ್ಲ. ತನ್ನದೇ ಆಗಿದ್ದ ಶಿಗ್ಗಾವಿ, ಮಿತ್ರ ಪಕ್ಷ ಜೆಡಿಎಸ್‌ ಸ್ಪರ್ಧಿಸಿರುವ ಚನ್ನಪಟ್ಟಣ ಗೆದ್ದರೆ ತನ್ನ ಪಾಲನ್ನು ತನ್ನ ಬಳಿಯೇ ಉಳಿಸಿಕೊಂಡ ನೆಮ್ಮದಿ. ಆದರೆ, ಸಂಡೂರು ಗೆದ್ದದ್ದೇ ಆದರೆ, ಬಿಜೆಪಿ ಕೈ ಪಾಳಯದಿಂದ ಕ್ಷೇತ್ರವನ್ನು ವಶಪಡಿಸಿಕೊಂಡ ಸಮಾಧಾನ ಪಟ್ಟುಕೊಂಡಂತಾಗುತ್ತದೆ.


Read More
Next Story