ಕರ್ನಾಟಕ ಬಜೆಟ್‌ 2024 | ಕೈಕಟ್ಟಿ ಕೂರದೆ ಕೆಚ್ಚೆದೆ ತೋರಿದ ಸಿದ್ದರಾಮಯ್ಯ ಬಜೆಟ್
x

ಕರ್ನಾಟಕ ಬಜೆಟ್‌ 2024 | ಕೈಕಟ್ಟಿ ಕೂರದೆ ಕೆಚ್ಚೆದೆ ತೋರಿದ ಸಿದ್ದರಾಮಯ್ಯ ಬಜೆಟ್

ಆರ್ಥಿಕ ಶಿಸ್ತು ಮತ್ತು ಸಾಮಾಜಿಕ ನ್ಯಾಯದ ಸಮತೋಲನದ ಜೊತೆಗೆ ಅಭಿವೃದ್ಧಿಯ ಚಕ್ರವನ್ನು ಮುಂದೋಡಿಸುವ ಕ್ಲಿಷ್ಟಕರ ಸವಾಲಿನ ನಡುವೆ ಸಿದ್ದರಾಮಯ್ಯ ತಮ್ಮ ಹದಿನೈದನೇ ಬಜೆಟ್‌ ಮಂಡಿಸಿದ್ದಾರೆ.


ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ(ಫೆ. 16) ತಮ್ಮ 15ನೇ ಬಜೆಟ್‌ ಮಂಡಿಸಿದ್ದಾರೆ. 3.71 ಲಕ್ಷ ಕೋಟಿ ಗಾತ್ರದ 2024-25ನೇ ಸಾಲಿನ ಬಜೆಟ್‌ನಲ್ಲಿ 3.68 ಲಕ್ಷ ಕೋಟಿ ರಾಜಸ್ವ ಸ್ವೀಕೃತಿಯನ್ನು ಅಂದಾಜಿಸಲಾಗಿದೆ. ಹಾಗಾಗಿ, ಸಿದ್ದರಾಮಯ್ಯ ಅವರ ಈ ದಾಖಲೆಯ ಬಜೆಟ್ 82 ಸಾವಿರ ಕೋಟಿ ವಿತ್ತೀಯ ಕೊರತೆ ಬಜೆಟ್‌ ಆಗಿದೆ.

ಹಣಕಾಸು ವರ್ಷದಲ್ಲಿ ಒಟ್ಟು 3.63 ಲಕ್ಷ ರಾಜಸ್ವಿ ಜಮಾ ನಿರೀಕ್ಷಿಸಲಾಗಿದ್ದು, ಆ ಪೈಕಿ ಸ್ವಂತ ತೆರಿಗೆಯಿಂದ 1.89 ಲಕ್ಷ ಕೋಟಿ, ತೆರಿಗೆಯೇತರ ಆದಾಯ ಮೂಲದಿಂದ 13 ಸಾವಿರ ಕೋಟಿ, ಕೇಂದ್ರ ಸರ್ಕಾರದಿಂದ 44 ಸಾವಿರ ಕೋಟಿ ಮತ್ತು ಅನುದಾನ ಮೂಲಗಳಿಂದ 15 ಸಾವಿರ ಕೋಟಿ ಅಂದಾಜು ಮಾಡಲಾಗಿದೆ. ಇದಕ್ಕೆ ಪೂರಕವಾಗಿ 1.05 ಲಕ್ಷ ಕೋಟಿ ಸಾಲ ಸೇರಿದಂತೆ ಒಟ್ಟು 3.68 ಲಕ್ಷ ಕೋಟಿ ಸ್ವೀಕೃತಿ ಅಂದಾಜು ಮಾಡಲಾಗಿದೆ.

ಹಾಗೇ 2.90 ಲಕ್ಷ ಕೋಟಿ ರಾಜಸ್ವ ವೆಚ್ಚ, 55 ಸಾವಿರ ಕೋಟಿ ಬಂಡವಾಳ ವೆಚ್ಚ ಮತ್ತು ಸಾಲ ಮರುಪಾವತಿಗೆ 24 ಸಾವಿರ ಕೋಟಿ ವೆಚ್ಚ ಅಂದಾಜಿಸಲಾಗಿದೆ. ಒಟ್ಟಾರೆ ವೆಚ್ಚ 3.71 ಲಕ್ಷ ಕೋಟಿ ಎಂದು ಬಜೆಟ್‌ ಅಂದಾಜಿಸಿದೆ.

ಇಲಾಖಾವಾರು ಹಂಚಿಕೆ ಅನುದಾನ

ಒಟ್ಟು ವೆಚ್ಚದಲ್ಲಿ ಇಲಾಖಾವಾರು ಅನುದಾನ ಹಂಚಿಕೆಯನ್ನು ಅಂದಾಜಿಸಲಾಗಿದ್ದು, ಶಿಕ್ಷಣ ಇಲಾಖೆಗೆ 44,422 ಕೋಟಿ ರೂ., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 34,406 ಕೋಟಿ ರೂ., ಇಂಧನ ಇಲಾಖೆಗೆ 23,159 ಕೋಟಿ ರೂ., ಗ್ರಾಮೀಣಾಭಿವೃದ್ಧಿ ಇಲಾಖೆಗೆ 21,160 ಕೋಟಿ ರೂ. ಹಾಗೂ ಗೃಹ ಮತ್ತು ಸಾರಿಗೆ ಇಲಾಖೆಗೆ 19,777 ಕೋಟಿ ರೂ. ಘೋಷಿಸಲಾಗಿದೆ.

ನೀರಾವರಿ ಇಲಾಖೆಗೆ 19,179 ಕೋಟಿ ರೂ., ನಗರಾಭಿವೃದ್ಧಿ ಇಲಾಖೆಗೆ 18,155 ಕೋಟಿ ರೂ., ಕಂದಾಯ ಇಲಾಖೆಗೆ 16,170 ಕೋಟಿ ರೂ., ಆರೋಗ್ಯ ಇಲಾಖೆಗೆ 15,145 ಕೋಟಿ ರೂ., ಸಮಾಜಕಲ್ಯಾಣ ಇಲಾಖೆಗೆ 13,334 ಕೋಟಿ ರೂ., ಲೋಕೋಪಯೋಗಿ ಇಲಾಖೆಗೆ 10,424 ಕೋಟಿ ರೂ., ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಗೆ 9,963 ಕೋಟಿ ರೂ., ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ 7,788 ಕೋಟಿ ರೂ., ಮೀನುಗಾರಿಕೆ ಮತ್ತು ಪಶು ಸಂಗೋಪನೆ ಇಲಾಖೆಗೆ 3,306 ಕೋಟಿ ರೂ., ಹಂಚಿಕೆ ಘೋಷಿಸಲಾಗಿದೆ.

ಬೆಂಗಳೂರಿಗೆ ಸಿಂಹ ಪಾಲು!

ಬೆಂಗಳೂರು ಮಹಾನಗರ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿರುವ ಸಿದ್ದರಾಮಯ್ಯ, ಜಿಲ್ಲಾವಾರು ಅನುದಾನ ಹಂಚಿಕೆಯಲ್ಲಿ ಸಿಂಹಪಾಲನ್ನು ಅದಕ್ಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಬಗ್ಗೆ ಪದೇಪದೆ ಪ್ರಸ್ತಾಪ ಮಾಡುತ್ತಿದ್ದ ಕಾಂಗ್ರೆಸ್‌ ಸರ್ಕಾರ, ಈ ಬಾರಿಯ ತನ್ನ ಬಜೆಟ್‌ನಲ್ಲಿ ಪೆರಿಫೆರಲ್ ರಿಂಗ್ ರೋಡ್ ಅಭಿವೃದ್ಧಿಪಡಿಸಿ ಬೆಂಗಳೂರು ಬಿಸಿನೆಸ್ ಕಾರಿಡಾರ್ ಎಂದು ಘೋಷಿಸುವುದಾಗಿ ಹೇಳಿದೆ. ಈ ಯೋಜನೆಯಡಿ 73 ಕಿ.ಮೀ. ರಸ್ತೆಯನ್ನು 27,000 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಪಿಪಿಪಿ ಮಾದರಿಯಲ್ಲಿ ನಿರ್ಮಾಣ ಮಾಡುವುದಾಗಿ ಘೋಷಿಸಲಾಗಿದೆ.

ಮತ್ತೇನು ಹೊಸ ಘೋಷಣೆ ಇದೆ?

ಕೃಷಿ ಪ್ರಾಧಿಕಾರ

ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ ಸಂಬಂಧಿಸಿದ ನೀತಿ ಮತ್ತು ಯೋಜನೆಗಳನ್ನು ರೂಪಿಸುವುದು ಮತ್ತು ಪರಿಣಾಮಕಾರಿ ಜಾರಿಗಾಗಿ ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಸಹಕಾರ, ಪಶು ಸಂಗೋಪನೆ, ರೇಷ್ಮೆ ಮತ್ತಿತರ ಇಲಾಖೆಗಳ ಸಮನ್ವಯದ ಕೃಷಿ ಅಭಿವೃದ್ಧಿ ಪ್ರಾಧಿಕಾರ.

ಕಿಸಾನ್‌ ಮಾಲ್

ತೋಟಗಾರಿಕೆಗೆ ಸಂಬಂಧಸಿದಂತೆ ಮಾರುಕಟ್ಟೆ ಸಂಪರ್ಕ, ತಾಂತ್ರಿಕ ಸಲಹೆ ಮತ್ತಿತರ ಮಾಹಿತಿ ಜೊತೆಗೆ ಕೃಷಿ ಪರಿಕರ ಮತ್ತು ಉತ್ಪನ್ನಗಳನ್ನು ಒಂದೇ ಕಡೆ ಒದಗಿಸುವ ಕಿಸಾನ್‌ ಮಾಲ್.‌ ಆರಂಭದಲ್ಲಿ ಕೆಲವು ಆಯ್ದ ಜಿಲ್ಲೆಗಳಲ್ಲಿ ಈ ಮಾಲ್‌ ಆರಂಭವಾಗಲಿವೆ.

ಆಹಾರ ಪಾರ್ಕ್

ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ರಫ್ತು ಉತ್ತೇಜಿಸಲು ವಿಮಾನ ನಿಲ್ದಾಣಗಳ ಸಮೀಪದಲ್ಲಿ ಪಿಪಿಪಿ ಮಾದರಿಯಲ್ಲಿ ಆಹಾರ ಪಾರ್ಕ್. ಶಿವಮೊಗ್ಗ, ವಿಜಯಪುರ ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಪ್ರಸಕ್ತ ಸಾಲಿನಲ್ಲಿ ಆಹಾರ ಪಾರ್ಕ್‌ ಆರಂಭ.

ಮಂಡ್ಯದಲ್ಲಿ ಕೃಷಿ ವಿವಿ

ಕೃಷಿ ಪ್ರಧಾನವಾಗಿರುವ ಮತ್ತು ಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳುವ ಮಂಡ್ಯ ಜಿಲ್ಲೆಯಲ್ಲಿ ಪ್ರತ್ಯೇಕ ಕೃಷಿ ವಿವಿ ಸ್ಥಾಪನೆ ಘೋಷಿಸಲಾಗಿದ್ದು, ಆ ಬಗ್ಗೆ ಪರಿಶೀಲಿಸಲು ತಜ್ಞರ ಸಮಿತಿ ರಚಿಸಲಾಗುವುದು ಎಂದು ಹೇಳಲಾಗಿದೆ.

ಅಂಗನವಾಡಿಗೆ ಮೊಬೈಲ್

ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳ ಜಾರಿ ಮತ್ತು ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ 90 ಕೋಟಿ ರೂ ವೆಚ್ಚದಲ್ಲಿ 75 938 ಸ್ಮಾರ್ಟ್ಫೋನ್ಹಂಚಿಕೆ ಮಾಡುವುದಾಗಿ ಘೋಷಿಸಲಾಗಿದೆ.

ಸಮತೋಲನದ ಸರ್ಕಸ್

ಗ್ಯಾರಂಟಿ ಯೋಜನೆಗಳಿಗೆ ಹಣಕಾಸು ಹೊಂದಾಣಿಕೆಯ ಸವಾಲು, ಬರ ಪರಿಸ್ಥಿತಿ ನಿರ್ವಹಣೆಯ ಸಂಕಷ್ಟ ಮತ್ತು ಕೇಂದ್ರದ ಅನುದಾನ ಮತ್ತು ತೆರಿಗೆ ಹಂಚಿಕೆಯ ಕಡಿತದ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಾಮಾಜಿಕ ನ್ಯಾಯ, ಆರ್ಥಿಕ ಶಿಸ್ತಿನ ಸಮತೋಲನದ ಪರಿಪಾಠವನ್ನು ಮರೆತಿಲ್ಲ ಎಂಬುದು ಈ ಬಜೆಟ್‌ನ ವಿಶೇಷ.

ತಮ್ಮ ಸರ್ಕಾರದ ಹೆಗ್ಗಳಿಕೆಯಾದ ಗ್ಯಾರಂಟಿ ಯೋಜನೆಗಳಿಗೆ ೫೨ ಸಾವಿರ ಕೋಟಿ ಅನುದಾನ ಘೋಷಿಸಿರುವ ಸಿದ್ದರಾಮಯ್ಯ, ಹೆಚ್ಚುವರಿಯಾಗಿ 80 ವರ್ಷ ಮೇಲ್ಪಟ್ಟ ವೃದ್ಧರಿಗೆ ಆಹಾರ ಒದಗಿಸುವ ʼಅನ್ನ ಸುವಿಧಾʼ ಯೋಜನೆ ಘೋಷಿಸಿದ್ದಾರೆ. ಜೊತೆಗೆ ಮಹಿಳೆಯರೇ ನಡೆಸುವ ಐವತ್ತು ಹೋಟೆಲ್-ಕೆಫೆಗಳನ್ನು ತೆರೆದು, ಅಲ್ಲಿ ಸ್ಥಳೀಯ ಆಹಾರಕ್ಕೆ ಆದ್ಯತೆ ನೀಡುವ ವಿನೂತನ ಮಹಿಳಾ ಸಬಲೀಕರಣ ಯೋಜನೆಯನ್ನೂ ಘೋಷಿಸಿದ್ದಾರೆ.

ಹಾಗೇ ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿ ಅಧ್ಯಯನಕ್ಕೆ ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಆಯೋಗ ರಚನೆಯ ಘೋಷಣೆ ಮಾಡಿರುವ ಅವರು, ಹಿಂದುಳಿದ ವರ್ಗಗಳ ನಾಯಕ, ಮಾಜಿ ಮುಖ್ಯಮಂತ್ರಿ ಎಸ್‌. ಬಂಗಾರಪ್ಪ ಸ್ಮಾರಕ ನಿರ್ಮಾಣವನ್ನೂ ಘೋಷಿಸಿದ್ದಾರೆ. ಹಾಗೇ ಕರಿಗಾಹಿಗಳ ಮಕ್ಕಳ ಶಿಕ್ಷಣಕ್ಕಾಗಿ ವಸತಿ ಶಾಲೆ ಮತ್ತು ವಿಶೇಷ ಸ್ಕಾಲರ್‌ ಶಿಫ್‌ ಕೂಡ ಘೋಷಿಸಿದ್ದಾರೆ.

ಅಲ್ಲದೆ, ಪ್ರಾದೇಶಿಕ ಅಸಮಾನತೆ ತೊಡೆಯುವ ಮತ್ತು ಉದ್ಯಮ ಚಟುವಟಿಕೆಗಳು ಕೆಲವೇ ನಗರಗಳಿಗೆ ಸೀಮಿತವಾಗುವುದನ್ನು ತಪ್ಪಿಸುವ ಉದ್ದೇಶದಿಂದ ಎಂಟು ಜಿಲ್ಲೆಗಳಲ್ಲಿ ಇಂಟಿಗ್ರೇಟೆಡ್‌ ಟೌನ್‌ ಶಿಫ್ಅಭಿವೃದ್ಧಿಪಡಿಸುವುದಾಗಿ ಹೇಳಲಾಗಿದೆ. ಹಾಗೇ ಚಿಕ್ಕಮಗಳೂರಿನಲ್ಲಿ ಸ್ಪೈಸ್ ಸ್ಪಾರ್ಕ್, ಬೆಂಗಳೂರಿನಲ್ಲಿ ವಾಣಿಜ್ಯ ಪುಷ್ಪ ಪಾರ್ಕ್, ಮೀನುಗಾರಿಕೆ ಉತ್ತೇಜನಕ್ಕೆ ಮೂರು ಸಾವಿರ ಕೋಟಿ ವಿಶೇಷ ಯೋಜನೆ ಘೋಷಣೆ, ಆಯ್ದ ಜಿಲ್ಲೆಗಳಲ್ಲಿ ಕಿಸಾನ್‌ ಬ್ಯಾಂಕ್ ಕೂಡ ಘೋಷಿಸಲಾಗಿದೆ.

ಒಟ್ಟಾರೆ, ಕೃಷಿ, ಉದ್ಯಮ, ಸೇವಾ ವಲಯಗಳ ಸುಧಾರಣೆಯ ಜೊತೆಗೆ, ಸಾಮಾಜಿಕ ನ್ಯಾಯ ಮತ್ತು ಪ್ರಾದೇಶಿಕ ಸಮಾನತೆಯ ಆಶಯದ ಈ ಬಜೆಟ್‌, ಆರ್ಥಿಕ ಮುಗ್ಗಟ್ಟಿನ ನಡುವೆಯೂ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ತತ್ವದ ಸಾಕಾರದ ನಿಟ್ಟಿನಲ್ಲಿ ಹೆಜ್ಜೆ ಹಾಕಿದಂತಿದೆ. ಆ ಹಿನ್ನೆಲೆಯಲ್ಲಿಯೇ ಬಜೆಟ್‌ ಆರಂಭದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, “ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ.. ಮನಸೊಂದಿದ್ದರೆ ಮಾರ್ಗವು ಉಂಟು ಕೆಚ್ಚೆದೆ ಇರಬೇಕೆಂದೆಂದೂ.." ಎಂಬ ಡಾ ರಾಜ್‌ಕುಮಾರ್‌ ಅವರ ಗೀತೆಯನ್ನು ಉಲ್ಲೇಖಿಸಿದ್ದರು. ಓಟ್ಟಾರೆ ಬಜೆಟ್‌ನ ಆಶಯ ಕೂಡ ಇದಕ್ಕಿಂತ ಹೊರತಾಗಿಲ್ಲ ಎಂಬುದು ಗಮನಾರ್ಹ!

Read More
Next Story