Karnataka Budget 2025 | ಕೃಷಿಯಲ್ಲಿ ಎಐ ಬಳಕೆಗೆ ಪ್ರೋತ್ಸಾಹ; ಡಿಜಿಟಲ್‌ ಕೃಷಿ ಸೇವಾ ಕೇಂದ್ರ ಘೋಷಣೆ
x

Karnataka Budget 2025 | ಕೃಷಿಯಲ್ಲಿ ಎಐ ಬಳಕೆಗೆ ಪ್ರೋತ್ಸಾಹ; ಡಿಜಿಟಲ್‌ ಕೃಷಿ ಸೇವಾ ಕೇಂದ್ರ ಘೋಷಣೆ

ಸಿಎಂ ಸಿದ್ದರಾಮಯ್ಯ ಅವರು ಕೃಷಿ, ತೋಟಗಾರಿಕೆ, ಸಹಕಾರ ಇಲಾಖೆ, ಮೀನುಗಾರಿಗೆ ಸೇರಿದಂತೆ ಕೃಷಿ ಸಂಬಂಧಿತ ವಲಯದ ಅಭಿವೃದ್ಧಿಗೆ ಹಲವು ಘೋಷಣೆಗಳನ್ನು ಮಾಡಿದ್ದಾರೆ.


ಜಾಗತಿಕ ಮಟ್ಟದಲ್ಲಿ ಕ್ರಾಂತಿ ಮಾಡಿರುವ ಡಿಜಿಟಲ್, ಕೃತಕ ಬುದ್ಧಿಮತ್ತೆ(ಎಐ) ಹಾಗೂ ಜಿಯೋ ಸ್ಪೇಷಿಯಲ್ ಕ್ಷೇತ್ರದ ಆವಿಷ್ಕಾರಗಳನ್ನು ಕೃಷಿ ಕ್ಷೇತ್ರದಲ್ಲಿ ಅಳವಡಿಸಿ, ಡಿಜಿಟಲ್ ಕೃಷಿ ಸೇವಾ ಕೇಂದ್ರ ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಬೆಂಗಳೂರಿನಲ್ಲಿ ಶುಕ್ರವಾರ ಬಜೆಟ್ ಮಂಡನೆ ವೇಳೆ ಸಿಎಂ ಸಿದ್ದರಾಮಯ್ಯ ಅವರು ಈ ನಿರ್ಧಾರ ಪ್ರಕಟಿಸಿದರು. ಡಿಜಿಟಲ್ ಕೃಷಿ ಸೇವಾ ಕೇಂದ್ರವು ರೈತರು ಮತ್ತು ನೀತಿ ನಿರೂಪಕರಿಗೆ ಬೆಳೆಗಳ ಕುರಿತು ನಿಖರ ಮಾಹಿತಿ ನೀಡಲಿದೆ. ಆ ಮೂಲಕ ಬೆಳೆಗಳ ಉತ್ಪಾದನೆ ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.

ಸಣ್ಣ ರೈತರಿಗೆ ಕೃಷಿಯನ್ನು ಸುಸ್ಥಿರ ಮತ್ತು ಲಾಭದಾಯಕವಾಗಿಸಲು ಸರ್ಕಾರವು ರೈತ ಸಮೃದ್ಧಿ ಯೋಜನೆ ಜಾರಿಗೊಳಿಸಿದೆ. 2025-26ನೇ ಸಾಲಿನಲ್ಲಿ ಕೃಷಿ ಯಾಂತ್ರೀಕರಣ ಕಾರ್ಯಕ್ರಮದಡಿ 50 ಸಾವಿರ ರೈತರಿಗೆ ಸಹಾಯಧನ ಒದಗಿಸಲು 428 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ.

ರಾಜ್ಯದಲ್ಲಿ 5,000 ಕಿರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಕ್ರಮ ವಹಿಸಲಾಗಿದೆ. ಕೃಷಿ ಭಾಗ್ಯ ಯೋಜನೆಯಡಿ ಪ್ರಸಕ್ತ ವರ್ಷ 12,000 ಕೃಷಿ ಹೊಂಡಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ.

ಮಳೆಯಾಶ್ರಿತ ಕೃಷಿಯನ್ನು ಸುಸ್ಥಿರವನ್ನಾಗಿಸಲು ಹಾಗೂ ರೈತರ ಜೀವನೋಪಾಯವನ್ನು ಸುಧಾರಿಸಲು ʻಸಮಗ್ರ ಮಳೆಯಾಶ್ರಿತ ಕೃಷಿ ನೀತಿʼಯನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಜೈವಿಕ ಕೃಷಿ ಪರಿಕರ ಸ್ಟಾರ್ಟ್-ಅಪ್‌ಗಳು (Agri Start-up) ಉತ್ಪಾದಿಸುವ ಜೈವಿಕ ಪರಿಕರಗಳನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ಮಾರಾಟಕಪ್ಕೆ ಉತ್ತೇಜಿಸಲು ನಿರ್ಧರಿಸಲಾಗಿದೆ.

ಮಂಡ್ಯ ಕೃಷಿ ವಿಶ್ವವಿದ್ಯಾಲಯಕ್ಕೆ ಮೂಲಸೌಕರ್ಯ ಕಲ್ಪಿಸಲು 25ಕೋಟಿ ರೂ. ಒದಗಿಸಿ, ಪ್ರಸಕ್ತ ಸಾಲಿನಲ್ಲಿ ತರಗತಿಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ವಿಜಯಪುರದ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಕೃಷಿ ಸಂಶೋಧನಾ ಕೇಂದ್ರ ಸ್ಥಾಪಿಸಲಾಗುವುದು. ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನಲ್ಲಿ ಹೊಸ ಕೃಷಿ ಕಾಲೇಜನ್ನು ಸ್ಥಾಪಿಸಲು ತಜ್ಞರಿಂದ ಕಾರ್ಯಸಾಧ್ಯತಾ ವರದಿ ಪಡೆದುಕೊಳ್ಳಲು ಪ್ರಸ್ತಾಪಿಸಿದೆ.

ತೋಟಗಾರಿಕೆ ಇಲಾಖೆ

ಬೆಳೆ ಪದ್ಧತಿ, ಸಂಸ್ಕರಣೆ ಮತ್ತು ಮೌಲ್ಯವರ್ಧನೆ ತಂತ್ರಜ್ಞಾನದಲ್ಲಾದ ಆಧುನೀಕರಣದ ಅನುಕೂಲವನ್ನು ಬೆಳೆಗಾರರಿಗೆ ತಲುಪಿಸುವ ಉದ್ದೇಶದಿಂದ ಸಮಗ್ರ ತೋಟಗಾರಿಕಾ ಅಭಿವೃದ್ಧಿ ಯೋಜನೆ-2 ಜಾರಿಗೊಳಿಸುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಯೋಜನೆಯ ಸಾಕಾರಕ್ಕೆ 95 ಕೋಟಿ ರೂ. ಅನುದಾನ ಒದಗಿಸಲಾಗಿದೆ.

ತೋಟಗಾರಿಕಾ ಬೆಳೆಗಳ ಬಗ್ಗೆ ನೈಜ ಸಮಯದ (Real Time) ಆಧಾರದ ಮೇಲೆ ರೈತರಿಗೆ ಮಾಹಿತಿ ಒದಗಿಸಲು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸ್ಪೇಸ್ ಸೈನ್ಸ್ ಟೆಕ್ನಾಲಜಿ ಮತ್ತು ಖಾಸಗಿ ಸಹಯೋಗದಲ್ಲಿ ಜ್ಞಾನ ಕೋಶ ಸ್ಥಾಪಿಸಲು ನಿರ್ಧರಿಸಲಾಗಿದೆ.

ರಾಜ್ಯದ 20 GI ಟ್ಯಾಗ್ ಹೊಂದಿರುವ ಬೆಳೆಗಳು ಹಾಗೂ ಇತರೆ ದೇಸಿ ತಳಿಗಳು ಕಣ್ಮರೆಯಾಗಿ ನಶಿಸಿ ಹೋಗುವುದನ್ನು ತಪ್ಪಿಸಲು ದೇಶಿ ತಳಿಗಳ ಬೀಜ ಬ್ಯಾಂಕ್ ಸ್ಥಾಪಿಸಲಾಗುವುದು. ಬ್ಯಾಡಗಿ ಮೆಣಸಿನಕಾಯಿ ತಳಿಯ ಸಂರಕ್ಷಣೆ ಮತ್ತು ಎಲೆ ಮುಟುರು ರೋಗ, ತ್ರಿಪ್ಸ್ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂಶೋಧನೆ ಕೈಗೊಳ್ಳಲಾಗುವುದು.

ಗದಗ ಜಿಲ್ಲೆಯ ಡಂಬಳದಲ್ಲಿ ತೋಟಗಾರಿಕಾ ಕಾಲೇಜನ್ನು ಸ್ಥಾಪಿಸಲು ತಜ್ಞರಿಂದ ಕಾರ್ಯಸಾಧ್ಯತಾ ವರದಿಯನ್ನು ಪಡೆದುಕೊಳ್ಳಲಾಗುವುದು. ಮಲೆನಾಡು ಜಿಲ್ಲೆಗಳಲ್ಲಿ ಎಲೆ ಚುಕ್ಕೆ ರೋಗದ ಬಾಧೆ ನಿಯಂತ್ರಿಸಲು ಸಸ್ಯ ಸಂರಕ್ಷಣಾ ಕ್ರಮಗಳಿಗಾಗಿ 62 ಕೋಟಿ ರೂ. ಒದಗಿಸಲಾಗಿದೆ. ತೆಂಗು ಬೆಳೆಯುವ ಪ್ರದೇಶಗಳಲ್ಲಿ ಕಪ್ಪು ತಲೆ ಹುಳುವಿನ ಬಾಧೆಯ ಕುರಿತು ವೈಜ್ಞಾನಿಕ ಸಮೀಕ್ಷೆ ನಡೆಸಿ, ಇದರ ಆಧಾರದ ಮೇಲೆ ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಲು ತೀರ್ಮಾನಿಸಿದೆ.

ರೇಷ್ಮೆ ಇಲಾಖೆ

ಅಂತಾರಾಷ್ಟ್ರೀಯ ದರ್ಜೆಯ ದ್ವಿತಳಿ ಕಚ್ಚಾ ರೇಷ್ಮೆಯ ದೇಶೀಯ ಬೇಡಿಕೆಯನ್ನು ಪೂರೈಸಲು ಮಧ್ಯಮ ವರ್ಗದ ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ 120 ಕೊನೆಗಳ ಸ್ವಯಂಚಾಲಿತ ರೀಲಿಂಗ್ ಘಟಕಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ರಾಮನಗರ ಮತ್ತು ಶಿಡ್ಲಘಟ್ಟ ಹೈ-ಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆಯ ಮೊದಲನೇ ಹಂತದ ಕಾಮಗಾರಿಗಳು ಮುಕ್ತಾಯಗೊಳ್ಳಲಿದ್ದು, ಪ್ರಸಕ್ತ ಸಾಲಿನಲ್ಲಿ ಎರಡನೇ ಹಂತದ ಕಾಮಗಾರಿಗಳನ್ನು 250 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುವುದು. ಮೈಸೂರು ಮತ್ತು ಸುತ್ತಮುತ್ತಲಿನ ಭಾಗದ ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗುವಂತೆ ಮೈಸೂರಿನಲ್ಲಿ ರೇಷ್ಮೆಗೂಡಿನ ಮಾರುಕಟ್ಟೆಯನ್ನು NABARD ಸಹಯೋಗದಲ್ಲಿ ಸ್ಥಾಪಿಸುವುದಾಗಿ ಸಿಎಂ ಘೋಷಿಸಿದ್ದಾರೆ.

ಪಶುಸಂಗೋಪನೆ ಇಲಾಖೆ

ಜಾನುವಾರುಗಳ ಆಕಸ್ಮಿಕ ಸಾವಿನ ಸಂದರ್ಭದಲ್ಲಿ ರೈತರು ಅನುಭವಿಸುತ್ತಿರುವ ಸಂಕಷ್ಟ ನಿವಾರಣೆಗೆ ʼಅನುಗ್ರಹʼ ಯೋಜನೆ ಜಾರಿಗೆ ತರಲಾಗಿದೆ. ಹಸು, ಎಮ್ಮೆ ಮತ್ತು ಎತ್ತುಗಳಿಗೆ ಸದ್ಯ ನೀಡುತ್ತಿರುವ ಪರಿಹಾರದ ಮೊತ್ತವನ್ನು 10 ಸಾವಿರ ರೂ. ಗಳಿಂದ 15 ಸಾವಿರ ರೂ., ಕುರಿ/ಮೇಕೆಗಳಿಗೆ ನೀಡುತ್ತಿರುವ 5 ಸಾವಿರ ರೂ. ಗಳಿಂದ 7,500 ರೂ. ಹಾಗೂ 3-6 ತಿಂಗಳ ಕುರಿ/ಮೇಕೆ ಮರಿಗಳಿಗೆ ನೀಡಲಾಗುತ್ತಿರುವ ಮೊತ್ತವನ್ನು 3,500 ರೂ.ಗಳಿಂದ 5,000 ರೂ.ಗಳಿಗೆ ಹೆಚ್ಚಿಸುವುದಾಗಿ ಬಜೆಟ್ನಲ್ಲಿ ಘೋಷಿಸಲಾಗಿದೆ.

ಕಳೆದ ಎರಡು ವರ್ಷಗಳಲ್ಲಿ 60 ಹೊಸ ಪಶು ಚಿಕಿತ್ಸಾಲಯಗಳನ್ನು ಕಾರ್ಯಾರಂಭಗೊಳಿಸಲಾಗಿದ್ದು, 2025-26ನೇ ಸಾಲಿನಲ್ಲಿ 50 ನೂತನ ಪಶು ಚಿಕಿತ್ಸಾಲಯಗಳನ್ನು ಪ್ರಾರಂಭಿಸಲಾಗುವುದು. ದೇಶಿ ದನದ ತಳಿಗಳಾದ ಹಳ್ಳಿಕಾರ್, ಕಿಲಾರಿ, ಅಮೃತ್ ಮಹಲ್ ಹಾಗೂ ಬಂಡೂರು ಕುರಿ ತಳಿಯ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ ಎರಡು ಕೋಟಿ ರೂ. ಒದಗಿಸಲಾಗುವುದು. ನಮ್ಮ ಸರ್ಕಾರವು ಅಸ್ತಿತ್ವಕ್ಕೆ ಬಂದ ನಂತರ ʼನಂದಿನಿʼ ಬ್ರ್ಯಾಂಡ್‌ ಮಾರುಕಟ್ಟೆಯನ್ನು ವಿಸ್ತರಿಸಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾರಾಜಿಸುವಂತೆ ಮಾಡಿದೆ. 2024-25ನೇ ಸಾಲಿನಲ್ಲಿ ಪ್ರತಿ ಒಂದು ಕೋಟಿಗೂ ಹೆಚ್ಚು ಲೀಟರ್ ಹಾಲನ್ನು ಶೇಖರಿಸಲಾಗಿದೆ ಎಂದು ಹೇಳಿದ್ದಾರೆ.

ಮೀನುಗಾರಿಕೆ ಇಲಾಖೆ

ರಾಜ್ಯದ ಮತ್ಸ್ಯ ಸಂಪತ್ತಿನ ರಕ್ಷಣೆಯೊಂದಿಗೆ ಸುಸ್ಥಿರ ಮೀನುಗಾರಿಕೆ ಹಾಗೂ ಮೀನುಗಾರರ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡಲು ಮೀನುಗಾರಿಕಾ ನೀತಿ ಘೋಷಿಸಿದೆ.

ಕರಾವಳಿ ಜಿಲ್ಲೆಗಳಲ್ಲಿನ ಮೀನುಗಾರಿಕೆ ಕೊಂಡಿ ರಸ್ತೆಗಳನ್ನು ನಬಾರ್ಡ್ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲು 30 ಕೋಟಿ ರೂ. ಒದಗಿಸಲಾಗುವುದು. ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡದ ಆಯ್ದ ಮೀನು ಮಾರಾಟಗಾರರಿಗೆ ನಾಲ್ಕು ಚಕ್ರ ವಾಹನ ಖರೀದಿಸಲು ಶೇ.50ರಷ್ಟು ಅಥವಾ ಗರಿಷ್ಠ 3 ಲಕ್ಷ ರೂ. ಆರ್ಥಿಕ ನೆರವು ನೀಡಲಾಗುವುದು.

ಪ್ರವಾಸಿಗರಿಗೆ ಶುಚಿ-ರುಚಿಯಾದ ಪೌಷ್ಟಿಕ ಮೀನು ಖಾದ್ಯಗಳನ್ನು ಒದಗಿಸಲು ಮೈಸೂರಿನಲ್ಲಿ ಹೈ-ಟೆಕ್ ಮತ್ಸ್ಯದರ್ಶಿನಿ ಪ್ರಾರಂಭಿಸಲಾಗುವುದು. ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ವಾಹನ ದಟ್ಟಣೆಯನ್ನು ನಿರ್ವಹಿಸಲು “ಮಲ್ಟಿ-ಲೆವೆಲ್ ಪಾರ್ಕಿಂಗ್” ವ್ಯವಸ್ಥೆಯನ್ನು ಪಿಪಿಪಿ(ಸಾರ್ವಜನಿಕ-ಖಾಸಗಿ ಸಹಭಾಗಿತ್ವ) ಮಾದರಿಯಲ್ಲಿ ನಿರ್ಮಿಸಲಾಗುವುದು. ಆಳ ಸಮುದ್ರ ಮೀನುಗಾರಿಕೆಯನ್ನು ಪ್ರೋತ್ಸಾಹಿಸಲು ಪ್ರಸ್ತುತ ಇರುವ ಮೀನುಗಾರಿಕೆ ದೋಣಿಗಳ ಉದ್ದದ ಮಿತಿ ಸಡಿಲಿಸಲು ಕ್ರಮ ವಹಿಸಲಾಗುವುದು ಎಂದು ಹೇಳಿದ್ದಾರೆ.

ಸಹಕಾರ ಇಲಾಖೆ

2024-25ನೇ ಸಾಲಿನಲ್ಲಿ 21.78 ಲಕ್ಷ ರೈತರಿಗೆ 18,960 ಕೋಟಿ ರೂ. ಕೃಷಿ ಸಾಲ ವಿತರಿಸಲಾಗಿದೆ. ರಿಯಾಯತಿ ಬಡ್ಡಿ ದರದಲ್ಲಿ ನೀಡುವ ಪುನರ್ಧನದ ಮಿತಿಯನ್ನು ನಬಾರ್ಡ್ ಶೇ.58ರಷ್ಟು ಕಡಿಮೆ ಮಾಡಿದ್ದರೂ ಸಹ, ನಿಗದಿತ ಗುರಿಯನ್ನು ಸಾಧಿಸಲು ನಾವು ಬದ್ಧರಾಗಿದ್ದೇವೆ. ಪ್ರಸಕ್ತ ಸಾಲಿನಲ್ಲಿ 37 ಲಕ್ಷ ರೈತರಿಗೆ 28,000 ಕೋಟಿ ರೂ. ಸಾಲವನ್ನು ವಿತರಿಸುವ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದ್ದಾರೆ.

ತೊಗರಿಗೆ ಕನಿಷ್ಠ ಬೆಂಬಲ ಬೆಲೆ

ತೊಗರಿ ಖರೀದಿಗೆ ಪ್ರತಿ ಕ್ವಿಂಟಾಲ್ಗೆ 7,550 ರೂ. ಜೊತೆಗೆ ರಾಜ್ಯ ಸರ್ಕಾರದ ವತಿಯಿಂದ ಹೆಚ್ಚುವರಿ ಪ್ರೋತ್ಸಾಹಧನ 450 ರೂ.ಗಳಂತೆ ಒಟ್ಟು 138 ಕೋಟಿ ರೂ. ನೀಡಲು ತೀರ್ಮಾನಿಸಲಾಗಿದೆ. ಇದರಿಂದ, ತೊಗರಿ ಬೆಳೆಯುವ ಪ್ರಮುಖ ಜಿಲ್ಲೆಗಳಾದ ಕಲಬುರಗಿ, ಬೀದರ್, ಯಾದಗಿರಿ, ವಿಜಯಪುರ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಕೋಲಾರ, ಚಿತ್ರದುರ್ಗ ಹಾಗೂ ಚಿಕ್ಕಬಳ್ಳಾಪುರ ಭಾಗದ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿರುವ ಮಾರುಕಟ್ಟೆ ಸಮಿತಿಗಳಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿರುವುದರಿಂದ ಬೆಂಗಳೂರಿನ ಹೊರವಲಯದಲ್ಲಿ ಹೊಸ Satellite Market ಅನ್ನು ಸ್ಥಾಪಿಸಲಾಗುವುದು ಎಂದಿದ್ದಾರೆ.

ಕೊಪ್ಪಳ ಜಿಲ್ಲೆಯ ಬೂದುಗುಂಪ ಗ್ರಾಮದಲ್ಲಿ ಕುರಿ ಮತ್ತು ಮೇಕೆ ಮಾರುಕಟ್ಟೆಯನ್ನು KKRDB ವತಿಯಿಂದ 25 ಕೋಟಿ ರೂ. ವೆಚ್ಚದಲ್ಲಿ ಅಗತ್ಯ ಮೂಲಸೌಲಭ್ಯಗಳೊಂದಿಗೆ ಸ್ಥಾಪಿಸಲಾಗುವುದು ಎಂದು ಘೋಷಿಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ವತಿಯಿಂದ ಅಂತಾರಾಷ್ಟ್ರೀಯ ಮಟ್ಟದ ಹೈಟೆಕ್ ಹೂವಿನ ಮಾರುಕಟ್ಟೆಯನ್ನು ಹಾಗೂ ಕೆ.ಜಿ.ಎಫ್. ನಲ್ಲಿ ರೈತರ ಆಧುನಿಕ ಮಾರುಕಟ್ಟೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ.

ಜೊಯಿಡಾ ಪ್ರಥಮ ಸಾವಯವ ತಾಲೂಕು

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕನ್ನು ರಾಜ್ಯದ ಪ್ರಥಮ ಸಾವಯವ ತಾಲ್ಲೂಕನ್ನಾಗಿ ಪರಿವರ್ತಿಸಲು ಬಜೆಟ್ನಲ್ಲಿ ಘೋಷಿಸಲಾಗಿದೆ. ರೈತರ ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಸಾವಯವ ಪ್ರಮಾಣೀಕರಣ ವ್ಯವಸ್ಥೆ ಸಹ ಕಲ್ಪಿಸಲು ತೀರ್ಮಾನಿಸಿದೆ.

ಇದಲ್ಲದೇ ಸಾವಯವ ಉತ್ಪನ್ನಗಳು ಮತ್ತು ಸಿರಿಧಾನ್ಯಗಳ ಬೇಡಿಕೆ ಮತ್ತು ಪೂರೈಕೆಯ ಅಂತರ ಸರಿದೂಗಿಸಲು ಹಾಗೂ ರೈತರಿಗೆ ಸೂಕ್ತ ಮಾರುಕಟ್ಟೆಯನ್ನು ಕಲ್ಪಿಸುವ ಉದ್ದೇಶದಿಂದ 20 ಕೋಟಿ ರೂ. ಮೊತ್ತದಲ್ಲಿ ʻಸಾವಯವ ಮತ್ತು ಸಿರಿಧಾನ್ಯಗಳ ಹಬ್ʼ ಸ್ಥಾಪಿಸುವುದಾಗಿ ಘೋಷಿಸಿದೆ.

Read More
Next Story