Karnataka Budget 2025 | ಆರ್ಥಿಕ ಹೊರೆ ವರ್ಸಸ್‌ ಗ್ಯಾರಂಟಿ: ಜನ ಸಾಮಾನ್ಯರ ಪಾಲಿಗೆ ಈ ಬಜೆಟ್‌ ಏನು?
x

Karnataka Budget 2025 | ಆರ್ಥಿಕ ಹೊರೆ ವರ್ಸಸ್‌ ಗ್ಯಾರಂಟಿ: ಜನ ಸಾಮಾನ್ಯರ ಪಾಲಿಗೆ ಈ ಬಜೆಟ್‌ ಏನು?

ಹಾಗೆ ನೋಡಿದರೆ ಇದು ಹಣಕಾಸಿನ ದೃಷ್ಟಿಯಲ್ಲಿ ಮಾತ್ರವಲ್ಲದೆ, ಸಾಲ ಮತ್ತು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ದೃಷ್ಟಿಯಿಂದಲೂ ಇದು ಖೋತಾ ಬಜೆಟ್.


ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ತಮ್ಮ 16ನೇ ಬಜೆಟ್ ಮಂಡಿಸಿದ್ದಾರೆ. ಮಂಡಿನೋವಿನ ಹೊರತಾಗಿಯೂ ಸತತ ಮೂರೂವರೆ ತಾಸು ನಿರಂತರ ಬಜೆಟ್ ಭಾಷಣ ಮಂಡಿಸಿದ ಸಿದ್ದರಾಮಯ್ಯ, ತಮ್ಮ ಈ ಹಿಂದಿನ ಬಜೆಟ್ಗಳಂತೆಯೇ ಈ ಬಾರಿಯೂ ವಿತ್ತೀಯ ಶಿಸ್ತನ್ನು ಪಾಲಿಸಲಾಗಿದೆ ಎಂದು ಹೇಳಿದ್ದಾರೆ.

2025-26ನೇ ಸಾಲಿನ ಬಜೆಟ್ನಲ್ಲಿ ದಾಖಲೆಯ 4.09(4,09,549) ಲಕ್ಷ ಕೋಟಿ ಅಂದಾಜು ವೆಚ್ಚವನ್ನು ಘೋಷಿಸಿರುವ ಅವರು, 4.08(4,08,647) ಲಕ್ಷ ಕೋಟಿ ಆದಾಯ ಸ್ವೀಕೃತಿಯನ್ನು ಅಂದಾಜಿಸಿದ್ದಾರೆ. ಆದರೆ, ಬರೋಬ್ಬರಿ 1.16 ಲಕ್ಷ ಕೋಟಿಯಷ್ಟು ಹೊಸ ಸಾಲ ಎತ್ತುವಳಿಯ ಮೂಲಕ ಬಂಡವಾಳ ಕೊರತೆಯನ್ನು ಸರಿದೂಗಿಸುವ ಲೆಕ್ಕಾಚಾರ ಮಂಡಿಸಿದ್ದಾರೆ. ಬಜೆಟ್ ಅಂಕಿ-ಅಂಶಗಳ ಪ್ರಕಾರ 19,262 ಕೋಟಿ ರಾಜಸ್ವ(ರೆವಿನ್ಯೂ) ಕೊರತೆ ಅಂದಾಜಿಸಲಾಗಿದ್ದು, 90,428 ಕೋಟಿ ರೂ. ವಿತ್ತೀಯ ಕೊರತೆ(ಫಿಸ್ಕಲ್ ಡೆಫಿಸಿಟ್)ಯನ್ನು ಅಂದಾಜಿಸಲಾಗಿದೆ. ಒಟ್ಟಾರೆ ಬಜೆಟ್‌ ವೆಚ್ಚದ ಪೈಕಿ ಬರೋಬ್ಬರಿ 26,424 ಕೋಟಿ ರೂ. ಸಾಲ ಮರುಪಾವತಿಗೆ ಹೋಗಲಿದೆ.

ಈ ಬಾರಿಯ ಬಜೆಟ್ನಲ್ಲಿ 19,262 ಕೋಟಿ ರೂ.ಗಳ ರಾಜಸ್ವ(ರೆವಿನ್ಯೂ) ಕೊರತೆಯನ್ನು ಅಂದಾಜಿಸಲಾಗಿದ್ದು, ಆ ಪ್ರಮಾಣ ಜಿ.ಎಸ್.ಡಿ.ಪಿ.ಯ ಶೇ.0.63ರಷ್ಟಿರಲಿದೆ. ಇನ್ನು ವಿತ್ತೀಯ(ಫಿಸ್ಕಲ್) ಕೊರತೆ 90,428 ಕೋಟಿ ರೂ.ಗಳು ಎಂದು ಅಂದಾಜಿಸಲಾಗಿದ್ದು, ಆ ಕೊರತೆ ಜಿ.ಎಸ್.ಡಿ.ಪಿ ಯ ಶೇ.2.95ರಷ್ಟಿರಲಿದೆ. ಅಲ್ಲದೆ, 2025-26 ರ ಅಂತ್ಯಕ್ಕೆ ರಾಜ್ಯದ ಒಟ್ಟು ಹೊಣೆಗಾರಿಕೆಗಳು; ಅಂದರೆ ಸಾಲ 7,64,655 ಕೋಟಿ ರೂ. ಆಗಲಿದೆ ಎಂದು ಅಂದಾಜಿಸಲಾಗಿದ್ದು, ಆ ಸಾಲದ ಪ್ರಮಾಣ ಜಿ.ಎಸ್.ಡಿ.ಪಿ ಯ ಶೇ.24.91ರಷ್ಟಿರಲಿದೆ.

ಆ ಹಿನ್ನೆಲೆಯಲ್ಲೇ ಮುಖ್ಯಮಂತ್ರಿಗಳು, ರಾಜ್ಯದ ವಿತ್ತೀಯ ಕೊರತೆ ಮತ್ತು ಒಟ್ಟು ಹೊಣೆಗಾರಿಕೆಗಳನ್ನು(ಸಾಲಗಳನ್ನು), ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮದ ಮಾನದಂಡದಂತೆ ಪಾಲನೆ ಮಾಡಲಾಗಿದ್ದು, ವಿತ್ತೀಯ ಶಿಸ್ತನ್ನು ಕಾಯ್ದುಕೊಳ್ಳಲಾಗಿದೆ ಎಂದಿದ್ದಾರೆ.

ಆರ್ಥಿಕತೆ ಹಳಿ ತಪ್ಪಲು ಬಿಟ್ಟಿಲ್ಲ

ಅಲ್ಲದೆ, ವಿತ್ತೀಯ ಶಿಸ್ತು ಕಾಯ್ದುಕೊಂಡು ಜನಕಲ್ಯಾಣ ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಆಯವ್ಯಯ ಹಂಚಿಕೆ ಮಾಡುವುದರೊಂದಿಗೆ, ಬಂಡವಾಳ ವೆಚ್ಚಗಳಿಗೂ ಅನುದಾನ ಒದಗಿಸಿ, ರಾಜ್ಯದ ಆರ್ಥಿಕತೆಯನ್ನು ಸದೃಢಗೊಳಿಸುವ ಅಂಶಗಳೊಂದಿಗೆ ಕಳೆದ ಸಾಲಿನ ಬಜೆಟ್ ಮಂಡಿಸಿದ್ದೆ. ಇದೀಗ 2025-26ನೇ ಸಾಲಿನ ಬಜೆಟನ್ನು ಸಹ ಇದೇ ಆಶಯದೊಂದಿಗೆ ಮಂಡಿಸುತ್ತಿದ್ದೇನೆ ಎಂದೂ ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ.

ಆದರೆ, ಗ್ಯಾರಂಟಿ ಯೋಜನೆಗಳ ಹೊರೆಯ ಹೊರತಾಗಿಯೂ ತಾವು ರಾಜ್ಯದ ಅರ್ಥವ್ಯವಸ್ಥೆಯನ್ನು ಪ್ರತಿಪಕ್ಷಗಳು ಆರೋಪಿಸುವಂತೆ ಹಳಿತಪ್ಪಲು ಬಿಟ್ಟಿಲ್ಲ. ಆರ್ಥಿಕ ಹೊಣೆಗಾರಿಕೆ ಅಧಿನಿಯಮದ ವ್ಯಾಪ್ತಿಯನ್ನು ಮೀರಿಲ್ಲ. ಅಲ್ಲದೆ ಜನರಿಗೆ ಹೊರೆಯಾಗದ ಬಜೆಟ್ ಮಂಡಿಸಿ, ಜನ ಕಲ್ಯಾಣ ಕಾರ್ಯಕ್ರಮಗಳನ್ನೂ ವಿಸ್ತರಿಸಲಾಗಿದೆ ಎಂದು ಸಿಎಂ ಹೇಳಿದ್ದಾರೆ. ಆ ಮೂಲಕ ತಮ್ಮ ಆಡಳಿತದ ಬೆನ್ನನ್ನು ತಾವೇ ತಟ್ಟಿಕೊಂಡಿದ್ದಾರೆ ಕೂಡ.


ಆದರೆ, 2025-26ನೇ ಸಾಲಿನಲ್ಲಿ ಒಟ್ಟು 2,92,477 ಕೋಟಿ ರೂ. ರಾಜಸ್ವ ಸ್ವೀಕೃತಿಯನ್ನು ಅಂದಾಜಿಸಲಾಗಿದೆ. ಆ ಪೈಕಿ ಸ್ವಂತ ತೆರಿಗೆ ಮೂಲಕ ಸಂಗ್ರಹವಾಗುವ ಮೊತ್ತ 2,08,100 ಕೋಟಿ ರೂ. ಎಂದು ಅಂದಾಜಿಲಾಗಿದೆ. ಇನ್ನುಳಿದ 84,377 ಕೋಟಿ ರೂ. ಕೊರತೆಯನ್ನು ತೆರಿಗೆಯೇತರ ರಾಜಸ್ವ(16,500 ಕೋಟಿ ರೂ.) ಮತ್ತು ಕೇಂದ್ರ ಸರ್ಕಾರದ ಸ್ವೀಕೃತಿ (67,877 ಕೋಟಿ ರೂ.) ಮೂಲಕ ತುಂಬಿಕೊಳ್ಳುವುದಾಗಿ ಅಂದಾಜಿಸಲಾಗಿದೆ. ಅಲ್ಲದೆ, 4.09 ಲಕ್ಷ ಕೋಟಿ ಬಜೆಟ್‌ ಗಾತ್ರಕ್ಕೆ ಕೊರತೆ ಬೀಳುವ ಹಣಕಾಸು ಹೊಂದಿಸಲು ಸಿದ್ದರಾಮಯ್ಯ ಅವರು 2025-26ನೇ ಸಾಲಿನಲ್ಲಿ ಬರೋಬ್ಬರಿ 1,16,000 ಕೋಟಿ ರೂ.ಗಳ ಸಾಲ ಮಾಡಲು ಮುಂದಾಗಿದ್ದಾರೆ. ಅಂದರೆ, ಸರ್ಕಾರದ ಅಂದಾಜು ಖಾತರಿ ಆದಾಯದ(2.92 ಲಕ್ಷ ಕೋಟಿ) ಸುಮಾರು ಮೂರನೇ ಒಂದು ಭಾಗದಷ್ಟು ಸಾಲವನ್ನು ಎತ್ತಲು ತಯಾರಾಗಿದ್ದಾರೆ.

ರಾಜ್ಯ ಸಮಾಧಾನಕರ ಪರಿಸ್ಥಿತಿಯಲ್ಲಿದೆ

ಆ ದೃಷ್ಟಿಯಲ್ಲಿ ನೋಡಿದರೆ, ಮುಖ್ಯಮಂತ್ರಿಗಳು ಹೇಳಿದಂತೆ ರಾಜ್ಯದ ಹಣಕಾಸು ಕೊರತೆ ಕೇವಲ 90,428 ಅಷ್ಟೇ ಅಲ್ಲ; ಬದಲಾಗಿ ಸಾಲದ ಬಡ್ಡಿ ಮತ್ತು ಹೊಸ ಸಾಲವನ್ನೂ ಲೆಕ್ಕಕ್ಕೆ ತೆಗೆದುಕೊಂಡರೆ ಆ ಪ್ರಮಾಣ ದುಪ್ಪಟ್ಟಾಗಲಿದೆ.

ಅಷ್ಟಾಗಿಯೂ ನೆರೆಯ ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳಿಗೆ ಹೋಲಿಸಿದರೆ ಜಿಎಸ್ಡಿಪಿ ಮತ್ತು ಸಾಲದ ಹೊರೆಯ ಅನುಪಾತದಲ್ಲಿ ಕರ್ನಾಟಕ ಸಮಾಧಾನಕರ ಸ್ಥಿತಿಯಲ್ಲಿದೆ ಎಂಬುದು ಗಮನಾರ್ಹ.

2025-26ರ ಹಣಕಾಸು ವರ್ಷದ ಅಂತ್ಯಕ್ಕೆ ರಾಜ್ಯದ ಸಾಲ 7,64,655 ಕೋಟಿ ರೂ. ಆಗಲಿದೆ ಎಂದು ಅಂದಾಜಿಸಲಾಗಿದ್ದು, ಆ ಸಾಲದ ಪ್ರಮಾಣ ರಾಜ್ಯದ ಜಿ.ಎಸ್.ಡಿ.ಪಿ ಯ ಶೇ.24.91ರಷ್ಟಿರಲಿದೆ. ಆದರೆ, ಕಳೆದ ಹಣಕಾಸು ವರ್ಷದಲ್ಲೇ ನೆರೆಯ ಆಂಧ್ರಪ್ರದೇಶದ ಸಾಲ ಮತ್ತು ಜಿಎಸ್ಡಿಪಿ ಅನುಪಾತ ಶೇ.33.3 ರಷ್ಟಿದ್ದರೆ, ತೆಲಂಗಾಣದಲ್ಲಿ ಆ ಪ್ರಮಾಣ ಶೇ.27.38 ಇತ್ತು. ಇನ್ನು ತಮಿಳುನಾಡಿನಲ್ಲಿ ಆ ಪ್ರಮಾಣ 26.4ರಷ್ಟಿತ್ತು. ವಿತ್ತೀಯ ಕೊರತೆ ಮತ್ತು ಜಿಎಸ್ಡಿಪಿ ಅನುಪಾತದಲ್ಲಿ ಕೂಡ ತೆಲಂಗಾಣವನ್ನು(ಶೇ.3) ಹೊರತುಪಡಿಸಿ ಉಳಿದ ಎರಡೂ ರಾಜ್ಯಗಳು (ಆಂಧ್ರ-ಶೇ.3.8 ಹಾಗೂ ತಮಿಳುನಾಡು ಶೇ.3.4) ಕರ್ನಾಟಕಕ್ಕಿಂತ(ಶೇ.2.95) ಹೆಚ್ಚಿನ ವಿತ್ತೀಯ ಕೊರತೆ ಹೊಂದಿದ್ದವು.


ಸಾಲ ಬಡ್ಡಿ ತೀರಿಸುವ ಹೊರೆ

ಆ ದೃಷ್ಟಿಯಿಂದ ನೋಡಿದರೆ, ರಾಜ್ಯದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರಿಗೆ ಗ್ಯಾರಂಟಿ ಯೋಜನೆಗಳ ಮೂಲಕ ನೇರ ನಗದು ಪ್ರಯೋಜನಗಳನ್ನು ತಲುಪಿಸಿಯೂ ಸಾಲ ಅನುಪಾತ ಮತ್ತು ವಿತ್ತೀಯ ಕೊರತೆಯನ್ನು ನಿಯಂತ್ರಣದಲ್ಲಿ ಇಟ್ಟಿರುವುದು ಸಿಎಂ ಸಿದ್ದರಾಮಯ್ಯ ಅವರ ಸಾಧನೆಯೇ. ಅದೇ ಹೊತ್ತಿಗೆ, ಒಟ್ಟಾರೆ ಸಾಲದ ಪ್ರಮಾಣ ಏರಿಕೆಯಾಗುತ್ತಿದ್ದು, ರಾಜ್ಯದ ಒಟ್ಟು ಬಜೆಟ್ ವೆಚ್ಚದಲ್ಲಿ ಶೇ.18ರಷ್ಟು ಅಂದರೆ; ಸುಮಾರು 80 ಸಾವಿರ ಕೋಟಿ ಸಾಲದ ಬಡ್ಡಿ ತೀರಿಸಲು ವ್ಯಯವಾಗುತ್ತದೆ ಎಂಬುದು ಆತಂಕಪಡಬೇಕಾದ ಸಂಗತಿ.

ಅಲ್ಲದೆ, ಕೃಷಿ, ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಆರೋಗ್ಯ, ನಿರಾವರಿ ಸೇರಿದಂತೆ ಆದ್ಯತಾ ವಲಯಗಳಿಗೆ ಈ ಬಜೆಟ್ನಲ್ಲಿ ವಿಶೇಷ ಒತ್ತು ನೀಡಿ ಹೆಚ್ಚುವರಿ ಅನುದಾನ ಘೋಷಿಸಿಲ್ಲ. ಸಣ್ಣಪುಟ್ಟ ಹೊಸ ಉಪಕ್ರಮಗಳನ್ನು ಘೋಷಿಸಿದ್ದರೂ ಅವು ನಿಗದಿತ ಅವಧಿಯಲ್ಲೇ ಹಣಕಾಸಿನ ಬೆಂಬಲ ಪಡೆದು ಜಾರಿಗೆ ಬರದೇ ಹೋದಲ್ಲಿ ಅಂತಹ ಘೋಷಣೆಗಳಿಂದ ಜನಸಾಮಾನ್ಯರಿಗೆ ಯಾವ ಪ್ರಯೋಜನವಾಗದು. ಈ ನಡುವೆ, ಗ್ಯಾರಂಟಿ ಯೋಜನೆಗಳಿಗೂ ಕಳೆದ ಬಾರಿಗಿಂತ ಈ ಬಾರಿ 5 ಸಾವಿರ ಕೋಟಿ ಅನುದಾನ ಕಡಿತ ಮಾಡಲಾಗಿದೆ. ಹಾಗೆ ನೋಡಿದರೆ, ಗೃಹ ಲಕ್ಷ್ಮಿ, ಗೃಹ ಜ್ಯೋತಿ, ಶಕ್ತಿ, ಯುವ ನಿಧಿಯಂತಹ ಯೋಜನೆಗಳಿಗೆ ವರ್ಷದಿಂದ ವರ್ಷಕ್ಕೆ ಫಲಾನುಭವಿಗಳ ಸಂಖ್ಯೆ ಗಣನೀಯ ಹೆಚ್ಚಳ ಕಾಣುವುದು ಸಹಜ. ಆದರೆ, ಆದರೆ ಅದಕ್ಕೆ ತದ್ವಿರುದ್ಧವಾಗಿ ಅನುದಾನ ಕಡಿತ ಮಾಡಿರುವುದು ಯೋಜನೆಯ ಅರ್ಹತಾ ಮಾನದಂಡಗಳ ಪರಿಷ್ಕರಣೆಯ ಸುಳಿವು ಕೊಟ್ಟಂತಾಗಿದೆ.

ಆ ಎಲ್ಲಾ ದೃಷ್ಟಿಯಿಂದ ನೋಡಿದರೆ ಇದು ಹಣಕಾಸಿನ ದೃಷ್ಟಿಯಲ್ಲಿ ಮಾತ್ರವಲ್ಲದೆ, ಸಾಲ ಮತ್ತು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ದೃಷ್ಟಿಯಿಂದಲೂ ಖೋತಾ ಬಜೆಟ್.

Read More
Next Story