
Karnataka Budget 2025 | ತೆರಿಗೆ ಸಂಗ್ರಹ, ಪಾವತಿ ಸರಳೀಕರಣ ಜಪ; ಹೊರೆ ಹೆಚ್ಚಿಸಲು ಸಿಎಂಗೆ ಬಜೆಟ್ ನೆಪ
ವೃತ್ತಿಪರ ತೆರಿಗೆ ಕಾಯ್ದೆ ತಿದ್ದುಪಡಿಯಾಗಿದ್ದು, ಜುಲೈ ಮತ್ತು ಫೆಬ್ರವರಿ ತಿಂಗಳಲ್ಲಿ ವೇತನ ಗಳಿಕೆದಾರರು ಪಾವತಿಸಬೇಕಾದ ತೆರಿಗೆಯನ್ನು 200 ರೂಪಾಯಿಂದ 300 ರೂಪಾಯಿಗೆ ಹೆಚ್ಚಿಸಲಾಗಿದೆ.
ಕರ್ನಾಟಕ ಬಜೆಟ್ 2025-26ರಲ್ಲಿ ರಾಜ್ಯದ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ತೆರಿಗೆ ಪರಿಷ್ಕರಣೆ ಮಾಡಲಾಗಿದೆ. ತೆರಿಗೆ ಸಂಗ್ರಹಣೆಯನ್ನು ಸರಳೀಕರಣಗೊಳಿಸುವ, ತೆರಿಗೆ ಸೇವೆಗಳನ್ನು ಡಿಜಿಟಲೀಕರಣಗೊಳಿಸುವ ಜೊತೆ ಜೊತೆಗೆ ಸಿಎಂ ಸಿದ್ದರಾಮಯ್ಯ ಅವರು ಜನರ ಮೇಲೆ ತೆರಿಗೆಯ ಭಾರ ಹೊರಿಸಿದ್ದಾರೆ. ಆರ್ಥಿಕ ಬೆಳವಣಿಗೆಯೊಂದಿಗೆ ನಾನಾ ಶ್ರೇಣಿಗಳನ್ನು ಹೊಂದಿಸುವ ಪ್ರಯತ್ನವನ್ನು ಸಿಎಂ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ಮಾಡಿದ್ದಾರೆ.
ವಾಣಿಜ್ಯ ತೆರಿಗೆ ಮತ್ತು ಜಿಎಸ್‌ಟಿ ಆದಾಯ
ಕರ್ನಾಟಕ ದೇಶದ ಎರಡನೇ ಅತಿದೊಡ್ಡ ಜಿಎಸ್‌ಟಿ ಆದಾಯ ಸಂಗ್ರಹಿಸುವ ರಾಜ್ಯವಾಗಿದೆ. 2024-25 ನೇ ಸಾಲಿನಲ್ಲಿ 1,05,000 ಕೋಟಿ ರೂಪಾಯಿ ಆದಾಯ ಸಂಗ್ರಹ ನಿರೀಕ್ಷಿಸಲಾಗಿತ್ತು. 2025-26 ಆರ್ಥಿಕ ವರ್ಷದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಆದಾಯ ಗುರಿ 1,20,000 ಕೋಟಿ ರೂಪಾಯಿ ಎಂದು ನಿಗದಿಯಾಗಿದೆ. ರಾಜ್ಯ ಸರ್ಕಾರವು ಜಿಎಸ್‌ಟಿ ಪಾವತಿ ಬಲಪಡಿಸಲು ಮತ್ತು ತೆರಿಗೆ ತಪ್ಪಿಸುವಿಕೆಯನ್ನು ತಡೆಗಟ್ಟಲು ಡಿಜಿಟಲ್ ಪತ್ತೆಗೆ ಕ್ರಮ ಕೈಗೊಂಡಿದೆ. ಅದೇ ರೀತಿ ಆನ್‌ಲೈನ್ ಸೇವೆಗಳ ಸುಧಾರಣೆಗೂ ಒತ್ತು ನೀಡಿದೆ.
ವೃತ್ತಿಪರ ತೆರಿಗೆ ಪರಿಷ್ಕರಣೆ
ವೃತ್ತಿಪರ ತೆರಿಗೆ ಕಾಯ್ದೆ ತಿದ್ದುಪಡಿಯಾಗಿದ್ದು, ಜುಲೈ ಮತ್ತು ಫೆಬ್ರವರಿ ತಿಂಗಳಲ್ಲಿ ವೇತನ ಗಳಿಕೆದಾರರು ಪಾವತಿಸಬೇಕಾದ ತೆರಿಗೆಯನ್ನು 200 ರೂಪಾಯಿಂದ 300 ರೂಪಾಯಿಗೆ ಹೆಚ್ಚಿಸಲಾಗಿದೆ. ಇದನ್ನು ವಾರ್ಷಿಕ ಗರಿಷ್ಠ 2,500 ರೂಪಾಯಿಗೆ ಹೊಂದಿಸಲಾಗಿದೆ. ಅಲ್ಲದೆ, ವೃತ್ತಿಪರ ತೆರಿಗೆ ನಿರ್ವಹಣೆಯನ್ನು ಪೂರ್ಣವಾಗಿ ಡಿಜಿಟಲೀಕರಣ ಮಾಡಲಾಗಿದೆ. ಜಿಎಸ್‌ಟಿ ಕಾಯ್ದೆಯಂತೆ ಆನ್‌ಲೈನ್ ನೋಟಿಸ್ ಮತ್ತು ಆದೇಶ ನೀಡಲು ಅವಕಾಶ ಮಾಡಿಕೊಡಲಾಗಿದೆ.
ಅಬಕಾರಿ ಸುಂಕ ಪರಿಷ್ಕರಣೆ
ಆಬಕಾರಿ ತೆರಿಗೆ ಪಾವತಿಯನ್ನು ಹೊಂದಿಕೆ ಮಾಡಲಾಗಿದೆ. ಪ್ರೀಮಿಯಂ ಮದ್ಯದ ಬೆಲೆಗಳನ್ನು ಪಕ್ಕದ ರಾಜ್ಯಗಳೊಂದಿಗೆ ಹೊಂದಿಸಲು ಕ್ರಮ ಕೈಗೊಳ್ಳಲಾಗಿದೆ. ಮದ್ಯ ಪರವಾನಗಿ ಹಂಚಿಕೆ ಪ್ರಕ್ರಿಯೆಯನ್ನು ಪರಿಷ್ಕರಿಸಿ, ಪಾರದರ್ಶಕ ಇ-ಹರಾಜು ವ್ಯವಸ್ಥೆ ಪರಿಚಯಿಸಲಾಗಿದೆ. ಇದರಿಂದ ಭ್ರಷ್ಟಾಚಾರ ತಡೆಯಲು ಮತ್ತು ಆದಾಯ ಗರಿಷ್ಠಗೊಳಿಸಲು ಸಾಧ್ಯವಾಗಲಿದೆ.
ಅಬಕಾರಿ ಇಲಾಖೆಯ ಆನ್‌ಲೈನ್ ಸೇವೆಗಳನ್ನು ವಿಸ್ತರಿಸಿ ಅನುಮೋದನೆ ಪ್ರಕ್ರಿಯೆ ಸುಗಮಗೊಳಿಸಲಾಗಿದೆ. 2025-26 ನೇ ಸಾಲಿನ ಅಬಕಾರಿ ಆದಾಯ ಗುರಿ 40,000 ಕೋಟಿ ರೂಪಾಯಿ ನಿಗದಿ ಮಾಡಲಾಗಿದೆ. 2024-25ರ ಸಾಲಿನಲ್ಲಿ 36,500 ಕೋಟಿ ರೂಪಾಯಿ ಆದಾಯ ಸಂಗ್ರಹ ನಿಗದಿ ಮಾಡಲಾಗಿತ್ತು.
ಆಸ್ತಿ ನೋಂದಣಿ ಮತ್ತು ಮುುದ್ರಾಂಕ ಶುಲ್ಕ
ಆಸ್ತಿ ನೋಂದಣಿ ಪ್ರಕ್ರಿಯೆ ಸುಗಮಗೊಳಿಸಲು ಇ-ಖಾತಾ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ ಮೋಸ ತಡೆಯಲು ಮತ್ತು ಎಲ್ಲಾ ಆಸ್ತಿಗಳನ್ನು ಸರಿಯಾಗಿ ತೆರಿಗೆಗೊಳಪಡಿಸಲು ಸಾಧ್ಯವಾಗಲಿದೆ. ಅಲ್ಲದೆ, ನೋಂದಾಯಿಸಲು ಅಗತ್ಯವಿಲ್ಲದ ದಾಖಲೆಗಳಿಗೆ ಡಿಜಿಟಲ್ ಇ-ಸ್ಟಾಂಪಿಂಗ್ ವ್ಯವಸ್ಥೆ ಪರಿಚಯಿಸಲಾಗಿದೆ. **ಮುುದ್ರಾಂಕ ಮತ್ತು ನೋಂದಣಿ ಇಲಾಖೆಯ 2025-26 ಆದಾಯ ಗುರಿ 28,000 ಕೋಟಿ ರೂಪಾಯಿ, 2024-25 ನೇ ₹24,000 ಕೋಟಿಯಿತ್ತು.
ಮೋಟಾರು ವಾಹನ ಮತ್ತು ಸಾರಿಗೆ ತೆರಿಗೆ
ಸಾರಿಗೆ ಇಲಾಖೆ 2025-26 ನೇ ಸಾಲಿಗೆ ₹15,000 ಕೋಟಿ ಆದಾಯ ಸಂಗ್ರಹ ಗುರಿ ಹೊಂದಿದೆ. 2024-25 ನೇ ಸಾಲಿನಲ್ಲಿ ಇದು ₹12,500 ಕೋಟಿ ಇತ್ತು. ಈ ಕ್ಷೇತ್ರದಲ್ಲಿ ಡಿಜಿಟಲ್ ಪಾವತಿಗಳು ಮತ್ತು ಸ್ವಯಂಚಾಲಿತ ವ್ಯವಸ್ಥೆಗಳನ್ನು ಅಳವಡಿಸಿ ತೆರಿಗೆ ಸಂಗ್ರಹವನ್ನು ಪರಿಣಾಮಕಾರಿಯನ್ನಾಗಿ ಮಾಡಲಾಗಿದೆ.
ಖನಿಜ ಮತ್ತು ಭೂವಿಜ್ಞಾನ ತೆರಿಗೆ
ಖನಿಜ ಮತ್ತು ಭೂವಿಜ್ಞಾನ ಇಲಾಖೆ ಮೂಲಕ 9,000 ಕೋಟಿ ರೂಪಾಯಿ ಆದಾಯ ಸಂಗ್ರಹ ನಿರೀಕ್ಷೆ ಮಾಡಲಾಗಿದೆ. ಇದಕ್ಕೆ ಮೆರುಗು ನೀಡಲು ಮಹತ್ವದ ಖನಿಜಗಳ ಮೇಲಿನ ಹೊಸ ತೆರಿಗೆ ಪರಿಚಯಿಸಲಾಗಿದೆ. ಇದು ಸುಪ್ರೀಂಕೋರ್ಟ್ ತೀರ್ಪಿನ ಮೇರೆಗೆ ಜಾರಿಗೆ ತರಲಾಗಿದೆ. ಇದರ ಮೂಲಕ ಹೆಚ್ಚುವರಿ ₹3,000 ಕೋಟಿ ಆದಾಯ ಲಭಿಸಲಿದೆ. ಅಲ್ಲದೆ, ಕರ್ನಾಟಕ ಸಣ್ಣ ಖನಿಜ ನಿಯಮಗಳು 1994ಕ್ಕೆ ತಿದ್ದುಪಡಿ ಮಾಡಿ, ಖನಿಜ ಸಾಗಣೆಗೆ ಜಿಎಸ್‌ಟಿ ಆಧಾರಿತ ಇ-ವೇಬಿಲ್ ಕಡ್ಡಾಯಗೊಳಿಸಲಾಗಿದೆ.
ಭವಿಷ್ಯದ ಪ್ರಸ್ತಾವನೆಗಳು
ತೆರಿಗೆ ಡಿಜಿಟಲೀಕರಣ ಮತ್ತು ಪಾವತಿ ಪರಿಷ್ಕರಣೆಗಳಿಗೆ ಬಜೆಟ್ನಲ್ಲಿ ಹೆಚ್ಚು ಒತ್ತು ನೀಡಲಾಗಿದೆ. ಇದು ಆದಾಯದ ನಿರಂತರ ವೃದ್ಧಿ ಖಚಿತಪಡಿಸಿಕೊಳ್ಳಲು ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. ತಂತ್ರಜ್ಞಾನವನ್ನು ಬಳಸಿಕೊಂಡು ತೆರಿಗೆ ತಪ್ಪಿಸುವಿಕೆಯನ್ನು ತಡೆಗಟ್ಟುವುದು ಸರ್ಕಾರದ ಮುಖ್ಯ ಗುರಿಯಾಗಿದೆ.