Karnataka Budget 2025 | ʼಗ್ಯಾರಂಟಿʼಗೆ ತೋರಿದ ಕಾಳಜಿ ಅಭಿವೃದ್ಧಿಗೆ ಇಲ್ಲ: ರಾಜ್ಯದಲ್ಲಿ ಸೊರಗಿದ ಮೂಲಸೌಕರ್ಯ
x
ಪ್ರತಿಭಟನೆ(ಪ್ರಾತಿನಿಧಿಕ ಚಿತ್ರ)

Karnataka Budget 2025 | ʼಗ್ಯಾರಂಟಿʼಗೆ ತೋರಿದ ಕಾಳಜಿ ಅಭಿವೃದ್ಧಿಗೆ ಇಲ್ಲ: ರಾಜ್ಯದಲ್ಲಿ ಸೊರಗಿದ ಮೂಲಸೌಕರ್ಯ

ಪ್ರತಿಯೊಬ್ಬ ನಾಗರಿಕರಿಗೂ ಶಿಕ್ಷಣ, ಆರೋಗ್ಯ, ಸಾರಿಗೆ ಹಾಗೂ ಕುಡಿಯುವ ನೀರು ಒದಗಿಸುವುದು ಸರ್ಕಾರದ ಕರ್ತವ್ಯ. ಆದರೆ, ರಾಜ್ಯದ ಕಾಂಗ್ರೆಸ್‌ ಸರ್ಕಾರದ ಆಡಳಿತದಲ್ಲಿ ಈ ಅಗತ್ಯ ಸೇವೆಗಳು ಅನುದಾನವಿಲ್ಲದೆ ಸೊರಗಿ ಮೂಲೆಗುಂಪಾಗಿವೆ


ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಾರಿ ತಮ್ಮ 16 ನೇ ಬಜೆಟ್‌ ಮಂಡನೆಗೆ ಸಜ್ಜಾಗಿದ್ದಾರೆ. ಬಜೆಟ್‌ ಮಂಡನೆಗೆ ಇನ್ನೇನು ದಿನಗಣನೆ ಆರಂಭವಾಗಿದೆ. ಆದರೆ, ಕಳೆದ ವರ್ಷದ ಬಜೆಟ್‌ನಲ್ಲಿ ನಿಗದಿಯಾಗಿದ್ದ ಹಣಕಾಸು ಹಂಚಿಕೆಯಲ್ಲೇ ತೀವ್ರ ವ್ಯತ್ಯಯವಾಗಿದ್ದು, ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳಿಗೆ ಬಜೆಟ್‌ ಘೋಷಣೆಯ ಶೇ.50ರಷ್ಟು ಅನುದಾನ ಕೂಡ ಈವರೆಗೆ ತಲುಪಿಲ್ಲ ಎಂದು ಸರ್ಕಾರದ ಅಂಕಿಅಂಶಗಳೇ ಸಾರಿ ಹೇಳುತ್ತಿವೆ.

ಈ ನಡುವೆ, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ʼಗ್ಯಾರೆಂಟಿ ಯೋಜನೆʼಗಳ ಗುಂಗಿನಲ್ಲಿ ಜನಸಾಮಾನ್ಯರ ಬದುಕಿಗೆ ಕನಿಷ್ಟ ಖಾತರಿಗಳಾಗಬೇಕಾಗಿದ್ದ ಅಗತ್ಯ ಸೇವೆಗಳನ್ನು ನಿರ್ಲಕ್ಷಿಸುತ್ತಿದೆ. ಚುನಾವಣೆಯಲ್ಲಿ ನೀಡಿರುವ ಗ್ಯಾರೆಂಟಿ ಯೋಜನೆಗಳ ಸಾಕಾರಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದು, ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ಸಾರಿಗೆ ಮುಂತಾದ ಮೂಲಭೂತ ಸೌಕರ್ಯಗಳ ನಿರ್ವಹಣೆ ಮತ್ತು ಸುಧಾರಣೆ ಕಡೆಗಣಿಸಿದೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ.

ʼಗ್ಯಾರೆಂಟಿʼ ಯೋಜನೆಗಳ ನಿರ್ವಹಣೆಗಾಗಿ ಇತರೆ ಕ್ಷೇತ್ರಗಳಿಗೆ ಮೀಸಲಿಟ್ಟಿದ್ದ ಅನುದಾನವನ್ನೂ ಬಳಸುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ ರಾಜ್ಯದಲ್ಲಿ ಆದ್ಯತಾ ಕ್ಷೇತ್ರಗಳ ನೌಕರರು ನಿತ್ಯ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಯೊಬ್ಬರಿಗೂ ಕುಡಿಯುವ ನೀರು, ರಸ್ತೆ, ಶಿಕ್ಷಣ, ಸಾರಿಗೆ ಹಾಗೂ ಆರೋಗ್ಯ ಸೇವೆ ಒದಗಿಸುವುದು ಸರ್ಕಾರಗಳ ಕರ್ತವ್ಯ. ಆದರೆ, ರಾಜ್ಯದಲ್ಲಿ ಕಳೆದ ಎರಡು ವರ್ಷಗಳಲ್ಲಿ ಈ ಮೂಲ ಸೌಕರ್ಯ ಕ್ಷೇತ್ರಗಳು ಅನುದಾನ ಕೊರತೆಯಿಂದಾಗಿ ಭಾರೀ ಹಿನ್ನಡೆ ಕಂಡಿದೆ ಎಂಬುದಕ್ಕೆ ಆಯಾ ವಲಯಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಮಸ್ಯೆಗಳೇ ನಿದರ್ಶನ.

ಪ್ರಮುಖ ಅಗತ್ಯ ಸೇವಾ ವಲಯದಲ್ಲಿ ಸದ್ಯಕ್ಕೆ ಎದ್ದು ಕಾಣುತ್ತಿರುವ, ಮತ್ತು ಚರ್ಚೆಗೆ ಗ್ರಾಸವಾಗಿರುವ ಸಮಸ್ಯೆ ಮತ್ತು ಕೊರತೆಗಳ ಮೇಲೆ ಬೆಳಕು ಚೆಲ್ಲುವ ʼದ ಫೆಡರಲ್‌ ಕರ್ನಾಟಕʼದ ಪ್ರಯತ್ನ ಇಲ್ಲಿದೆ...

ಆರೋಗ್ಯ ಸೇವೆ ಎಂಬುದು ಗಮನಕುಸುಮ

ಆರೋಗ್ಯ ಇಲಾಖೆಯಲ್ಲಿ ಸಮಸ್ಯೆಗಳು ತಾಂಡವಾಡುತ್ತಿವೆ. ಇತ್ತೀಚೆಗೆ ಬಳ್ಳಾರಿ, ಬೆಳಗಾವಿ, ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸಂಭವಿಸಿದ ಬಾಣಂತಿಯರ ಸರಣಿ ಸಾವು ಪ್ರಕರಣಗಳು ಆರೋಗ್ಯ ಇಲಾಖೆಯ ಅವ್ಯವಸ್ಥೆಯನ್ನು ಜಗಜ್ಜಾಹೀರು ಮಾಡಿವೆ. ಆಸ್ಪತ್ರೆಗಳಲ್ಲಿ ವೈದ್ಯರು, ನರ್ಸ್‌ಗಳು ಹಾಗೂ ಇತರೆ ಸಿಬ್ಬಂದಿ ಕೊರತೆ ಒಂದೆಡೆಯಾದರೆ, ‌ಸಮರ್ಪಕ ಔಷಧ ಕೊರತೆ, ಕಳಪೆ ದರ್ಜೆಯ ಔಷಧ ಸರಬರಾಜು, ತಾಂಡವವಾಡುತ್ತಿರುವ ಭ್ರಷ್ಟಾಚಾರದಿಂದ ಜನ ಸಾಮಾನ್ಯರ ಪಾಲಿಗೆ ಗುಣಮಟ್ಟದ ಆರೋಗ್ಯ ಎಂಬುದು ಗಗನಕುಸುಮವಾಗಿದೆ.

ರಾಷ್ಟ್ರೀಯ ಆರೋಗ್ಯ ಮಿಷನ್‌ ಯೋಜನೆಯಡಿ ರಾಜ್ಯದಲ್ಲಿ 35-40 ಸಾವಿರ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಕನಿಷ್ಟ ವೇತನವೂ ಇಲ್ಲದೇ ದುಡಿಯುತ್ತಿದ್ದು, ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾರೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಈ ನೌಕರರು ಪ್ರತಿಭಟನೆ, ನಿರಶನ ನಡೆಸುವುದು ಸಾಮಾನ್ಯವಾಗಿದೆ.

ಎನ್‌ಎಚ್‌ಎಂ ಯೋಜನೆಯ ನೌಕರರಿಗೆ ಕೊಪ್ಪಳ, ಉಡುಪಿ ಜಿಲ್ಲೆ ಬಿಟ್ಟರೆ ಬೇರಾವ ಜಿಲ್ಲೆಯಲ್ಲೂ ನಿಗದಿತ ಅವಧಿಗೆ ವೇತನ ಸಿಗುತ್ತಿಲ್ಲ. ಬಹುತೇಕ ಜಿಲ್ಲೆಗಳಲ್ಲಿ 4-6ತಿಂಗಳಿಗೊಮ್ಮೆ ವೇತನ ಪಾವತಿಸಲಾಗುತ್ತಿದೆ. ವೇತನ ಪರಿಷ್ಕರಣೆ ಹೋರಾಟ ನಡೆಸಿದರೂ ಅನುದಾನದ ಕೊರತೆಯ ನೆಪ ಹೇಳಿ ಮುಂದೂಡಲಾಗುತ್ತಿದೆ. 7 ನೇ ವೇತನ ಆಯೋಗದ ಶಿಫಾರಸಿನಂತೆ ಗುತ್ತಿಗೆ ಸಿಬ್ಬಂದಿಗೂ ವೇತನ ಪರಿಷ್ಕರಿಸಬೇಕೆಂಬ ಬೇಡಿಕೆಗೆ ʼಇದು ಕೇಂದ್ರದ ಯೋಜನೆʼ ಎಂಬ ಸಬೂಬು ಹೇಳಿ ಸರ್ಕಾರ ಸಾಗಹಾಕುತ್ತಿದೆ.

ಸ್ಟ್ಯಾಫ್‌ ನರ್ಸ್‌, ಲ್ಯಾಬ್, ಟೆಕ್ನಿಶಿಯನ್, ಆರೋಗ್ಯ ನಿರೀಕ್ಷಕರು ಸೇರಿ ಪ್ಯಾರಾ ಮೆಡಿಕಲ್ ಸಿಬ್ಬಂದಿ ಅತ್ಯಂತ ಕಡಿಮೆ ವೇತನದಲ್ಲಿ ಬದುಕು ಸಾಗಿಸುವಂತಾಗಿದೆ. ಕಾಯಂ ಸಿಬ್ಬಂದಿಗೆ ಅನುಗುಣವಾಗಿ ಕೆಲಸ ಮಾಡಿದರೂ ರಜೆ, ರಜೆ ಗಳಿಕೆ ಸೌಲಭ್ಯ, ರಿಸ್ಕ್‌ ಅಲೊಯನ್ಸ್‌ ಮಾತ್ರ ಸಿಗುತ್ತಿಲ್ಲ. ಕೇಂದ್ರದ ಯೋಜನೆಯಾದ ಕೆ-ಸಾಪ್ಸ್‌ (ಕರ್ನಾಟಕ ರಾಜ್ಯ ಏಡ್ಸ್‌ ನಿಯಂತ್ರಣಾ ಸಂಸ್ಥೆ) ಸಿಬ್ಬಂದಿಗೆ ಇರುವಷ್ಟು ವೇತನ, ಇನ್ನಿತರೆ ಸೌಲಭ್ಯಗಳು ಎನ್‌ಎಚ್‌ಎಂ ನೌಕರರಿಗಿಲ್ಲ. ಸಮುದಾಯ ಆರೋಗ್ಯ ಕಾರ್ಯಕರ್ತರಿಗೆ ಕಾಲ ಕಾಲಕ್ಕೆ ವೇತನ ಕೂಡ ಸಿಗುತ್ತಿಲ್ಲ. ಆಶಾ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಳ ಮಾಡಿಲ್ಲ.

ಶಿಕ್ಷಣ ಕ್ಷೇತ್ರದ ಸಮಸ್ಯೆಗಳಿಗೆ ಕೊನೆಯೇ ಇಲ್ಲ

ಶಿಕ್ಷಣ ಹಕ್ಕು ಕಾಯ್ದೆಯಡಿ ಸಿಗಬೇಕಾದ ಕನಿಷ್ಠ ಮೂಲ ಸೌಲಭ್ಯಗಳು ಸರ್ಕಾರಿ ಶಾಲೆಗಳಿಗೆ ಹೋಗುವ ಸಮಾಜದ ದುರ್ಬಲ ವರ್ಗಗಳ ಮಕ್ಕಳಿಗೆ ಬಹುತೇಕ ಕಡಿತವಾಗುತ್ತಿವೆ. ಅದು ಅಂಗನವಾಡಿ ಮಕ್ಕಳ ಆಹಾರವಿರಬಹುದು, ಶಾಲಾ ಮಕ್ಕಳ ಪೌಷ್ಟಿಕ ಆಹಾರವಿರಬಹುದು, ಬಾಣಂತಿಯರು, ಗರ್ಭಿಣಿಯರ ಪೌಷ್ಟಿಕ ಆಹಾರದ ವಿಷಯವಿರಬಹುದು, ಪ್ರತಿ ವಿಷಯದಲ್ಲೂ ದಿನದಿಂದ ದಿನಕ್ಕೆ ಪ್ರಮಾಣ ಮತ್ತು ಗುಣಮಟ್ಟದಲ್ಲಿ ಕುಸಿತದ ಖಾತರಿ ಎಂಬುದು ಈಗ ಹೊಸ ಗ್ಯಾರಂಟಿಯಾಗಿದೆ.

ಇನ್ನು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ದೊಡ್ಡ ಸಮಸ್ಯೆಯಾಗಿದೆ. ಮೂಲಸೌಲಭ್ಯ, ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳ ಹಾಜರಾತಿಯೂ ಕ್ಷೀಣಿಸುತ್ತಿದೆ.

ಮಕ್ಕಳಲ್ಲಿ ಪೌಷ್ಟಿಕಾಂಶ ಕೊರತೆ ನೀಗಿಸಲು ಖಾಸಗಿ ಸಂಸ್ಥೆಗಳು ನೆರವಾದರೂ ಮೊಟ್ಟೆ, ಬಾಳೆಹಣ್ಣು ವಿತರಣೆ ಅಸಮರ್ಪಕವಾಗಿದೆ. ಇತ್ತೀಚೆಗೆ ಕಡಲೆ ಚಿಕ್ಕಿ ವಿತರಣೆಯನ್ನೂ ಸರ್ಕಾರ ನಿಲ್ಲಿಸಿದೆ. ಸರ್ಕಾರಿ ಹಾಗೂ ಅನುದಾನಿತ ಸರ್ಕಾರಿ ಶಾಲೆಗಳಲ್ಲಿ ವಾರದಲ್ಲಿ ಆರು ದಿನ ಮೊಟ್ಟೆ ವಿತರಿಸಲು ಅಜೀಂ ಪ್ರೇಮ್‌ಜಿ ಫೌಂಡೇಷನ್‌ 1500ಕೋಟಿ ರೂ. ದೇಣಿಗೆ ನೀಡಿದರೂ ಮೊಟ್ಟೆ ವಿತರಣೆ ಸಮರ್ಪಕವಾಗಿ ಆಗುತ್ತಿಲ್ಲ. ವಾರದಲ್ಲಿ ಆರು ದಿನ ಮೊಟ್ಟೆ ವಿತರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅದು ಸಾಧ್ಯವಾಗಿಲ್ಲ.

ಅಂಗನವಾಡಿ ಕಾರ್ಯಕರ್ತೆಯರು ಗೌರವಧನ, ಸೇವಾ ಕಾಯಮಾತಿ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಇಂದಿಗೂ ಪರಿಹಾರ ಮಾತ್ರ ಸಿಕ್ಕಿಲ್ಲ. ಅಂಗನವಾಡಿಗಳಲ್ಲಿ ಮಕ್ಕಳು ಹಾಗೂ ಬಾಣಂತಿಯರಿಗೆ ಪೌಷ್ಟಿಕ ಆಹಾರ ಪೂರೈಸುವುದೂ ದುಸ್ತರವಾಗಿದ್ದು, ದಿನ ಕಳೆದಂತೆ ಆಹಾರ ಪದಾರ್ಥ ಪೂರೈಕೆ ಪ್ರಮಾಣ ಮತ್ತು ಗುಣಮಟ್ಟ ಪಾತಾಳಮುಖಿಯಾಗಿದೆ.

ರಾಜ್ಯದಲ್ಲಿರುವ 66,513 ಅಂಗನವಾಡಿ ಕೇಂದ್ರಗಳಲ್ಲಿ 60 ಸಾವಿರಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರಿಗೆ ಸರಿಯಾದ ವೇತನ ಸಿಗುತ್ತಿಲ್ಲ. ಪ್ರತಿ ತಿಂಗಳಿಗೊಮ್ಮೆ ಮೊಟ್ಟೆ ಹಣವೂ ನೀಡದ ಕಾರಣ ಕಾರ್ಯಕರ್ತೆಯರೇ ಸ್ವಂತ ಹಣದಲ್ಲಿ ಮೊಟ್ಟೆ ಖರೀದಿಸಿ ನೀಡಬೇಕಾದ ಪರಿಸ್ಥಿತಿ ಎದುರಾಗಿದೆ. ಬಿಸಿಯೂಟ ಹಾಗೂ ಅಕ್ಷರ ದಾಸೋಹ ನೌಕರರ ಪಾಡು ಕೂಡ ಹೇಳತೀರದಾಗಿದೆ.

ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಅಧೀನದ ವಸತಿ ಶಾಲೆಗಳು ಸೇರಿದಂತೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಎದ್ದುಕಾಣುತ್ತಿದೆ. ವಸತಿ ನಿಲಯಗಳಲ್ಲಿ ಗುಣಮಟ್ಟದ ಆಹಾರ ಸೇರಿದಂತೆ ಯಾವುದೇ ಸೌಲಭ್ಯಗಳು ಸಮರ್ಪಕವಾಗಿ ಸಿಗುತ್ತಿಲ್ಲ ಎಂಬ ಆರೋಪಗಳು ಸಾಮಾನ್ಯವಾಗಿವೆ.

ಕಳೆದ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ 37,452 ಕೋಟಿ ರೂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ 35,611 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿತ್ತು. ಆದರೆ ಎರಡೂ ಕ್ಷೇತ್ರಗಳಿಗೆ ಕ್ರಮವಾಗಿ 24,199 ಕೋಟಿ ರೂ. ಹಾಗೂ 22,053 ಕೋಟಿ ರೂ ಅನುದಾನ ಮಾತ್ರ ಬಿಡುಗಡೆ ಮಾಡಿದೆ. ಶಿಕ್ಷಣ ಕ್ಷೇತ್ರದ ಇನ್ನೂ 13,253 ಕೋಟಿ ರೂ. ಅನುದಾನ ಬಾಕಿ ಇದೆ. ಅದೇ ರೀತಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 13,558 ಕೋಟಿ ರೂ ಬಾಕಿ ಉಳಿಸಿಕೊಂಡಿದೆ.

ಸಾರಿಗೆ ವಲಯದಲ್ಲೂ ಕಾಣದ ಸುಧಾರಣೆ

ರಾಜ್ಯ ಸರ್ಕಾರ ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ನೀಡಿದೆ. ಇದಕ್ಕಾಗಿ ರಾಜ್ಯ ಸರ್ಕಾರವು ಸಾರಿಗೆ ಇಲಾಖೆಗೆ ಹಣ ಭರಿಸಬೇಕಾಗಿದೆ. ಸುಮಾರು 5,900ಕೋಟಿ ರೂ. ಬಾಕಿ ಉಳಿಸಿಕೊಂಡಿರುವುದರಿಂದ ಸಾರಿಗೆ ಇಲಾಖೆಯಲ್ಲಿ ನೌಕರರಿಗೆ ಸೂಕ್ತ ಸೌಲಭ್ಯಗಳು ಸಿಗದಂತಾಗಿವೆ.

ಡೀಸೆಲ್ ಹಣ, ಸಿಬ್ಬಂದಿಯ ಭವಿಷ್ಯ ನಿಧಿ, ಖರೀದಿ ಸಾಮಗ್ರಿಗಳ ಹಣ ಸೇರಿ ಎಲ್ಲಾ ಬಾಕಿಗಳನ್ನು ಸರ್ಕಾರ ಉಳಿಸಿಕೊಂಡಿದೆ. ಕೆಎಸ್‌ಆರ್‌ಟಿಸಿ ಸಾರಿಗೆ ನೌಕರರಿಗೆ 38 ತಿಂಗಳ ಬಾಕಿ ವೇತನವೂ ಸಿಗದೇ ಪರದಾಡುವ ಪರಿಸ್ಥಿತಿ ಎದುರಾಗಿದೆ. ಸಾರಿಗೆ ನೌಕರರು ಪ್ರತಿಭಟನೆ ಹಾದಿ ತುಳಿದಾಗ ಆಶ್ವಾಸನೆ ನೀಡಿ ಪ್ರತಿಭಟನೆ ನಿಲ್ಲಿಸುವುದಷ್ಟೇ ಸರ್ಕಾರದ ಕೆಲಸವಾಗಿದೆ. ಆದರೆ, ಬಾಕಿ ಹಣ ಪಾವತಿ ಮಾತ್ರ ಸಾಧ್ಯವಾಗಿಲ್ಲ.

ಕಳೆದ ಡಿಸೆಂಬರ್ 31ರಂದು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದರು. ಆಗ ಮಧ್ಯಪ್ರವೇಶಿಸಿದ್ದ ಸಚಿವ ರಾಮಲಿಂಗಾ ರೆಡ್ಡಿ ಅವರು ಸಂಕ್ರಾಂತಿಯೊಳಗೆ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಆದರೆ, ಈಗ ಶಿವರಾತ್ರಿ ಬಂದರೂ ಭರವಸೆ ಮಾತ್ರ ಈಡೇರಿಲ್ಲ.

ಇನ್ನು ರಾಜ್ಯದ ಗ್ರಾಮೀಣ ಮತ್ತು ಜಿಲ್ಲಾ ಮಟ್ಟದ ರಸ್ತೆಗಳ ಸ್ಥಿತಿಗತಿಯಂತೂ ದುರವಸ್ಥೆ ತಲುಪಿದೆ. ಕಳೆದ ಕೆಲವು ವರ್ಷಗಳಿಂದ ಗ್ರಾಮೀಣ ರಸ್ತೆಗಳ ದುರಸ್ತಿ ಮತ್ತು ಮೇಲ್ದರ್ಜೆಗೆ ಏರಿಸುವ ಕಾಮಗಾರಿಗಳು ಬಹುತೇಕ ಸ್ಥಗಿತಗೊಂಡಿದ್ದು, ಶಾಸಕರ ನಿಧಿ ಬಿಡುಗಡೆ ವಿಷಯದಲ್ಲಿಯೂ ಸರ್ಕಾರ ಹಣಕಾಸು ಕೊರತೆಯ ನೆಪ ಹೇಳುತ್ತಿರುವುದರಿಂದ ಪಂಚಾಯ್ತಿ ಮಟ್ಟದ ರಸ್ತೆಗಳ ಸುಧಾರಣೆ ಎಂಬುದು ಕೇವಲ ಕಾಗದದ ಮೇಲಿನ ಮಾತಾಗಿ ಉಳಿದಿದೆ.

ಹಳ್ಳ ಹಿಡಿದ ಕುಡಿಯುವ ನೀರಿನ ಯೋಜನೆಗಳು

ಗ್ರಾಮೀಣ ಪ್ರದೇಶಗಳಿಗೆ ನೀರು ಪೂರೈಸುವ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಹತ್ವಾಕಾಂಕ್ಷೆಯ ಜಲ ಜೀವನ್‌ ಮಿಷನ್‌ ಯೋಜನೆಯಡಿ ಅರೆಬರೆ ಕಾಮಗಾರಿಗಳಾಗಿ ಯೋಜನೆಯೇ ಹಳ್ಳಹಿಡಿದಿದೆ.

ಯೋಜನೆಗೆ ಕೇಂದ್ರ ಸರ್ಕಾರ ಅನುದಾನ ನೀಡುತ್ತಿಲ್ಲ ಎಂಬ ನೆಪದಲ್ಲಿ ರಾಜ್ಯ ಸರ್ಕಾರ ಕೂಡ ಯೋಜನೆ ಅನುಷ್ಠಾನಕ್ಕೆ ನಿರಾಸಕ್ತಿ ತೋರುತ್ತಿದೆ. ಇದರಿಂದ ಗ್ರಾಮೀಣ ಜನರು ಬೇಸಿಗೆಯಲ್ಲಿ ನೀರಿನ ಬರ ಎದುರಿಸುವುದು ನಿಶ್ಚಯವಾಗಿದೆ. ಸಾಮಾನ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ಕೊಳವೆಬಾವಿಗಳು ಬತ್ತಲಿವೆ. ಅದರಲ್ಲೂ ಪ್ರಸಕ್ತ ಸಾಲಿನಲ್ಲಿ ಬೇಸಿಗೆ ಈಗಾಗಲೇ ತೀವ್ರವಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಬಾಧಿಸಲಿದೆ ಎಂಬ ಹೇಳಲಾಗಿದೆ.

ಜೆಜೆಎಂ ಯೋಜನೆಯಡಿ ಕೇಂದ್ರ ಸರ್ಕಾರವು ರಾಜ್ಯಕ್ಕೆ ಪೂರ್ಣ ಪ್ರಮಾಣದ ಅನುದಾನ ಬಿಡುಗಡೆ ಮಾಡದಿರುವ ಬಗ್ಗೆ ಈಚೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವ ವಿ.ಸೋಮಣ್ಣ ನಡುವೆ ವಾಕ್ಸಮರ ನಡೆದಿತ್ತು.

ಎತ್ತಿನಹೊಳೆ ಯೋಜನೆ ವಿಳಂಬದಿಂದ ವರ್ಷದಿಂದ ವರ್ಷಕ್ಕೆ ಯೋಜನಾ ವೆಚ್ಚ ಬೆಳೆಯುತ್ತಲೇ ಇದೆ. ಕೆ.ಸಿ.ವ್ಯಾಲಿ ಯೋಜನೆಯಡಿ ಕೆರೆಗಳನ್ನು ತುಂಬಿಸುವ ಯೋಜನೆ ಕೂಡ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲ. ಸರ್ಕಾರದ ನಿರಾಸಕ್ತಿ, ಇಚ್ಛಾಶಕ್ತಿ ಕೊರತೆಯಿಂದ ಯೋಜನೆಗಳು ಕಾರ್ಯಾರೂಪಕ್ಕೆ ಬರುತ್ತಿಲ್ಲ. ಹಾಗಾಗಿ ಸರ್ಕಾರವೇ ನೀರಿಗಾಗಿ ಹಾಹಾಕಾರ ಸೃಷ್ಟಿಸಲಿದೆ ಎಂದು ಆರೋಪಗಳು ಕೇಳಿಬರುತ್ತಿವೆ.

ಪಂಚಾಯ್ತಿಗಳಿಗೆ 15ನೇ ಹಣಕಾಸು ಆಯೋಗದ ಅನುದಾನ ಕೂಡ ವಿಳಂಬವಾಗುತ್ತಿದೆ. 2024ಸೆಪ್ಟೆಂಬರ್‌ನಲ್ಲಿ ಒಂದು ಕಂತು, 2025ಜನವರಿಯಲ್ಲಿ ಮತ್ತೊಂದು ಕಂತು ಬಿಡುಗಡೆಯಾಗಿದೆ. ಉಳಿದ ಎರಡು ಕಂತುಗಳು ಈವರೆಗೂ ಬಿಡುಗಡೆಯಾಗಿಲ್ಲ. ರಾಜ್ಯ ಸರ್ಕಾರದ ನಿಧಿಯಡಿ ಜನಸಂಖ್ಯೆ ಆಧಾರದ ಮೇಲೆ ಗ್ರಾಮ ಪಂಚಾಯ್ತಿಗಳಿಗೆ 50 ಲಕ್ಷದಿಂದ 1.5 ಕೋಟಿಯವರೆಗೆ ಅನುದಾನ ನೀಡಬೇಕಿತ್ತು. ಇದೂ ಕೂಡ ಸಮರ್ಪಕವಾಗಿ ಬಿಡುಗಡೆಯಾಗಿಲ್ಲ.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್‌ ಇಲಾಖೆಗೆ ಕಳೆದ ಬಜೆಟ್‌ನಲ್ಲಿ 25,936 ಕೋಟಿ ರೂ.ಗಳ ಅನುದಾನ ಹಂಚಿಕೆ ಮಾಡಲಾಗಿತ್ತು. ಇದರ ಪೈಕಿ ಈವರೆಗೆ 10,408 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದೆ. 15,228 ರೂ. ಗಳನ್ನು ಬಾಕಿ ಉಳಿಸಿಕೊಂಡಿದೆ ಎಂಬುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.

ದುಬಾರಿಯಾಗಲಿದೆ ವಿದ್ಯುತ್‌ ದರ

ಬೇಸಿಗೆಯಲ್ಲಿ ವಿದ್ಯುತ್‌ ಉತ್ಪಾದನೆ ಪ್ರಮಾಣ ಕುಸಿಯುವ ಹಿನ್ನೆಲೆಯಲ್ಲಿ ಸಮರ್ಪಕ ವಿದ್ಯುತ್‌ ಪೂರೈಕೆ ಕಷ್ಟಸಾಧ್ಯವಾಗಲಿದೆ. ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್‌ ಉಚಿತ ವಿದ್ಯುತ್‌ ನೀಡುವ ಸಲುವಾಗಿ ಈಚೆಗಷ್ಟೇ ವಿದ್ಯುತ್‌ ದರ ಏರಿಸಿರುವ ಮೂಲಕ ರಾಜ್ಯ ಸರ್ಕಾರ ಗ್ರಾಹಕರಿಗೆ ಬರೆ ಎಳೆದಿತ್ತು.

ಇದೀಗ ವಿದ್ಯುತ್‌ ದರ ಏರಿಕೆ ಜೊತೆಗೆ ಗೃಹ ಜ್ಯೋತಿಯ ಬಿಲ್‌ ಕಟ್ಟಬೇಕಾದ ಅನಿವಾರ್ಯತೆಯೂ ಜನರಿಗೆ ಎದುರಾಗಿದೆ. ರಾಜ್ಯ ಸರ್ಕಾರ ಎಸ್ಕಾಂಗಳಿಗೆ ಗೃಹ ಜ್ಯೋತಿಯ ಬಿಲ್‌ ಭರಿಸಲು ಸಾಧ್ಯವಾಗದ ಕಾರಣ ಜನರಿಂದಲೇ ವಿದ್ಯುತ್‌ ಬಿಲ್ ವಸೂಲಿ‌ ಮಾಡಲು ಮುಂದಾಗಿವೆ ಎನ್ನಲಾಗಿದೆ.

ರಾಜ್ಯದಲ್ಲಿ ಅನುದಾನದ ಕೊರತೆಯಿಂದ ಯಾವುದೇ ಹೊಸ ವಿದ್ಯುತ್‌ ವಿತರಣಾ ಜಾಲ(ಗ್ರಿಡ್‌) ಸ್ಥಾಪಿಸುವ ಕೆಲಸಗಳು ಕೂಡ ವಿಳಂಬವಾಗುತ್ತಿವೆ. ಹಾಗಾಗಿ ಗ್ರಾಮೀಣ ಭಾಗದಲ್ಲಿ ಈಗಾಗಲೇ ಲೋಡ್‌ ಶೆಡ್ಡಿಂಗ್‌ ತೀವ್ರವಾಗಿದ್ದು, ಬೆಳೆಗಳು ಒಣಗಲಾರಂಭಿಸಿವೆ. ಮಲೆನಾಡು ಭಾಗದಲ್ಲಿಯೇ ಈ ಬಾರಿ ಈಗಾಗಲೇ ಅಡಿಕೆ ತೋಟಗಳು ವಿದ್ಯುತ್‌ ಕೊರತೆಯಿಂದ ನೀರು ಕಾಣದೆ ಒಣಗಲಾರಂಭಿಸಿವೆ.

Read More
Next Story