
Bangalore-Vijayawada Expressway: 6 ಗಂಟೆಗೆ ತಗ್ಗಲಿದೆ ಪಯಣ; ಗಡಿ ಜಿಲ್ಲೆಗಳ ರೈತರಿಗೆ, ರಿಯಲ್ ಎಸ್ಟೇಟ್‌ಗೆ ವರದಾನ
ಗಡಿ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ , ಕೋಲಾರದ ಟೊಮೆಟೊ, ಆಲೂಗಡ್ಡೆ, ದ್ರಾಕ್ಷಿಯಂತಹ ಉತ್ಪನ್ನಗಳು, ರೇಷ್ಮೆ, ಹಾಲು-ತುಪ್ಪ ಮೊಟ್ಟೆ ಮತ್ತು ಕೋಳಿ ಮಾಂಸ ರಫ್ತಿಗೂ ಸಹಾಯವಾಗುತ್ತದೆ.
ಐಟಿ ರಾಜಧಾನಿ ಬೆಂಗಳೂರು ಹಾಗೂ ವಿಜಯವಾಡದ ಮಧ್ಯೆ ನಿರ್ಮಾಣವಾಗುತ್ತಿರುವ 'ಗ್ರೀನ್ ಫೀಲ್ಡ್ ಎಕ್ಸ್‌ಪ್ರೆಸ್ ವೇ' ಕಾರಿಡಾರ್‌ನಿಂದ ಎರಡೂ ನಗರಗಳ ನಡುವಿನ ಪ್ರಯಾಣದ ಅವಧಿ 6 ಗಂಟೆಗಳಿಗೆ ತಗ್ಗಲಿದೆ. ಜತೆಗೆ ಹೆದ್ದಾರಿ ಹಾದು ಹೋಗುವ ಗಡಿ ಜಿಲ್ಲೆಗಳಾದ ಕೋಲಾರ, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರದ ಆರ್ಥಿಕ ಚಹರೆಯನ್ನೇ ಬದಲಿಸಲಿದೆ.
ಪ್ರಸ್ತುತ ಬೆಂಗಳೂರಿನಿಂದ ವಿಜಯವಾಡ ನಡುವಿನ 624 ಕಿ.ಮೀ. ಅಂತರ ತಲುಪಲು ಸುಮಾರು 12 ರಿಂದ 14 ಗಂಟೆ ಸಮಯ ಹಿಡಿಯುತ್ತಿದೆ. ಈ ಹೊಸ ಹೆದ್ದಾರಿ ಪೂರ್ಣಗೊಂಡ ಬಳಿಕ ಪ್ರಯಾಣದ ಅವಧಿ 6 ರಿಂದ 7 ಗಂಟೆಗಳಿಗೆ ಇಳಿಯಲಿದೆ. ಇದು ಗಡಿ ಜಿಲ್ಲೆಗಳ ಜನರಿಗೆ ಆಂಧ್ರಪ್ರದೇಶ ಮತ್ತು ತೆಲಂಗಾಣದೊಂದಿಗೆ ವೇಗದ ಸಂಪರ್ಕ ಹೊಂದಲು ಸಹಕಾರಿಯಾಗಲಿದೆ.
"ಬೆಂಗಳೂರು-ವಿಜಯವಾಡ ಎಕ್ಸ್‌ಪ್ರೆಸ್ ವೇ"ಯಿಂದ ಸಾರಿಗೆ ವೆಚ್ಚವೂ ಕಡಿಮೆಯಾಗಲಿದೆ. ದಕ್ಷಿಣ ಮತ್ತು ಪೂರ್ವ ಭಾರತದ ನಡುವಿನ ವ್ಯಾಪಾರಕ್ಕೂ ನೆರವಾಗಲಿದೆ. ಆಮದಿನ ಮೇಲಿನ ಅವಲಂಬನೆ ಕಡಿಮೆಯಾಗಲಿದೆ. ಸುಧಾರಿತ ಸಂಪರ್ಕದಿಂದ ಪ್ರವಾಸೋದ್ಯಮವೂ ಬೆಳೆಯಲಿದೆ. ಎಕ್ಸ್‌ಪ್ರೆಸ್ ಹೈವೇ ಮೂಲಕ ಸಂಪರ್ಕ ಸುಲಭವಾಗುವ ಹಿನ್ನೆಲೆಯಲ್ಲಿ ಹಲವು ಕೈಗಾರಿಕೆಗಳು ಹೆದ್ದಾರಿಯ ಉದ್ದಕ್ಕೂ ಗಣನೀಯವಾಗಿ ತಲೆ ಎತ್ತಲಿವೆ. ಉದ್ಯೋಗಾವಕಾಶವೂ ಹೆಚ್ಚಲಿದೆ.
ಭಾರತ್ ಮಾಲಾ ಪರಿಯೋಜನಾ ಹಂತ-2 ರ ಅಡಿಯಲ್ಲಿ ನಿರ್ಮಿಸಲಾಗುತ್ತಿರುವ ಆರು ಪಥದ ಎಕ್ಸ್‌ಪ್ರೆಸ್‌ವೇ ಪ್ರಯಾಣದ ಸಮಯವನ್ನು ಕೇವಲ 6 ಗಂಟೆಗಳಿಗೆ ಇಳಿಸುತ್ತದೆ. ಯಾವುದೇ ಅಡೆತಡೆಗಳಿಲ್ಲದೆ ವಾಹನಗಳ ವೇಗದ ಚಲನೆಗೆ ಅನುಕೂಲವಾಗುವಂತೆ ಈ ರಸ್ತೆಯನ್ನು ವಿನ್ಯಾಸಗೊಳಿಸಲಾಗಿದ್ದು, ಆಂಧ್ರಪ್ರದೇಶದ ರಾಜಧಾನಿ ಅಮರಾವತಿಗೂ ಈ ಗ್ರೀನ್‌ಫೀಲ್ಡ್ ರಾಷ್ಟ್ರೀಯ ಹೆದ್ದಾರಿ (NH-544G) ಸಂಪರ್ಕ ಕಲ್ಪಿಸಲಿದೆ. ಈ ರಸ್ತೆ ಪೂರ್ಣಗೊಂಡ ನಂತರ, ಎರಡು ನಗರಗಳ ನಡುವಿನ ಸಾರಿಗೆ ವ್ಯವಸ್ಥೆಯಲ್ಲಿ ಕ್ರಾಂತಿಯನ್ನುಂಟು ಮಾಡುತ್ತದೆ.
ಹೆದ್ದಾರಿಯಿಂದ ರಾಜ್ಯಕ್ಕೇನು ಲಾಭ ?
ಬೆಂಗಳೂರು ವಿಜಯವಾಡ ಎಕ್ಸ್‌ಪ್ರೆಸ್ ವೇ ಆರಂಭವಾಗುವುದರಿಂದ ಕರ್ನಾಟಕ ಗಡಿ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಕೋಲಾರದಲ್ಲಿ ಆರ್ಥಿಕ ಹಾಗೂ ಕೃಷಿ ಚಟುವಟಿಕೆಗಳು ಮತ್ತಷ್ಟು ಹೆಚ್ಚಾಗಲಿವೆ. ಈಗಾಗಲೇ ನೆರೆಯ ಆಂಧ್ರಪ್ರದೇಶಕ್ಕೆ ಹಲವಾರು ಉತ್ಪನ್ನಗಳನ್ನು ರಫ್ತು ಮಾಡಲಗುತ್ತಿದ್ದು, ಆಂಧ್ರಪ್ರದೇಶದಿಂದಲೂ ಹಲವ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿರುವುದಕ್ಕೆ ಮತ್ತಷ್ಟು ವೇಗ ಸಿಗಲಿದ್ದು, ಬೇಡಿಕೊ ಹೆಚ್ಚಾಗಿದೆ.
ರಾಜ್ಯದಿಂದ ರಫ್ತಾಗುವ ಉತ್ಪನ್ನಗಳು
ಕೋಲಾರವು ಏಷ್ಯಾದಲ್ಲೇ ಅತಿ ದೊಡ್ಡ ಟೊಮೆಟೊ ಮಾರುಕಟ್ಟೆಯನ್ನು ಹೊಂದಿದೆ. ಇಲ್ಲಿಂದ ಪ್ರತಿದಿನ ನೂರಾರು ಲಾರಿ ಟೊಮೆಟೊ, ಆಲೂಗಡ್ಡೆ, ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಆಂಧ್ರಪ್ರದೇಶದ ಚಿತ್ತೂರು ಮತ್ತು ಅನಂತಪುರ ಭಾಗಗಳಿಗೆ, ಚಿಕ್ಕಬಳ್ಳಾಪುರ ಮತ್ತು ಕೋಲಾರದಿಂದ ಮಾವು, ದ್ರಾಕ್ಷಿ ಮತ್ತು ದಾಳಿಂಬೆ ಹಣ್ಣುಗಳು ರಫ್ತಾಗುತ್ತವೆ. ಶಿಡ್ಲಘಟ್ಟದ ಗುಣಮಟ್ಟದ ರೇಷ್ಮೆ ನೂಲು ಆಂಧ್ರದ ಧರ್ಮಾವರಂ ಮತ್ತು ಹಿಂದೂಪುರದ ಪ್ರಸಿದ್ಧ ರೇಷ್ಮೆ ಸೀರೆ ನೇಯ್ಗೆ ಕೇಂದ್ರಗಳಿಗೆ ರಫ್ತಾಗುತ್ತದೆ. ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರದ ಡೈರಿಗಳಿಂದ ಹಾಲು ಮತ್ತು ತುಪ್ಪ ನೆರೆ ರಾಜ್ಯಕ್ಕೆ ಸರಬರಾಜಾಗುತ್ತದೆ. ಬೆಂಗಳೂರು ಗ್ರಾಮಾಂತರದಿಂದ ಮೊಟ್ಟೆ ಮತ್ತು ಕೋಳಿ ಮಾಂಸದ ರಫ್ತು ದೊಡ್ಡ ಮಟ್ಟದಲ್ಲಿದೆ. ಈ ಎಕ್ಸಪ್ರೆಸ್ ವೇ ಆರಂಭವಾದರೆ ಆದಾಯ ಹಾಗೂ ವ್ಯಾಪಾರಕ್ಕೆ ಮತ್ತಷ್ಟು ವೇಗ ಸಿಗಲಿದೆ.
ಎಐ ಆಧಾರಿತ ಚಿತ್ರ
ಆಮದಾಗುವ ಉತ್ಪನ್ನಗಳು
ಆಂಧ್ರಪ್ರದೇಶದಿಂದ ಪ್ರಮುಖವಾಗಿ ಸೋನಾ ಮಸೂರಿ ಅಕ್ಕಿ ಮತ್ತು ವಿವಿಧ ಬೇಳೆಕಾಳುಗಳು, ಕಡಪ ಮತ್ತು ಕರ್ನೂಲ್ ಭಾಗದಿಂದ ಬಾಳೆಹಣ್ಣು, ಪಪ್ಪಾಯಿ ಮತ್ತು ನಿಂಬೆಹಣ್ಣು ಹೇರಳವಾಗಿ ಆಮದಾಗುತ್ತವೆ.ಮನೆ ನಿರ್ಮಾಣಕ್ಕೆ ಬಳಸುವ ಕಡಪ ಕಲ್ಲು , ಸುಣ್ಣದ ಕಲ್ಲು ಮತ್ತು ಕೆಲವು ಗ್ರೆನೈಟ್‌ಗಳು, ಆಂಧ್ರದ ಕರಾವಳಿ ಭಾಗದಿಂದ ತಾಜಾ ಮೀನು ಮತ್ತು ಸಿಗಡಿಗಳು ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರದ ಮಾರುಕಟ್ಟೆಗಳಿಗೆ ಪೂರೈಕೆಯಾಗುತ್ತವೆ.ಆಂಧ್ರದ ಚಿತ್ತೂರು ಭಾಗದಿಂದ ಬೆಲ್ಲ ಆಮದಾಗುತ್ತದೆ.
ರಿಯಲ್ ಎಸ್ಟೇಟ್ ಹಾಗೂ ಪ್ರವಾಸೋದ್ಯಮಕ್ಕೆ ಸಹಕಾರಿ
ಬೆಂಗಳೂರಿಗೆ ಹತ್ತಿರವಿರುವ ದೇವನಹಳ್ಳಿ, ಮಾಲೂರು ಮತ್ತು ಕೋಲಾರ ಭಾಗಗಳಲ್ಲಿ ರಿಯಲ್ ಎಸ್ಟೇಟ್ ಮೌಲ್ಯ ಹೆಚ್ಚಾಗಲಿದೆ. ಹೆದ್ದಾರಿಯ ಕಾರಣದಿಂದಾಗಿ ಈ ಜಿಲ್ಲೆಗಳಲ್ಲಿ ಉತ್ತಮ ಗುಣಮಟ್ಟದ ಆಸ್ಪತ್ರೆಗಳು, ಶಾಲೆಗಳು ಮತ್ತು ಹೋಟೆಲ್ ಉದ್ಯಮಗಳು ವಿಸ್ತರಣೆಯಾಗಲಿವೆ. ಈ ಹೆದ್ದಾರಿಯು ಕೃಷ್ಣಪಟ್ಟಣಂ ಮತ್ತು ಮಚಲಿಪಟ್ಟಣಂ ಬಂದರುಗಳಿಗೆ ಸುಲಭ ಸಂಪರ್ಕ ಕಲ್ಪಿಸುತ್ತದೆ. ಇದು ಕರ್ನಾಟಕದ ಗಡಿ ಭಾಗದ ವ್ಯಾಪಾರಸ್ಥರಿಗೆ ಸರಕುಗಳನ್ನು ರಫ್ತು ಮಾಡಲು ಹೆಚ್ಚಿನ ಅನುಕೂಲ ಮಾಡಿಕೊಡುತ್ತದೆ. ಆಂಧ್ರಪ್ರದೇಶದ ಪ್ರಸಿದ್ಧ ಧಾರ್ಮಿಕ ಸ್ಥಳಗಳಿಗೆ ಹೋಗುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುವುದರಿಂದ, ಕರ್ನಾಟಕದ ಗಡಿ ಭಾಗದಲ್ಲಿರುವ ಪ್ರವಾಸಿ ತಾಣಗಳಾದ ನಂದಿ ಬೆಟ್ಟ, ಕೈವಾರ ಮತ್ತು ಕೋಲಾರದ ಪ್ರೇಕ್ಷಣೀಯ ಸ್ಥಳಗಳಿಗೂ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುವಂತಾಗುತ್ತದೆ.
ಎಕ್ಸ್‌ಪ್ರೆಸ್ ವೇ ಹಾದು ಹೋಗುವ ಜಿಲ್ಲೆಗಳು
ಉದ್ದೇಶಿತ ಎಕ್ಸ್‌ಪ್ರೆಸ್ ವೇ ಬೆಂಗಳೂರಿನಲ್ಲಿ ಪ್ರಾರಂಭವಾಗುತ್ತದೆ ಮತ್ತು ಆಂಧ್ರಪ್ರದೇಶದ ವಿಜಯವಾಡದಲ್ಲಿ ಕೊನೆಗೊಳ್ಳುತ್ತದೆ. ಇದು ಕರ್ನಾಟಕದಲ್ಲಿ 3 ಮತ್ತು ಆಂಧ್ರಪ್ರದೇಶದ 8 ಜಿಲ್ಲೆಗಳ ಮೂಲಕ ಹಾದು ಹೋಗುತ್ತದೆ. ಬೆಂಗಳೂರು ನಗರದಿಂದ ಆರಂಭವಾಗುವ ಹೆದ್ದಾರಿಯು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ಚಿಕ್ಕಬಳ್ಳಾಪುರ ಮಾರ್ಗವಾಗಿ ಶಿಡ್ಲಘಟ್ಟ, ಚಿಂತಾಮಣಿ ನಂತರ ಆಂಧ್ರದ ಸತ್ಯಸಾಯಿ ಜಿಲ್ಲೆ, ಅನಂತಪುರ ಜಿಲ್ಲೆ, ವೈಎಸ್ಆರ್ ಕಡಪ ಜಿಲ್ಲೆ, ನಂದ್ಯಾಲ ಜಿಲ್ಲೆ, ಪ್ರಕಾಶಂ ಜಿಲ್ಲೆ , ಪಲ್ನಾಡು ಜಿಲ್ಲೆ, ಗುಂಟೂರು ಮತ್ತು ಎನ್.ಟಿ.ಆರ್ ಜಿಲ್ಲೆಯ ಮೂಲಕ ವಿಜಯವಾಡಕ್ಕೆ ತಲುಪುತ್ತದೆ.
ಗ್ರೀನ್‌ಫೀಲ್ಡ್ ವೆಚ್ಚ ಎಷ್ಟು ?
ಬೆಂಗಳೂರು ಹಾಗೂ ವಿಜಯವಾಡದ ನಡುವೆ ನಿರ್ಮಾಣವಾಗುತ್ತಿರುವ ಆರು ಪಥಗಳ 624 ಕಿ.ಮೀ ಉದ್ದದ ನೂತನ ಎಕ್ಸಪ್ರೆಸ್ ವೇಗೆ ಅಂದಾಜು 19,320 ಕೋಟಿ ರೂ. ವೆಚ್ಚವಾಗುತ್ತಿದ್ದು, ಆಂಧ್ರಪ್ರದೇಶ-ಕರ್ನಾಟಕ ಗಡಿಯಲ್ಲಿರುವ ಕೋಡಿಕೊಂಡದಿಂದ ಅಡ್ಡಂಕಿ,ಮುಪ್ಪಾವರಂವರೆಗೆ 343 ಕಿ.ಮೀ ಹೊಸ ರಸ್ತೆಯ (ಗ್ರೀನ್‌ಫೀಲ್ಡ್)ಒಟ್ಟು 14 ಪ್ಯಾಕೇಜ್‌ಗಳಲ್ಲಿ ನಿರ್ಮಾಣವಾಗುತ್ತಿದ್ದು, ಮೇಘಾ ಎಂಜಿನಿಯರಿಂಗ್, ಕೆಎನ್‌ಆರ್ ಕನ್ಸ್ಟ್ರಕ್ಷನ್ಸ್, ದಿಲೀಪ್ ಬಿಲ್ಡ್‌ಕಾನ್‌ನಂತಹ ಕಂಪನಿಗಳು ಕೆಲಸ ನಿರ್ವಹಿಸುತ್ತಿವೆ.

