
ಕರ್ನಾಟಕದ ಕ್ವಾಂಟಮ್ ಕ್ಷೇತ್ರಕ್ಕೆ ಉತ್ತೇಜನ: ವಿಶ್ವವಿಖ್ಯಾತ ವಿಜ್ಞಾನಿಗಳಿಗೆ ಸಚಿವ ಭೋಸರಾಜು ಆಹ್ವಾನ
ಭೇಟಿಯ ಸಂದರ್ಭದಲ್ಲಿ, ಕರ್ನಾಟಕದ ನಿಯೋಗವು ಸೂಪರ್‌ಕಂಡಕ್ಟಿಂಗ್ ಕ್ಯೂಬಿಟ್ ಲ್ಯಾಬ್ ಮತ್ತು ಟ್ರಾಪ್ಡ್ ಐಯಾನ್ ಲ್ಯಾಬ್‌ಗಳಿಗೆ ಭೇಟಿ ನೀಡಿ, ಅಲ್ಲಿನ ಸಂಶೋಧನಾ ಪ್ರಗತಿಯನ್ನು ಪರಿಶೀಲಿಸಿತು.
ಕರ್ನಾಟಕವನ್ನು ಕ್ವಾಂಟಮ್ ತಂತ್ರಜ್ಞಾನದ ಜಾಗತಿಕ ಕೇಂದ್ರವಾಗಿ ರೂಪಿಸುವ ಮಹತ್ವದ ಹೆಜ್ಜೆಯಾಗಿ, ರಾಜ್ಯದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್. ಎಸ್. ಭೋಸರಾಜು ಅವರು ಸ್ವಿಟ್ಜರ್‌ಲ್ಯಾಂಡ್‌ನ ವಿಶ್ವವಿಖ್ಯಾತ ಕ್ವಾಂಟಮ್ ವಿಜ್ಞಾನಿಗಳಿಗೆ ಬೆಂಗಳೂರಿನಲ್ಲಿ ನಡೆಯಲಿರುವ ಕ್ವಾಂಟಮ್ ಸಮ್ಮೇಳನದಲ್ಲಿ ಭಾಗವಹಿಸುವಂತೆ ಅಧಿಕೃತವಾಗಿ ಆಹ್ವಾನಿಸಿದ್ದಾರೆ.
ವಿಶ್ವದ ಅಗ್ರಗಣ್ಯ ಸಂಶೋಧನಾ ಸಂಸ್ಥೆಯಾದ ಜ್ಯೂರಿಕ್‌ನ ETH ಕ್ವಾಂಟಮ್ ಸೆಂಟರ್‌ಗೆ ಭೇಟಿ ನೀಡಿದ ಸಚಿವರು, ಕ್ವಾಂಟಮ್ ಕಂಪ್ಯೂಟಿಂಗ್ ಕ್ಷೇತ್ರದ ದಿಗ್ಗಜರಾದ ಪ್ರೊ. ಆಂಡ್ರಿಯಾಸ್ ವಾಲ್ರಾಫ್, ಪ್ರೊ. ಜೊನಥನ್ ಹೋಮ್ ಮತ್ತು ಪ್ರೊ. ಕ್ಲಾಸ್ ಎನ್ಸ್‌ಸ್ಲಿನ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಈ ಮೂವರೂ ವಿಜ್ಞಾನಿಗಳು ಕಳೆದ ಎರಡು ದಶಕಗಳಿಂದ ಸುಪರ್‌ಕಂಡಕ್ಟಿಂಗ್ ಕ್ಯೂಬಿಟ್ ಮತ್ತು ಟ್ರಾಪ್ಡ್ ಐಯಾನ್ ಸಿಸ್ಟಮ್ಸ್ ಕ್ಷೇತ್ರಗಳಲ್ಲಿನ ಸಂಶೋಧನೆಯಲ್ಲಿ ಜಾಗತಿಕವಾಗಿ ಹೆಸರುವಾಸಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಭೋಸರಾಜು, “ETH ಜ್ಯೂರಿಕ್ ಕೇಂದ್ರವು ಆಧುನಿಕ ಕ್ವಾಂಟಮ್ ಕಂಪ್ಯೂಟಿಂಗ್‌ನ ಜನ್ಮಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿನ ಸಂಶೋಧನೆಗಳಿಂದಾಗಿಯೇ ಕ್ವಾಂಟಮ್ ವಿಜ್ಞಾನವು ಕೇವಲ ಸೈದ್ಧಾಂತಿಕ ಹಂತದಿಂದ ನೈಜ ತಂತ್ರಜ್ಞಾನವಾಗಿ ರೂಪುಗೊಂಡಿದೆ. ಕರ್ನಾಟಕದಲ್ಲಿ ಬೆಳೆಯುತ್ತಿರುವ ಕ್ವಾಂಟಮ್ ಪರಿಸರ ವ್ಯವಸ್ಥೆಯನ್ನು ಇಂತಹ ವಿಶ್ವದರ್ಜೆಯ ಪರಿಣತರೊಂದಿಗೆ ಸಂಪರ್ಕಿಸಲು ನಮಗೆ ಹೆಮ್ಮೆಯಿದೆ” ಎಂದು ಹೇಳಿದರು.
ಕ್ಯೂ-ಸಿಟಿಗೆ ETH ಮಾದರಿ
ಭೇಟಿಯ ಸಂದರ್ಭದಲ್ಲಿ, ಕರ್ನಾಟಕದ ನಿಯೋಗವು ಸೂಪರ್‌ಕಂಡಕ್ಟಿಂಗ್ ಕ್ಯೂಬಿಟ್ ಲ್ಯಾಬ್ ಮತ್ತು ಟ್ರಾಪ್ಡ್ ಐಯಾನ್ ಲ್ಯಾಬ್‌ಗಳಿಗೆ ಭೇಟಿ ನೀಡಿ, ಅಲ್ಲಿನ ಸಂಶೋಧನಾ ಪ್ರಗತಿಯನ್ನು ಪರಿಶೀಲಿಸಿತು. ಬೆಂಗಳೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ‘ಕ್ಯೂ-ಸಿಟಿ’ (Q-City) ಯೋಜನೆಗೆ ETH ಕೇಂದ್ರದ ಮಾದರಿಯನ್ನು ಅಳವಡಿಸಿಕೊಳ್ಳುವ ಬಗ್ಗೆಯೂ ಚರ್ಚಿಸಲಾಯಿತು. ಸಂಶೋಧನೆ ಮತ್ತು ನಾವೀನ್ಯತೆಯನ್ನು ಒಂದೇ ವೇದಿಕೆಯಡಿ ತರುವ ETH ಮಾದರಿಯು ಕರ್ನಾಟಕದ ಯೋಜನೆಗೆ ಸ್ಫೂರ್ತಿಯಾಗಿದೆ.
ಸಂಶೋಧನೆಯಿಂದ ಯಶಸ್ವಿ ಸ್ಟಾರ್ಟಪ್‌ವರೆಗೆ
ಸಂಶೋಧನೆಯನ್ನು ಯಶಸ್ವಿ ಉದ್ಯಮಗಳಾಗಿ ಪರಿವರ್ತಿಸುವಲ್ಲಿ ETH ಕೇಂದ್ರದ ಯಶಸ್ಸನ್ನು ಸಹ ನಿಯೋಗವು ಅಧ್ಯಯನ ಮಾಡಿತು. ETH ಕೇಂದ್ರದಿಂದಲೇ ಹುಟ್ಟಿಕೊಂಡ ‘ಜ್ಯೂರಿಕ್ ಇನ್‌ಸ್ಟ್ರುಮೆಂಟ್ಸ್’ ಎಂಬ ಕಂಪನಿಗೆ ತಂಡ ಭೇಟಿ ನೀಡಿತು. ಈ ಕಂಪನಿಯು ಇಂದು ಭಾರತವೂ ಸೇರಿದಂತೆ ವಿಶ್ವದಾದ್ಯಂತ ಕ್ವಾಂಟಮ್ ಕಂಪ್ಯೂಟರ್‌ಗಳಿಗಾಗಿ ಅತ್ಯಾಧುನಿಕ ಆಂಪ್ಲಿಫೈಯರ್‌ಗಳು ಮತ್ತು ಸಿಗ್ನಲ್ ಸಿಸ್ಟಮ್‌ಗಳನ್ನು ತಯಾರಿಸಿ ಪೂರೈಸುತ್ತಿದೆ.